ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಗುರುಗಳಾದವರು ಎಂದಿಗೂ ಸ್ವಾರ್ಥಿಗಳಾಗಬಾರದು. ತಾವು ಕಲಿತ ವಿದ್ಯೆ ಮತ್ತು ಜ್ಞಾನವನ್ನು ಇತರೆರಿಗೆ ಧಾರೆ ಎರೆಯಬೇಕು. ಶಿಷ್ಯರು ಕೂಡ ವಿದ್ಯೆ ಕಲಿಸಿದ ಗುರುವನ್ನು ಎಂದಿಗೂ ಮರೆಯಬಾರದು ಎಂದು ಮಂಡ್ಯ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಕೆ.ಶಿವಚಿತ್ತಪ್ಪ ಹೇಳಿದರು.ನಗರದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಕರ್ನಾಟಕ ಸಂಘದಿಂದ ಆಯೋಜಿಸಿದ್ದ ಎಂ.ಸಿದ್ದರಾಮು ವಿಜ್ಞಾನ ಶಿಕ್ಷಕ ಹಾಗೂ ಸಿ.ನಾಗರಾಜು-ಗುಣಸಾಗರಿ, ಚೆನ್ನಮ್ಮ ಕರಿಯಪ್ಪ ಜನಪದ ಕಲಾವಿದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.
ಜಾಗತೀಕರಣದ ಯುಗದಲ್ಲಿ ಗುರುತಿಸುವಿಕೆ ಬಹಳ ಮುಖ್ಯ. ಪ್ರಶಸ್ತಿಗಳು ಜವಾಬ್ದಾರಿ ಹೆಚ್ಚಿಸುತ್ತವೆ. ಸಾಧನೆಗೆ ಇನ್ನಷ್ಟು ಸ್ಪೂರ್ತಿಯನ್ನು ನೀಡುತ್ತವೆ. ಸಾಮಾನ್ಯರಲ್ಲೂ ಅಸಾಮಾನ್ಯ ಪ್ರತಿಭೆ ಇರುತ್ತದೆ. ಅದನ್ನು ಗುರುತಿಸುವುದು ಬಹಳ ಮುಖ್ಯ. ಅಂತಹ ಗಣಿತ ಶಿಕ್ಷಕರು ಮತ್ತು ಜನಪದ ಕಲಾವಿದರನ್ನು ಗುರುತಿಸಿ ಪ್ರಶಸ್ತಿ ನೀಡುತ್ತಿರುವುದು ಆ ಪ್ರಶಸ್ತಿಯ ಮೌಲ್ಯ ಹೆಚ್ಚುವಂತೆ ಮಾಡಿದೆ ಎಂದರು.ಗ್ರಾಮೀಣ ಜನರು ಇಂದಿಗೂ ಜನಪದವನ್ನು ಉಳಿಸಿ ಬೆಳೆಸಿಕೊಂಡು ಬರುತ್ತಿದ್ದಾರೆ. ಈ ಕಲೆಯನ್ನು ಬೇರೆಯವರಿಗೂ ಕಲಿಸಿ ಆ ಕಲಾ ಪರಂಪರೆ ಮುಂದುವರೆಸಿಕೊಂಡು ಹೋಗುವಂತೆ ಮಾಡಬೇಕು. ಯುವಜನರು ಕೂಡ ಜನಪದ ಕಲೆಗಳನ್ನು ಕಲಿಯುವ ಆಸಕ್ತಿ ಬೆಳೆಸಿಕೊಳ್ಳಬೇಕು. ಇದರಿಂದ ನಮ್ಮ ಸಂಸ್ಕೃತಿ ಉಳಿದು ಜನಪದವು ಬೆಳವಣಿಗೆ ಕಾಣುತ್ತದೆ ಎಂದರು.
ಇಂದಿನ ಯುವ ಪೀಳಿಗೆ ಜನಪದ ಕಲೆಗಳನ್ನು ಕಲಾವಿದರಿಂದ ಮೈಗೂಡಿಸಿಕೊಳ್ಳಬೇಕು. ಇಲ್ಲದಿದ್ದರೆ ಕಲಾಪರಂಪರೆ ಅಲ್ಲಿಗೇ ನಿಂತುಹೋಗುತ್ತದೆ. ನಗರ ಪ್ರದೇಶದಲ್ಲಿ ಕಲಾಪ್ರಾಕಾರಗಳು ಮರೆಯಾಗಿದ್ದು, ಹಳ್ಳಿಗಾಡಿನಲ್ಲಷ್ಟೇ ಉಳಿದುಕೊಂಡಿವೆ. ತತ್ವಪದ, ಭಜನೆ, ಸೋಬಾನೆಪದ, ರಾಗಿಬೀಸುವ ಪದ, ಭಾಗವಂತಿಕೆ ಪದಗಳನ್ನು ಮುಂದಿನ ಪೀಳಿಗೆಗೂ ಪರಿಚಯಿಸಬೇಕು. ಜನಪದ ಕಲಾಶ್ರೀಮಂತಿಕೆ ನಾಶವಾಗಲು ಬಿಡಬಾರದು ಎಂದರು.ವಿಶ್ವ ವಿದ್ಯಾಲಯಗಳು ಮಾಡಬೇಕಾದ ಕೆಲಸವನ್ನು ಕರ್ನಾಟಕ ಸಂಘ ಮಾಡುತ್ತಿದೆ. ಮುಂದಿನ ದಿನಗಳಲ್ಲಿ ಕರ್ನಾಟಕ ಸಂಘದ ಜೊತೆಗೋಡಿ ಮಂಡ್ಯ ವಿಶ್ವವಿದ್ಯಾನಿಲಯದ ಸಹಯೋಗದೊಂದಿಗೆ ಇಂತಹ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಲಾಗುವುದು ಎಂದು ಭರವಸೆ ನೀಡಿದರು.
ಅಭಿನಂದನಾ ನುಡಿಗಳನ್ನಾಡಿದ ಲೋಕೇಶ್ ಚಂದಗಾಲು ಮಾತನಾಡಿ, ಹಣ ಕೊಟ್ಟು ಪ್ರಶಸ್ತಿಗಳನ್ನು ಪಡೆಯುತ್ತಿರುವವರ ಸಂಖ್ಯೆ ಹೆಚ್ಚಿರುವ ಇಂದಿನ ದಿನಗಳಲ್ಲಿ ಸಾಮಾನ್ಯರನ್ನು ಗುರುತಿಸುವ ಸಂಖ್ಯೆ ಕಡಿಮೆಯಾಗಿದೆ. ಪ್ರಭಾವಿಗಳಿಗೆ ಹಾಗೂ ಶ್ರೀಮಂತರಿಗೆ ಪ್ರಶಸ್ತಿ ಕೊಡುವುದು ದೊಡ್ಡ ವಿಷಯವೇನಲ್ಲ. ಹಳ್ಳಿಗಳಲ್ಲಿ ಸಾಮಾನ್ಯರಂತೆ ಇದ್ದು ಅಸಾಮಾನ್ಯ ಕೆಲಸ ಮಾಡುತ್ತಿರುವ ಸಾಕಷ್ಟು ಜನರಿದ್ದಾರೆ. ಅವರು ಎಲೆಮರೆಕಾಯಿಯಂತೆ ಉಳಿದುಕೊಂಡಿದ್ದಾರೆ. ಅವರ ಪ್ರತಿಭೆ ಬೆಳಕಿಗೇ ಬರುವುದಿಲ್ಲ. ಅವರೂ ಕೂಡ ಹೊರಜಗತ್ತಿಗೆ ಕಾಣಿಸಿಕೊಳ್ಳಬೇಕೆಂದು ಬಯಸುವುದೂ ಇಲ್ಲ. ಕಲೆಯನ್ನು ಪ್ರೀತಿಸುತ್ತಾ, ಆರಾಧಿಸುತ್ತಾ ಉಳಿದಿರುತ್ತಾರೆ. ಅಂತಹವರನ್ನು ಹೊರಜಗತ್ತಿಗೆ ಪರಿಚಯಿಸುವ ಕೆಲಸ ಆಗಬೇಕು. ಅಂತಹ ಅಪರೂಪದ ವ್ಯಕ್ತಿಗಳನ್ನು ಪ್ರಶಸ್ತಿಗೆ ಗುರುತಿಸಿರುವುದು ನಿಜಕ್ಕೂ ಹೆಮ್ಮೆ ಎನಿಸಿದೆ ಎಂದರು.ಕಾರ್ಯಕ್ರಮದಲ್ಲಿ ಸಿ.ಸತ್ಯನಾರಾಯಣ ಅವರಿಗೆ ಎಂ.ಸಿದ್ದರಾಮು ವಿಜ್ಞಾನ ಶಿಕ್ಷಕ ಪ್ರಶಸ್ತಿ, ಚಲುವರಾಜು ಅವರಿಗೆ ಸಿ.ನಾಗರಾಜು ಜನಪದ ಕಲಾವಿದ ಪ್ರಶಸ್ತಿ, ಪುಟ್ಟಮ್ಮ ಅವರಿಗೆ ಗುಣಸಾಗರಿ ಜನಪದ ಕಲಾವಿದ ಪ್ರಶಸ್ತಿ, ಸಿದ್ದಮ್ಮ ಅವರಿಗೆ ಚೆನ್ನಮ್ಮ ಕರಿಯಪ್ಪ ಜನಪದ ಕಲಾವಿದೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಅಧ್ಯಕ್ಷತೆಯನ್ನು ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶಗೌಡ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕಾರ್ಯಾಧ್ಯಕ್ಷ ತಗ್ಗಹಳ್ಳಿ ವೆಂಕಟೇಶ್ ಭಾಗವಹಿಸಿದ್ದರು. ಆಂಗ್ಲ ಉಪನ್ಯಾಸಕ ಎಸ್.ಸುದೀಪ್‌ಕುಮಾರ್, ಸಾಹಿತಿ ಪ್ರೊ.ನರಸಿಂಹೇಗೌಡ, ಕರ್ನಾಟಕ ಸಂಘದ ಜಯರಾಂ ಇದ್ದರು.