ಅಲ್ಲಿಂದ ಬಂದು, ಇಲ್ಲಿಂದ ಹೋಗಿ ಗೆದ್ದು ಸೋತವರು

| Published : Apr 07 2024, 01:49 AM IST

ಅಲ್ಲಿಂದ ಬಂದು, ಇಲ್ಲಿಂದ ಹೋಗಿ ಗೆದ್ದು ಸೋತವರು
Share this Article
  • FB
  • TW
  • Linkdin
  • Email

ಸಾರಾಂಶ

ರಾಮನಗರ: ಲೋಕಸಭಾ ಚುನಾವಣೆಯಲ್ಲಿ ಈ ಹಿಂದೆ ಅಸ್ತಿತ್ವದಲ್ಲಿದ್ದ ಕನಕಪುರ ಮತ್ತು ಈಗಿನ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಸ್ಥಳೀಯರಿಗಿಂತ ಹೊರಗಿನಿಂದ ಬಂದ ಹೆಚ್ಚಿನ ರಾಜಕಾರಣಿಗಳು ಗೆಲುವು ಸಾಧಿಸಿದ್ದಾರೆ.ಈವರೆಗೆ ಕನಕಪುರ ಮತ್ತು ಬೆಂಗಳೂರು ಗ್ರಾಮಾಂತರ ಸಂಸತ್ ಕ್ಷೇತ್ರದಿಂದ 8 ಮಂದಿ ಆಯ್ಕೆಯಾಗಿದ್ದಾರೆ. ಇವರಲ್ಲಿ 5 ಮಂದಿ ಹೊರಗಿನವರಾದರೆ, 3 ಮಂದಿ ಮಾತ್ರ ಸ್ಥಳೀಯರಾಗಿದ್ದಾರೆ.

ರಾಮನಗರ: ಲೋಕಸಭಾ ಚುನಾವಣೆಯಲ್ಲಿ ಈ ಹಿಂದೆ ಅಸ್ತಿತ್ವದಲ್ಲಿದ್ದ ಕನಕಪುರ ಮತ್ತು ಈಗಿನ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಸ್ಥಳೀಯರಿಗಿಂತ ಹೊರಗಿನಿಂದ ಬಂದ ಹೆಚ್ಚಿನ ರಾಜಕಾರಣಿಗಳು ಗೆಲುವು ಸಾಧಿಸಿದ್ದಾರೆ.

ಈವರೆಗೆ ಕನಕಪುರ ಮತ್ತು ಬೆಂಗಳೂರು ಗ್ರಾಮಾಂತರ ಸಂಸತ್ ಕ್ಷೇತ್ರದಿಂದ 8 ಮಂದಿ ಆಯ್ಕೆಯಾಗಿದ್ದಾರೆ. ಇವರಲ್ಲಿ 5 ಮಂದಿ ಹೊರಗಿನವರಾದರೆ, 3 ಮಂದಿ ಮಾತ್ರ ಸ್ಥಳೀಯರಾಗಿದ್ದಾರೆ.

ಈಗಿನ ಚುನಾವಣೆಯಲ್ಲಿ ಅಭ್ಯರ್ಥಿ ವಿಚಾರವಾಗಿ ಸ್ಥಳೀಯ ಮತ್ತು ಹೊರಗಿನವರು ಎಂಬ ಚರ್ಚೆಗಳು ಆರಂಭವಾಗಿವೆ. ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಸುರೇಶ್ ಕನಕಪುರ ತಾಲೂಕು ದೊಡ್ಡಾಲಹಳ್ಳಿ ಗ್ರಾಮದವರಾದರೆ, ಬಿಜೆಪಿ ಅಭ್ಯರ್ಥಿ ಡಾ.ಸಿ.ಎನ್ . ಮಂಜುನಾಥ್ ಹಾಸನ ಜಿಲ್ಲೆ ಚನ್ನರಾಯಪಟ್ಟಣದವರಾಗಿದ್ದಾರೆ.

ಈ ಕ್ಷೇತ್ರವನ್ನು ಪ್ರತಿನಿಧಿಸಿದವರಲ್ಲಿ ಎಂ.ವಿ.ರಾಜಶೇಖರನ್‌, ಎಂ.ವಿ.ಚಂದ್ರಶೇಖರಮೂರ್ತಿ, ಎಂ.ಶ್ರೀನಿವಾಸ್ ಹಾಗೂ ಡಿ.ಕೆ.ಸುರೇಶ್ ಅವರನ್ನು ಹೊರತುಪಡಿಸಿದರೆ ಉಳಿದವರೆಲ್ಲರು ಹೊರ ಜಿಲ್ಲೆಯವರೇ ಆಗಿದ್ದಾರೆ.

ಗೆದ್ದವರಲ್ಲಿ ಸ್ಥಳೀಯರು:

ಎಂ.‍ವಿ.ರಾಜಶೇಖರನ್:

1967ರಲ್ಲಿ ಕನಕಪುರ ಲೋಕಸಭಾ ಕ್ಷೇತ್ರ ಅಸ್ತಿತ್ವಕ್ಕೆ ಬಂದಾಗ ಕನಕಪುರ ತಾಲೂಕು ಮರಳವಾಡಿ ಗ್ರಾಮದ ಎಂ.‍ವಿ.ರಾಜಶೇಖರನ್ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದರು.

ಆನಂತರದ ಚುನಾವಣೆಗಳಲ್ಲಿ (1971, 77 ಮತ್ತು 80ರಲ್ಲಿ) ಹ್ಯಾಟ್ರಿಕ್ ಸೋಲು ಅನುಭವಿಸಿದರು. 1978ರಲ್ಲಿ ಉತ್ತರಹಳ್ಳಿ ಕ್ಷೇತ್ರದಿಂದ ಶಾಸಕರಾದರು. 1999ರಲ್ಲಿ ಕೃಷ್ಣರವರ ನೇತೃತ್ವದ ಸರ್ಕಾರ ಬಂದ ಮೇಲೆ ವಿಧಾನ ಪರಿಷತ್ ಸದಸ್ಯರಾದರು. 2002ರಲ್ಲಿ ರಾಜ್ಯಸಭಾ ಸದಸ್ಯರಾದರು. 2004ರಲ್ಲಿ ಮನಮೋಹನ್ ಸಿಂಗ್ ನೇತೃತ್ವದ ಕೇಂದ್ರ ಸರ್ಕಾರದಲ್ಲಿ ಯೋಜನಾ ಖಾತೆ ಸಚಿವರಾದರು.

ಎಂ.ವಿ. ಚಂದ್ರಶೇಖರ ಮೂರ್ತಿ :

ಕನಕಪುರ ಕ್ಷೇತ್ರದಿಂದ ಅತಿ ಹೆಚ್ಚು ಬಾರಿ ಆಯ್ಕೆಯಾದ ಹಿರಿಮೆ ಹೊಂದಿರುವ ಕಾಂಗ್ರೆಸ್‌ನ ಎಂ.ವಿ.ಚಂದ್ರಶೇಖರ ಮೂರ್ತಿ ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನವರು. 1977ರಲ್ಲಿ ಲೋಕಸಭಾ ಚುನಾವಣೆಗೆ ಮೊದಲ ಬಾರಿಗೆ ಕಣಕ್ಕೆ ಇಳಿದ ಚಂದ್ರಶೇಖರ ಮೂರ್ತಿ ಮೊದಲ ಪ್ರಯತ್ನದಲ್ಲಿಯೇ ಯಶಸ್ಸು ಸಾಧಿಸಿದರು. 1977ರಿಂದ 1996ವರೆಗೆ ನಡೆದ ಐದು ಸಾರ್ವತ್ರಿಕ ಚುನಾವಣೆಗಳಲ್ಲಿ ಅವರು ಇಲ್ಲಿಂದ ಸಂಸದರಾಗಿ ಆಯ್ಕೆಯಾಗಿ ದಾಖಲೆ ಬರೆದರು. 1993ರಿಂದ 96 ವರೆಗೆ ಪಿ.ವಿ.ನರಸಿಂಹ ರಾವ್ ಸಂಪುಟದಲ್ಲಿ ಹಣಕಾಸು ಖಾತೆಯ ರಾಜ್ಯ ಸಚಿವರಾಗಿ ಕಾರ್ಯ ನಿರ್ವಹಿಸುವ ಅವಕಾಶವೂ ಅವರಿಗೆ ಒದಗಿ ಬಂದಿತು. ಆದರೆ, ಸಚಿವರಾದ ಮರು ಚುನಾವಣೆಯಲ್ಲಿಯೇ ಚಂದ್ರಶೇಖರಮೂರ್ತಿ ಮುಖಭಂಗ ಅನುಭವಿಸಬೇಕಾಯಿತು. 1999ರಲ್ಲಿ ಮತ್ತೊಮ್ಮೆ ಸಂಸದರಾಗಿ ಆಯ್ಕೆಯಾದರು.

ಎಂ.ಶ್ರೀನಿವಾಸ್ :

ಉತ್ತರ ವಿಧಾನಸಭಾ ಕ್ಷೇತ್ರದಿಂದ 1983 , 1985 ಹಾಗೂ 1994ರಲ್ಲಿ ಎಂ.ಶ್ರೀನಿವಾಸ್ ಗೆಲುವು ಸಾಧಿಸಿ ವಿಧಾನಸೌಧ ಪ್ರವೇಶಿಸಿದವರು. 1998ರಲ್ಲಿ ಕನಕಪುರ ಲೋಕಸಭಾ ಕ್ಷೇತ್ರದಿಂದ ಮೊದಲ ಬಾರಿ ಸ್ಪರ್ಧಿಸಿದ ಶ್ರೀನಿವಾಸ್ ರವರು ಪ್ರತಿಸ್ಪರ್ಧಿ ಕಾಂಗ್ರೆಸ್ ನ ಡಾ.ಡಿ.ಪ್ರೇಮಚಂದ್ರ ಸಾಗರ್ ಅವರನ್ನು ಮಣಿಸಿದರು. 1999ರ ಸಂಸತ್ ಚುನಾವಣೆಯಲ್ಲಿ ಕಾಂಗ್ರೆಸ್ ನ ಎಂ.ವಿ.ಚಂದ್ರಶೇಖರ ಮೂರ್ತಿ ಎದುರು ಪರಾಭವಗೊಂಡರು.

ಡಿ.ಕೆ. ಸುರೇಶ್ :

ಕನಕಪುರ ತಾಲೂಕು ದೊಡ್ಡಾಲಹಳ್ಳಿ ಗ್ರಾಮದವರು. ಸಹೋದರ ಡಿ.ಕೆ.ಶಿವಕುಮಾರ್ ಅವರ ರಾಜಕೀಯ ಚಟುವಟಿಕೆಗಳಿಗೆ ಡಿ.ಕೆ.ಸುರೇಶ್ ಬೆಂಗಾವಲಾಗಿ ನಿಂತವರು. 2013ರಲ್ಲಿ ಸಂಸದರಾಗಿದ್ದ ಎಚ್.ಡಿ. ಕುಮಾರಸ್ವಾಮಿ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ನಡೆದ ಉಪ ಚುನಾವಣೆಯಲ್ಲಿ ಡಿ.ಕೆ.ಸುರೇಶ್ ಸ್ಪರ್ಧೆ ಮಾಡುವ ಮೂಲಕ ಅಧಿಕೃತವಾಗಿ ರಾಜಕೀಯಕ್ಕೆ ಪ್ರವೇಶ ಮಾಡಿದರು. ಮೊದಲ ಚುನಾವಣೆಯಲ್ಲಿಯೇ ಗೆಲುವು ಅವರ ಕೈ ಹಿಡಿಯಿತು. ತಮ್ಮ ಪ್ರತಿ ಸ್ಪರ್ಧಿ ಅನಿತಾ ಕುಮಾರಸ್ವಾಮಿ ಅವರನ್ನು ಸುರೇಶ್ ಮಣಿಸಿದ್ದರು.

2014ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಮತ್ತೊಮ್ಮೆ ಕಾಂಗ್ರೆಸ್ ಅಭ್ಯರ್ಥಿಯಾದ ಸುರೇಶ್ ರವರು ಸಮೀಪದ ಸ್ಪರ್ಧಿ ಪಿ. ಮುನಿರಾಜು ಗೌಡ ವಿರುದ್ಧ ಗೆಲುವು ಸಾಧಿಸಿದರು. ಯುಪಿಎ ನೇತೃತ್ವದ ಕೇಂದ್ರ ಸರ್ಕಾರದಲ್ಲಿ ಜಲ ಸಂಪನ್ಮೂಲ ಸಮಿತಿ ಸದಸ್ಯರಾಗಿ, ಮಾಹಿತಿ ತಂತ್ರeನ ಸ್ಥಾಯಿ ಸಮಿತಿ ಸದಸ್ಯರಾಗಿ ಡಿ.ಕೆ.ಸುರೇಶ್ ಕಾರ್ಯ ನಿರ್ವಹಿಸಿದರು. 2019ರ ಲೋಕ ಸಮರದಲ್ಲಿ ಸಂಸದರಾಗಿ ಆಯ್ಕೆಯಾಗುವ ಮೂಲಕ ಡಿ.ಕೆ. ಸುರೇಶ್ ಗೆಲುವಿನ ಹ್ಯಾಟ್ರಿಕ್ ಬರೆದರು.

ಬಾಕ್ಸ್‌...........

ಇಲ್ಲಿ ಬಂದು ಗೆದ್ದ ಹೊರಗಿನವರು:

ಜಾಫರ್ ಷರೀಫ್ :

ಮೂಲತಃ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯವರಾದ ಜಾಫರ್ ಷರೀಫ್ ಬೆಂಗಳೂರಲ್ಲಿ ರಾಜಕೀಯ ಜೀವನ ಕಂಡುಕೊಂಡರು.

1971ರಲ್ಲಿ ಕನಕಪುರ ಕ್ಷೇತ್ರದಿಂದ ಆಯ್ಕೆಯಾದ ಜಾಫರ್ ಷರೀಫ್, ಮುಂದಿನ ಚುನಾವಣೆಯಲ್ಲಿ ಬೆಂಗಳೂರು ಉತ್ತರ ಕ್ಷೇತ್ರಕ್ಕೆ ವಲಸೆ ಹೋದರು. ಅಲ್ಲಿಂದ 1977, 1980, 1984, 1989, 1991, 1998, 1999 ಗೆಲುವು ಸಾಧಿಸಿದರು.

1980 - 84 ರಲ್ಲಿ ಕೇಂದ್ರದ ರೈಲ್ವೆ ಖಾತೆ ರಾಜ್ಯ ಸಚಿವ, 1984ರಲ್ಲಿ ಕೇಂದ್ರದ ನೀರಾವರಿ ಖಾತೆ ರಾಜ್ಯ ಸಚಿವ, 1988 - 89 ರಲ್ಲಿ ಕೇಂದ್ರದ ಕಲ್ಲಿದ್ದಲು ಖಾತೆ ರಾಜ್ಯ ಸಚಿವ, 1989 - 90ರಲ್ಲಿ ಸಾರ್ವಜನಿಕ ಉದ್ಯಮಗಳ ಸಮಿತಿ ಸದಸ್ಯ, ಕೇಂದ್ರ ಸರ್ಕಾರದ ಖಾತ್ರಿ ಸಮಿತಿಯ ಸದಸ್ಯ, ವಾಣಿಜ್ಯ ಸಲಹಾ ಸಮಿತಿ ಸದಸ್ಯರಾಗಿದ್ದರು. ಅಲ್ಲದೆ ಆರೋಗ್ಯ, ಇಂಧನ, ಅಣುಶಕ್ತಿ ಮತ್ತು ಮಾಧ್ಯಮ ವ್ಯವಹಾರಗಳ ಖಾತೆ ಸಲಹಾ ಸಮಿತಿ ಸದಸ್ಯರಾಗಿದ್ದರು. 1991 -95ರಲ್ಲಿ ರೈಲ್ವೆ ಖಾತೆ ಸಚಿವ, 1998ರಲ್ಲಿ ಪತ್ರಿಕಾ ವ್ಯವಹಾರ ಮತ್ತು ಸ್ವತಂತ್ರ ಸೈನಿಕ ಸಮ್ಮಾನ್ ಪಿಂಚಣಿ ಯೋಜನೆ ಸಮಿತಿಗಳ ಸದಸ್ಯರಾಗಿದ್ದರು.

ಎಚ್.ಡಿ.ಕುಮಾರಸ್ವಾಮಿ:

ಹಾಸನ ಜಿಲ್ಲೆ ಹೊಳೆ ನರಸೀಪುರ ತಾಲೂಕಿನ ಹರದನಹಳ್ಳಿಯಲ್ಲಿ ಜನಿಸಿದ ಕುಮಾರಸ್ವಾಮಿ, ಸಿನಿಮಾ ರಂಗದಲ್ಲಿ ವಿತರಕ, ಪ್ರದರ್ಶಕರಾಗಿದ್ದವರು. 1996ರ ಸಂಸತ್ ಚುನಾವಣೆಯಲ್ಲಿ ಕನಕಪುರ ಕ್ಷೇತ್ರದಲ್ಲಿ ಜನತಾದಳದ ಅಭ್ಯರ್ಥಿಯಾಗಿ ಕಣಕ್ಕಿಳಿದು ಗೆಲವು ಸಾಧಿಸುವ ಮೂಲಕ ರಾಜಕೀಯ ಜೀವನ ಆರಂಭಿಸಿದರು.

1998ರಲ್ಲಿ ಸಂಸತ್ ಸೋತ ಬಳಿಕ, 1999ರ ವಿಧಾನಸಭೆ ಚುನಾವಣೆಯಲ್ಲಿ ಸಾತನೂರು ಕ್ಷೇತ್ರದಲ್ಲಿ ಡಿ.ಕೆ. ಶಿವಕುಮಾರ್ ಎದುರು ಪರಾಭವಗೊಂಡ ನಂತರ ರಾಮನಗರ ಕ್ಷೇತ್ರವನ್ನು ಕರ್ಮಭೂಮಿ ಮಾಡಿಕೊಂಡರು. 2004ರ ಚುನಾವಣೆಯಲ್ಲಿ ರಾಮನಗರ ಕ್ಷೇತ್ರದಿಂದ ಆಯ್ಕೆಯಾಗಿ ಜೆಡಿಎಸ್ - ಬಿಜೆಪಿ ಮೈತ್ರಿ ಸರ್ಕಾರದಲ್ಲಿ ಕರ್ನಾಟಕದ 18ನೇ ಮುಖ್ಯಮಂತ್ರಿಯಾದರು. 2008ರಲ್ಲಿ ರಾಮನಗರ ಕ್ಷೇತ್ರದಿಂದ ಶಾಸಕರಾಗಿದ್ದ ಅವರು 2009ರ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಆಯ್ಕೆಯಾಗಿ ನಾಲ್ಕು ವರ್ಷಗಳ ಬಳಿಕ ರಾಜೀನಾಮೆ ನೀಡಿದರು. 2013ರಲ್ಲಿ ರಾಮನಗರ ಕ್ಷೇತ್ರದಿಂದ ಶಾಸಕರಾಗಿ ಮತ್ತೆ 2014ರ ಸಂಸತ್ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಸೋಲು ಕಂಡರು. 2018ರಲ್ಲಿ ರಾಮನಗರ ಮತ್ತು ಚನ್ನಪಟ್ಟಣ ಕ್ಷೇತ್ರದಿಂದ ಆಯ್ಕೆಯಾದ ಅವರು ಚನ್ನಪಟ್ಟಣ ಕ್ಷೇತ್ರ ಉಳಿಸಿಕೊಂಡು ಮುಖ್ಯಮಂತ್ರಿ ಹುದ್ದೆ ಅಲಂಕರಿಸಿದರು. ಈಗ ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ವಲಸೆ ಹೋಗಿದ್ದಾರೆ.

ಎಚ್.ಡಿ.ದೇವೇಗೌಡ :

ಹಾಸನ ಜಿಲ್ಲೆ ಹೊಳೆ ನರಸೀಪುರ ತಾಲೂಕಿನ ಹರದನಹಳ್ಳಿಯವರಾದ ದೇವೇಗೌಡರು, 1991ರಲ್ಲಿ ಹಾಸನ ಸಂಸತ್ ಕ್ಷೇತ್ರದಿಂದ ಆಯ್ಕೆಯಾದರು. 1994ರಲ್ಲಿ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನಂತರ ರಾಮನಗರ ವಿಧಾನಸಭಾ ಕ್ಷೇತ್ರದಿಂದ ಶಾಸಕರಾದ ಅವರು, 1996ರಲ್ಲಿ ಪ್ರಧಾನಿ ಹುದ್ದೆ ಅಲಂಕರಿಸಿದರು.

1999ರ ಚುನಾವಣೆಯಲ್ಲಿ ಹಾಸನ ಲೋಕಸಭಾ ಚುನಾವಣೆಯಲ್ಲಿ ಸೋಲು ಕಂಡಿದ್ದರು. ಗೌಡರ ರಾಜಕೀಯ ಮುಗಿದೇ ಹೋಯಿತು ಎನ್ನುವ ಹಂತ ತಲುಪಿತ್ತು. 2002ರಲ್ಲಿ ನಡೆದ ಉಪ ಚುನಾವಣೆಯಲ್ಲಿ ರಾಜಕೀಯ ಮರುಜನ್ಮ ನೀಡಿದ್ದು ಕನಕಪುರ ಸಂಸತ್ ಕ್ಷೇತ್ರ. ಚಂದ್ರಶೇಖರಮೂರ್ತಿ ನಿಧನದಿಂದ ತೆರವಾಗಿದ್ದ ಈ ಕ್ಷೇತ್ರಕ್ಕೆ ನಡೆದ ಉಪ ಚುನಾವಣೆ ದೇವೇಗೌಡರಿಗೆ ರಾಜಕೀಯ ಶಕ್ತಿ ತುಂಬಿತ್ತು.

2004ರ ಚುನಾವಣೆಯಲ್ಲಿ ಕಾಂಗ್ರೆಸ್ ನ ತೇಜಸ್ವಿನಿ ರಮೇಶ್ ಎದುರು ದೇವೇಗೌಡರು ಸೋಲು ಕಂಡರು.

ತೇಜಸ್ವಿನಿ ರಮೇಶ್:

ಮೂಲತಃ ಬೆಂಗಳೂರು ಗ್ರಾಮೀಣ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡರಾಯಪ್ಪನಹಳ್ಳಿಯವರಾದ ತೇಜಸ್ವಿನಿ ರಮೇಶ್ ಪತ್ರಕರ್ತರಾಗಿದ್ದವರು. 2004ರಲ್ಲಿ ನಡೆದ 14ನೇ ಲೋಕಸಭಾ ಚುನಾವಣೆಯಲ್ಲಿ ಕನಕಪುರ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಮಾಜಿ ಪ್ರಧಾನಿ ದೇವೇಗೌಡ ಅವರನ್ನು ಮಣಿಸಿದರು. ಆನಂತರ 2009ರ ಚುನಾವಣೆಯಲ್ಲಿ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಪರಾಭವಗೊಂಡರು. ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದ ತೇಜಸ್ವಿನಿ ವಿಧಾನ ಪರಿಷತ್ ಸದಸ್ಯರಾಗಿದ್ದರು. ಈಗ ಮತ್ತೆ ಮಾತೃ ಪಕ್ಷ ಕಾಂಗ್ರೆಸ್ ಗೆ ವಾಪಸ್ಸಾಗಿದ್ದಾರೆ.6ಕೆಆರ್ ಎಂಎನ್ .ಜೆಪಿಜಿ

3.ಎಂ.ವಿ. ರಾಜಶೇಖರನ್

4.ಸಿ.ಕೆ. ಜಾಫರ್ ಷರೀಫ್

5.ಎಂ.ವಿ.ಚಂದ್ರಶೇಖರ ಮೂರ್ತಿ

6.ಎಚ್.ಡಿ. ಕುಮಾರಸ್ವಾಮಿ

7.ಎಂ.ಶ್ರೀನಿವಾಸ್

8.ಎಚ್.ಡಿ. ದೇವೇಗೌಡ

9.ತೇಜಸ್ವಿನಿ ರಮೇಶ್

10.ಡಿ.ಕೆ.ಸುರೇಶ್