ನಾಗಮಂಗಲ ತಾಲೂಕಿನ ನೆಲ್ಲಿಗೆರೆ ಕ್ರಾಸ್ ಜಂಕ್ಷನ್‌ನಲ್ಲಿ ಕೇವಲ ಬೈಪಾಸ್ ವರ್ತುಲ ರಸ್ತೆ ನಿರ್ಮಿಸುತ್ತಿಲ್ಲ. ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿಗೆ ಮೇಲ್ಸೇತುವೆ, ಚಾಮರಾಜನಗರ-ಜೇವರ್ಗಿ ರಾಷ್ಟ್ರೀಯ ಹೆದ್ದಾರಿಗೆ ವರ್ತುಲ ರಸ್ತೆ ನಿರ್ಮಾಣ ಮತ್ತು ಕಾಮಗಾರಿಯ ಭೂಸ್ವಾಧೀನದ ಪರಿಹಾರ ಸೇರಿ ಒಟ್ಟು ೬೧೭ ಕೋಟಿ ರು. ಅಂದಾಜು ಪಟ್ಟಿ ಸಿದ್ದಪಡಿಸಲಾಗಿತ್ತು.

ಕನ್ನಡಪ್ರಭ ವಾರ್ತೆ ನಾಗಮಂಗಲ

ತಾಲೂಕಿನ ನೆಲ್ಲೀಗೆರೆ ಕ್ರಾಸ್ ಬಳಿ ಎರಡು ರಾಷ್ಟ್ರೀಯ ಹೆದ್ದಾರಿಗಳು ಕೂಡುವ ಜಂಕ್ಷನ್‌ನಲ್ಲಿ ೬೧೭ ಕೋಟಿ ರು. ವೆಚ್ಚದಲ್ಲಿ ವರ್ತುಲ ರಸ್ತೆ ಜೊತೆಗೆ ಮೇಲ್ಸೇತುವೆ ನಿರ್ಮಾಣವಾಗಲಿದೆ. ಅತ್ಯಂತ ಅರ್ಹತೆ ಹೊಂದಿರುವ ವ್ಯಕ್ತಿಗೆ ಇದು ಅರ್ಥವಾಗದಿದ್ದರೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಮಾಹಿತಿ ಪಡೆದುಕೊಳ್ಳಲಿ ಎಂದು ಜಲಸಂಪನ್ಮೂಲ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅವರು ಪರೋಕ್ಷವಾಗಿ ಮಾಜಿ ಶಾಸಕ ಸುರೇಶ್‌ಗೌಡರನ್ನು ಕಿಚಾಯಿಸಿದರು.

ಪಟ್ಟಣದ ಪಡುವಲಪಟ್ಟಣ ರಸ್ತೆಯ ಶ್ರೀಮುನೇಶ್ವರಸ್ವಾಮಿ ದೇವಸ್ಥಾನದಿಂದ ಚಿಕ್ಕವೀರನಕೊಪ್ಪಲು ಗ್ರಾಮದ ಕೆರೆ ಕೋಡಮ್ಮ ದೇವಸ್ಥಾನದವರೆಗೆ ಕಾವೇರಿ ನೀರಾವರಿ ನಿಗಮದ ೪ ಕೋಟಿ ರು. ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶನಿವಾರ ಸಂಜೆ ಭೂಮಿಪೂಜೆ ನೆರವೇರಿಸಿದ ಬಳಿಕ ಚಿಕ್ಕವೀರನಕೊಪ್ಪಲು ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಸಮುದಾಯ ಭವನ ಉದ್ಘಾಟಿಸಿ ಮಾತನಾಡಿದರು.

ತಾಲೂಕಿನ ನೆಲ್ಲಿಗೆರೆ ಕ್ರಾಸ್ ಜಂಕ್ಷನ್‌ನಲ್ಲಿ ಕೇವಲ ಬೈಪಾಸ್ ವರ್ತುಲ ರಸ್ತೆ ನಿರ್ಮಿಸುತ್ತಿಲ್ಲ. ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿಗೆ ಮೇಲ್ಸೇತುವೆ, ಚಾಮರಾಜನಗರ-ಜೇವರ್ಗಿ ರಾಷ್ಟ್ರೀಯ ಹೆದ್ದಾರಿಗೆ ವರ್ತುಲ ರಸ್ತೆ ನಿರ್ಮಾಣ ಮತ್ತು ಕಾಮಗಾರಿಯ ಭೂಸ್ವಾಧೀನದ ಪರಿಹಾರ ಸೇರಿ ಒಟ್ಟು ೬೧೭ ಕೋಟಿ ರು. ಅಂದಾಜು ಪಟ್ಟಿ ಸಿದ್ದಪಡಿಸಲಾಗಿತ್ತು ಎಂದರು.

ಈ ಯೋಜನೆಗೆ ಸಂಬಂಧಿಸಿದಂತೆ ಆದಿ ಚುಂಚನಗಿರಿ ಮಠದ ಪೀಠಾಧ್ಯಕ್ಷ ಶ್ರೀನಿರ್ಮಲಾನಂದನಾಥಸ್ವಾಮೀಜಿ ಅವರ ಜೊತೆ ಚರ್ಚಿಸಿ ಅವರ ಸಲಹೆಯಂತೆ ಆದಿಚುಂಚನಗಿರಿಗೆ ಬಂದು ಹೋಗುವ ಭಕ್ತರಿಗೆ ಮತ್ತು ಹೆದ್ದಾರಿ ವಾಹನಗಳ ಸುಗಮ ಸಂಚಾರಕ್ಕೆ ಅನುಕೂಲವಾಗುವಂತೆ ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿಗೆ ಮೇಲ್ಸೆತುವೆ ನಿರ್ಮಿಸುವುದು. ಚಾಮರಾಜನಗರ ಜೇವರ್ಗಿ ರಾಷ್ಟ್ರೀಯ ಹೆದ್ದಾರಿಗೆ ಬೈಪಾಸ್ ವರ್ತುಲ ರಸ್ತೆ ನಿರ್ಮಿಸುವಂತೆ ನಿರ್ಧರಿಸಲಾಗಿದೆ. ಬೈಪಾಸ್ ವರ್ತುಲ ರಸ್ತೆ ನಿರ್ಮಾಣಕ್ಕೆ ೩೮ ಕೋಟಿ ರು.ಗಳಾಗುತ್ತದೆ. ಯೋಜನೆಯ ಎರಡೂ ಕಾಮಗಾರಿಗಳಿಗೆ ನಿಗಧಿಪಡಿಸಿದ್ದ ೬೧೭ ಕೋಟಿ ರು.ಅಂದಾಜು ಮೊತ್ತಕ್ಕಿಂತ ಶೇ.೩೩ರಷ್ಟು ಕಡಿಮೆ ದರಕ್ಕೆ ಗುತ್ತಿಗೆದಾರರು ಕಾಮಗಾರಿ ಮಾಡಲು ಬಿಡ್ ಸಲ್ಲಿಸಿದ್ದಾರೆ. ಇದರಲ್ಲಿ ಶೇ.೧೮ರಷ್ಟು ಜಿಎಸ್‌ಟಿ ಕಳೆದರೆ ಇನ್ನುಳಿದ ಶೇ.೪೯ರಷ್ಟು ಹಣದಲ್ಲಿ ಗುತ್ತಿಗೆದಾರರು ಎರಡೂ ಕಾಮಗಾರಿಗಳನ್ನು ಮಾಡಬೇಕಿದೆ ಎಂದರು.

ಅಂದಾಜು ಮೊತ್ತಕ್ಕಿಂತ ಕಡಿಮೆ ದರಕ್ಕೆ ಬಿಡ್ ಸಲ್ಲಿಸಿರುವುದು ಗುತ್ತಿಗೆದಾರನ ಹಣೆಬರಹ. ಯೋಜನೆಯ ಎರಡೂ ಕಾಮಗಾರಿಗಳ ಒಟ್ಟು ಅಂದಾಜು ಮೊತ್ತ ೬೧೭ಕೋಟಿ ರು.ಗಳಾಗಿದೆ. ಬಹಳ ಬುದ್ದಿವಂತರಿಗೆ ಇದು ಅರ್ಥವಾಗದಿದ್ದಾಗ ಕಷ್ಟವಾಗುತ್ತದೆ. ಈ ಕಾಮಗಾರಿಗೆ ಸಂಬಂಧಿಸಿದ ಲೆಕ್ಕ ಬೇಕಾದರೆ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಿಂದ ಪಡೆದುಕೊಳ್ಳಲಿ. ಈ ಹಿಂದೆ ೨೦೧೩ರಲ್ಲಿ ನಾನು ಶಾಸಕನಾಗಿದ್ದ ಅವಧಿಯಲ್ಲಿ ಪಟ್ಟಣದಲ್ಲಿ ನಿರ್ಮಿಸಿದ್ದ ಸೂಪರ್‌ಮಾರ್ಕೆಟ್ ವಾಣಿಜ್ಯ ಸಂಕೀರ್ಣ ಕಟ್ಟಡವನ್ನು ೨೦೧೮ರಲ್ಲಿ ಶಾಸಕರಾಗಿ ಐದು ವರ್ಷ ಕಳೆದರೂ ಅವರಿಂದ ಉದ್ಘಾಟಿಸಲಾಗಲಿಲ್ಲ. ಅಂತಹ ಅತ್ಯಂತ ಅರ್ಹತೆ ಹೊಂದಿರುವ ವ್ಯಕ್ತಿಗೆ ಇವೆಲ್ಲಾ ಅರ್ಥವಾಗುವುದಿಲ್ಲ ಎಂದು ಪರೋಕ್ಷವಾಗಿ ಮಾಜಿ ಶಾಸಕ ಸುರೇಶ್‌ಗೌಡಗೆ ಟಾಂಗ್ ಕೊಟ್ಟರು.

ಕಳೆದ ಮೂರು ತಿಂಗಳಿಂದ ೨೨ಕೋಟಿ ರು. ವೆಚ್ಚದಲ್ಲಿ ಪಡುವಲಪಟ್ಟಣ, ಚಿಕ್ಕವೀರನಕೊಪ್ಪಲು, ಬೆಟ್ಟದಮಲ್ಲೇನಹಳ್ಳಿ, ಬಾಳನಕೊಪ್ಪಲು ಹಾಗೂ ಭದ್ರೇಗೌಡನಕೊಪ್ಪಲು ಗ್ರಾಮಗಳ ರಸ್ತೆ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದೆ. ಇಷ್ಟು ದೊಡ್ಡ ಮೊತ್ತದ ಅನುದಾನವನ್ನು ಒಂದು ಹೋಬಳಿಗೆ ಬಳಸಲು ಸಾಧ್ಯವಿಲ್ಲ. ಮುಂದಿನ ಎರಡು ತಿಂಗಳಲ್ಲಿ ನಾಗಮಂಗಲ ಪಟ್ಟಣದಿಂದ ಬೆಟ್ಟದಮಲ್ಲೇನಹಳ್ಳಿ ಗ್ರಾಮದ ವರೆಗೆ ಹೆದ್ದಾರಿ ಮಾದರಿಯ ಸುಸಜ್ಜಿತ ರಸ್ತೆ ನಿರ್ಮಾಣಗೊಳ್ಳಲಿದೆ. ಜನರು ನನ್ನ ಮೇಲಿಟ್ಟಿರುವ ಪ್ರೀತಿ ವಿಶ್ವಾಸಕ್ಕೆ ಗ್ರಾಮೀಣ ಪ್ರದೇಶದ ಸರ್ವತೋಮುಖ ಅಭಿವೃದ್ಧಿಗೆ ಆದ್ಯತೆ ನೀಡಲಾಗುತ್ತಿದೆ ಎಂದರು.

ಕೆಎಂಎಫ್ ನಿರ್ದೇಶಕ ಎನ್.ಅಪ್ಪಾಜಿಗೌಡ, ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡರ ಪುತ್ರ ಚೇತನ್‌ಗೌಡ, ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಸಿ.ಎನ್.ಮಂಜುನಾಥ್, ಮುಖಂಡರಾದ ಕ್ರಷರ್ ಕರೀಗೌಡ, ದೇವರಾಜು, ಹುಚ್ಚೀರಪ್ಪ, ಸಂಪತ್‌ಕುಮಾರ್, ಬಿ.ಟಿ.ಸುರೇಶ್, ಸಿ.ಧನರಾಜ್, ರಮೇಶ್, ನಾಗರಾಜು ಸೇರಿದಂತೆ ಹಲವರು ಇದ್ದರು.