ಬಸವಣ್ಣನವರನ್ನು ಬಿಡದವರರು ಬಸವಜಯ ಮೃತ್ಯುಂಜಯ ಶ್ರೀ ಬಿಡರು

| Published : Aug 11 2025, 12:33 AM IST

ಬಸವಣ್ಣನವರನ್ನು ಬಿಡದವರರು ಬಸವಜಯ ಮೃತ್ಯುಂಜಯ ಶ್ರೀ ಬಿಡರು
Share this Article
  • FB
  • TW
  • Linkdin
  • Email

ಸಾರಾಂಶ

ಪಂಚಮಸಾಲಿ ಸಮಾಜಕ್ಕೆ ಹೋರಾಟ ಮಾಡುತ್ತಿದ್ದೇವೆ. ಹಡಪದ ಸಮಾಜಕ್ಕೆ ಪ್ರತ್ಯೇಕ ನಿಗಮಕ್ಕೆ ನಾನೇ ಹೋರಾಟ ಮಾಡಿದ್ದೇನೆ

ಕುಕನೂರು: ಅನ್ಯ ಸಮಾಜದ ಜತೆಗೆ ವಿಧಾನಸಭೆಯಲ್ಲಿ ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ಬೇಕು ಎಂದು ಧ್ವನಿ ಎತ್ತಿದವರಲ್ಲಿ ನಾನೇ ಮೊದಲಿಗ. ಈ ಹಿಂದೆ ಬಸವಣ್ಣನವರನ್ನೆ ಬಿಡದ ಜನರು ಪಂಚಮಸಾಲಿ ಸಮಾಜಕ್ಕೆ ಹೋರಾಟ ಮಾಡುತ್ತಿರುವ ಬಸವಜಯ ಮೃತ್ಯುಂಜಯ ಸ್ವಾಮೀಜಿ ಅವರನ್ನು ಎಲ್ಲಿ ಬಿಡುತ್ತಾರೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಹೇಳಿದ್ದಾರೆ.

ತಾಲೂಕಿನ ಬಿನ್ನಾಳ ಗ್ರಾಮದಲ್ಲಿ ಬಸವೇಶ್ವರ ಜಾತ್ರಾ ಮಹೋತ್ಸವ ಪ್ರಯುಕ್ತ ಜರುಗಿದ ಧಾರ್ಮಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಪಂಚಮಸಾಲಿ ಸಮಾಜಕ್ಕೆ ಹೋರಾಟ ಮಾಡುತ್ತಿದ್ದೇವೆ. ಹಡಪದ ಸಮಾಜಕ್ಕೆ ಪ್ರತ್ಯೇಕ ನಿಗಮಕ್ಕೆ ನಾನೇ ಹೋರಾಟ ಮಾಡಿದ್ದೇನೆ. ನಮ್ಮ ಸ್ವಾಮೀಜಿ ಹೋರಾಟ ಮಾಡುತ್ತಿದ್ದಾರೆ. ಅವರನ್ನು ಜನ ಬಿಡುತ್ತಿಲ್ಲ. ಈಗಿರುವ ಮಠ ಬಿಟ್ಟು ಬಿಡಿ ಎಂದು ಹೇಳಿದ್ದೇನೆ. ಬೆಳಗಾವಿ ಬಳಿ ನಮ್ಮ ಸಮಾಜದಿಂದ ಹತ್ತು ಎಕರೆ ಭೂಮಿ ಕೊಡಿಸಿ ಎಲ್ಲ ಸಮಾಜದ ಸಾವಿರ ಮಕ್ಕಳಿಗೆ ವಸತಿ ಮಾಡೋಣ ಎಂದು ಹೇಳಿದ್ದೇನೆ ಎಂದರು.

ಅಂಬೇಡ್ಕರ್ ಕನಸು ಸಮಾನತೆ ವೀರಶೈವ ಲಿಂಗಾಯತ ಮಠದಿಂದ ಮಾತ್ರ ಆಗುತ್ತಿದೆ. ಸರ್ಕಾರಿಂದ ಜಾತಿ ಹೆಸರಿನಲ್ಲಿ ವಸತಿ ಶಾಲೆಗಳಿವೆ. ಆದರೆ ಮಠಗಳಲ್ಲಿ ಆ ರೀತಿ ಇಲ್ಲ. ಇಲ್ಲಿ ಎಲ್ಲರೂ ಇರುತ್ತಾರೆ ಎಂದರು.

ಸರ್ಕಾರದಿಂದ ಆಗದ ಕೆಲಸ ಕೊಪ್ಪಳ ಗವಿಮಠದಿಂದ ಸಾವಿರಾರು ಮಕ್ಕಳಿಗೆ ಶಿಕ್ಷಣ ಹಾಗೂ ಅನ್ನ ಸಿಗುತ್ತಿದೆ. ಬಡ ಮಕ್ಕಳ ಆಶಾ ಕಿರಣ ಗವಿಮಠ ಸ್ವಾಮೀಜಿ ಆಗಿದ್ದಾರೆ. ಬಡ ಮಕ್ಕಳಿಗೆ ಶಿಕ್ಷಣ ಕೊಡುವ ಕೆಲಸ ಆಗಬೇಕು. ಅದೇ ರೀತಿ ನಮ್ಮ ಸಮಾಜದಿಂದ ಸಾವಿರ ಮಕ್ಕಳ ವಸತಿ ಶಾಲೆ ತೆಗೆಯಬೇಕು ಎಂದು ಬಸವಜಯಮೃತ್ಯುಂಜಯ ಸ್ವಾಮೀಜಿಗೆ ಹೇಳಿದ್ದೇನೆ ಎಂದರು.

ಮಾನವ ಜನ ಹಾಗೂ ಮನುಷ್ಯತ್ವ ಉಳಿಯಲು ಬಸವಣ್ಣ ಕಾರಣ. ಬಸವ ತತ್ವದಿಂದ ಮಾನವೀಯ ಮೌಲ್ಯ ಜೀವಂತ. ಕೃಷಿ ವ್ಯವಸ್ಥೆ ಬದಲಾವಣೆ ಆಗಬೇಕಿದೆ. ಸಾವಯವ ಕೃಷಿ ಕಾಲ ಬಂದಿದೆ. ಎಲ್ಲ ಬೆಳೆಯಲ್ಲೂ ಕೀಟ, ರೋಗ ನಾಶಕದಿಂದ ಕ್ಯಾನ್ಸರ್ ಹೆಚ್ಚಿದೆ. ಗೋವಿನ ಸಂಪತ್ತು ಹೆಚ್ಚಬೇಕಿದೆ. ಆದರಿಂದ ಸಾವಯವ ಕೃಷಿ ಸಾಧ್ಯ. ಭೂಮಿ ಸಹ ತಂಬಾಕು, ಗುಟಕಾಗೆ ಹೊಂದಿಕೊಂಡ ಜನರ ಹಾಗೇ ಯೂರಿಯಾ, ಡಿಎಪಿ ಗೊಬ್ಬರ ಹಾಕಿದರೆ ಬೆಳೆಯುವ ಸ್ಥಿತಿಗೆ ಬಂದಿದೆ. ಸಗಣಿ, ಗೋಮೂತ್ರ ಕಾಣೆಯಾಗಿದೆ. ಆಕಳು,ಎತ್ತುಗಳನ್ನು ಕಟುಗರಿಗೆ ಮಾರುವ ಹೀನ ಸ್ಥಿತಿ ಹೋಗಬೇಕು ಎಂದರು.

ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಮಾತನಾಡಿ, ಭಾರತದ ಮಣ್ಣಿನ ಹಾಗೂ ಸಂಸ್ಕೃತಿಯೇ ದೇವರನ್ನು ನಂಬುವುದು. ದೇವರಿಗೆ, ದೇವಸ್ಥಾನ ಒಡೆದರೆ ಗಲಾಟೆ ಆಗುತ್ತದೆ. ದೇವರ ಮೇಲೆ ಅಷ್ಟು ನಂಬಿಕೆ ಇದೆ. ಸಂಸ್ಕೃತಿ ಉಳಿಸುವ ಸಲುವಾಗಿ ಅನೇಕ ಶರಣರು, ಸಾಧು, ಸಂತರು ತಮ್ಮ ಜೀವನ ಮೂಡುಪಾಗಿಟ್ಟಿದ್ದಾರೆ. ಅವರಿಗೆ ತೊಂದರೆಯಾದರೆ ಯಾವ ಹಿಂದೂಗಳು ಸಹಿಸಿಕೊಳ್ಳುವದಿಲ್ಲ. ಹೆಣ್ಣು ಕೆಲವು ವಿದೇಶದಲ್ಲಿ ಭೋಗದ ವಸ್ತುವಾಗಿದ್ದಾರೆ. ಭಾರತದಲ್ಲಿ ಮಾತೃಸ್ಥಾನ ನೀಡಲಾಗಿದೆ. ಭಾರತ-ಪಾಕಿಸ್ತಾನ ಯುದ್ಧವಾದರೆ ಒಂದು ಇಂಚು ಭೂಮಿ ಸಹ ನಾವು ಬಿಟ್ಟು ಕೊಡುವುದಿಲ್ಲ. ಅಂತಹ ನಮ್ಮ ಭಾರತ ದೇಶವಾಗಿದೆ. ಇಂತಹ ಜಾತ್ರೆಯಲ್ಲಿ ಬಸವಣ್ಣ ಒಂದೇ ಜಾತಿಗೆ ಸೇರಿದ ದೇವರಲ್ಲ. ಎಲ್ಲರಿಗೂ ಸೇರಿದವರಾಗಿದ್ದಾರೆ. ಭಾರತೀಯ ಸಂಸ್ಕೃತಿ ಎಲ್ಲರೂ ಸೇರಿ ಉಳಿಸಬೇಕಾಗಿದೆ ಎಂದರು.

ಹಾಳಕೇರಿಯ ಮುಪ್ಪಿನ ಬಸವಲಿಂಗ ಸ್ವಾಮಿಗಳು, ಹೊಸಳ್ಳಿಯ ಬೂದೀಶ್ವರ ಸ್ವಾಮಿಗಳು, ಹೂವಿನಡಗಲಿ ಡಾ. ಶಿವಶಾಂತವೀರ ಸ್ವಾಮಿಗಳು, ತಂಗಡಗಿಯ ಭಾರತಿ ಅನ್ನದಾನೇಶ್ವರ ಸ್ವಾಮಿಗಳು ಉಪಸ್ಥಿತರಿದ್ದರು. ಸಿದ್ದಲಿಂಗಯ್ಯ ಶಿ. ಹಿರೇಮಠ ಅಧ್ಯಕ್ಷತೆ ವಹಿಸಿದ್ದರು.

ಜಿಲ್ಲಾ ವೀರಶೈವ ಮಹಾಸಭಾ ಅಧ್ಯಕ್ಷ ಕಳಕನಗೌಡ ಪಾಟೀಲ, ತಾಪಂ ಉಪಾಧ್ಯಕ್ಷ ಕಳಕಪ್ಪ ಕಂಬಳಿ, ಬಸಲಿಂಗಪ್ಪ ಭೂತೆ, ಪಿಎಸ್‌ಐ ಟಿ, ಗುರುರಾಜ, ಸಿದ್ದು ಆಪಲ್‌ಪುರಿ, ಮಹ್ಮದಸಾಬ್‌ ಕರೀಮಸಾಬ್‌ ವಾಲೀಕಾರ, ಗುರಪ್ಪ ಪಂತರ, ಲಕ್ಷ್ಮಣ ಚಲವಾದಿ, ಹನುಮಂತಪ್ಪ ಬಡಿಗೇರ, ಜೀವನಸಾಬ್‌ ಬಿನ್ನಾಳ, ಸಂಗಪ್ಪ ತಹಸೀಲ್ದಾರ್ ಬಸವಂತಪ್ಪ ಕುಟುಗನಹಳ್ಳಿ, ಜಗದೀಶ ಚಟ್ಟಿ, ಕಲ್ಲಪ್ಪ ಕರಿಯಣ್ಣವರ್, ಸಂತೋಷ ಮೆಣಸಿನಕಾಯಿ ಸೇರಿದಂತೆ ಅನೇಕರು ಇದ್ದರು.