ಸಮಾಜದಲ್ಲಿ ಪರೋಪಕಾರ ಮಾಡುವರು ತಮಗೆ ಅರಿವಿಲ್ಲದಂತೆ ಭಗವಂತನಿಗೆ ಪ್ರಿಯರಾಗಿರುತ್ತಾರೆ. ಈ ನಿಟ್ಟಿನಲ್ಲಿ ಕಾಕಿ ಕುಟುಂಬ ಮಾದರಿಯಾಗಿದೆ ಎಂದು ಹುಬ್ಬಳ್ಳಿ ನೀಲಕಂಠೇಶ್ವರ ಮಠದ ಶ್ರೀಶೈಲಂ ಆದಿಪೀಠ ಸೂರ್ಯ ಸಿಂಹಾಸನಾದೀಶ್ವರ ಜಗದ್ಗುರು ಶಿವಶಂಕರ ಶಿವಾಚಾರ್ಯರು ನುಡಿದರು.

ರಾಣಿಬೆನ್ನೂರು: ಸಮಾಜದಲ್ಲಿ ಪರೋಪಕಾರ ಮಾಡುವರು ತಮಗೆ ಅರಿವಿಲ್ಲದಂತೆ ಭಗವಂತನಿಗೆ ಪ್ರಿಯರಾಗಿರುತ್ತಾರೆ. ಈ ನಿಟ್ಟಿನಲ್ಲಿ ಕಾಕಿ ಕುಟುಂಬ ಮಾದರಿಯಾಗಿದೆ ಎಂದು ಹುಬ್ಬಳ್ಳಿ ನೀಲಕಂಠೇಶ್ವರ ಮಠದ ಶ್ರೀಶೈಲಂ ಆದಿಪೀಠ ಸೂರ್ಯ ಸಿಂಹಾಸನಾದೀಶ್ವರ ಜಗದ್ಗುರು ಶಿವಶಂಕರ ಶಿವಾಚಾರ್ಯರು ನುಡಿದರು. ನಗರದ ಹುಣಿಸಿಕಟ್ಟಿ ರಸ್ತೆಯ ಜೆಸಿ ಅರಮನೆಯಲ್ಲಿ ಶ್ರೀ ನೀಲಕಂಠೇಶ್ವರ ಕಾರ್ತಿಕೋತ್ಸವ ಅಂಗವಾಗಿ ದೊಡ್ಡನಾಗಪ್ಪ ಹಾಗೂ ಸಣ್ಣನಾಗಪ್ಪ ಸ್ಮರಣಾರ್ಥವಾಗಿ ಸೋಮವಾರ ಕಾಕಿ ಜನಸೇವಾ ಸಂಸ್ಥೆ ಹಾಗೂ ಕುರುಹಿನ ಶೆಟ್ಟಿ ಸೇವಾ ಸಮಾಜ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ಉಚಿತ ಸರ್ವಧರ್ಮ ಸಾಮೂಹಿಕ ವಿವಾಹ, ಧರ್ಮಸಭೆ ಹಾಗೂ ಜನಸೇವಾ ಸಂಸ್ಥೆಯ ಇಬ್ಬರು ಸದಸ್ಯರಿಗೆ ಉಚಿತ ನಿವೇಶನ ವಿತರಣೆ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ಪ್ರತಿಯೊಬ್ಬರೂ ಜೀವನದಲ್ಲಿ ಪರೋಪಕಾರ ಮನೋಭಾವನೆ ರೂಢಿಸಿಕೊಂಡಲ್ಲಿ ಸಮಾಜ ಅಭಿವೃದ್ಧಿ ಹೊಂದಲು ಸಾಧ್ಯ. ಯಾವುದೇ ಜಾತಿ-ಮತ- ಪಂಥ ಎನ್ನದೇ ಸರ್ವ ಜನಾಂಗದ ಬಡವರಿಗೆ ಅನುಕೂಲವಾಗುವ ದೃಷ್ಟಿಯಿಂದ ಇಂತಹ ಕಾರ್ಯಕ್ರಮ ಮಾಡುವುದು ಉತ್ತಮವಾಗಿದೆ. ದಾಂಪತ್ಯ ಜೀವನದಲ್ಲಿ ಹೊಂದಾಣಿಕೆ, ಪರಸ್ಪರ ಪ್ರೀತಿ ನಂಬಿಕೆಯೊಂದಿಗೆ ಜೀವನ ಸಾಗಿಸಬೇಕು. ಅಂದಾಗ ಮಾತ್ರ ಜೀವನ ಎಂಬ ಜಂಜಾಟದಲ್ಲಿ ಯಶಸ್ಸು ಕಾಣಲು ಸಾಧ್ಯವಾಗುತ್ತದೆ. ನವ ದಂಪತಿಗಳು ಮುಂದಿನ ದಿನಗಳಲ್ಲಿ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವುದರ ಜೊತೆಗೆ ಸಂಸ್ಕಾರವಂತರನ್ನಾಗಿ ಮಾಡಬೇಕು ಎಂದರು.ಲಿಂಗದಹಳ್ಳಿ ಹಿರೇಮಠದ ವೀರಭದ್ರ ಶಿವಾಚಾರ್ಯರು ಮಾತನಾಡಿ, ನವ ದಂಪತಿಗಳ ಬದುಕು ಉಜ್ವಲವಾಗಲಿದೆ. ಈ ರೀತಿ ಸರ್ವ ಜನರನ್ನು ಸೇರಿಸಿ ಕಾರ್ಯಕ್ರಮ ಮಾಡುವುದು ಸಮಾಜದಲ್ಲಿ ಭಾವೈಕ್ಯತೆಗೆ ಸಾಕ್ಷಿಯಾಗಿ ಸಮ ಸಮಾಜ ನಿರ್ಮಾಣವಾಗಲು ಸಾಧ್ಯವಾಗುತ್ತದೆ. ಬಡವರಿಗೆ ಕಂತುಗಳಿಗೆ ನಿವೇಶನ, ಸಾಮೂಹಿಕ ವಿವಾಹ, ಜಾನಪದ ಕಲೆ, ನಾಡು ನುಡಿ ಬಗ್ಗೆ ಅಪಾರ ಕಾಳಜಿ ವಹಿಸಿ ಸೇವೆ ಮಾಡುತ್ತಿದ್ದಾರೆ. ಜಾನಪದ ಕಲಾವಿದರಿಗೆ, ಭಜನೆ ಕಲಾವಿದರಿಗೆ, ಸಮಾಜದ ವಿದ್ಯಾರ್ಥಿಗಳಿಗೆ ಪೋತ್ಸಾಹ ನೀಡಿದ್ದಾರೆ. ಯಾವುದೆ ಸ್ವಾರ್ಥವಿಲ್ಲದೆ ಸಮಾಜ ಸೇವೆ ಮಾಡುತ್ತಾ ಅನೇಕ ಕುಟುಂಬಗಳಿಗೆ ಕಾಕಿ ಕುಟುಂಬ ದಾರಿ ದೀಪವಾಗಿದೆ ಎಂದರು.ಶನೈಶ್ಚರ ಹಿರೇಮಠದ ಶಿವಯೋಗಿ ಶಿವಾಚಾರ್ಯರು ಮಾತನಾಡಿದರು. ಕಾಕಿ ಜನಸೇವಾ ಸಂಸ್ಥೆ ಅಧ್ಯಕ್ಷ ಶ್ರೀನಿವಾಸ ಕಾಕಿ ಅಧ್ಯಕ್ಷತೆ ವಹಿಸಿದ್ದರು.ಕಾಕಿ ಜನಸೇವಾ ಸಂಸ್ಥೆ ಅಧ್ಯಕ್ಷ ಶ್ರೀನಿವಾಸ ಕಾಕಿ ಅಧ್ಯಕ್ಷತೆ ವಹಿಸಿದ್ದರು.ಒಂಭತ್ತು ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಕಾಕಿ ಜನಸೇವಾ ಸಂಸ್ಥೆಯ ಎರಡು ಸದಸ್ಯರಿಗೆ ಲಕ್ಕಿ ಡ್ರಾ ಮೂಲಕ ಉಚಿತ ನಿವೇಶನ ನೀಡಲಾಯಿತು.ಕುರುಹಿನಶೆಟ್ಟಿ ಸಮಾಜ ಅಧ್ಯಕ್ಷ ಹನುಮಂತಪ್ಪ ಅಮಾಸಿ, ಉಪಾಧ್ಯಕ್ಷ ಶಿವಾನಂದ ಸಾಲಗೇರಿ, ಕಾರ್ಯದರ್ಶಿ ಮಂಜುನಾಥ ಹೊಸಪೇಟೆ, ಖಜಾಂಚಿ ಹನುಮಂತಪ್ಪ ಕಾಕಿ, ಸದಸ್ಯರಾದ ಸಣ್ಣ ಹನುಮಂತಪ್ಪ ಕಾಕಿ, ಕಾಕಿ ಜನಸೇವಾ ಸಂಸ್ಥೆ ಕಾರ್ಯದರ್ಶಿ ರೂಪಾ ಕಾಕಿ, ವೆಂಕಟೇಶ ಕಾಕಿ, ಮುಖಂಡರಾದ ಪ್ರಕಾಶ ಗಚ್ಚಿನಮಠ, ವಿ.ಸಿ.ಹಿರೇಮಠ, ಶಿವಾನಂದ ಬಗಾದಿ, ನಿತ್ಯಾನಂದ ಕುಂದಪುರ, ಶ್ರೀನಿವಾಸ ಸುರಹೊನ್ನೆ, ಅಮಿತ್ ಕಾಕಿ, ಪ್ರಕಾಶ ಕಾಕಿ, ಲಕ್ಷ್ಮಿ ಕಾಕಿ ಸೇರಿದಂತೆ ಮತ್ತಿತರು ಇದ್ದರು. ಇದಕ್ಕೂ ಮುನ್ನಾದಿನ ನಗರದ ಯರೇಕುಪ್ಪಿ ರಸ್ತೆಯ ನೀಲಕಂಠೇಶ್ವರ ದೇವಸ್ಥಾನದ ಗಣೇಶೋತ್ಸವ ಮಂಟಪದಿಂದ ವಧು ವರರ ಸಾರೋಟದ ಮೆರವಣಿಗೆಗೆ ಮಾಜಿ ಶಾಸಕ ಅರುಣಕುಮಾರ ಪೂಜಾರ ಚಾಲನೆ ನೀಡಿದರು. ನಂತರ ಇಲ್ಲಿಂದ ಹೊರಟ ಮೆರವಣಿಗೆ ಹಳೇ ಪಿ.ಬಿ.ರಸ್ತೆ, ಕಾಕಿಗಲ್ಲಿ, ಕುರುಬಗೇರಿ ಕ್ರಾಸ್, ದುರ್ಗಾ ಸರ್ಕಲ್, ಎಮ್.ಜಿ.ರಸ್ತೆ, ಚಕ್ಕಿಮಿಕ್ಕಿ ಸರ್ಕಲ್, ಅಂಚೆ ವೃತ್ತ, ಪುನೀತರಾಜಕುಮಾರ ಸರ್ಕಲ್, ಮೇಡ್ಲೇರಿ ರಸ್ತೆ, ಗಂಗಾಜಲ ಚೌಡೇಶ್ವರಿ ದೇವಸ್ಥಾನ, ಪಂಪಾನಗರ, ಹುಣಿಸಿಕಟ್ಟಿ ರಸ್ತೆಯ ಮೂಲಕ ಜೆಸಿ ವಾಣಿ ಅರಮನೆ ತಲುಪಿತು.