ಇತಿಹಾಸ ಮರೆತವರು ಇತಿಹಾಸ ಕಟ್ಟಲಾರರು

| Published : Apr 20 2024, 01:03 AM IST

ಸಾರಾಂಶ

ಪುರಾತತ್ವ ಅಧ್ಯಯನ ಸಹಸಂಬಂಧ ಹಾಗೂ ಸ್ಥಳೀಯ ಇತಿಹಾಸ ಸಂರಕ್ಷಿಸುವುದು ಹಾಗೂ ನಮಗೆ ಬಿಟ್ಟು ಹೊದಂತಹ ಸಾಂಸ್ಕೃತಿಕ ಕುರುಹು ರಕ್ಷಿಸುವುದು ನಮ್ಮೆಲ್ಲರ ಹೊಣೆ.

ಧಾರವಾಡ

ಭಾರತೀಯ ಪುರಾತತ್ವ ಸರ್ವೇಕ್ಷಣ ಧಾರವಾಡ ವಲಯವು ವಿಶ್ವಪರಂಪರೆ ದಿನದ ಅಂಗವಾಗಿ ಬಾಗಲಕೋಟೆ ಜಿಲ್ಲೆಯ ಐಹೊಳೆಯಲ್ಲಿರುವ ದುರ್ಗಾ ದೇವಾಯಲದ ಆವರಣದಲ್ಲಿ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ವಿಶೇಷ ಉಪನ್ಯಾಸ, ಪ್ರಬಂಧ ಮತ್ತು ಚಿತ್ರಕಲಾ ಸ್ಪರ್ಧೆ ಯಶಸ್ವಿಯಾಗಿ ನಡೆಯಿತು.

ವಿಶ್ವ ಪಾರಂಪರಿಕ ದಿನಾಚರಣೆ ಉದ್ಘಾಟಿಸಿದ ಕವಿವಿ ಸಹಾಯಕ ಪ್ರಾಧ್ಯಾಪಕ ಡಾ. ಸದಾನಂದ ಸುಗಂಧಿ, ಸಂಸ್ಕೃತಿ, ಸಂಸ್ಕಾರ, ಮಾನವನ ಉಗಮ, ಆದಿಮಾನವರು ಬಳಸುತ್ತಿದ್ದ ಕಲ್ಲಿನ ಆಯುಧ, ಅದರ ವಿಕಸನ, ಮಾನವ ಶಾಸ್ತ್ರದೊಂದಿಗೆ ಪುರಾತತ್ವ ಅಧ್ಯಯನ ಸಹಸಂಬಂಧ ಹಾಗೂ ಸ್ಥಳೀಯ ಇತಿಹಾಸ ಸಂರಕ್ಷಿಸುವುದು ಹಾಗೂ ನಮಗೆ ಬಿಟ್ಟು ಹೊದಂತಹ ಸಾಂಸ್ಕೃತಿಕ ಕುರುಹು ರಕ್ಷಿಸುವುದು ನಮ್ಮೆಲ್ಲರ ಹೊಣೆ. ಜತೆಗೆ ಇತಿಹಾಸ ಮರೆತವರು ಎಂದೂ ಇತಿಹಾಸ ಕಟ್ಟಲಾರರು ಎಂದು ಇತಿಹಾಸದ ಮಹತ್ವ ತಿಳಿಸಿದರು.

ಉತ್ತರ ಕರ್ನಾಟಕದ ಗತವೈಭವದ ಛಾಯಾಚಿತ್ರ ಪ್ರದರ್ಶನ ಉದ್ಘಾಟಿಸಿದ ಉಪನ್ಯಾಸಕ ಡಾ. ಎಸ್.ಆರ್. ನಾಗಣ್ಣನವರ, ಮೂರ್ತ ಮತ್ತು ಅಮೂರ್ತ ಪರಂಪರೆಯ ಕಲ್ಪನೆ ಶಾಸನಗಳ ಮಹತ್ವ ಹಾಗೂ ಸ್ಮಾರಕಗಳು ನಮ್ಮ ಸ್ವತ್ತು ಎಂಬುದನ್ನು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಧಾರವಾಡ ವಲಯದ ಅಧೀಕ್ಷಕ ಪುರಾತತ್ವವಿದರಾದ ಡಾ. ರೇಷ್ಮಾ ಸಾವಂತ, ಪಾರಂಪರಿಕ ತಾಣಗಳನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ಕೊಂಡುಯ್ಯುವುದೇ ಈ ದಿನದ ಉದ್ದೇಶ. ಜತೆಗೆ ಈ ವರ್ಷದ ಧ್ಯೇಯ ವಾಕ್ಯ ವೈವಿಧ್ಯತೆಯನ್ನು ಅನ್ವಯಿಸಿ ಮತ್ತು ಅನುಭವಿಸಬೇಕು. ವಿದ್ಯಾರ್ಥಿಗಳು ಶಿಸ್ತು ಬದ್ದವಾಗಿ ತಮ್ಮ ಸಂಸ್ಕೃತಿಯ ವಾಸ್ತುಶಿಲ್ಪ ತಿಳಿಸಬೇಕು. ಜತೆಗೆ ಸ್ಮಾರಕಗಳ ಮೇಲೆ ಗೋಡೆ ಬರಹ, ರೇಖಾ ಚಿತ್ರ ಬರೆಯಬಾರದು. ಸ್ಮಾರಕಗಳ ಸುತ್ತಮುತ್ತಲೂ ಸ್ವಚ್ಛತೆ ಕಾಪಾಡಿಕೊಂಡು ಹೋಗುವಂತೆ ಎಲ್ಲರೂ ಪ್ರೇರಿಪಿಸಬೇಕೆಂದರು.

ಸಹಾಯಕ ಅಧೀಕ್ಷಕ ಪುರಾತತ್ವವಿದರಾದ ಡಾ. ಎಚ್. ಆರ್. ದೇಸಾಯಿ ಸ್ವಾಗತಿಸಿದರು. ಸೌಮ್ಯ ಹುನಗುಂದ ಪ್ರಾರ್ಥಿಸಿದರು. ಡಾ. ಎಸ್.ಎಂ. ದೇವಾರಾಜ ಸ್ಮಾರಕಗಳ ಕುರಿತು ವಿವರಿಸಿದರು. ಎನ್. ಪ್ರಸನ್ನಕುಮಾರ ನಿರೂಪಿಸಿದರು. ಪ್ರಶಾಂತ್ ಕುಲಕರ್ಣಿ, ಮಂಜುನಾಥ ಹಡಪದ ಇದ್ದರು.