ಸತ್ಯಶುದ್ಧ ಕಾಯಕ ಜೀವನದಲ್ಲಿ ಯಶಸ್ಸು ತಂದು ಕೊಡುತ್ತದೆ ಎಂದು ಬಸವಕಲ್ಯಾಣ ಅನುಭವ ಮಂಟಪದ ಅಧ್ಯಕ್ಷ ನಾಡೋಜ ಬಸವಲಿಂಗ ಪಟ್ಟದ್ದೇವರು ಹೇಳಿದರು.

ಕನ್ನಡಪ್ರಭ ವಾರ್ತೆ ಭಾಲ್ಕಿ

ಸತ್ಯಶುದ್ಧ ಕಾಯಕ ಜೀವನದಲ್ಲಿ ಯಶಸ್ಸು ತಂದು ಕೊಡುತ್ತದೆ ಎಂದು ಬಸವಕಲ್ಯಾಣ ಅನುಭವ ಮಂಟಪದ ಅಧ್ಯಕ್ಷ ನಾಡೋಜ ಬಸವಲಿಂಗ ಪಟ್ಟದ್ದೇವರು ಹೇಳಿದರು.

ಅವರು ತಾಲೂಕಿನ ಕರಡ್ಯಾಳ ಚನ್ನಬಸವೇಶ್ವರ ಗುರುಕುಲ ಅನುಭವ ಮಂಟಪದದಲ್ಲಿ ಹಿರೇಮಠ ಸಂಸ್ಥಾನ ವಿದ್ಯಾಪೀಠ ಟ್ರಸ್ಟ್‌ ಭಾಲ್ಕಿಯಿಂದ ಸೋಮವಾರ ಆಯೋಜಿಸಿದ್ದ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರ ಗೌರವ ಸನ್ಮಾನ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಕಾಯಕನಿಷ್ಠೆ, ಸತ್ಯಶುದ್ಧ ನಡೆ ಮತ್ತು ನಿರಂತರ ಪರಿಶ್ರಮದಿಂದ ತಾವೆಲ್ಲರೂ ಈ ಉನ್ನತ ಸಾಧನೆಯ ಶಿಖರವನ್ನು ತಲುಪಿರುವುದು ನಮಗೆ ಅತ್ಯಂತ ಖುಷಿ ತಂದು ಕೊಟ್ಟಿದೆ. ವಿಶ್ವಗುರು ಬಸವಣ್ಣನವರು ಹೇಳಿದಂತೆ ಸತ್ಯವ ನುಡಿಯುವುದೇ ದೇವಲೋಕ, ಮಿಥ್ಯವ ನುಡಿಯುವುದೇ ಮರ್ತ್ಯಲೋಕ ತಾವೆಲ್ಲರೂ ಸತ್ಯ ಮತ್ತು ಪ್ರಾಮಾಣಿ ಕತೆಯ ಹಾದಿಯಲ್ಲಿ ನಡೆದು ಇಡೀ ಸಮಾಜಕ್ಕೆ ಮಾದರಿಯಾಗಿದ್ದೀರಿ. ನಿಮ್ಮ ಈ ಸಾಧನೆಯು ಕೇವಲ ವೈಯಕ್ತಿಕ ಯಶಸ್ಸಲ್ಲ, ಅದು ಇಡೀ ಶರಣ ಸಂಕುಲಕ್ಕೆ ಮತ್ತು ನಾಡಿಗೆ ಸಂದ ಗೌರವವಾಗಿದೆ ಎಂದರು.

ಬೆಂಗಳೂರು ರಾಜೀವ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಸಚಿವ ಡಾ.ಸಂದೀಪ ಹರ್ಷಂಗಿ ಮಾತನಾಡಿ, ನಾಡೋಜ ಪಟ್ಟದ್ದೇವರು ಅವರು ಗಡಿಭಾಗದಲ್ಲಿ ಮಾಡುತ್ತಿರುವ ಶೈಕ್ಷಣಿಕ ಸೇವೆ ಅನನ್ಯವಾಗಿದೆ. ಪೂಜ್ಯರು ಈ ಭಾಗದಲ್ಲಿ ಶಿಕ್ಷಣದ ದೊಡ್ಡ ಮರವನ್ನು ಬೆಳೆಸಿದ್ದಾರೆ. ಈ ನೆರಳಿನಲ್ಲಿ ಎಲ್ಲ ವಿದ್ಯಾರ್ಥಿ ಗಳು ತಮ್ಮ ಜೀವನ ರೂಪಿಸಿಕೊಳ್ಳಬೇಕೆಂದು ನುಡಿದರು.

ಹಿರೇಮಠ ಸಂಸ್ಥಾನದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ಸಮ್ಮುಖ ವಹಿಸಿ ಮಾತನಾಡಿದರು. ಬೆಂಗಳೂರು ರಾಜೀವ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಉಪಕುಲಸಚಿವ ಡಾ.ರೇವಣಸಿದ್ಧಪ್ಪ ಬಿ. ಪಾಟೀಲ್‌ ಮಾತನಾಡಿದರು.

ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಮಾಜಿ ಅಧ್ಯಕ್ಷ ಶಶಿಧರ ಕೋಸಂಬೆ ಬಸವ ಗುರುವಿನ ಪೂಜೆ ನೆರವೇರಿಸಿದರು. ಸಂಸ್ಥೆಯ ಆಡಳಿತಾಧಿಕಾರಿ ಮೋಹನ ರೆಡ್ಡಿ ಅಧ್ಯಕ್ಷತೆ ವಹಿಸಿದ್ದರು. ಪ್ರಾಚಾರ್ಯ ಬಸವರಾಜ ಮೊಳಕೀರೆ ಪ್ರಾಸ್ತಾವಿಕ ಮಾತನಾಡಿದರು. ಮಧುಕರ ಗಾಂವಕರ್‌ ನಿರೂಪಿಸಿದರೆ ಸಿದ್ರಾಮ ಗೊಗ್ಗಾ ವಂದಿಸಿದರು.

ಇದೇ ವೇಳೆ ಶಿಕ್ಷಣ, ಆರೋಗ್ಯ, ಸಾಮಾಜಿಕ ಕ್ಷೇತ್ರ ಸೇರಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಾಧಕರಿಗೆ ಸನ್ಮಾನಿಸಲಾಯಿತು.ಡಾ.ಸಂದೀಪ ಹರ್ಷಂಗಿ, ಡಾ.ರೇವಣಸಿದ್ದಪ್ಪ ಬಿ. ಪಾಟೀಲ್‌, ಜಗನ್ನಾಥ ಹಲ್ಮಂಡಗೆ (ಸದಸ್ಯರು, ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ಆಯೋಗ, ಬೆಂಗಳೂರು), ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಚಂದ್ರಶೇಖರ ಭೀಮಣಪ್ಪ ಸೋಮಶೆಟ್ಟಿ ಮತ್ತು ಶಾಂತಾಬಾಯಿ ಮೋಹನರಾವ ಕಾಂಬಳೆ ಇವರನ್ನು ಗೌರವಿಸಲಾಯಿತು.

ಚನ್ನಬಸವೇಶ್ವರ ಗುರುಕುಲದಲ್ಲಿ ಶಿಕ್ಷಣ ಪೂರೈಸಿ ಎನ್‌ಡಿಎ ಕ್ಷೇತ್ರದಲ್ಲಿ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳನ್ನು ಕೂಡ ಅಭಿನಂದಿಸಲಾಯಿತು.