ಉಪ್ಪು ತಿಂದವರು ನೀರು ಕುಡಿಯಲೇಬೇಕು: ಮುನಿಸ್ವಾಮಿ

| Published : Jan 13 2024, 01:30 AM IST

ಸಾರಾಂಶ

ಕೋಲಾರ ಹಾಲು ಒಕ್ಕೂಟದ ನೇಮಕಾತಿ ಹಗರಣವೂ ಇದಕ್ಕೆ ಕಾರಣವಾಗಿದೆ, ಲಕ್ಷಾಂತರ ರು. ಪಡೆದು ೭೩ ಜನರಿಗೆ ಉದ್ಯೋಗ ನೀಡಿರುವ ಇವರು ಅಷ್ಟೆ ಸಂಖ್ಯೆಯ ಪ್ರತಿಭಾನ್ವಿತರಿಗೆ ವಂಚನೆ ಮಾಡಿದ್ದರು, ಈ ಆರೋಪವೂ ಈ ದಾಳಿಗೆ ಕಾರಣವಾಗಿದೆ

ಸಂಸದ ಮುನಿಸ್ವಾಮಿ ತಿರುಗೇಟು । ಇಡಿ ದಾಳಿಗೆ ಸಂಸದರು ಕಾರಣವೆಂಬ ಡಿಸಿಸಿ ಅಧ್ಯಕ್ಷರ ಹೇಳಿಕೆಗೆ ಖಂಡನೆ

ಕನ್ನಡಪ್ರಭ ವಾರ್ತೆ ಕೋಲಾರ

ಶಾಸಕ ಕೆ.ವೈ.ನಂಜೇಗೌಡರ ನಿವಾಸದ ಮೇಲಿನ ಇಡಿ ದಾಳಿಗೆ ನಾನು ಕಾರಣ ಎಂಬ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಹೇಳಿಕೆಗಳಿಗೆ ಅರ್ಥವಿಲ್ಲ, ನನಗೂ ಅದಕ್ಕೂ ಸಂಬಂಧವಿಲ್ಲ, ಉಪ್ಪು ತಿಂದವರು ನೀರು ಕುಡಿಯಲೇಬೇಕು, ೧೫೦ ಕೋಟಿ ಮೌಲ್ಯದ ಸರ್ಕಾರಿ ಭೂಮಿ ಹಂಚಿಕೆ ಸಂಬಂಧ ಈ ದಾಳಿ ನಡೆದಿದೆ ಎಂದು ಸಂಸದ ಎಸ್.ಮುನಿಸ್ವಾಮಿ ಸ್ಪಷ್ಟಪಡಿಸಿದರು.

ನಗರ ಹೊರವಲಯದ ಅರಾಭಿಕೊತ್ತನೂರು ಸಮೀಪ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಇಡಿ ದಾಳಿಯನ್ನು ನಾನು ಮಾಡಿಸಿದ್ದೇನೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಲಕ್ಷ್ಮೀನಾರಾಯಣ ನೀಡಿರುವ ಬಾಲಿಷ ಹೇಳಿಕೆ ಕುರಿತು ಕಿಡಿಕಾರಿದರು. ಜಾರಿ ನಿರ್ದೇಶನಾಲಯ ಯಾವುದೇ ಶಾಸಕರು, ಸಂಸದರ ಶಿಫಾರಸ್ಸಿನಂತೆ ಕೆಲಸ ಮಾಡಲ್ಲ ಎಂಬ ಸತ್ಯ ತಿಳಿದುಕೊಳ್ಳಿ ಎಂದರು.

ಇದೀಗ ಜಾರಿ ನಿರ್ದೇಶನಾಲಯ ಬಿಡುಗಡೆ ಮಾಡಿರುವ ಆರೋಪಗಳ ಪಟ್ಟಿಯಲ್ಲಿ ತಿಳಿಸಿರುವಂತೆ ೧೫ ಎಕರೆ ಸರ್ಕಾರಿ ಜಮೀನಿನಲ್ಲಿ ೮೦ ಎಕರೆ ಜಮೀನನ್ನು ಕೇವಲ ಒಂದೇ ತಿಂಗಳಲ್ಲಿ ದರಖಾಸ್ತು ಸಮಿತಿಯ ೪ ಸಭೆ ನಡೆಸಿ ಹಂಚಿಕೆ ಮಾಡಲಾಗಿದೆ, ಈ ಕುರಿತು ಮಾಸ್ತಿ ಠಾಣೆಯಲ್ಲಿ ದೂರು ದಾಖಲಾಗಿದ್ದು, ಅದರಂತೆ ಈ ದಾಳಿ ನಡೆದಿದೆ ಎಂದರು.

ದರಖಾಸ್ತು ಸಮಿತಿ ಅಧ್ಯಕ್ಷರೂ ಆಗಿರುವ ಮಾಲೂರು ಶಾಸಕರ ವಿರುದ್ಧ ಸರ್ಕಾರಿ ಜಮೀನು ಹಂಚಿಕೆ ಸಂಬಂಧ ಶಾಸಕರು, ತಹಸೀಲ್ದಾರ್ ಇಬ್ಬರ ವಿರುದ್ಧವೂ ಮಾಸ್ತಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು, ಮಾಸ್ತಿ ಠಾಣೆಯಲ್ಲಿನ ದೂರು ಆಧರಿಸಿ ಇಡಿ ಅಧಿಕಾರಿಗಳ ದಾಳಿ ನಡೆದಿದೆ ಎಂಬುದು ಇಡಿ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿಯೇ ಸ್ಪಷ್ಟವಾಗಿದೆ ಎಂದರು.

ಕೋಲಾರ ಹಾಲು ಒಕ್ಕೂಟದ ನೇಮಕಾತಿ ಹಗರಣವೂ ಇದಕ್ಕೆ ಕಾರಣವಾಗಿದೆ, ಲಕ್ಷಾಂತರ ರು. ಪಡೆದು ೭೩ ಜನರಿಗೆ ಉದ್ಯೋಗ ನೀಡಿರುವ ಇವರು ಅಷ್ಟೆ ಸಂಖ್ಯೆಯ ಪ್ರತಿಭಾನ್ವಿತರಿಗೆ ವಂಚನೆ ಮಾಡಿದ್ದರು, ಈ ಆರೋಪವೂ ಈ ದಾಳಿಗೆ ಕಾರಣವಾಗಿದೆ ಎಂದರು.

ಪ್ರತಿ ಉದ್ಯೋಗಕ್ಕೆ ೨೦ ರಿಂದ ೩೦ ಲಕ್ಷ ರು. ಲಂಚ ಪಡೆದಿರುವ ಆರೋಪ ಕೇಳಿ ಬಂದಿತ್ತು. ಈ ನಡುವೆ ಸಂದರ್ಶನದ ಪ್ರಕ್ರಿಯೆ ದುರ್ಬಳಕೆ ಮಾಡಿಕೊಂಡಿರುವ ಮಾಹಿತಿ ಇಡಿಗೆ ಲಭ್ಯವಾಗಿದೆ ಎಂದು ತಿಳಿಸಲಾಗಿದೆ, ಒಕ್ಕೂಟದ ಅಧ್ಯಕ್ಷ ಕೆ.ವೈ.ನಂಜೇಗೌಡ ಸೇರಿದಂತೆ ನಾಲ್ಕು ಸದಸ್ಯರ ವಿರುದ್ಧವೂ ಆರೋಪವಿದ್ದು, ಉಪ್ಪು ತಿಂದವರು ನೀರು ಕುಡಿಯಲೇಬೇಕು, ತಪ್ಪು ಮಾಡದಿದ್ದರೆ ಭಯವೇಕೆ? ಎಂದು ಪ್ರಶ್ನಿಸಿದರು.

ನೇಮಕಾತಿ ಪರೀಕ್ಷೆ ಬರೆದಿದ್ದ ಪ್ರಾಮಾಣಿಕರಿಗೆ ಅನ್ಯಾಯವಾಗಿದೆ, ಇದು ಸಾರ್ವಜನಿಕವಾಗಿ ಕೇಳಿ ಬಂದಿರುವ ಆರೋಪವಾಗಿದೆ, ಕೋಚಿಮುಲ್ ಸಿಬ್ಬಂದಿ ನಾಗೇಶ್ ಎಂಬುವವರೇ ಈ ಸಂಬಂಧ ದೂರು ನೀಡಿದ್ದಾರೆ. ಇದಕ್ಕೂ ನನಗೂ ಯಾವುದೇ ಸಂಬಂಧವಿಲ್ಲ ಎಂದರು.

ಇಡಿ ಶೋಧದ ವೇಳೆ ಕೆ.ವೈ.ನಂಜೇಗೌಡರಿಗೆ ಸೇರಿದ್ದ ೨೫ ಲಕ್ಷಕ್ಕೂ ಹೆಚ್ಚು ನಗದು ಜಪ್ತಿ ಮಾಡಲಾಗಿದೆ, ೫೦ ಕೋಟಿ ರೂಪಾಯಿ ಹೆಚ್ಚು ಮೌಲ್ಯದ ಚರಾಸ್ತಿ, ಸಿರಾಸ್ತಿ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ, ಈ ನಡುವೆ ವಿವಿಧ ಆರೋಪದ ದಾಖಲೆಗಳು ಡಿಜಿಟಲ್ ಡೇಟಾವನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ, ಮುಂದಿನ ದಿನಗಳಲ್ಲಿ ಸತ್ಯಾಂಶ ಹೊರಬರಲಿದೆ ಎಂದರು.

ಬಿಜೆಪಿ ಮುಖಂಡರಾದ ನಾರಾಯಣಶೆಟ್ಟಿ, ಅಪ್ಪಿಗೌಡ ಇದ್ದರು.

-----