ಸಾರಾಂಶ
ಕನ್ನಡಪ್ರಭ ವಾರ್ತೆ ಹೊನ್ನಾಳಿ
ಸಂಸದ ಜಿ.ಎಂ.ಸಿದ್ದೇಶ್ವರ್ ಹೊರಗಿನವರು, ಲೋಕಸಭಾ ಟಿಕೆಟ್ ಕೊಡಬೇಡಿ ಎಂಬ ಗೊಂದಲದ ಹೇಳಿಕೆ ನೀಡುವವರಿಗೆ ಶಿಸ್ತಿನ ಎಚ್ಚರಿಗೆ ನೀಡುವ ಉದ್ದೇಶದಿಂದ ಫೆ.8ರಂದು ದಾವಣಗೆರೆಯಲ್ಲಿ ಬಿಜೆಪಿ ನಿಷ್ಠಾವಂತ ಕಾರ್ಯಕರ್ತರ ಸಭೆ ಕರೆಯಲಾಗಿದೆ ಎಂದು ಹರಿಹರ ಶಾಸಕ ಬಿ.ಪಿ.ಹರೀಶ್ ಹೇಳಿದರು.ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ಇನ್ನೆರಡು ತಿಂಗಳಲ್ಲೇ ಲೋಕಸಭೆ ಚುನಾವಣೆಗೆ ಸಜ್ಜಾಗಬೇಕಿದೆ ಆದರೆ ಕೆಲವರು ಗೊಂದಲದ ಹೇಳಿಕೆ, ಮುಜುಗರದ ಪ್ರಶ್ನೆಗಳಿಗೆ ಫೆ.8ರ ಸಭೆಯಲ್ಲಿ ಉತ್ತರ ಕಂಡು ಕೊಳ್ಳಬೇಕಿದೆ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹೆಸರು ಹೇಳದೇ ಪರೋಕ್ಷವಾಗಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು. ನರೇಂದ್ರ ಮೋದಿ, ಬಿಜೆಪಿ ಗೆಲ್ಲಿಸುವೆ ಎಂದು ಬಾಯಲ್ಲಿ ಹೇಳಿ ಕಾಂಗ್ರೆಸ್ ಮನೆಗೆ ಹೋಗುತ್ತಾರೆ ಅಲ್ಲಿಂದ ಬಂದು ಜಿ.ಎಂ.ಸಿದ್ದೇಶ್ವರ್ ಹೊರ ಜಿಲ್ಲೆಯವರೆಂದು ಎಂದು ದೂರಿ ತಮಗೆ ಟಿಕೆಟ್ ಕೇಳುವುದು ಸರಿಯೇ ಎಂದು ಶಾಸಕ ಹರೀಶ್ ಪ್ರಶ್ನಿಸಿದರು.
ಲೋಕಸಭಾ ಚುನಾವಣಾ ಉಸ್ತುವಾರಿ ಮುಖಂಡ ಹನಗವಾಡಿ ವೀರೇಶ್ ಮಾತನಾಡಿ, ರಾಜ್ಯದ 28 ಕ್ಷೇತ್ರಗಳಲ್ಲಿ 27ರಲ್ಲಿ ಇಲ್ಲದ ಗೊಂದಲ ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಮಾತ್ರವಿದೆ. ಬಿಜೆಪಿ ರಾಷ್ಟ್ರೀಯ ಸಮಿತಿ ಕೂಡ ಇವರ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದಾರೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರೇ ದೂರವಾಣಿ ಮೂಲಕ ಇವರಿಗೆ ಎಚ್ಚರಿಗೆ ನೀಡಿದ್ದಾಗಿದೆ ಎಂದರು.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಗದೀಶ್, ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಯಶವಂತರಾವ್ ಜಾಧವ್, ತಾಲೂಕು ಬಿಜೆಪಿ ಉಸ್ತುವಾರಿ ಶಾಂತರಾಜ್ ಪಾಟೀಲ್, ಬಿಜೆಪಿ ತಾಲೂಕು ಮಾಜಿ ಅಧ್ಯಕ್ಷ ಎ.ಬಿ.ಹನುಮಂತಪ್ಪ ಪಕ್ಷ ವಿರೋಧಿ ಚಟುವಟಿಕೆಗಳ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಸಭೆಯಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಶ್ರೀನಿವಾಸ್ ದಾಸಕರಿಯಪ್ಪ, ತಾಲೂಕು ಬಿಜೆಪಿ ಮುಖಂಡರಾದ ಎ.ಜಿ.ಮಹೇಂದ್ರಗೌಡ, ಕೆ.ವಿ. ಚನ್ನಪ್ಪ, ಸಿ.ಕೆ.ರವಿ, ನೆಲಹೊನ್ನೆ ದೇವರಾಜ್, ಎಂ.ಯು. ನಟರಾಜ್, ಸಾಸ್ವೇಹಳ್ಳಿ ನರಸಿಂಹ ಸೇರಿ ಅನೇಕ ಮುಖಂಡರಿದ್ದರು.