ಜಾತ್ರೆಯಲ್ಲಿ ಸುಮಾರು 20 ಸಾವಿರಕ್ಕಿಂತ ಹೆಚ್ಚು ಜನ ಸೇರುತ್ತಾರೆ. ಆದರೂ ಇಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ, ಕಲ್ಯಾಣ ಮಂಟಪ ಇಲ್ಲ. ಇಲ್ಲಿ ಮಾತಾಡಿದ ಎಲ್ಲ ಗಣ್ಯರು ದೇಣಿಗೆ ಕೊಡುತ್ತೇನಿ ಅಂತಾ ಹೇಳಿದವರು ನಿಯತ್ತಾಗಿ ಕೊಡಿ ಎಂದು ಅಗತಿರ್ಥದ ರೇವಣಸಿದ್ದೇಶ್ವರ ಶಾಂತಮಯ ಮಹಾಸ್ವಾಮೀಜಿಗಳು ನುಡಿದರು.

ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ

ಜಾತ್ರೆಯಲ್ಲಿ ಸುಮಾರು 20 ಸಾವಿರಕ್ಕಿಂತ ಹೆಚ್ಚು ಜನ ಸೇರುತ್ತಾರೆ. ಆದರೂ ಇಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ, ಕಲ್ಯಾಣ ಮಂಟಪ ಇಲ್ಲ. ಇಲ್ಲಿ ಮಾತಾಡಿದ ಎಲ್ಲ ಗಣ್ಯರು ದೇಣಿಗೆ ಕೊಡುತ್ತೇನಿ ಅಂತಾ ಹೇಳಿದವರು ನಿಯತ್ತಾಗಿ ಕೊಡಿ ಎಂದು ಅಗತಿರ್ಥದ ರೇವಣಸಿದ್ದೇಶ್ವರ ಶಾಂತಮಯ ಮಹಾಸ್ವಾಮೀಜಿಗಳು ನುಡಿದರು.ತಾಲೂಕಿನ ಅಡವಿ ಹುಲಗಬಾಳ ಸಮೀಪದ ಬೀರಪ್ಪ-ಮಾಳಿಂಗರಾಯ ಮತ್ತು ಸಿಡಿಯಾನ ದ್ಯಾಮವ್ವದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ನಡೆದ ಸಾಮೂಹಿಕ ವಿವಾಹ ಹಾಗೂ ಸರ್ವಧರ್ಮ ಸಮ್ಮೇಳನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಈ ಬೆಟ್ಟದಲ್ಲಿ ಬಡವರು ನಂಬಿಕೆಯ ಸನ್ನಿಧಿ ಇದೆ. ಇದನ್ನು ರಾಜಕೀಯದವರು ನಿಮ್ಮ ರಾಜಕೀಯ ಭವಿಷ್ಯಕ್ಕೆ‌ ಬಳಸಿಕೋಳ್ಳಬೇಡಿ. ಇನ್ನೂ ಮುಂದೆ ಕೋತಿ-ಮೇಕೆಯದಾಟ ನಮ್ಮ ಮುಂದೆ ಮಾಡಬೇಡಿ ಎಂದು ರಾಜಕೀಯ ಮುಖಂಡರ ವಿರುದ್ಧ ಕಿಡಿಕಾರಿದರು.

ಮುಖಂಡ ಶಾಂತಗೌಡ ಪಾಟೀಲ ನಡಹಳ್ಳಿ ಮಾತನಾಡಿ, ಈ ಪವಿತ್ರವಾದ ಸ್ಥಾನದಲ್ಲಿ ಮದುವೆ ಮಾಡಿಕೊಂಡವರು ನೀವೇ ಪುಣ್ಯವಂತರು. ಸಮಾಜದಲ್ಲಿ ಬದಲಾವಣೆ ಆಗಬೇಕಾದರೇ ಮೊದಲು ಜಾತಿ, ಪಕ್ಷ, ರಾಜಕೀಯ ಅನ್ನೋದು ಬಿಟ್ಟು ಅಭಿವೃದ್ಧಿ ಕೆಲಸದ ಹಿಂದೆ ಹೋಗಬೇಕು ಎಂದು ಯುವಕರಿಗೆ ಮನವಿ ಮಾಡಿದರು.ಕಾರ್ಯಕ್ರಮದ ರೂವಾರಿ ಹಾಗೂ ಪ್ರಥಮ ದರ್ಜೆ ಗುತ್ತಿಗೆದಾರ ಮಲ್ಲಿಕಾರ್ಜುನ ಎನ್ ಮದರಿ ಮಾತನಾಡಿ, ಈ ಜಾತ್ರೆಯಲ್ಲಿ ನಡೆಯುವ ಎಲ್ಲ ಕಾರ್ಯಕ್ರಮದ ವ್ಯವಸ್ಥೆಯನ್ನು ಎಲ್ಲರೂ ಮಾಡಬೇಕು. ಇದು ಒಬ್ಬ ವ್ಯಕ್ತಿಗತ ಜಾತ್ರೆ ಆಗಬಾರದು. ಎಲ್ಲ ಸುತ್ತ-ಮುತ್ತಲಿನ ಗ್ರಾಮದ ಭಕ್ತರು ಸೇರಿ ಜಾತ್ರೆ ಮಾಡಬೇಕು. ಆದರೆ, ನಾನು ಮದುವೆಗೆ ಬರುವಂತ ಎಲ್ಲ ಜವಾಬ್ದಾರಿಯನ್ನು ನಾನು ಕೂಡಾ ಭಕ್ತನಾಗಿ ವಹಿಸಿಕೊಂಡಿದ್ದೆ ಅಷ್ಟೆ ಎಂದರು.ಯರಝರಿಯ ಮಲ್ಲಾರಲಿಂಗ ಮಹಾರಾಜರು ಸಾನ್ನಿಧ್ಯ ವಹಿಸಿ ಮಾತನಾಡಿ, ಜಾತಿ ಮಾಡಬಾರದು ಎಂದು ಬಸವಣ್ಣನವರು ಹೇಳಿದರು. ಸಮಾಜದಲ್ಲಿ ಜಾತಿ ಮಾಡಲಾರದವರು ಹಾಲುಮತ ಸಮಾಜದವರು. ಇಲ್ಲಿ ನಡೆಯುವ ಅಭಿವೃದ್ಧಿ ಕಾರ್ಯಕ್ರಮ ನಮ್ಮಿಂದಲೇ ಆಗಬೇಕು. ಸಾಮೂಹಿಕ ವಿವಾಹ ಅಂತಹ ಕೆಲಸ ಮಾಡಬೇಕು. ಎಲ್ಲ ಸಮಾಜದವರು ನಮ್ಮನ್ನು ಮೇಲೆ ನಿಂತು ಕೈ ಎಳೆಯುವ ಕೆಲಸ ಮಾಡಬೇಕು ಹೊರತು ಕಾಲೆಳೆಯುವ ಕೆಲಸ ಮಾಡಬಾರದು. ವಧುಗಳು ನಿಮ್ಮ ಅತ್ತೆ, ಮಾವನಿಗೆ ಯಾವತ್ತೂ ಕೀಳಾಗಿ ನೋಡಬೇಡಿ, ನಿಮ್ಮ ತಂದೆ-ತಾಯಿಯೆಂದು ನೋಡಿಕೊಳ್ಳಿ ಎಂದು ಕಿವಿ ಮಾತು ಹೇಳಿದರು.ಮಹಿಳಾ ಬಿಜೆಪಿ ಜಿಲ್ಲಾಧ್ಯಕ್ಷೆ ಶಿಲ್ಪಾ ಕುದರಗೊಂಡ ಮಾತನಾಡಿ, ಸಮಾಜದ ಎಲ್ಲ ಮತಗಳಲ್ಲಿ ಹಾಲುಮತ ಸಮಾಜವೇ ಲೇಸು ಎಂದು ಸರ್ವಜ್ಞನವರೇ ಹೇಳಿದ್ದಾರೆ. ಎಲ್ಲಾದರೂ ಪವಾಡಗಳು ನಡೆದರೇ ಅದು ಹಾಲುಮತದವರಿಂದ ಮಾತ್ರ ಸಾಧ್ಯ. ಬೀರಪ್ಪದೇವರ ಮಹಿಮೆ ಮತ್ತು ಮಾಳಿಂಗರಾಯ ಅವರ ಪವಾಡ ಮತ್ತು ಚರಿತ್ರೆಯ ಬಗ್ಗೆ ಕಾರ್ಯಕ್ರಮದಲ್ಲಿ ವಿಶ್ಲೇಷಿಸಿದರು. ಮುಖಂಡ ಕೆಂಚಪ್ಪ ಬಿರಾದಾರ ಮಾತನಾಡಿ, ಬೀರಪ್ಪನ ಬೆಟ್ಟಕ್ಕೆ ಬರುವ ಮಾರ್ಗ ಹಲವಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿದೆ. ದೇವಸ್ಥಾನಕ್ಕೆ ಬರುವ ಮಾರ್ಗವನ್ನು ಡಾಂಬರಿಕರಣ ಮಾಡಬೇಕು. ಈ ಕ್ಷೇತ್ರವನ್ನು ಧಾರ್ಮಿಕ ಕ್ಷೇತ್ರವನ್ನಾಗಿ ಮಾಡಲು ನಾವೆಲ್ಲರೂ ಒಗ್ಗೂಡಬೇಕು ಎಂದು ಮನವಿ ಮಾಡಿದರು.ಗೋವಾ ಕನ್ನಡಿಗ ಸಂಘದ ಅಧ್ಯಕ್ಷ ಸಿದ್ದಣ್ಣ ಮೇಟಿ ಮಾತನಾಡಿ, ಗೆದ್ದಲು ಹುಳು ಹುತ್ತಮಾಡಿ ಹಾವಿಗೆ ಬಿಟ್ಟಕೊಟ್ಟಂತೆ ನಾವೆಲ್ಲ ಮಾಡುತ್ತಿದ್ದೇವೆ. ನಮ್ಮ ಬೀರಪ್ಪನ ಬೆಟ್ಟಕ್ಕೆ ಬರುವ ರಸ್ತೆ ಯಾವ ಸರ್ಕಾರದಿಂದ ಆಗಲಿಕ್ಕೂ ಪರವಾಗಿಲ್ಲ ನಾವೆಲ್ಲರೂ ಸೇರಿ ಸ್ವಂತ ಖರ್ಚಿನಲ್ಲಾದರೂ ರಸ್ತೆ ನಿರ್ಮಿಸೋಣ ಎಂದರು.ಮುಖಂಡ ಗಂಗಾಧರ ನಾಡಗೌಡ ಮಾತನಾಡಿ, ಯಾವುದೇ ಕಾರ್ಯಕ್ರಮ ಮಾಡಿದರೇ ಅದನ್ನು ಮುನ್ನಡೆಸಿಕೊಂಡು ಹೋಗುವ ಜವಾಬ್ದಾರಿ ಬಹಳ ಮುಖ್ಯ. ಎಲ್ಲರಲ್ಲೂ ಎಲ್ಲವೂ ಇರುತ್ತದೆ. ನಮ್ಮಲ್ಲಿರುವುದನ್ನು ಸ್ವಲ್ಪವಾದರೂ ಬಡವರಿಗೆ ಸಹಾಯ ಮಾಡುವ ಸದ್ಗುಣ ಎಲ್ಲರಿಗೂ ಬರುವುದಿಲ್ಲ. ಸಾಮೂಹಿಕ ವಿವಾಹದಲ್ಲಿ ಮದುವೆ ಮಾಡಿಕೊಳ್ಳಲು ಪುಣ್ಯ ಮಾಡಿರಬೇಕು ಎಂದರು.ಕಾಂಗ್ರೆಸ್ ಧುರೀಣ ವೈ.ಎಚ್.ವಿಜಯಕರ್ ಮಾತನಾಡಿ, ಕಳೆದ 22 ವರ್ಷಗಳ ಹಿಂದೆ ಮಾಡಿದ ಕೆಲಸ ಬಿಟ್ಟು ಇಲ್ಲಿಯವರೆಗೆ ಜಾತ್ರೆ ಮಾಡಿದ್ದಿರಿ. ಅಷ್ಟೇ ಅದನ್ನು ಬಿಟ್ಟು ದೇವಸ್ಥಾನ, ರಸ್ತೆ ಸೇರಿದಂತೆ ಯಾವುದೇ ಅಭಿವೃದ್ಧಿಯಾಗಿಲ್ಲ. ಇದು ಜಾತ್ರೆ ಆಗಬಾರದು. ಇಪ್ಪತ್ತು ವರ್ಷಗಳಿಂದ ಇಲ್ಲಿಗೆ ಎಲ್ಲ ರಾಜಕಾರಣಿಗಳು ಬಂದಿದ್ದಾರೆ. ಆದರೆ, ಯಾರು ಈ ದೇವಸ್ಥಾನವನ್ನು ಅಭಿವೃದ್ಧಿ ಮಾಡಿಲ್ಲ. ಈ ರಸ್ತೆಯನ್ನು ಮಾಡದಿದ್ದರೇ ಮುಂದಿನ ದಿನಗಳಲ್ಲಿ ಎಲ್ಲ ರಾಜಕಾರಣಿಗಳಿಗೆ ಸ್ವಲ್ಪ ತೊಂದರೆಯಾಗುತ್ತದೆ. ನೀವು ಎಲ್ಲರೂ ಒಗ್ಗಟ್ಟಾಗಬೇಕು ಎಂದು ಮನವಿ ಮಾಡಿದರು.ಜಾತ್ರೆಯಲ್ಲಿ ಆಗಮಿಸಿದ ಭಕ್ತರಿಗೆ ಸಜ್ಜಕ, ಬದನೆಕಾಯಿ ಪಲ್ಯ ಮತ್ತು ಅನ್ನ-ಸಾಂಬಾರನ್ನು ಮಾಡಲಾಗಿತ್ತು. ಸುಮಾರು 5 ಸಾವಿರಕ್ಕೂ ಅಧಿಕ ಭಕ್ತರು ಪಾಲ್ಗೊಂಡಿದ್ದರು. ತಾಳಿಕೋಟೆ ಪೋಲಿಸ್ ಸಿಬ್ಬಂದಿ ಬಂದೋಬಸ್ತ್ ನೀಡಿದರು. ಆರೋಗ್ಯ ಇಲಾಖೆಯ ಸಿಬ್ಬಂದಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಿಬ್ಬಂದಿ ಆಗಮಿಸಿ ನವ ವಧು-ವರರ ವಯಸ್ಸಿನ ದಾಖಲಾತಿಗಳನ್ನು ಪರಿಶೀಲಿಸಿದರು.ಈ ಸಂದರ್ಭದಲ್ಲಿ ಕಾಗಿನೆಲೆ ಶಾಖಾಮಠ ತಿಂಥಣಿ ಬ್ರಿಜ್‌ನ ಸಿದ್ದಬೀರ ದೇವರು, ಸಿದ್ದಯ್ಯ ಗುರುವಿನ, ಸರೂರ ಸಹದೇವಯ್ಯ ಗುರುವಿನ, ಬಿ.ಕೆ.ಬಿರಾದಾರ, ಸೋಮನಗೌಡ ಪಾಟೀಲ ನಡಹಳ್ಳಿ, ಸಂಗಮ್ಮ ದೇವರಳ್ಳಿ, ರವಿ ಜಗಲಿ, ಲಕ್ಷ್ಮಣ ಬಿಜ್ಜೂರ, ಬೀರಪ್ಪ ಜು.ಸಾಸನೂರ, ಮಲಕೇಂದ್ರಾಯಗೌಡ ಪಾಟೀಲ, ಕಾಶಿಮ್ ಪಟೇಲ್ ಮುಕಿಹಾಳ, ಮಲ್ಲಣ್ಣ ಅಪರಾಧಿ, ರವಿಚಂದ್ರ ಆಲ್ದಾಳ (ಸಾಹುಕಾರ), ಹಣಮಂತ ಕುರಿ, ಬಸವರಾಜ ಗುಳಬಾಳ, ಸಂಗಮೇಶ ಶಿವಣಗಿ ಕಲಾ ತಂಡದವರು ಪ್ರಾರ್ಥನಾ ಗೀತೆ ಹಾಡಿದರು. ಶಿಕ್ಷಕ ಭೀಮಣ್ಷ ತಳವಾರ ನಿರೂಪಣೆ ಮಾಡಿದರು.ಈ ಭಾಗದಲ್ಲಿ ಬಡವರಿಗಾಗಿ 20 ವರ್ಷಗಳಿಂದ ಸದಾಕಾಲ ಸಾಮೂಹಿಕ ವಿವಾಹ ನಡೆಯುವ ಕೆಲಸವಾದರೇ ಅದು ಬೀರಪ್ಪನ ಬೆಟ್ಟದಲ್ಲಿ‌ ಮಾತ್ರ. ಇಲ್ಲಿ ಕಳೆದ ಹತ್ತಾರು ವರ್ಷದಿಂದ ರಾಜಕೀಯ ಮುಖಂಡರು ಇದೇ ಭಾಷಣ ಮಾಡುತ್ತಿದ್ದಿರಿ. ಯಾರು ಕೆಲಸ ಮಾಡುತ್ತಿಲ್ಲ. ಕೇವಲ ಮಾತೆ ಆಡುವುದು ಆಗಿದೆ. ಇಲ್ಲಿ ಮೊದಲಿಂದ ಸಂಘಟನೆ ಸರಿಯಾಗಿಲ್ಲ ಅಷ್ಟೆ, ಇಲ್ಲಿಗೆ ಎಲ್ಲ ಎಂಪಿ, ಎಂಎಲ್‌ಎ ಗಳು ಎಲ್ಲರೂ ಬಂದು ಹೋಗಿದ್ದಾರೆ. ಅವರು ತಮ್ಮ ರಾಜಕೀಯ ಭವಿಷ್ಯ ರೂಪಿಸಿಕೊಂಡು ಹೋಗಿದ್ದಾರಷ್ಟೆ.

-ರೇವಣಸಿದ್ದೇಶ್ವರ ಶಾಂತಮಯ ಮಹಾಸ್ವಾಮೀಜಿಗಳು.ಜಾತ್ರೆಯಲ್ಲಿ ಭಾಗವಹಿದ ಎಲ್ಲ ಮುಖಂಡರ ಸೇರಿ ಕಲ್ಯಾಣ ಮಂಟಪ ನಿರ್ಮಾಣ ಮಾಡಬೇಕು. ಅದು ಬಡವರಿಗೆ ಉಚಿತವಾಗಿ ಸಿಗಬೇಕು. ಇದೇ ಹಾಲುಮತ ಸಮಾಜದ ಅನೇಕ ಮುಖಂಡರ ಸಾಕಷ್ಟು ಶ್ರೀಮಂತರು ಇದ್ದಾರೆ. ಅವರು ಎಲ್ಲರೂ ಮನಸ್ಸು ಮಾಡಿದರೇ ಈ ಜಾಗವನ್ನು ಅಭಿವೃದ್ಧಿ ಆಗತ್ತದೆ. ಅವರ ಜೊತೆ ನಾವು ಕೈ ಜೋಡಿಸುತ್ತೇವೆ.

-ಶಾಂತಗೌಡ ಪಾಟೀಲ ನಡಹಳ್ಳಿ,

ಮುಖಂಡರು.ಮುಂದಿನ ದಿನಗಳಲ್ಲಿ ಹಾಲು ಸಮಾಜದ ಎಲ್ಲ ರಾಜಕೀಯ ವ್ಯಕ್ತಿಗಳಾಗಲಿ, ಯುವಕರು, ಮುಖಂಡರು ಸೇರಿ ಈ ಜಾತ್ರೆಯನ್ನು ಮುಂದುವರಿಸಿಕೊಂಡು ಹೋಗಲಿ. ಮುಂದಿನ ವರ್ಷದಲ್ಲಿ ಸರ್ಕಾರವಾಗಲಿ ಅಥವಾ ಸಮಾಜದರಾಗಲಿ ರಸ್ತೆ ಮಾಡದಿದ್ದರೇ ಮುಂದಿನ ದಿನಗಳಲ್ಲಿ ನಾನೇ ಸ್ವತಃ ಖರ್ಚಿನಲ್ಲಿ ರಸ್ತೆ ಕಾಮಗಾರಿ ಮುಗಿಸಿಕೊಡುತ್ತೇನೆ. ಮಾಳಿಂಗರಾಯನಲ್ಲಿ ಪ್ರಮಾಣ ಮಾಡುತ್ತೇನೆ.

-ಸಿ.ಬಿ.ಅಸ್ಕಿ,
ಪ್ರಥಮ ದರ್ಜೆ ಗುತ್ತಿಗೆದಾರರು.