ಸಹಕಾರಿ ಸಂಘಗಳಲ್ಲಿ ಯಾವುದೇ ಲೋಪದೋಷಗಳು ಇಲ್ಲದೇ ಕಾರ್ಯ ನಿರ್ವಹಿಸಬೇಕು, ಸಹಕಾರ ಸಂಸ್ಥೆಗಳ ಬೆಳವಣಿಗೆಯಲ್ಲಿ ಉತ್ತಮ ಪರಿಸರ, ತಂತ್ರಜ್ಞಾನ ಕೌಶಲ್ಯಾಧಾರಿತ, ವೃತ್ತಿಪರ ಸೇವೆ ಧ್ಯೇಯದೊಂದಿಗೆ ಸಾರ್ವಜನಿಕ ಮತ್ತು ಖಾಸಗಿ ಸಹಕಾರಿ ಪಾಲುದಾರಿಕೆಯ ಬಲಪಡಿಸುವ ದಿನವಾಗಿ ಕಾರ್ಯಕ್ರಮ ನಡೆಸಲಾಗುತ್ತಿದೆ. ಸಂಘದ ಪ್ರತಿಯೊಬ್ಬ ಸದಸ್ಯರೂ ಸ್ವಯಂ ಪ್ರೇರಿತರಾಗಿ ಪ್ರತಿಯೊಂದು ಚಟುವಟಿಕೆಯಲ್ಲಿ ಭಾಗವಹಿಸಬೇಕು.

ಕನ್ನಡಪ್ರಭ ವಾರ್ತೆ ದೇವನಹಳ್ಳಿ

ರೈತರ ಕಷ್ಟ ನಮಗೆ ಗೊತ್ತು, ನಾನು ನಿರ್ದೇಶಕನಾದ ಮೇಲೆ ರೈತರ ಸಮಸ್ಯೆಯ ಬಗ್ಗೆ ಕುಲಂಕುಷವಾಗಿ ಅರಿತಿದ್ದೇನೆ. ರೈತನ ಕಷ್ಟ ಅರಿತವರು ಯಾರೂ ಕೂಡ ಹಾಲಿನ ಬೆಲೆ ಏರಿಕೆಯ ಕುರಿತು ಟೀಕೆ ಟಿಪ್ಪಣಿಗಳನ್ನು ಮಾಡುವುದಿಲ್ಲ ಎಂದು ಬಮುಲ್ ನಿರ್ದೇಶಕ ಎಸ್.ಪಿ.ಮುನಿರಾಜು ತಿಳಿಸಿದರು.

ಪಟ್ಟಣದ ಹಾಲು ಒಕ್ಕೂಟ ಶಿಬಿರದ ಕಚೇರಿ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳಿ, ಬೆಂಗಳೂರು ಗ್ರಾಮಾಂತರ ಜಿಲ್ಲಾ ಸಹಕಾರ ಒಕ್ಕೂಟ ನಿಗಮ, ಸಹಕಾರ ಸಂಘಗಳ ಸಹಕಾರ ಇಲಾಖೆಯ ಸಂಯುಕ್ತಾಶ್ರಯದಲ್ಲಿ ನಡೆದ ೭೩ನೇ ಅಖಿಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕೇಂದ್ರ ಸರ್ಕಾರದಿಂದ ಆದಂಥ ಪೆಟ್ರೋಲ್- ಡೀಸಲ್ ಬೆಲೆ ಏರಿಕೆಯ ಬಗ್ಗೆ ಯಾರೂ ಮಾತನಾಡುವುದಿಲ್ಲ. ಯಾವುದೇ ಒಂದು ಮತ, ಜಾತಿಗಳಿಗೆ ಈ ಹಾಲಿನ ದರ ಹೆಚ್ಚಳ ಸೀಮಿತವಾಗಿಲ್ಲ, ಪ್ರತಿಯೊಬ್ಬರೂ ಸದಾ ರೈತರ ಪರವಾಗಿ ಇರಬೇಕು, ರೈತರಿಗೆ ಉತ್ತಮ ಬೆಲೆ ಸಿಗಬೇಕು ಎಂಬುವುದೇ ನಮ್ಮ ಆಶಯವಾಗಿದೆ. ಅತೀ ಶೀಘ್ರ ರೈತರ ಹೈನುಗಾರಿಕೆಗೆ ಉಪಯೋಗವಾಗುವಂಥ ಗುಣಮಟ್ಟದ ಮ್ಯಾಟ್ ,ಮಿಲ್ಕಿ ಮಿಷನ್ ಮತ್ತು ಚಾಪ್ ಕಟರ್ ನೀಡಲಾಗುವುದು. ನಮ್ಮ ಸಂಸ್ಥೆಯು ಕಸದಿಂದ ರಸ ಎಂಬ ಆಲೋಚನೆಯೊಂದಿಗೆ ಹಾಲಿನಿಂದ ಪನ್ನೀರ್ ತಯಾರಿಕೆಯ ನಂತರ ಉಳಿಕೆಯಾಗುವ ನೀರಿನಿಂದ ವೇ ಪ್ರೋಟೀನ್ ತಯಾರಿಸಿ ಲಾಭ ಪಡೆಯಲಾಗುತ್ತಿದೆ. ಇಂತಹ ಹಲವಾರು ಯೋಜನೆಗಳನ್ನು ರೈತರು ಸದುಪಯೋಗಪಡಿಸಿಕೊಂಡು ಗುಣಮಟ್ಟದ ಹಾಲು ಉತ್ಪಾದನೆಗೆ ಪ್ರಾಮುಖ್ಯತೆ ನೀಡಿ ಎಂದು ಹೇಳಿದರು.

ಬೆಂಗಳೂರು ಗ್ರಾಮಾಂತರ ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ಸಿ. ಮುನಿರಾಮು ಮಾತನಾಡಿ, ಸಹಕಾರಿ ಸಂಘಗಳಲ್ಲಿ ಯಾವುದೇ ಲೋಪದೋಷಗಳು ಇಲ್ಲದೇ ಕಾರ್ಯ ನಿರ್ವಹಿಸಬೇಕು, ಸಹಕಾರ ಸಂಸ್ಥೆಗಳ ಬೆಳವಣಿಗೆಯಲ್ಲಿ ಉತ್ತಮ ಪರಿಸರ, ತಂತ್ರಜ್ಞಾನ ಕೌಶಲ್ಯಾಧಾರಿತ, ವೃತ್ತಿಪರ ಸೇವೆ ಧ್ಯೇಯದೊಂದಿಗೆ ಸಾರ್ವಜನಿಕ ಮತ್ತು ಖಾಸಗಿ ಸಹಕಾರಿ ಪಾಲುದಾರಿಕೆಯ ಬಲಪಡಿಸುವ ದಿನವಾಗಿ ಕಾರ್ಯಕ್ರಮ ನಡೆಸಲಾಗುತ್ತಿದೆ. ಸಂಘದ ಪ್ರತಿಯೊಬ್ಬ ಸದಸ್ಯರೂ ಸ್ವಯಂ ಪ್ರೇರಿತರಾಗಿ ಪ್ರತಿಯೊಂದು ಚಟುವಟಿಕೆಯಲ್ಲಿ ಭಾಗವಹಿಸಬೇಕು ಎಂದರು.

ಬೆಂಗಳೂರು ಗ್ರಾಮಾಂತರ ಜಿಲ್ಲಾ ಸಹಕಾರ ಒಕ್ಕೂಟದ ಉಪಾಧ್ಯಕ್ಷ ಆರ್.ಜಯರಾಮು , ಬೆಂಗಳೂರು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ವೃತ್ತಿಪರ ನಿರ್ದೇಶಕ ಎ.ಸಿ ನಾಗರಾಜ್, ನಿರ್ದೇಶಕರಾದ ಜಿ.ಎಸ್ ಸಂಪಂಗಿ ಗೌಡ ,ಸಹಕಾರಿ ಅಭಿವೃದ್ಧಿ ಅಧಿಕಾರಿ ಆರ್. ಚೇತನ, ಸಹಕಾರ ಸಂಘಗಳ ಅಪರ ನಿಬಂಧಕ ಉಪನ್ಯಾಸಕರು ಶಶಿಧರ್ ಎಲೆ , ಬಮೂಲ್ ಆಡಳಿತ ಮಂಡಳಿಯ ನಿರ್ದೇಶಕರು, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿವಕುಮಾರ್.ಟಿ. ಸೇರಿ ತಾಲೂಕಿನ ಎಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಅಧ್ಯಕ್ಷರು, ಪದಾಧಿಕಾರಿಗಳು ಮತ್ತು ಮುಖ್ಯಕಾರ್ಯ ನಿರ್ವಹಣಾಧಿಕಾರಿಗಳು ಇದ್ದರು.