ಸಾರಾಂಶ
ಮನುಷ್ಯ ಜೀವನದಲ್ಲಿ ಸಾಧನೆ ಮಾಡದೆ ಮರೆಯಾಗಬಾರದು. ಪ್ರಸ್ತುತದಲ್ಲಿ ಡಾಕ್ಟರ್, ಎಂಜಿನಿಯರ್, ಅಧಿಕಾರಿಯಾಗಲು ಹಂಬಲಿಸಿ ಪ್ರತಿಯೊಬ್ಬರು ಓದುವುದನ್ನು ಆರಂಭಿಸುತ್ತಾರೆ. ಕೇವಲ ಮನೆ ಮಕ್ಕಳಾಗಿಯಷ್ಟೇ ಜೀವನ ಸಾಗಿಸುತ್ತಾರೆ. ದೇಶದ ಮಕ್ಕಳಾಗಿ ಸಾಧನೆ ಮಾಡಲು ಪ್ರಯತ್ನಿಸುವವರೇ ನಿಜವಾದ ಭಾರತೀಯ ಮಕ್ಕಳು.
ಕನ್ನಡಪ್ರಭ ವಾರ್ತೆ ಮಂಡ್ಯ
ದೇಶ ಸೇವೆಗಾಗಿ ಹಂಬಲಿಸಿ ಸಾಧನೆ ಮಾಡುವ ಪ್ರತಿಯೊಬ್ಬರೂ ನಿಜವಾದ ಭಾರತೀಯರು ಎಂದು ವಿಜಯಪುರ ಸಿದ್ದಲಿಂಗೇಶ್ವರ ಮಹಾಮಠದ ಶ್ರೀಸಿದ್ಧಲಿಂಗ ದೇವರು ಅಭಿಪ್ರಾಯಿಸಿದರು.ನಗರದ ಅಭಿನವ ಭಾರತಿ ಶಾಲಾ ಆವರಣದಲ್ಲಿ ಶ್ರೀವೆಂಕಟೇಶ್ವರ ಚಾರಿಟಬಲ್ ಟ್ರಸ್ಟ, ಅಭಿನವ ಭಾರತಿ ಶಿಕ್ಷಣ ಸಮೂಹ ಸಂಸ್ಥೆಗಳ ಸಹಯೋಗದಲ್ಲಿ ಅನಂತಕುಮಾರ ಸ್ವಾಮೀಜಿ ಅವರ 88ನೇ ವರ್ಷದ ಜನ್ಮದಿನ ಅಂಗವಾಗಿ ಶನಿವಾರ ಆಯೋಜಿಸಿದ್ದ ಶ್ರೀಅನಂತ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಮನುಷ್ಯ ಜೀವನದಲ್ಲಿ ಸಾಧನೆ ಮಾಡದೆ ಮರೆಯಾಗಬಾರದು. ಪ್ರಸ್ತುತದಲ್ಲಿ ಡಾಕ್ಟರ್, ಎಂಜಿನಿಯರ್, ಅಧಿಕಾರಿಯಾಗಲು ಹಂಬಲಿಸಿ ಪ್ರತಿಯೊಬ್ಬರು ಓದುವುದನ್ನು ಆರಂಭಿಸುತ್ತಾರೆ. ಕೇವಲ ಮನೆ ಮಕ್ಕಳಾಗಿಯಷ್ಟೇ ಜೀವನ ಸಾಗಿಸುತ್ತಾರೆ. ದೇಶದ ಮಕ್ಕಳಾಗಿ ಸಾಧನೆ ಮಾಡಲು ಪ್ರಯತ್ನಿಸುವವರೇ ನಿಜವಾದ ಭಾರತೀಯ ಮಕ್ಕಳು ಎಂದರು.ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಮಾತನಾಡಿ, ವಿದ್ಯಾರ್ಥಿಗಳು ಶಿಸ್ತು ಬಳಸಿಕೊಂಡರೆ ಜ್ಞಾನ ಬರುತ್ತದೆ. ಇದರಿಂದ ಅಧಿಕಾರ ಹಾಗೂ ಸಂಪತ್ತು ಎಲ್ಲವನ್ನೂ ಪಡೆಯಬಹುದು ಎಂದು ಹಿರಿಯರು ಹೇಳಿದ್ದಾರೆ. ಇಂದು ಜಿಲ್ಲೆಯ ಬಹುತೇಕ ವಿದ್ಯಾರ್ಥಿಗಳು ಕೆಎಎಸ್ ಮತ್ತು ಐಎಎಸ್ ಮಾಡುವ ಕನಸನ್ನು ನನಸು ಮಾಡಿಕೊಳ್ಳುವುದರಲ್ಲಿ ಹಿಂದೆ ಇದ್ದರೆ ಅದಕ್ಕೆ ಆಸಕ್ತಿ ಕೊರತೆಯೇ ಕಾರಣ ಎಂದು ವಿಷಾದಿಸಿದರು.
ಇದೇ ವೇಳೆ ಚಂದ್ರವನ ಆಶ್ರಮದ ಪೀಠಾಧ್ಯಕ್ಷ ತ್ರಿನೇತ್ರ ಮಹಂತ ಶಿವಯೋಗಿ ಸ್ವಾಮೀಜಿ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಡಾ.ಕೆ.ಎಸ್.ರಾಜಣ್ಣ, ಎಸ್.ಬಿ.ಶಿಕ್ಷಣ ಟ್ರಸ್ಟ್ ಕಾರ್ಯದರ್ಶಿ ಮೀರಾ ಶಿವಲಿಂಗಯ್ಯ, ಪಶುವೈದ್ಯ ಡಾ.ಜಯರಾಂ ಅವರಿಗೆ ಶ್ರೀ ಅನಂತ ಪ್ರಶಸ್ತಿ ನೀಡಿ ಗೌರವಿಸಲಾಯಿತು.ಕಾರ್ಯಕ್ರಮದಲ್ಲಿ ಶಾಸಕರಾದ ಕೆ.ವಿವೇಕಾನಂದ, ಪಿ.ರವಿಕುಮಾರ್, ಪಿಇಟಿ ಉಪಾಧ್ಯಕ್ಷ ರಾಮಲಿಂಗಯ್ಯ, ಕಾರ್ಯದರ್ಶಿ ಶಿವಮೂರ್ತಿ ಕೀಲಾರ ಭಾಗವಹಿಸಿದ್ದರು.