ಮಲ್ಪೆ ತೊಟ್ಟಂ ಸಂತ ಅನ್ನಮ್ಮ ದೇವಾಲಯದ ವಾರ್ಷಿಕ ಮಹೋತ್ಸವ ಪ್ರಧಾನ ಬಲಿಪೂಜೆ ಬುಧವಾರ ನೆರವೇರಿತು.
ಮಲ್ಪೆ: ಪರಸ್ಪರ ಒಗ್ಗಟ್ಟಿನಿಂದ ಕೂಡಿಕೊಂಡು ಧರ್ಮಸಭೆಯ ಅಭಿವೃದ್ಧಿಗೆ ಶ್ರಮಿಸಿದಾಗ ಭರವಸೆಯ ಬಲಿಷ್ಠ ಸೌಹಾರ್ದ ಸಮುದಾಯ ರಚನೆ ಸಾಧ್ಯ ಎಂದು ಮಂಗಳೂರು ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕಾಧಿಕಾರಿ ಹಾಗೂ ಬಿಜೈ ಚರ್ಚಿನ ಪ್ರಧಾನ ಧರ್ಮಗುರು ವಂ.ಜೆ. ಬಿ. ಸಲ್ಡಾನಾ ಹೇಳಿದ್ದಾರೆ.
ಬುಧವಾರ ಇಲ್ಲಿನ ತೊಟ್ಟಂ ಸಂತ ಅನ್ನಮ್ಮ ದೇವಾಲಯದ ವಾರ್ಷಿಕ ಮಹೋತ್ಸವದ ಪ್ರಧಾನ ಬಲಿಪೂಜೆ ನೆರವೇರಿಸಿ ಅವರು ಸಂದೇಶ ನೀಡಿದರು.ದೇವರು ತಮ್ಮ ಇಚ್ಚೆ ಪೊರೈಸಲು ಶ್ರೀಮಂತರನ್ನು, ಬಲಿಷ್ಠರನ್ನು ಆಯ್ಕೆ ಮಾಡದೆ ಹುಲು ಮಾನವರನ್ನು, ಆರಿಸಿಕೊಳ್ಳುತ್ತಾರೆ. ಭರವಸೆಯ ಸಮುದಾಯದ ನಿರ್ಮಾಣದಲ್ಲಿ ದೇವರು ಮತ್ತು ಮಾನವನ ನಡುವಿನ ಸಂಬಂಧ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಪ್ರತಿಯೊಬ್ಬರು ಒಂದಾಗಿ ದೈವಿ ಯೋಜನೆಗಳನ್ನು ಅನುಷ್ಠಾನಗೊಳಿಸುವ ಕಾರ್ಯದಲ್ಲಿ ಕೈ ಜೋಡಿಸಿದಾಗ ಶಾಂತಿ, ಮತ್ತು ಪ್ರೀತಿಯುತ ಸಮಾಜ ನಿರ್ಮಾಣವಾಗುತ್ತದೆ ಎಂದರು.ಮಹೋತ್ಸವಕ್ಕೆ ಸಹಕರಿಸಿದ ದಾನಿಗಳಿಗೆ ಮೇಣದ ಬತ್ತಿ ಗೌರವವನ್ನು ಪ್ರಧಾನ ಧರ್ಮಗುರುಗಳು ಸಲ್ಲಿಸಿದರು. ಪವಿತ್ರ ಬಲಿಪೂಜೆಯಲ್ಲಿ ಉಡುಪಿ ಧರ್ಮಪ್ರಾಂತ್ಯದ ಶ್ರೇಷ್ಠ ಗುರು ವಂ. ಮೊನ್ಸಿಂಜ್ಞೊರ್ ಫರ್ಡಿನಾಂಡ್ ಗೊನ್ಸಾಲ್ವಿಸ್, ಚರ್ಚಿನ ಪ್ರಧಾನ ಧರ್ಮಗುರು ವಂ. ಡೆನಿಸ್ ಡೆಸಾ, ಕಲ್ಯಾಣಪುರ ವಲಯ ಹಾಗೂ ಧರ್ಮಪ್ರಾಂತ್ಯ ವ್ಯಾಪ್ತಿಯ ವಿವಿಧ ಚರ್ಚುಗಳ ಧರ್ಮಗುರುಗಳು, ಧರ್ಮಭಗಿನಿಯರು ಭಕ್ತಾದಿಗಳು ಭಾಗಿಗಳಾಗಿದ್ದರು.ಚರ್ಚ್ ಪಾಲನಾ ಮಂಡಳಿ ಉಪಾಧ್ಯಕ್ಷ ಲೆಸ್ಲಿ ಆರೋಝಾ, ಕಾರ್ಯದರ್ಶಿ ಬ್ಲೆಸಿಲ್ಲಾ ಕ್ರಾಸ್ತಾ, ಸ್ಥಳೀಯಾ ಕಾನ್ವೆಂಟಿನ ಸಿಸ್ಟರ್ ಸುಶ್ಮಾ, 20 ಆಯೋಗಗಳ ಸಂಚಾಲಕಿ ವನಿತಾ ಫರ್ನಾಂಡಿಸ್ ಇದ್ದರು.ಮಂಗಳವಾರ ಸಂಜೆ ನಡೆದ ದೈವ ವಾಕ್ಯದ ಆರಾಧನೆಯನ್ನು ಮಂಗಳೂರು ಧರ್ಮಪ್ರಾಂತ್ಯದ ಬೈಬಲ್ ಆಯೋಗದ ನಿರ್ದೇಶಕ ವಂ.ವಿನ್ಸೆಂಟ್ ಸಿಕ್ವೇರಾ ನೆರವೇರಿಸಿದರು. ದೈವವ್ಯಾಕ್ಯದ ಆರಾಧನೆಯ ಪ್ರಯುಕ್ತ ಮೆರವಣಿಗೆ ತೊಟ್ಟಂ ಗಣೇಶೋತ್ಸವ ಸಮಿತಿ ವೇದಿಕೆಯಿಂದ ಚರ್ಚಿನವರೆಗೆ ನಡೆದಿದ್ದು ತೊಟ್ಟಂ ಸಮನ್ವಯ ಸರ್ವಧರ್ಮ ಸೌಹಾರ್ದ ಸಮಿತಿ ಸಹಕರಿಸಿತು.