ಉತ್ತರ ಕರ್ನಾಟಕವು ಪ್ರಜಾಸತ್ತಾತ್ಮಕ ಅನುಕೂಲಗಳ ಮೂಲಕ ಅಭಿವೃದ್ಧಿಯಾಗಿಲ್ಲ ಎಂಬುದು ದಶಕದಿಂದಲೂ ಇಲ್ಲಿಯ ಜನರ ಕೊರಗಿದೆ. ಸರ್ಕಾರಕ್ಕೆ ಸಲ್ಲಿಕೆಯಾದ ಈ ಕುರಿತ ಅಧ್ಯಯನ ವರದಿಗಳು ಜಾರಿಯಾಗಿಲ್ಲ. ಈ ಹಿನ್ನೆಲೆಯಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘವು ಅಖಂಡ ಕರ್ನಾಟಕ ಪ್ರಾದೇಶಿಕ ಅಸಮತೋಲನ ವಿಚಾರವಾಗಿ ಜೂ. 27ರಂದು ಚಿಂತನಾ ಸಮಾವೇಶ ಹಮ್ಮಿಕೊಂಡಿದೆ.
ಧಾರವಾಡ:
ಉತ್ತರ ಕರ್ನಾಟಕವು ಪ್ರಜಾಸತ್ತಾತ್ಮಕ ಅನುಕೂಲಗಳ ಮೂಲಕ ಅಭಿವೃದ್ಧಿಯಾಗಿಲ್ಲ ಎಂಬುದು ದಶಕದಿಂದಲೂ ಇಲ್ಲಿಯ ಜನರ ಕೊರಗಿದೆ. ಸರ್ಕಾರಕ್ಕೆ ಸಲ್ಲಿಕೆಯಾದ ಈ ಕುರಿತ ಅಧ್ಯಯನ ವರದಿಗಳು ಜಾರಿಯಾಗಿಲ್ಲ. ಈ ಹಿನ್ನೆಲೆಯಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘವು ಅಖಂಡ ಕರ್ನಾಟಕ ಪ್ರಾದೇಶಿಕ ಅಸಮತೋಲನ ವಿಚಾರವಾಗಿ ಜೂ. 27ರಂದು ಚಿಂತನಾ ಸಮಾವೇಶ ಹಮ್ಮಿಕೊಂಡಿದೆ.ಈ ಕುರಿತು ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಸಂಘದ ಕಾರ್ಯಾಧ್ಯಕ್ಷ ಬಸವಪ್ರಭು ಹೊಸಕೇರಿ, ಕರ್ನಾಟಕ ಪ್ರಾದೇಶಿಕ ಅಸಮತೋನ ನಿವಾರಣಾ ಸಮಿತಿಯ ಪ್ರೊ. ಎಂ. ಗೋವಿಂದರಾವ್ ವರದಿ ಆಧರಿಸಿ ಅಂದು ಇಡೀ ದಿನ ಪಾಟೀಲ ಪುಟ್ಟಪ್ಪ ಸಭಾಭವನದಲ್ಲಿ ಈ ಸಮಾವೇಶವನ್ನು ಏರ್ಪಡಿಸಿದೆ ಎಂದರು.
ರಾಜ್ಯ ಸರ್ಕಾರದ ವಿಶ್ರಾಂತ ಮುಖ್ಯ ಕಾರ್ಯದರ್ಶಿ ಡಾ. ಎಸ್.ಎಂ. ಜಾಮದಾರ ದಿಕ್ಸೂಚಿ ಭಾಷಣ ಮಾಡಲಿದ್ದು, ಮೂಲಭೂತ ಸೌಕರ್ಯ ಕುರಿತು ಪತ್ರಕರ್ತ ಡಾ. ಸಿದ್ಧನಗೌಡ ಪಾಟೀಲ, ಮಾನವಾಭಿವೃದ್ಧಿ ಕುರಿತು ಅಭಿವೃದ್ಧಿ ಚಿಂತಕ ಡಾ. ಟಿ.ಆರ್. ಚಂದ್ರಶೇಖರ, ಪ್ರಾದೇಶಿಕ ಹಿಂದುಳಿಯುವಿಕೆ ಮತ್ತು ಅಭಿವೃದ್ಧಿ ಮಾದರಿ-ಪ್ರಾದೇಶಿಕ ತಾರತಮ್ಯ ಅಧ್ಯಯನ ವರದಿಗಳ ಸಮಸ್ಯೆಗಳು ಕುರಿತು ಸಾಮಾಜಿಕ ಚಿಂತಕ ಶಿವಸುಂದರ ವಿಷಯ ಮಂಡನೆ ಮಾಡುವರು ಎಂದು ಹೇಳಿದರು.ಊಟದ ವಿರಾಮದನ ನಂತರದ ಕೃಷಿ ಹಾಗೂ ನೀರಾವರಿ ಕುರಿತು ವಾಲ್ಮಿ ವಿಶ್ರಾಂತ ನಿರ್ದೇಶಕ ಡಾ. ರಾಜೇಂದ್ರ ಪೋದ್ದಾರ, ಸ್ತ್ರೀ ಸಬಲೀಕರಣ ಕುರಿತು ವಿಶ್ರಾಂತ ಕುಲಪತಿ ಡಾ. ಮಲ್ಲಿಕಾ ಘಂಟಿ, ಶಿಕ್ಷಣ ಮತ್ತು ಸಂಸ್ಕೃತಿ ಕುರಿತು ಶಿಕ್ಷಣ ತಜ್ಞ ಡಾ. ನಿರಂಜನಾರಾಧ್ಯ ವಿ.ಪಿ. ಆರೋಗ್ಯ ಸೇವೆ ಕುರಿತು ಡಾ. ಸಂಜೀವ ಕುಲಕರ್ಣಿ ಹಾಗೂ ಆಡಳಿತ ಕ್ಷೇತ್ರ ಕುರಿತು ಹೈಕೋಟ್ ಪೀಠದ ವಕೀಲರ ಸಂಘದ ಅಧ್ಯಕ್ಷ ಬಿ.ಡಿ. ಹಿರೇಮಠ ವಿಷಯ ಮಂಡಿಸುವರು ಎಂದರು.
ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಹಾಗೂ ಉಪಾಧ್ಯಕ್ಷ ಸಂಜೀವ ಕುಲಕರ್ಣಿ ಮಾತನಾಡಿ, ಈ ಭಾಗದ ಜನಪ್ರತಿನಿಧಿಗಳು ನಿರ್ಲಿಪ್ತರಾಗಿದ್ದರಿಂದಲೇ ಉತ್ತರ ಕರ್ನಾಟಕ ಹಿಂದುಳಿದಿದೆ. ಹೀಗಾಗಿ ತಮಗಾಗಿರುವ ಅನ್ಯಾಯವನ್ನು ಪ್ರಶ್ನಿಸಲು ಇದೀಗ ಅವರೇ ಮುಂದಾಗಬೇಕು. ಈ ಹಿನ್ನೆಲೆಯಲ್ಲಿ ಈ ಸಮಾವೇಶದ ನಂತರ ಇಲ್ಲಿಯ ಚರ್ಚೆಯಾದ ವಿಷಯ ಕ್ರೂಡೀಕರಣ ಮಾಡಿ ಮುಂದಿನ ವಿಧಾನಸಭಾ ಅಧಿವೇಶನದಲ್ಲಿ ಚರ್ಚೆ ಮಾಡಬೇಕೆಂಬುದು ನಮ್ಮ ಆಶಯ ಎಂದರು.ಸುದ್ದಿಗೋಷ್ಠಿಯಲ್ಲಿ ಸಂಘದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ, ಸತೀಶ ತುರುಮರಿ, ವೀರಣ್ಣ ಒಡ್ಡೀನ, ವಿಶ್ವೇಶ್ವರಿ ಹಿರೇಮಠ ಇದ್ದರು.