ಸಾರಾಂಶ
ಕುಮಟಾ: ಉತ್ತರ ಕನ್ನಡ ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಪರಿಶಿಷ್ಟ(ದಲಿತ) ಸಮುದಾಯದವರ ಹಲವು ಬಗೆಯ ಕಷ್ಟಕಾರ್ಪಣ್ಯಗಳಿಗೆ ಸೂಕ್ತ ಸ್ಪಂದನೆ ದೊರಕದೇ ಅನ್ಯಾಯವಾಗುತ್ತಿದೆ. ಈ ಬಗ್ಗೆ ಜಿಲ್ಲಾದ್ಯಂತ ದಲಿತ ರಕ್ಷಣಾ ವೇದಿಕೆಯಡಿ ಸಂಘಟಿತರಾಗಿ ಹೋರಾಟ ರೂಪಿಸಲೇಬೇಕಾದ ಅನಿವಾರ್ಯತೆ ಎದುರಾಗಿದೆ ಎಂದು ದಲಿತ ರಕ್ಷಣಾ ವೇದಿಕೆಯ ಮುಖಂಡ ಎಲಿಶಾ ಎಲಿಕಪಾಟಿ ತಿಳಿಸಿದ್ದಾರೆ.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬಹುತೇಕ ಗುಡ್ಡಗಾಡು ಹಾಗೂ ಹಿಂದುಳಿದ ಜಿಲ್ಲೆಯಾದ ಉತ್ತರ ಕನ್ನಡದಲ್ಲಿ ದಲಿತರು ಕಷ್ಟಪಟ್ಟು ಶಿಕ್ಷಣ ಪಡೆದು ಜೀವನ ಸಾಗಿಸುತ್ತಿದ್ದಾರೆ. ದಲಿತ ಕುಟುಂಬದ ಮಕ್ಕಳು ಉತ್ತಮ ಫಲಿತಾಂಶದೊಂದಿಗೆ ಪದವಿ, ಉನ್ನತ ಪದವಿಗಳನ್ನು ಪಡೆದಿದ್ದರೂ ನಿರುದ್ಯೋಗಿಯಾಗಿದ್ದಾರೆ. ಸರ್ಕಾರದಡಿ ಹೊಸ ಉದ್ಯೋಗಗಳು ಸಿಗುತ್ತಿಲ್ಲ. ಹೀಗಿರುವಾಗ ಸರ್ಕಾರಿ ಕಚೇರಿಗಳಲ್ಲಿ ನಿವೃತ್ತರಾದವರನ್ನೇ ಪುನಃ ಅದೇ ಸ್ಥಳದಲ್ಲಿ ನಿಯಮಬಾಹಿರವಾಗಿ ನಿಯೋಜನೆ ಮಾಡಲಾಗುತ್ತಿದೆ. ಹಲವು ಇಲಾಖೆಗಳಲ್ಲಿ ಗುತ್ತಿಗೆ ಆಧಾರದಲ್ಲಿ ಅಥವಾ ದಿನಗೂಲಿ ಆಧಾರದಲ್ಲಿ ನೀಡಲಾಗುವ ಉದ್ಯೋಗದಲ್ಲೂ ದಲಿತರನ್ನು ಕಡೆಗಣಿಸಲಾಗುತ್ತಿದೆ. ಇದರಿಂದ ಸರ್ಕಾರದ ಸೌಲಭ್ಯ ಪಡೆದು ಸುಶಿಕ್ಷಿತರಾದ ಬಡ ದಲಿತ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತಿದೆ.ಹಾಗೆಯೇ ಹಲವಾರು ವರ್ಷಗಳಿಂದ ಅರಣ್ಯದ ಚಿಕ್ಕ ಜಾಗದಲ್ಲಿ ಅತಿಕ್ರಮಣ ಮಾಡಿಕೊಂಡು ಸೂರು ಕಂಡಿರುವ ಹಲವಾರು ದಲಿತರ ಜಾಗದ ಜಿಪಿಎಸ್ ಕೂಡಾ ಮಾಡಿಲ್ಲ. ಆದ್ದರಿಂದ ಜಿಲ್ಲೆಯಲ್ಲಿ ದಲಿತ ಸಮುದಾಯದ ಅತಿಕ್ರಮಣದಾರರ ಭೂಮಿಯನ್ನು ಹುಡುಕಿ ಜಿಪಿಎಸ್ ಮಾಡಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಹಿರೇಗುತ್ತಿಯ ನುಶಿಕೋಟೆಯಲ್ಲಿ ಕಾಸ್ಟಿಕ್ ಸೋಡಾ ಫ್ಯಾಕ್ಟರಿಗೆ ದಲಿತರಿಂದ ಕವಡೆ ಕಿಮ್ಮತ್ತು ಕೊಟ್ಟು ಸ್ವಾಧೀನ ಪಡಿಸಿಕೊಂಡ ೬೦೦ ಎಕರೆಗೂ ಹೆಚ್ಚು ಭೂಮಿಯನ್ನು ಹಾಳು ಗೆಡವಿ, ಈಗ ಕೈಗಾರಿಕಾ ಅಭಿವೃದ್ಧಿ ನಿಗಮಕ್ಕೆ ವಹಿಸಲಾಗಿದೆ. ಅಂದು ಭೂಮಿ ಕಳೆದುಕೊಂಡ ದಲಿತರಿಗೆ ಪರ್ಯಾಯ ಜಾಗವನ್ನೂ ನೀಡದೇ, ಅವರು ವಾಸ್ತವ್ಯವಿರುವ ಅತಿಕ್ರಮಣ ಜಾಗಕ್ಕೂ ಹಕ್ಕುಮಾನ್ಯತೆ ನೀಡದೇ ಅನ್ಯಾಯವಾಗಿದೆ. ಸದ್ಯವೇ ಜಿಲ್ಲೆಯ ಇನ್ನುಳಿದ ೫ ತಾಲೂಕುಗಳಿಂದ ಸಂಘಟನೆಯಡಿ ಸಭೆ ನಡೆಸಿದ ಬಳಿಕ ಜಿಲ್ಲಾಕೇಂದ್ರದಲ್ಲಿ ಸಮಗ್ರ ಜಿಲ್ಲೆಯ ದಲಿತ ಸಂಘಟನೆಯಡಿ ಹೋರಾಟದ ಅಂತಿಮ ನಿರ್ಣಯ ಪ್ರಕಟಿಸಲಾಗುವುದು ಎಂದರು.ಸುದ್ದಿಗೋಷ್ಠಿಯಲ್ಲಿ ದಲಿತ ಸಂಘಟನೆಯ ವಿವಿಧ ತಾಲೂಕು ಪ್ರಮುಖರಾದ ತಿಮ್ಮಪ್ಪ ಮುಕ್ರಿ, ಗಿರೀಶ ಎನ್.ಎಸ್., ಸುಮನ್ ಜಿ. ಹರಿಜನ, ಸವಿತಾ ಮುಕ್ರಿ, ಶಾಂತಿ ಮುಕ್ರಿ, ಚಂದ್ರಕಾಂತ ಮುಕ್ರಿ, ರಾಘವೇಂದ್ರ ಮುಕ್ರಿ, ನಾಗರಾಜ ಕೃಷ್ಣ ಶಿರಸಿ, ಲೋಕೇಶ ಮುಕ್ರಿ, ಗಣೇಶ ಮುಕ್ರಿ, ಉದಯ ಮುಕ್ರಿ, ನಾರಾಯಣ ಮುಕ್ರಿ ಇತರರು ಇದ್ದರು.