ಮುಖ್ಯ ಚಿಂತಕ ಹಾಗೂ ರಾಜಕೀಯ ವಿಶ್ಲೇಷಕ ಶಿವಸುಂದರ್ ಮಾತನಾಡಿ, ಎಸ್.ಐ.ಆರ್ ಜಾರಿ ಮಾಡುವ ಮೂಲಕ ಸರ್ಕಾರ ಮೌನವಾಗಿ ಜನರ ಬೆನ್ನಿಗೆ ಇರಿದಿದೆ ಎಂದು ವ್ಯಾಖ್ಯಾನಿಸಿದರು.
ಕನ್ನಡಪ್ರಭ ವಾರ್ತೆ ಎಚ್.ಡಿ. ಕೋಟೆ
ಸಂವಿಧಾನ ಸಂರಕ್ಷಣಾ ಪಡೆ-ಕರ್ನಾಟಕ’ ಕೋಟೆ ಮತ್ತು ಸರಗೂರು ವತಿಯಿಂದ ‘ಸಂವಿಧಾನದ ಅಳಿವು-ಉಳಿವು ಸಂರಕ್ಷಣೆ’ ಕುರಿತಾಗಿ ನಡೆದ ಒಂದು ದಿನದ ಚಿಂತನ-ಮಂಥನ ಕಾರ್ಯಗಾರ ನಡೆಯಿತು.ಕಾರ್ಯಾಗಾರದಲ್ಲಿ ಮುಖ್ಯ ಚಿಂತಕ ಹಾಗೂ ರಾಜಕೀಯ ವಿಶ್ಲೇಷಕ ಶಿವಸುಂದರ್ ಮಾತನಾಡಿ, ಎಸ್.ಐ.ಆರ್ ಜಾರಿ ಮಾಡುವ ಮೂಲಕ ಸರ್ಕಾರ ಮೌನವಾಗಿ ಜನರ ಬೆನ್ನಿಗೆ ಇರಿದಿದೆ ಎಂದು ವ್ಯಾಖ್ಯಾನಿಸಿದರು.
ದೇಶದಲ್ಲಿನ ಕೇಂದ್ರ, ರಾಜ್ಯ ಸರ್ಕಾರಗಳು ಒಂದಲ್ಲಾ ಒಂದು ರೀತಿಯಲ್ಲಿ ಜನ ಸಾಮಾನ್ಯರ ಬೆನ್ನಿಗೆ ಇರಿಯುವ ಕೆಲಸ ಮಾಡುತ್ತಿವೆ. ಕೇಂದ್ರ ಸರ್ಕಾರ ಸದ್ದಿಲ್ಲದೆ ಎಸ್ಐಆರ್ ಹೆಸರಿನಲ್ಲಿ ಮತದಾನದ ಹಕ್ಕನ್ನೇ ಕಸಿಯುವ, ಒಂದು ಸಮುದಾಯವನ್ನ ನಿರ್ದಿಷ್ಟವಾಗಿ ಗುರಿಯಾಗಿಸಿ ನಾಗರಿಕತ್ವ ಇರದಂತೆ ಮಾಡುವ ಹುನ್ನಾರ ನಡೆಸಿದೆ. ಇನ್ನೊಂದೆಡೆ ರಾಜ್ಯ ಸರ್ಕಾರ ರೈತ ವಿರೋಧಿ ಕಾಯ್ದೆ ಜೊತೆಗೆ ನಿರಂತರ ದಾಳಿ ನಡೆಸುತ್ತಿದೆ ಎಂದರು.ಜನಶಕ್ತಿ ರಾಜ್ಯಾಧ್ಯಕ್ಷ ನೂರ್ ಶ್ರೀಧರ್ ಮಾತನಾಡಿ, ಈ ದೇಶದ ಸಂವಿಧಾನ ಇಂದು ಅಪಾಯದಲ್ಲಿದೆ ಸಂವಿಧಾನದ ಮೂಲ ಆಶಯಕ್ಕೆ ಧಕ್ಕೆ ತರುವಂತ ಹಲವಾರು ಕಾಯ್ದೆಗಳನ್ನ ಜಾರಿಗೆ ತಂದು ಭಾವನಾತ್ಮಕವಾಗಿ ಜನರನ್ನ ಮರಳು ಮಾಡುವ ವ್ಯವಸ್ಥಿತ ಕೆಲಸಗಳು ನಿರಂತರವಾಗಿ ನಡೆಯುತ್ತಿದೆ ಎಂದು ತಿಳಿಸಿದರು.ಕಾರ್ಯಗಾರವನ್ನ ಕುರಿತಾಗಿ ಜೀವಿಕ ಸಂಸ್ಥಾಪಕ ಸಂಚಾಲಕ ಕಿರಣ್ ಕಮಲ್ ಪ್ರಸಾದ್, ಮಹಿಳಾ ವಿಶ್ವವಿದ್ಯಾಲಯದ ನಿವೃತ್ತ ಉಪಕುಲಪತಿ ಡಾ ಸಬೀಹಾ ಭೂಮಿಗೌಡ, ಸಂಚಾಲನ ಸಮಿತಿ ಸದಸ್ಯ ಅಕ್ಬರ್ ಪಾಷ ಮತ್ತಿತರರು ಸಂವಿಧಾನ ಅಳಿವು ಉಳಿವು ಸಂರಕ್ಷಣೆ ವಿಷಯಗಳ ಮೇಲೆ ಮಾತಾನಾಡಿದರು.
ಎಚ್.ಡಿ. ಕೋಟೆ ಮತ್ತು ಸರಗೂರು ತಾಲೂಕುಗಳ ಎಲ್ಲ ಜಾತಿ ಜನಾಂಗ ಧರ್ಮ, ಸಂಘ ಸಂಸ್ಥೆ ಸಂಘಟನೆ ವೇದಿಕೆ ಒಕ್ಕೂಟಗಳ ಅಧ್ಯಕ್ಷರು, ಸಂಚಾಲಕರು, ಯಜಮಾನರು ಸುಮಾರು 35ಕ್ಕೂ ಸಮುದಾಯಗಳು 40 ಕ್ಕೂ ಹೆಚ್ಚು ಸಂಘಟನೆ ಮುಖಂಡರು ಭಾಗವಹಿಸಿದ್ದರು.ಕಾರ್ಯಗಾರಕ್ಕೆ ಮೈಸೂರು, ಕೊಡಗು, ಚಾಮರಾಜನಗರ, ಮಂಡ್ಯ, ಬೆಂಗಳೂರು, ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗಳ ಮುಖಂಡರು ಭಾಗವಹಿಸಿದ್ದರು.