ಇಂದಿನ ದಿನಗಳಲ್ಲಿ ಸಮಾಜದ ದಿಕ್ಕು ತಪ್ಪುತ್ತಿದ್ದು, ಮಾನವೀಯ ಮೌಲ್ಯ ಕುಸಿಯುತ್ತಿವೆ.
ಕುಷ್ಟಗಿ: ಉತ್ತಮ ಸಮಾಜ ನಿರ್ಮಿಸುವಲ್ಲಿ ನಿವೃತ್ತ ನೌಕರರ, ಹಿರಿಯ ನಾಗರಿಕರ ಚಿಂತನೆ, ಮಾರ್ಗದರ್ಶನ ಅಗತ್ಯವಿದೆ ಎಂದು ಶಾಸಕ ದೊಡ್ಡನಗೌಡ ಪಾಟೀಲ ಅಭಿಪ್ರಾಯಪಟ್ಟರು.
ಪಟ್ಟಣದ ಬಸವ ಭವನದಲ್ಲಿ ಕರ್ನಾಟಕ ರಾಜ್ಯ ನಿವೃತ್ತ ನೌಕರರ ಸಂಘ ಕುಷ್ಟಗಿ ತಾಲೂಕು ಘಟಕದಿಂದ ನಿವೃತ್ತ ನೌಕರರ ದಿನಾಚರಣೆ ಹಾಗೂ75 ವರ್ಷ ಮೇಲ್ಪಟ್ಟ ನಿವೃತ್ತ ನೌಕರರಿಗೆ ನಡೆದ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.ಇಂದಿನ ದಿನಗಳಲ್ಲಿ ಸಮಾಜದ ದಿಕ್ಕು ತಪ್ಪುತ್ತಿದ್ದು, ಮಾನವೀಯ ಮೌಲ್ಯ ಕುಸಿಯುತ್ತಿವೆ. ಹಿರಿಯ ನಾಗರಿಕರು ಯುವಕರಿಗೆ ಉತ್ತಮ ಮಾರ್ಗದರ್ಶನ ಮಾಡುವ ಮೂಲಕ ಸಮಾಜದ ಪರಿವರ್ತನೆಗೆ ಮುಂದಾಗಬೇಕು ಯಾವುದೆ ಖಿನ್ನತೆಗೆ ಒತ್ತಡಕ್ಕೆ ಒಳಗಾಗದೆ ಖುಷಿಯಿಂದ ನಿವೃತ್ತಿಯ ಜೀವನ ನಡೆಸಬೇಕು ಎಂದು ತಿಳಿಸಿದರು.
ನಿವೃತ್ತ ನೌಕರರ ಭವನಕ್ಕೆ ಈಗಾಗಲೆ ಐದು ಲಕ್ಷ ಅನುದಾನ ಕೊಟ್ಟಿದ್ದು, ಈ ವರ್ಷ ಸುಮಾರು ₹10 ಲಕ್ಷ ಅನುದಾನ ನೀಡಲಾಗುವದು ತಮ್ಮ ಕಷ್ಟಗಳಿಗೆ ಎಂದಿಗೂ ನಿಮ್ಮ ಮಗನಾಗಿ ಸೇವೆ ಸಲ್ಲಿಸುತ್ತೇನೆ ಎಂದು ಭರವಸೆ ಮಾತುಗಳನ್ನಾಡಿದರು.ಮಾಜಿ ಶಾಸಕ ಕೆ ಶರಣಪ್ಪ ವಕೀಲರು ಮಾತನಾಡಿ, ಹಿರಿಯರಾದ ನಾವು ಸಮಾಜದ ಅಭಿವೃದ್ದಿಗೆ ಉತ್ತಮ ಸಲಹೆ ಸೂಚನೆ ಕೊಡಬೇಕಿದೆ. ಇದರ ಜತೆಗೆ ನಾವು ಆರೋಗ್ಯವಂತರಾಗಿರಲು ಕಾಲಕಾಲಕ್ಕೆ ವೈದ್ಯಕೀಯ ಸಲಹೆ ಪಡೆದುಕೊಳ್ಳುವದರ ಜತೆಗೆ ಪ್ರತಿದಿನವೂ ಧ್ಯಾನ ಮಾಡಬೇಕು ಯಾವುದೆ ಅನ್ಯವಿಷಯಗಳಿಗೆ ತಲೆ ಕೆಡಿಸಿಕೊಂಡು ಒತ್ತಡ ಜೀವನ ನಡೆಸದೆ ಉತ್ತಮ ಜೀವನ ನಡೆಸಲು ಮುಂದಾಗಬೇಕು ಎಂದರು.
ನಿವೃತ್ತ ನೌಕರರ ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಬಸವರಾಜ ಬೀರನಾಯಕ ಮಾತನಾಡಿ, ನಮ್ಮ ಸಂಘಟನೆಯಿಂದ ನಿವೃತ್ತ ನೌಕರರಿಗೆ ಆರೋಗ್ಯ ಭಾಗ್ಯ ಯೋಜನೆಯ ಸಲುವಾಗಿ, ವೇತನ ಹೆಚ್ಚಳ ಮಾಡುವದು, ಆದಾಯ ತೆರಿಗೆ ವಿನಾಯಿತಿ ನೀಡಬೇಕು, ನಿವೇಶನ ಒದಗಿಸುವದು ಸೇರಿದಂತೆ ಅನೇಕ ಸೌಲಭ್ಯಗಳಿಗಾಗಿ ಹೋರಾಟ ಮಾಡಲಾಗುತ್ತಿದ್ದು ಎಲ್ಲರು ಸಹಕಾರ ನೀಡಬೇಕು ಎಂದು ಹೇಳಿದರು.ಡಾ. ಅಯ್ಯನಗೌಡ ಹಿರಿಯರ ಆರೋಗ್ಯ ಕುರಿತು, ನ್ಯಾಯವಾಧಿ ಪಂಚಾಕ್ಷರಿ ಹುನಗುಂದ ಅವರು ಹಿರಿಯ ನಾಗರಿಕರ ಕಾನೂನು ಕುರಿತು ವಿಶೇಷ ಉಪನ್ಯಾಸ ನೀಡಿದರು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಎಸ್.ಎಚ್.ಹಿರೇಮಠ, ಹನಮಂತಪ್ಪ ಕುರಿ, ಸಿದ್ರಾಮಪ್ಪ ವಂದಾಲಿ, ಕುಷ್ಟಗಿ ಪತ್ರಕರ್ತರ ಸಂಘದ ಅಧ್ಯಕ್ಷ ಪವಾಡೆಪ್ಪ ಚೌಡ್ಕಿ, ಸಿದ್ದಪ್ಪ ಕಾತರಕಿ, ಲಿಂಗಪ್ಪ ಮಂಗಳೂರು, ಶರಣಪ್ಪ ಜಿಗೇರಿ, ಆರ್.ಕೆ.ಸುಬೇದಾರ, ಕಳಕಪ್ಪ ರೆಡ್ಡೆರ್, ಜಿ.ಡಿ.ಪಾಟೀಲ, ಕಳಕನಗೌಡ ಪಾಟೀಲ, ಹನುಮಂತಪ್ಪ ಈಟಿಯವರು ಸೇರಿದಂತೆ ನೂರಾರು ಜನರು ನಿವೃತ್ತ ನೌಕರರು ಇದ್ದರು.75 ವರ್ಷ ಮೇಲ್ಪಟ್ಟ ನಿವೃತ್ತ ನೌಕರರಿಗೆ ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ನಾರಾಯಣಸಾ ಚೌಧರಿ ಸ್ವಾಗತಿಸಿದರು, ಸಿದ್ರಾಮಪ್ಪ ವಂದಾಲಿ ಪ್ರಾರ್ಥಿಸಿದರು. ಶರಣಪ್ಪ ಜಿಗೇರಿ ವರದಿ ವಾಚನ ಮಾಡಿದರು.