ಸಾರಾಂಶ
ಕನ್ನಡಪ್ರಭ ವಾರ್ತೆ ದಾವಣಗೆರೆ
ಇನ್ನು 3 ದಿನದಲ್ಲೇ 2050 ಮೆಟ್ರಿಕ್ ಟನ್ ಯೂರಿಯಾ ಜಿಲ್ಲೆಗೆ ಪೂರೈಕೆಯಾಗಲಿದ್ದು, ರೈತರು ಆತಂಕಪಡುವ ಅಗತ್ಯವಿಲ್ಲ ಎಂದು ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಭರವಸೆ ನೀಡಿದರು.ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಪ್ರಸಕ್ತ ಸಾಲಿನ ಕೃಷಿ ಇಲಾಖೆ ಯೋಜನೆಗಳ ಜಿಲ್ಲಾ ಮಟ್ಟದ ಅನುಷ್ಠಾನ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನಾಳೆ(ಗುರುವಾರ)ಯೇ 450 ಟನ್ ಗೊಬ್ಬರ ಬರಲಿದೆ. ಇನ್ನು 3 ದಿನಗಳಲ್ಲೇ 2 ಸಾವಿರ ಮೆಟ್ರಿಕ್ ಟನ್‌ಗಿಂತಲೂ ಅದಿಕ ರಸಗೊಬ್ಬರ ಬರಲಿದ್ದು, ರಸಗೊಬ್ಬರಕ್ಕೆ ಕೊರತೆಯಾಗದಂತೆ ಅಧಿಕಾರಿಗಳು ನಿಗಾ ವಹಿಸಲಿ ಎಂದರು.
ಜಗಳೂರು, ಮಾಯಕೊಂಡ, ಚನ್ನಗಿರಿ, ಹೊನ್ನಾಳಿ ಭಾಗದಲ್ಲಿ ಮೆಕ್ಕೆಜೋಳದ ಬೆಳೆಗೆ ಯೂರಿಯಾವನ್ನು ಮೇಲುಗೊಬ್ಬರವಾಗಿ ಬಳಸಲಾಗುತ್ತಿದೆ. ಮುಂದಿನ 15 ದಿನಗಳಲ್ಲಿ ಇದು ಪೂರ್ಣಗೊಳ್ಳುತ್ತೆ. ಭದ್ರಾ ಡ್ಯಾಂ ತುಂಬುವ ಮಟ್ಟಕ್ಕೆ ತಲುಪುತ್ತಿದ್ದು, ಭತ್ತ ನಾಟಿ ಕೃಷಿ ಚಟುವಟಿಕೆಗಳೂ ಶುರುವಾಗಲಿದೆ. ಬತ್ತಕ್ಕೆ ತಳಗೊಬ್ಬರವಾಗಿ ಯೂರಿಯಾ ಬಳಕೆ ಮಾಡಲಾಗುತ್ತದೆ ಎಂದು ತಿಳಿಸಿದರು.ಯಾವುದೇ ರೀತಿಯಲ್ಲೂ ಜಿಲ್ಲೆಯಲ್ಲಿ ರಸಗೊಬ್ಬರದ ಕೊರತೆ ಉಂಟಾಗಿರುವುದಿಲ್ಲ. ಜಿಲ್ಲೆಗೆ ಅಗತ್ಯಕ್ಕೆ ತಕ್ಕಂತೆ ರಸಗೊಬ್ಬರ ಪೂರೈಕೆಯಾಗುತ್ತಿದೆ. ಬತ್ತ ಬೆಳೆಗೆ ರಸಗೊಬ್ಬರ ಮಾರಾಟಗಾರರು ಗೊಬ್ಬರದ ದಾಸ್ತಾನಿಟ್ಟುಕೊಳ್ಳುವಂತಿಲ್ಲ. ರೈತರಿಗೆ ರಸಗೊಬ್ಬರ ನೀಡದೇ, ದಾಸ್ತಾನು ಮಾಡಿಟ್ಟಿರುವ ಗೋದಾಮುಗಳನ್ನು ಉಪ ವಿಭಾಗಾಧಿಕಾರಿಗಳು, ತಹಸೀಲ್ದಾರರು ಕೃಷಿ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ ಎಂದು ಹೇಳಿದರು.
ಜಿಲ್ಲೆಯಲ್ಲಿ ಅಧಿಕೃತ ಮಾರಾಟಗಾರರಿಗೆ ವೀಡಿಯೋ ಕಾಲ್ ಮಾಡಿ, ಯೂರಿಯಾ ದಾಸ್ತಾನು ಪರಿಶೀಲಿಸುವ ಕೆಲಸ ಕೃಷಿ ಅಧಿಕಾರಿಗಳು ಮಾಡಬೇಕು. ಯಾರಿಗೆ ಎಷ್ಟು ಪ್ರಮಾಣದ ಗೊಬ್ಬರ ವಿತರಣೆಯಾಗಿದೆಯೆಂದು ಟ್ರ್ಯಾಕ್ ಮಾಡಬೇಕು. ಸದ್ಯ ಮೆಕ್ಕೆಜೋಳ ಬೆಳೆಯುವಲ್ಲಿ ಯೂರಿಯಾದ ಕೊರತೆ ಇದೆ. ರೈತರು ಆತಂಕಪಡಬೇಕಾಗಿಲ್ಲ. ಹೆಚ್ಚಿನ ಬೆಲೆಗೆ ಯಾರಾದರೂ ಮಾರಾಟ ಮಾಡಿದರೆ, ಕಠಿಣ ಕ್ರಮ ತಪ್ಪಿದ್ದಲ್ಲ ಎಂದು ಎಚ್ಚರಿಸಿದರು.ಬಿಲ್ ಇಲ್ಲದೇ ಯಾವುದೇ ಕಾರಣಕ್ಕೂ ರೈತರು ಗೊಬ್ಬರ ಖರೀದಿಸಬಾರದು. ಕೆಲ ಮಾರಾಟಗಾರರು ಕೃತಕ ಅಭಾವ ಸೃಷ್ಟಿಸಿ, ಯೂರಿಯಾವನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿರುವ ಬಗ್ಗೆ ವರದಿ ಬಂದಿದೆ. ರೈತರು ಸಹ ಯಾರಾದರೂ ಹೆಚ್ಚು ಬೆಲೆಗೆ ಮಾರಾಟ ಮಾಡುತ್ತಿರುವುದು ಕಂಡು ಬಂದಲ್ಲಿ ದೂರು ನೀಡಬೇಕು. ರೈತರು ದೂರು ನೀ
ಡಲು ಮುಂದೆ ಬನ್ನಿ. ಅಂತಹ ಗೊಬ್ಬರ ವಿತರಕರು, ಮಾರಾಟಗಾರರ ವಿರುದ್ಧ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.ರೈತರು ಫಸಲಿನ ಹೆಚ್ಚು ಇಳುವರಿ ತೆಗೆಯಲು ಬೆಳೆ ಪರಿವರ್ತನೆ ಪದ್ಧತಿ ಅನುಸರಿಸುವುದು ಉತ್ತಮ. ದ್ವಿದಳ ಧಾನ್ಯ ಬೆಳೆಯುವುದರಿಂದ ಮಣ್ಣಿನ ಫಲವತ್ತತೆಯೂ ಹೆಚ್ಚುತ್ತದೆ. ಇದರಿಂದ ರಸಗೊಬ್ಬರದ ಮೇಲಿನ ಹೆಚ್ಚು ಅವಲಂಬನೆ ತಪ್ಪುತ್ತದೆ. ಬೆಳೆ ಪರಿವರ್ತನೆ ಅನುಸರಿಸದೇ, ಒಂದೇ ಬೆಳೆ ಬೆಳೆಯುವುದು ಮತ್ತು ಇದಕ್ಕೆ ಹೆಚ್ಚು ರಸಗೊಬ್ಬರ ಬಳಕೆಯಿಂದ ಮಣ್ಣಿನ ಫಲವತ್ತತೆ ಕಡಿಮೆಯಾಗಿ, ಬೆಳೆಗಳಲ್ಲಿ ನುಸಿ ರೋಗ ಹೆಚ್ಚಳ ಮತ್ತು ಮುಳ್ಳು ಸಜ್ಜೆಯಂತಹ ಕಳೆ ಹೆಚ್ಚುತ್ತದೆ. ಇದರ ನಿಯಂತ್ರಣಕ್ಕಾಗಿ ರಾಸಾಯನಿಕಸಿಂಪರಣೆ ಮಾಡಬೇಕಾಗುತ್ತದೆ ಎಂದು ತಿಳಿಸಿದರು.
ಕೃಷಿ ಇಲಾಖೆ ಜಂಟಿ ನಿರ್ದೇಶಕ ಜಿಯಾವುಲ್ಲಾ, ಪಾಲಿಕೆ ಆಯುಕ್ತೆ ರೇಣುಕಾ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.ದಾವಣಗೆರೆ ಜಿಲ್ಲೆಗೆ ಜು.24ರಂದು 450 ಟನ್ ಯೂರಿಯಾ ಪೂರೈಕೆಯಾಗಲಿದೆ. ಜಗಳೂರು, ಮಾಯಕೊಂಡ ಭಾಗದಲ್ಲಿ ಯೂರಿಯಾದ ಕೊರತೆಯಾಗಿದೆ. ಇನ್ನು 3 ದಿನದಲ್ಲಿ 2050 ಟನ್ ಯೂರಿಯಾ ಬರಲಿದ್ದು, ಕೃಷಿ ಇಲಾಖೆ ಹಿರಿಯ ಅಧಿಕಾರಿಗಳೊಂದಿಗೂ ಮಾತನಾಡಿದ್ದೇನೆ.
ಜಿ.ಎಂ.ಗಂಗಾಧರಸ್ವಾಮಿ, ಜಿಲ್ಲಾಧಿಕಾರಿ.