ಕಾಫಿನಾಡಿನಲ್ಲಿ ಸಾವಿರಾರು ಮಹಿಳೆಯರಿಂದ ಸಂಕೀರ್ತನಾ ಯಾತ್ರೆ

| Published : Dec 13 2024, 12:49 AM IST

ಸಾರಾಂಶ

ಚಿಕ್ಕಮಗಳೂರು, ವಿಶ್ವ ಹಿಂದೂ ಪರಿಷತ್‌ ಹಾಗೂ ಭಜರಂಗದಳ ಮೂರು ದಿನಗಳ ಕಾಲ ಆಯೋಜನೆ ಮಾಡಿರುವ ದತ್ತಜಯಂತಿ ಉತ್ಸವದ ಮೊದಲನೇ ದಿನವಾದ ಗುರುವಾರ ಸಂಕೀರ್ತನಾ ಯಾತ್ರೆ, ಅನುಸೂಯ ಜಯಂತಿ ವಿಜೃಂಭಣೆಯಿಂದ ನಡೆಯಿತು.

- ಅನಸೂಯ ಜಯಂತಿ । ದತ್ತ ಪಾದುಕೆ ದರ್ಶನ ಪಡೆದ ಮಾತೆಯರು

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ವಿಶ್ವ ಹಿಂದೂ ಪರಿಷತ್‌ ಹಾಗೂ ಭಜರಂಗದಳ ಮೂರು ದಿನಗಳ ಕಾಲ ಆಯೋಜನೆ ಮಾಡಿರುವ ದತ್ತಜಯಂತಿ ಉತ್ಸವದ ಮೊದಲನೇ ದಿನವಾದ ಗುರುವಾರ ಸಂಕೀರ್ತನಾ ಯಾತ್ರೆ, ಅನುಸೂಯ ಜಯಂತಿ ವಿಜೃಂಭಣೆಯಿಂದ ನಡೆಯಿತು.

ಅನಸೂಯ ಜಯಂತಿ ಅಂಗವಾಗಿ ನಗರದ ಬೋಳರಾಮೇಶ್ವರ ದೇವಸ್ಥಾನದಿಂದ ಪಾಲಿಟೆಕ್ನಿಕ್ ವೃತ್ತದವರೆಗೂ ಭವ್ಯ ಸಂಕೀರ್ತನಾ ಮೆರವಣಿಗೆ ನಡೆಸಲಾಯಿತು. ಈ ಮೆರವಣಿಗೆಯಲ್ಲಿ 2 ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡ ಮಹಿಳೆಯರು ಮೆರವಣಿಗೆ ಯುದ್ದಕ್ಕೂ ನಡೆಸಿದ ಡೊಳ್ಳು ಕುಣಿತ ಹಾಗೂ ಭಜನೆಗಳು ಸಂಕೀರ್ತನಾ ಯಾತ್ರೆಯ ಮೆರುಗು ಹೆಚ್ಚಿಸಿದವು.

ಬೆಳ್ಳಂಬೆಳಗ್ಗೆಯೇ ಶ್ರೀ ಬೋಳರಾಮೇಶ್ವರ ದೇವಾಲಯದಲ್ಲಿ ಜಮಾಯಿಸಿದ ಸಾವಿರಾರು ಮಹಿಳೆಯರು ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ದತ್ತಾತ್ರೇಯ ಅಡ್ಡೆಗೆ ಪೂಜೆ ಸಲ್ಲಿಸುವ ಮೂಲಕ ಸಂಕೀರ್ತನಾ ಯಾತ್ರೆಗೆ ಚಾಲನೆ ನೀಡಲಾಯಿತು. ಹುಬ್ಬಳ್ಳಿ ಸಾದ್ವಿನಿ ತೇಜೋಮಯಿ ಮಾತಾಜಿ, ಆದಿಶಕ್ತಿ ನಗರದ ಶ್ರೀ ಪ್ರಾಣ ಮಾತಾಜಿ ಯಾತ್ರೆಗೆ ಚಾಲನೆ ನೀಡುವ ಜೊತೆಗೆ ಮೆರವಣಿಗೆ ಯುದ್ದಕ್ಕೂ ಹೆಜ್ಜೆ ಹಾಕಿ ಮಹಿಳಾ ಭಕ್ತರನ್ನು ಹುರಿದುಂಬಿಸಿದ್ದು ವಿಶೇಷವಾಗಿತ್ತು.

ಬೊಳರಾಮೇಶ್ವರ ದೇವಸ್ಥಾನ ಆವರಣದಿಂದ ಆರಂಭಗೊಂಡ ಮೆರವಣಿಗೆ ಐ.ಜಿ.ರಸ್ತೆ, ಮಲ್ಲಂದೂರು ವೃತ್ತ ಹಾದು ಪಾಲಿಟೆಕ್ನಿಕ್ ವೃತ್ತದವರೆಗೂ ಸಾಗಿತು. ಮಹಿಳೆಯರು ಕೊರಳಿಗೆ ಕೇಸರಿ ಶಲ್ಯ ಹಾಕಿ ಕೊಂಡು ಭಾಗವಾಧ್ವಜ ಹಿಡಿದು, ಅನಸೂಯದೇವಿ ಚಿತ್ರಪಟದೊಂದಿಗೆ ದತ್ತಾತ್ರೇಯರ ನಾಮಸ್ಮರಣೆ ಮಾಡುತ್ತಾ ಮೆರವಣಿಗೆಯಲ್ಲಿ ತೆರಳಿದರು. ಕೆಲವರು ದತ್ತಾತ್ರೇಯ ಸ್ವಾಮಿಗೆ ಜೈಕಾರ ಹಾಕಿದರೆ, ಮತ್ತೆ ಕೆಲವರು ಭಜನೆ ಮಾಡುತ್ತಾ ಮುನ್ನಡೆದರು.

ಪಾಲಿಟೆಕ್ನಿಕ್ ವೃತ್ತದಲ್ಲಿ ಮಹಿಳೆಯರು ಕಾರ್ಯಕ್ರಮದ ಸಂಘಟಕರು ವ್ಯವಸ್ಥೆ ಮಾಡಿದ್ದ ವಾಹನಗಳ ಮೂಲಕ ದತ್ತಪೀಠಕ್ಕೆ ತೆರಳಿದರು. ಸರದಿ ಸಾಲಿನಲ್ಲಿ ಅನಸೂಯ ದೇವಿ ಗದ್ದುಗೆಗೆ ಪೂಜೆ ಸಲ್ಲಿಸಿದರು. ಗುಹೆಯೊಳಗೆ ತೆರಳಿ ದತ್ತಾತ್ರೇಯರ ಪಾದುಕೆಗಳ ದರ್ಶನ ಪಡೆದರು.

ಅನಸೂಯ ಜಯಂತಿಯಲ್ಲಿ ಪಾಲ್ಗೊಂಡ ಮಾತೆಯರಿಗೆ ದತ್ತಪೀಠದಲ್ಲಿ ಹಸಿರು ಬಳೆ, ಅರಿಶಿಣ, ಕುಂಕುಮ ನೀಡಲಾಯಿತು. ಪ್ರಸಾದ ಸ್ವೀಕರಿಸಿ, ದತ್ತಪೀಠದಿಂದ ನಗರಕ್ಕೆ ಆಗಮಿಸಿದರು. ದತ್ತಜಯಂತಿ ಅಂಗವಾಗಿ ನಡೆವ ಅನುಸೂಯ ಜಯಂತಿ ಶಾಂತಿಯುತವಾಗಿ ಮುಕ್ತಾಯಗೊಂಡಿತು.

ಅನಸೂಯಾ ಜಯಂತಿಯಲ್ಲಿ ನಗರಸಭೆ ಅಧ್ಯಕ್ಷೆ ಸುಜಾತಾ ಶಿವಕುಮಾರ್, ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ, ಪ್ರಮುಖ ರಾದ ತನ್ಮಯಿ ಪ್ರೇಮ್ ಕುಮಾರ್, ಆರ್.ಡಿ.ಮಹೇಂದ್ರ, ಶ್ರೀಕಾಂತ್ ಪೈ, ಸಂತೋಷ್ ಕೋಟ್ಯಾನ್, ಜಸಂತ ಅನಿಲ್ ಕುಮಾರ್ ಇದ್ದರು.-- ಬಾಕ್ಸ್‌ ---ಹೆಣ್ಣು ಮಕ್ಕಳ ಹೋರಾಟದಿಂದ ಮುನ್ನೆಲೆಗೆ ಬಂದ ದತ್ತಪೀಠ ಹೋರಾಟದತ್ತಪೀಠ ಹೋರಾಟ ಮರಳಿ ಮಹಿಳೆಯರಿಂದಲೇ ಮತ್ತೆ ಮುನ್ನೆಲೆಗೆ ಬಂದಿರುವುದು ಸಂತಸದ ಸಂಗತಿ. 2004-05 ರಲ್ಲಿ ಸರ್ಕಾರ ದತ್ತ ಜಯಂತಿಗೆ ನಿಷೇಧ ಹೇರಿತ್ತು. ಆಗ ಬಯಲು ಸೀಮೆ ಭಾಗದಿಂದ ಬಂದ ಮಹಿಳೆಯರು ಚಿಕ್ಕಮಗಳೂರಿನಲ್ಲಿ ಭಜನೆ ಹಾಗೂ ಸಂಕೀರ್ತನಾ ಯಾತ್ರೆ ನಡೆಸಿದ್ದರು. ಈ ಮೂಲಕ ಶಾಂತಿಯುತ ಪ್ರತಿಭಟನೆ ನಡೆಸಿದ್ದರಿಂದ ಅಂದು ದತ್ತಪೀಠ ದಲ್ಲಿ ದತ್ತ ಜಯಂತಿ ಆಚರಿಸಲಾಯಿತು ಎಂದು ವಾಗ್ಮಿ ತನ್ಮಯಿ ಪ್ರೇಮ್ ಕುಮಾರ್ ಹೇಳಿದರು.

ಸಂಕೀರ್ತನಾ ಯಾತ್ರೆಯಲ್ಲಿ ದಿಕ್ಸೂಚಿ ಭಾಷಣ ಮಾಡಿದ ಅವರು, ಇಂದು ನಾವು ಸ್ಥಿತ್ಯಂತರದ ಕಾಲಘಟ್ಟದಲ್ಲಿ ಇದ್ದೇವೆ. ದತ್ತ ಪೀಠ ಇತಿಹಾಸ ನೋಡಿದರೆ ಮೈ ರೋಮಾಂಚನವಾಗುತ್ತದೆ. ಹಿಂದೂಗಳ ಆರಾಧ್ಯ ದೈವ ದತ್ತಾತ್ರೇಯ ನೆಲೆಸಿದ ಜಾಗದಲ್ಲಿ ಯಾರೋ ಬಂದು ಏನು ಮಾಡಲು ಆರಂಭ ಮಾಡಿದ್ದರು. ಇದನ್ನು ಮನಗಂಡ ಹಿಂದೂಗಳು ದತ್ತಪೀಠವನ್ನು ಹಿಂದುಗಳ ಪೀಠ ಮಾಡಬೇಕೆಂಬ ಕಾರಣದಿಂದ ಹೋರಾಟ ಆರಂಭಿಸಿದರು. ಅಯೋಧ್ಯೆ ಹೋರಾಟಕ್ಕೆ ಎಷ್ಟು ಪ್ರಾಮುಖ್ಯತೆ ಇದೆಯೋ ಹಾಗೆಯೇ ಕರ್ನಾಟಕದ ಅಯೋಧ್ಯ ಎನಿಸಿಕೊಂಡಿರುವ ದತ್ತಪೀಠ ಹೋರಾಟಕ್ಕೂ ಅಷ್ಟೇ ಪ್ರಾಮುಖ್ಯತೆ ಇದೆ ಎಂದರು.

------- ಕೋಟ್‌--- ತಾಯಿ ಅನುಸೂಯ ಧರ್ಮವನ್ನು ಅನುಸರಿಸಿದ ಮಹಾತಾಯಿ. ಆಕೆ ನಡೆದಾಡಿದ ಸ್ಥಳ ಹಾಗೂ ದತ್ತಾತ್ರೇಯರ ಪುಣ್ಯ ಭೂಮಿ ದತ್ತಪೀಠ ಹಿಂದೂಗಳ ಪೀಠವಾಗಬೇಕು. ಸೃಷ್ಟಿ,ಸ್ಥಿತಿ, ಲಯ ಈ ಮೂರು ಪ್ರಮುಖವಾದ ಅಂಶಗಳು. ದತ್ತಪೀಠದ ಸ್ಥಿತಿಯನ್ನು ದತ್ತಾತ್ರೇಯರ ಕಾಲಕ್ಕೆ ತಕ್ಕಂತೆ ಕಾಪಾಡಿಕೊಳ್ಳಬೇಕು. ಅದೇ ಲಯವನ್ನು ಮುಂದುವರಿಸಬೇಕು.

ಭಾರತದಲ್ಲಿ ಧರ್ಮ ಅಲ್ಲಾಡಿದರೆ ಇಡೀ ಜಗತ್ತಿನ ಧರ್ಮವೇ ಅಲ್ಲಾಡುತ್ತದೆ. ಈ ಕಾರಣದಿಂದಲೇ ಅಂದೆ ನಾರದರು ಭಾರತ ದಲ್ಲಿ ಒಂದು ನಾಯಿಯಾಗಿ ಹುಟ್ಟಲು ಹಲವು ಜನ್ಮಗಳ ಪುಣ್ಯ ಬೇಕು ಎಂದು ಹೇಳಿದ್ದರು. ಇಂದು ನಾವು ಭರತ ಭೂಮಿಯಲ್ಲಿ ಮನುಷ್ಯರಾಗಿ ಹುಟ್ಟಿದ್ದೇವೆ. ಎಂದರೆ ಹಿಂದಿನ ಜನ್ಮಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಪುಣ್ಯ ಮಾಡಿದ್ದೇವೆ ಎಂದೇ ಅರ್ಥ. ಹೀಗಾಗಿ ನಮ್ಮ ಧರ್ಮ ಕಾಪಾಡಿಕೊಳ್ಳಲು ಪ್ರತಿಯೊಬ್ಬರು ಕೈಜೋಡಿಸಬೇಕು.- ಸಾದ್ವಿನಿ ತೇಜೋಮಯಿ ಮಾತಾಜಿ

ಹುಬ್ಬಳ್ಳಿ---- 12 ಕೆಸಿಕೆಎಂ 1ದತ್ತಜಯಂತಿ ಉತ್ಸವದ ಅಂಗವಾಗಿ ಚಿಕ್ಕಮಗಳೂರಿನಲ್ಲಿ ಗುರುವಾರ ಮಹಿಳೆಯರಿಂದ ಸಂಕೀರ್ತನಾ ಯಾತ್ರೆ ನಡೆಯಿತು.