ಸಾರಾಂಶ
ಕಾರವಾರ/ಭಟ್ಕಳ: ಭಟ್ಕಳ ನಗರದಲ್ಲಿ ಬಾಂಬ್ ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ ಪ್ರಮುಖ ಆರೋಪಿ ನಿತಿನ್ ಶರ್ಮಾ ಅಲಿಯಾಸ್ ಖಾಲಿದ್ (40) ಎಂಬಾತನನ್ನು ಭಟ್ಕಳ ಪೊಲೀಸರು ಪತ್ತೆ ಹಚ್ಚಿದ್ದಾರೆ.
ನಿತಿನ್ ಅಲಿಯಾಸ್ ಖಾಲಿದ್ ಮೈಸೂರಿನ ನಜರಬಾದ್ ಪೊಲೀಸ್ ಠಾಣೆಯಲ್ಲಿ ಬೇರೆ ಪ್ರಕರಣದಲ್ಲಿ ಬಂಧಿತನಾಗಿ ಮೈಸೂರಿನ ಕೇಂದ್ರ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾನೆ. ಈತ ಮೂಲತಃ ದೆಹಲಿಯವನು ಎಂದು ತಿಳಿದುಬಂದಿದೆ.ಈಗಾಗಲೇ ಆರೋಪಿ ನಿತಿನ್ ಶರ್ಮಾ ಅಲಿಯಾಸ್ ಖಾಲಿದ್ ವಿರುದ್ಧ ವಿವಿಧ ರಾಜ್ಯಗಳಲ್ಲಿ 16 ಪ್ರಕರಣಗಳು ದಾಖಲಾಗಿವೆ. ಕೇರಳ-6, ದೆಹಲಿ-1, ಮಧ್ಯಪ್ರದೇಶ-1, ಪುದುಚೇರಿ- 2, ಉತ್ತರಾಖಂಡ -1, , ಒಡಿಶಾ-1, ಆಂಧ್ರಪ್ರದೇಶ- 1 ಹಾಗೂ ಕರ್ನಾಟಕದಲ್ಲಿ 3 ಪ್ರಕರಣ ದಾಖಲಾಗಿದೆ.
2016-17ರಲ್ಲಿ ದೆಹಲಿ ಸಂಬಂಧಿಸಿದ ಪ್ರಕರಣದಲ್ಲಿ ಬಂಧಿತನಾಗಿ 1 ವರ್ಷ ತಿಹಾರ್ ಜೈಲಿನಲ್ಲಿದ್ದ. ಪ್ರತಿಯೊಂದು ಕಡೆಯೂ ಹುಸಿಬಾಂಬ್ ಸ್ಫೋಟಿಸುವ ಬೆದರಿಕೆಯ ಇ-ಮೇಲ್ ಹಾಕಿ ಭಯ ಸೃಷ್ಟಿಸುತ್ತಿದ್ದ. ಭಟ್ಕಳದಲ್ಲೂ 24 ಗಂಟೆಯೊಳಗೆ ಭಟ್ಕಳ ನಗರ ಸ್ಫೋಟಿಸುವುದಾಗಿ ಇ-ಮೇಲ್ ಹಾಕಿ ಹುಸಿ ಬಾಂಬ್‌ನ ಬೆದರಿಕೆ ಹಾಕಿದ್ದ.ಕಣ್ಣನ್ ಗುರುಸಾಮಿ ಎಂಬ ಹೆಸರಿನ ವ್ಯಕ್ತಿಯಿಂದ kannnannandik@gmail.com ನಿಂದ ಭಟ್ಕಳ ಶಹರ ಠಾಣೆಗೆ ಈ ಮೇಲ್ ಸಂದೇಶ ರವಾನೆ ಮಾಡಿದ್ದ. ಜು. 10ರ ಬೆಳಗ್ಗೆ 7.23 ಕ್ಕೆ ಇ-ಮೇಲ್ ಕಳುಹಿಸಲಾಗಿತ್ತು.
ಜಿಲ್ಲಾ ಬಾಂಬ್ ನಿಷ್ಕ್ರಿಯ ದಳ ಹಾಗೂ ಡಾಗ್ ಸ್ಕ್ವಾಡ್‌ನಿಂದ ಭಟ್ಕಳ ನಗರದ ಪ್ರಮುಖ ಪ್ರದೇಶದಲ್ಲಿ ತಪಾಸಣೆ ನಡೆದಿತ್ತು. ಭಟ್ಕಳ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ ಹಾಗೂ ಇತರ ಸೂಕ್ಷ್ಮ ಪ್ರದೇಶಗಳಲ್ಲಿ ತಪಾಸಣೆ ಮಾಡಲಾಗಿತ್ತು.ಪ್ರಕರಣ ಕುರಿತು ಭಟ್ಕಳ ಶಹರ ಠಾಣೆ ಪಿಎಸ್ಐ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದರು. ಮೆಸೇಜ್ ಮೂಲಕ ಮೊಬೈಲ್‌ನ ಐಎಂಇಐ ನಂಬರ್ ಹಾಗೂ ವಿಳಾಸ ಪಡೆದು ತಂಡ ರಚಿಸಿ ತಮಿಳುನಾಡಿನ ಕಣ್ಣನ್ ಗುರುಸಾಮಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ನಿತಿಶನ್ ಶರ್ಮಾ ಅಲಿಯಾಸ್ ಖಾಲಿದ್ ಹೆಸರು ಬೆಳಕಿಗೆ ಬಂತು.
ಕಣ್ಣನ್ ಗುರುಸಾಮಿ ಜು. 9ರಂದು ರಾತ್ರಿ ಕೇರಳ ಮುನ್ನಾರ ಪೊಲೀಸ್ ಠಾಣೆಗೆ ವಂಚನೆ ಪ್ರಕರಣದಡಿ ವಿಚಾರಣೆಗೆ ತೆರಳಿದ್ದ. ಜು. 10ರಂದು ಬೆಳಗ್ಗೆ 7 ಗಂಟೆ ಸುಮಾರಿಗೆ ಅದೇ ಠಾಣೆಯಲ್ಲಿ ಬಂಧಿತನಾಗಿದ್ದ ನಿತಿನ್ ಶರ್ಮಾನೂ ಇದ್ದ. ಮೈಸೂರಿನಿಂದ ಬಾಡಿ ವಾರೆಂಟ್ ಪಡೆದು ಕೇರಳ ಪೊಲೀಸರು ಕೇರಳಕ್ಕೆ ಕರೆದುಕೊಯ್ದು ವಿಚಾರಣೆ ನಡೆಸುತ್ತಿದ್ದರು. ಈ ವೇಳೆ ಆರೋಪಿ ನಿತಿನ್ ಶರ್ಮಾ, ಕಣ್ಣನ್ ಗುರುಸ್ವಾಮಿ ಮೊಬೈಲ್ ಪಡೆದು ಭಟ್ಕಳ ಠಾಣೆಗೆ ಹುಸಿ ಬಾಂಬ್ ಸ್ಫೋಟದ ಬೆದರಿಕೆ ಹಾಕಿದ್ದ. ಕಣ್ಣನ್ ಗುರುಸ್ವಾಮಿಯನ್ನು ಹುಡುಕಿಕೊಂಡು ಹೋಗಿದ್ದ ಭಟ್ಕಳ ಪೊಲೀಸರು ಕೊನೆಗೂ ನೈಜ ಆರೋಪಿಯನ್ನು ಹಿಡಿಯಲು ಸಫಲರಾದರು.ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠ ಎಂ. ನಾರಾಯಣ್ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಕೊನೆಗೂ ಆರೋಪಿ ಸಿಕ್ಕುಬಿದ್ದಿದ್ದಾನೆ. ಕಾರ್ಯಾಚರಣೆಯಲ್ಲಿ ಭಟ್ಕಳ ಇನ್‌ಸ್ಪೆಕ್ಟರ್ ದಿವಾಕರ ಪಿ.ಎಂ. ಪಿಎಸ್ಐಗಳಾದ ನವೀನ್ ಎಸ್. ನಾಯ್ಕ, ಸೋಮರಾಜ ರಾಠೋಡ ಹಾಗೂ ಸಿಬ್ಬಂದಿ ಭಾಗಿಯಾಗಿದ್ದರು.