ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಜಿಲ್ಲೆಯ ಮಳವಳ್ಳಿ ಹಾಗೂ ಹಲಗೂರು ಪೊಲೀಸ್ ಠಾಣೆಯ ಪೊಲೀಸರು ಮನೆಗಳ್ಳತನದಲ್ಲಿ ತೊಡಗಿದ್ದ ಇಬ್ಬರು ಹಾಗೂ ವೃದ್ಧ ಮಹಿಳೆಯರನ್ನು ವಂಚಿಸುತ್ತಿದ್ದ ಓರ್ವ ಸೇರಿದಂತೆ ಮೂವರನ್ನು ಬಂಧಿಸಿ, ೫೪೫ ಗ್ರಾಂ ಚಿನ್ನ, ೧೩೨ ಗ್ರಾಂ ಬೆಳ್ಳಿ ಸೇರಿದಂತೆ ೪೮.೨೩ ಲಕ್ಷ ರು. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಮಲ್ಲಿಕಾರ್ಜುನ ಬಾಲದಂಡಿ ಹೇಳಿದರು.ಕೋಲಾರ ಜಿಲ್ಲೆ ಬಂಗಾರಪೇಟೆ ತಾಲೂಕಿನ ಜೆ.ಸೈಯದ್ ಅಹಮದ್ (೪೩) ಹಾಗೂ ಬೆಂಗಳೂರು ಕೆ.ಆರ್.ಪುರಂನ ದೇವಸಂದ್‌ರ ವಾಸಿ ತಸ್ಲೀಂಪಾಷ (೪೩) ಮನೆಗಳ್ಳತನ ಆರೋಪದಡಿ ಬಂಧಿತರಾಗಿದ್ದರೆ, ಬೆಂಗಳೂರಿನ ಬನ್ನೇರುಘಟ್ಟದ ಪಿಳ್ಳಗಾನಹಳ್ಳಿಯ ಮುನಾಜೀರ್ (೪೫) ವೃದ್ಧ ಮಹಿಳೆಯರನ್ನು ವಂಚಿಸಿ ಚಿನ್ನಾಭರಣ ದೋಚಿದ ಆರೋಪಕ್ಕೆ ಗುರಿಯಾಗಿದ್ದಾನೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮಳವಳ್ಳಿ ತಾಲೂಕು ಹೊಸದೊಡ್ಡಿ ಗ್ರಾಮದ ಪುಟ್ಟ ವೆಂಕಯ್ಯರವರ ಮನೆಯಿಂದ ೪.೯೦ ಲಕ್ಷ ರು. ಮೌಲ್ಯದ ಒಟ್ಟು ೭೫ ಗ್ರಾಂ ಚಿನ್ನಾಭರಣ ಕಳವಾಗಿರುವ ಪ್ರಕರಣ ದಾಖಲಾಗಿತ್ತು. ಈ ದೂರನ್ನು ಆಧರಿಸಿ ತನಿಖೆ ಕೈಗೊಂಡಾಗ ಸೈಯದ್ ಅಹಮದ್ ಮತ್ತು ತಸ್ಲೀಂಪಾಷ ಅವರನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ ಮಳವಳ್ಳಿ, ಮಂಡ್ಯ, ತಲಘಟ್ಟಪುರ, ಕೆಸ್ತೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಕಳವು ಪ್ರಕರಣಗಳಲ್ಲಿ ಭಾಗಿಯಾಗಿರುವುದು ಕಂಡುಬಂದಿತು ಎಂದು ಹೇಳಿದರು.ಬಂಧಿತರಿಂದ ೩೧೯ ಗ್ರಾಂ ತೂಕದ ಚಿನ್ನದ ಒಡವೆಗಳು ೧೩೨ ಗ್ರಾಂ ತೂಕದ ಬೆಳ್ಳಿ ಒಡವೆಗಳು, ಕೃತ್ಯಕ್ಕೆ ಬಳಸಿದ ಕಾರು ಸೇರಿ ೨೫.೬೩ ಲಕ್ಷ ರು. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿರುವುದಾಗಿ ವಿವರಿಸಿದರು.
ಅದೇ ರೀತಿ ಹಲಗೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಟೀ- ಜ್ಯೂಸ್‌ನಲ್ಲಿ ಪ್ರಜ್ಞೆ ತಪ್ಪುವ ಮಾತ್ರೆ ಬೆರೆಸಿ ಅವರ ಮೈಮೇಲಿದ್ದ ಚಿನ್ನಾಭರಣ ಕಳವು ಮಾಡುತ್ತಿದ್ದ ಮುನಾಜೀರ್ ಎಂಬಾತನನ್ನು ಬಂಧಿಸಿ ೨೨೬ ಗ್ರಾಂ ತೂಕದ ಚಿನ್ನದ ಒಡವೆಗಳು ಹಾಗೂ ಕೃತ್ಯಕ್ಕೆ ಉಪಯೋಗಿಸಿದ ಒಂದು ಹೋಂಡಾ ಆ್ಯಕ್ಟೀವಾ ಸ್ಕೂಟರ್ ಸೇರಿದಂತೆ ೨೨.೬೦ ಲಕ್ಷ ರು. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ ಎಂದರು.ಅಪರ ಜಿಲ್ಲಾ ಪೊಲೀಸಸ್ ಅಧೀಕ್ಷಕರಾದ ಸಿ..ಇ.ತಿಮ್ಮಯ್ಯ, ಗಂಗಾಧರಸ್ವಾಮಿ, ಮಳವಳ್ಳಿ ಡಿವೈಎಸ್ಪಿ ವಿ.ಕೃಷ್ಣಪ್ಪ, ಮಳವಳ್ಳಿ ಗ್ರಾಮಾಂತರ ಠಾಣೆ ಪಿಎಸ್‌ಐಗಳಾದ ಶ್ರವಣ್, ಸ.ದಾಸರೆಡ್ಡಿ, ಶಿವಶಂಕರ್, ಹಲಗೂರು ವೃತ್ತ ನಿರೀಕ್ಷಕ ಬಿ.ಎಸ್.ಶ್ರೀಧರ್, ಪಿಎಸ್‌ಐ ಲೋಕೇಶ್ ಮತ್ತು ಸಿಬ್ಬಂದಿ ಪತ್ತೆ ಕಾರ್ಯದಲ್ಲಿ ತೊಡಗಿದ್ದರು.
ಪುಡಿ ರೌಡಿಗಳು ರೌಡಿಶೀಟರ್‌ಗೆ ಸೇರ್ಪಡೆ: ಎಸ್‌ಪಿ ಎಚ್ಚರಿಕೆಕನ್ನಡಪ್ರಭ ವಾರ್ತೆ ಮಂಡ್ಯ
ಪುಡಿ ರೌಡಿಗಳ ಅಟ್ಟಹಾಸ ಅಲ್ಲಲ್ಲಿ ನಡೆಯುತ್ತಿರುವುದು ಕಂಡುಬಂದಿರುವ ಹಿನ್ನೆಲೆಯಲ್ಲಿ ಅವರನ್ನು ರೌಡಿಶೀಟರ್‌ಗೆ ಸೇರಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಮಲ್ಲಿಕಾರ್ಜುನ ಬಾಲದಂಡಿ ಎಚ್ಚರಿಕೆ ನೀಡಿದರು.ಪುಡಿ ರೌಡಿಗಳು ಗುಂಪು ಘರ್ಷಣೆ, ಮಾರಕಾಸ್ತ್ರಗಳನ್ನು ಹಿಡಿದು ಬೆದರಿಕೆ ಹಾಕುವುದು, ಹಲ್ಲೆ ಪ್ರಕರಣಗಳಲ್ಲಿ ಭಾಗಿಯಾಗಿರುವುದು ಕಂಡುಬರುತ್ತಿದೆ. ೧೮ ವರ್ಷದೊಳಗಿನವರೂ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ. ಅವರನ್ನೂ ಮುಲಾಜಿಲ್ಲದೆ ರೌಡಿಶೀಟರ್ ಪಟ್ಟಿಗೆ ಸೇರಿಸುವುದಾಗಿ ಸುದ್ದಿಗಾರರಿಗೆ ಸ್ಪಷ್ಟಪಡಿಸಿದರು.
ಜಿಲ್ಲೆಯಲ್ಲಿ ಕ್ರಿಕೆಟ್ ಬೆಟ್ಟಿಂಗ್‌ಗೆ ಸಂಬಂಧಿಸಿದಂತೆ ಏಳು ಪ್ರಕರಣಗಳನ್ನು ದಾಖಲಿಸಲಾಗಿದ್ದು, ಹಲವರನ್ನು ಬಂಧಿಸಲಾಗಿದೆ. ಕ್ಲಬ್‌ಗಳಲ್ಲಿ ಜೂಜಾಟ ನಡೆಸುವುದಕ್ಕೆ ನಿರ್ಬಂಧ ವಿಧಿಸಲಾಗಿದೆ. ಅದೇ ರೀತಿ ಸಲೂನ್, ಸ್ಪಾ ಹೆಸರಿನಲ್ಲಿ ವೇಶ್ಯಾವಾಟಿಕೆ ನಡೆಸುತ್ತಿರುವ ಪ್ರಕರಣ ಬೆಳಕಿಗೆ ಬಂದಿದ್ದು, ಕ್ಲೌಡ್-೧೧ ಪರವಾನಗಿ ರದ್ದಿಗೆ ನಗರಸಭೆಗೆ ಶಿಫಾರಸು ಮಾಡಲಾಗಿದೆ. ಒಮ್ಮೆ ದಂಧೆ ಪ್ರಕರಣ ಬೆಳಕಿಗೆ ಬಂದ ನಂತರವೂ ಬಾಡಿಗೆಗೆ ಸ್ಥಳಾವಕಾಶ ಮಾಡಿಕೊಟ್ಟ ಕಟ್ಟಡ ಮಾಲೀಕರ ವಿರುದ್ಧವೂ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಹೇಳಿದರು.ನಿರ್ಮಿತಿ ಕೇಂದ್ರದ ನಕಲಿ ವಿದ್ಯಾಭ್ಯಾಸದ ದಾಖಲೆಗಳನ್ನು ಸಲ್ಲಿಸಿ ಹುದ್ದೆಗಳನ್ನು ಪಡೆದಿರುವ ಪ್ರಕರಣವೂ ಸಾಕಷ್ಟು ಪ್ರಗತಿಯಲ್ಲಿದೆ. ಅದರ ಬಗ್ಗೆ ಕೆಲವೇ ದಿನಗಳಲ್ಲಿ ವಿವರವಾದ ಮಾಹಿತಿ ನೀಡುವುದಾಗಿ ಸ್ಪಷ್ಟಪಡಿಸಿದರು.