ಡಬಲ್ ಬ್ಯಾರೆಲ್ ಗನ್‌ನಿಂದ ಶೂಟ್ ಮಾಡಿಕೊಂಡು ರಾಜೀವ್ ಪಿಕಳೆ ಎಂಬವರು ಆತ್ಮಹತ್ಯೆ ಮಾಡಿಕೊಂಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆತ್ಮಹತ್ಯೆಗೆ ಪ್ರಚೋದನೆ ಆರೋಪದಡಿ ಮೂವರ ಮೇಲೆ ಪ್ರಕರಣ ದಾಖಲಾಗಿದೆ.
ಅಂಕೋಲಾ:
ಡಬಲ್ ಬ್ಯಾರೆಲ್ ಗನ್‌ನಿಂದ ಶೂಟ್ ಮಾಡಿಕೊಂಡು ರಾಜೀವ್ ಪಿಕಳೆ ಎಂಬವರು ಆತ್ಮಹತ್ಯೆ ಮಾಡಿಕೊಂಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆತ್ಮಹತ್ಯೆಗೆ ಪ್ರಚೋದನೆ ಆರೋಪದಡಿ ಮೂವರ ಮೇಲೆ ಪ್ರಕರಣ ದಾಖಲಾಗಿದೆ.ಕಾರವಾರದ ವೈಲವಾಡಾದವರಾದ ಮಾಜಿ ಸೈನಿಕ ಸುಭಾಷ ಕೃಷ್ಣಾ ನಾಯ್ಕ, ಗುತ್ತಿಗೆದಾರ ಹರಿಶ್ಚಂದ್ರ ಕೃಷ್ಣಾ ನಾಯ್ಕ ಹಾಗೂ ಅನೀಲ ಸುರೇಶ ನಾಯ್ಕ ಅವರ ಮೇಲೆ ಪ್ರಕರಣ ದಾಖಲಾಗಿದೆ. ಮೂವರನ್ನು ಬಂಧಿಸಿ ನ್ಯಾಯಾಲಯದ ಮುಂದೆ ಪೊಲೀಸರು ಹಾಜರು ಪಡಿಸಿದ್ದಾರೆ.
ಪ್ರಕರಣ ಏನು?:ಹಟ್ಟಿಕೇರಿಯಲ್ಲಿ ಡಬಲ್ ಬ್ಯಾರಲ್ ಗನನಿಂದ ತನ್ನ ಮನೆಯ ಮುಂದಿನ ತುಳಸಿ ಕಟ್ಟೆಯ ಎದುರು ಶೂಟ್ ಮಾಡಿಕೊಂಡು ಕಾರವಾರದ ಪಿಕಳೆ ನರ್ಸಿಂಗ್ ಹೋಂ ಫಾರ್ಮಾಸಿಸ್ಟ್ ರಾಜೀವ್ ಪಿಕಳೆ (67) ಆತ್ಮಹತ್ಯೆ ಮಾಡಿಕೊಂಡಿದ್ದರು.
ಕಳೆದ ಜ.7ರಂದು ಸುಭಾಷ್ ನಾಯ್ಕ್ ಹಾಗೂ ಇತರರು ಕಾರವಾರದ ಪಿಕಳೆ ಆಸ್ಪತ್ರೆಗೆ ಬಂದು ಅವಧಿ ಮೀರಿದ ಔಷಧಿ ನೀಡಿದ್ದಾರೆಂದು ಗಲಾಟೆ ಮಾಡಿದ್ದರು. ತಾನು ಕಣ್ತಪ್ಪಿನಿಂದ ಅವಧಿ ಮೀರಿದ ಔಷಧಿ ನೀಡಿದ್ದೆ ಎಂದು ಹೇಳಿ ಕ್ಷಮೆ ಯಾಚಿಸಿದ್ದರೂ, ಘಟನೆಯನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಡಲಾಗಿತ್ತು. ಇದರ ಬಳಿಕ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಖಾಸಗಿ ಆಸ್ಪತ್ರೆ ಸಿಬ್ಬಂದಿ ರಾಜೀವ್ ಪಿಕಳೆ, ತನ್ನ ಸಾವಿಗೆ ತಾನೇ ಕಾರಣ ಎಂಬ ಸುಸೈಡ್ ನೋಟ್ ಬರೆದಿಟ್ಟು ಮನೆಯಲ್ಲಿ ಶೂಟ್ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು.ಈ ಬಗ್ಗೆ ಮೃತ ರಾಜೀವ್ ಪಿಕಳೆ ಸಹೋದರ ಅಂಕೋಲಾ ಪೊಲೀಸ್ ಠಾಣೆಗೆ ದೂರು ನೀಡಿ, ತನ್ನ ಅಣ್ಣನ ಸಾವಿಗೆ ಈ ಮೂವರು ಕಾರಣರಾಗಿದ್ದಾರೆ ಎಂದು ದೂರು ನೀಡಿದ್ದರು. ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡ
ಪೊಲೀಸರು ತನಿಖೆ ಕೈಗೊಂಡು ಮೂವರನ್ನು ಬಂಧಿಸಿ ಕಾನೂನು ಕ್ರಮ ಕೈಗೊಂಡಿದ್ದಾರೆ.ಘಟನೆ ನಡೆದ ಸ್ಥಳದಲ್ಲಿ ದೊರಕಿರುವ ಸುಸೈಡ್ ನೋಟನ್ನು ಎಫ್‌ಎಸ್ಎಲ್‌ಗೆ ಕಳುಹಿಸಲಾಗಿದ್ದು, ಆತ್ಮಹತ್ಯೆಗೆ ಇತರ ಕಾರಣಗಳಿವೆಯೇ ಎಂದು ಕೂಡಾ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.