ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರು
ಪತ್ನಿ ಮೇಲಿನ ದ್ವೇಷದಲ್ಲಿ ತನ್ನ ಮೂವರು ಮಕ್ಕಳನ್ನು ಬಾವಿಗೆ ದೂಡಿ ಹಾಕಿ ಕೊಲೆ ಮಾಡಿದ ಆರೋಪಿ ತಂದೆಗೆ ಮಂಗಳೂರಿನ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮಂಗಳವಾರ ಮರಣದಂಡನೆ ಶಿಕ್ಷೆ ಪ್ರಕಟಿಸಿದೆ.ತಾಳಿಪಾಡಿ ಗ್ರಾಮದ ಪದ್ಮನೂರು ಶೆಟ್ಟಿಕಾಡು ನಿವಾಸಿ ಹಿತೇಶ್ ಶೆಟ್ಟಿಗಾರ್ ಯಾನೇ ಹಿತೇಶ್ ಕುಮಾರ್(43) ಎಂಬಾತನೇ ಮರಣದಂಡನೆ ಶಿಕ್ಷೆಗೆ ಒಳಗಾದ ಅಪರಾಧಿ. ಮೂಲ್ಕಿ ಠಾಣಾ ವ್ಯಾಪ್ತಿಯ ತಾಳಿಪಾಡಿ ಗ್ರಾಮದ ಪದ್ಮನೂರು ಎಂಬಲ್ಲಿ 2022ರ ಜೂನ್ 23ರಂದು ಈ ಘಟನೆ ನಡೆದಿತ್ತು. ಆರೋಪಿ ಹಿತೇಶ್ ಶೆಟ್ಟಿಗಾರ್ ಪಾನಮತ್ತನಾಗಿ ಬಂದು ಪತ್ನಿ ಜೊತೆಗೆ ಜಗಳವಾಡುತ್ತಿದ್ದ. ಅದೇ ದ್ವೇಷದಲ್ಲಿ ಆಗಷ್ಟೆ ಶಾಲೆಯಿಂದ ಮನೆಗೆ ಬಂದಿದ್ದ ಮಕ್ಕಳಾದ ರಶ್ಮಿತಾ (13), ಉದಯ ಕುಮಾರ್ (11), ದಕ್ಷಿತ್ (5) ಅವರನ್ನು ಬಾವಿಗೆ ದೂಡಿ ಹಾಕಿದ್ದಾನೆ. ಈ ವೇಳೆ ದೊಡ್ಡ ಮಗಳು ರಶ್ಮಿತಾ ಬಾವಿಗೆ ಅಳವಡಿಸಿದ್ದ ಪಂಪಿನ ಪೈಪ್‌ನಲ್ಲಿ ನೇತಾಡಿ ಜೀವ ರಕ್ಷಿಸಲು ಪ್ರಯತ್ನ ಪಟ್ಟಿದ್ದಾಳೆ. ಆದರೆ ಪೈಪನ್ನು ಕತ್ತಿಯಿಂದ ಕಡಿದು ಆಕೆಯನ್ನು ನೀರಿಗೆ ಬೀಳುವಂತೆ ಮಾಡಿ ಅಮಾನುಷ ಕೃತ್ಯ ಎಸಗಿದ್ದ.
ಆ ಬಳಿಕ ಹೊಟೇಲ್ ಕೆಲಸ ಮುಗಿಸಿ ಸಂಜೆ ಮನೆಗೆ ಬಂದ ಪತ್ನಿ ಲಕ್ಷ್ಮೀಯನ್ನೂ ಆರೋಪಿ ಹಿತೇಶ್ ಬಾವಿಗೆ ದೂಡಲು ಯತ್ನಿಸಿದ್ದಾನೆ. ಈ ವೇಳೆ ಆಕೆ ಬೊಬ್ಬೆ ಹಾಕಿದ್ದು ಸ್ಥಳಕ್ಕೆ ಓಡಿ ಬಂದ ಹೂವಿನ ವ್ಯಾಪಾರಿ ರಕ್ಷಣೆ ಮಾಡಿದ್ದಾರೆ. ಅಲ್ಲದೆ, ತನ್ನ ಪತಿ ಮಾಡಿದ ಕೃತ್ಯದ ಬಗ್ಗೆ ಪತ್ನಿ ಲಕ್ಷ್ಮೀ ಮೂಲ್ಕಿ ಪೊಲೀಸರಿಗೆ ದೂರು ನೀಡಿದ್ದು ಆರೋಪಿಯನ್ನು ಬಂಧಿಸಿದ್ದರು. ಕೃತ್ಯದ ಬಗ್ಗೆ ಮೂಲ್ಕಿ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಕುಸುಮಾಧರ್ ಅವರು ಕೋರ್ಟಿಗೆ ದೋಷಾರೋಪ ಸಲ್ಲಿಸಿದ್ದರು.ಈ ಪ್ರಕರಣದಲ್ಲಿ ಅಭಿಯೋಜನೆ ಪರ ಒಟ್ಟು 32 ಸಾಕ್ಷಿದಾರರನ್ನು ವಿಚಾರಿಸಲಾಗಿದೆ. ಪ್ರಕರಣದ ಸಾಕ್ಷ್ಯ, ದಾಖಲೆಗಳು ಹಾಗೂ ಪೂರಕ ಸಾಕ್ಷ್ಯ ಹಾಗೂ ವಾದ ಪ್ರತಿವಾದವನ್ನು ಆಲಿಸಿ ಆರೋಪಿಯ ವಿರುದ್ಧ ಅಪರಾಧ ಸಾಬೀತಾಗಿದೆ ಎಂದು ತೀರ್ಮಾನಿಸಿ ಡಿ.30ರಂದು ನ್ಯಾಯಾಧೀಶರಾದ ಸಂಧ್ಯಾ ಎಸ್. ಅವರು ಐಪಿಸಿ ಕಲಂ: 302ರಡಿ ಕೊಲೆ ಪ್ರಕರಣದಲ್ಲಿ ಗಲ್ಲು ಶಿಕ್ಷೆ ಮತ್ತು ಕಲಂ: 307ರಡಿ ಹೆಂಡತಿಯನ್ನು ಕೊಲೆಗೆ ಯತ್ನಿಸಿದ್ದಕ್ಕೆ 10 ವರ್ಷಗಳ ಕಾರಾಗೃಹವಾಸದ ಶಿಕ್ಷೆಯನ್ನು ವಿಧಿಸಿದ್ದಾರೆ. ಮಕ್ಕಳ ತಾಯಿ ಲಕ್ಷ್ಮೀ ಅವರಿಗೆ ಸೂಕ್ತ ಪರಿಹಾರವನ್ನು ಕಾನೂನು ಸೇವೆಗಳ ಪ್ರಾಧಿಕಾರವು ನೀಡಬೇಕೆಂದು ನ್ಯಾಯಾಲಯದಲ್ಲಿ ಆದೇಶದಲ್ಲಿ ತಿಳಿಸಿದ್ದಾರೆ. ಸರ್ಕಾರದ ಪರವಾಗಿ ಮೋಹನ್ ಕುಮಾರ್ ವಾದ ಮಂಡಿಸಿದ್ದರು
ಶಿಕ್ಷೆಗೊಳದಾಗ ಹಿತೇಶ್ ಈ ಮೊದಲು ಎಂಆರ್‌ಪಿಎಲ್‌ನಲ್ಲಿ ಕ್ಯಾಂಟೀನ್ ಒಂದರಲ್ಲಿ ಕೆಲಸ ಮಾಡುತ್ತಿದ್ದು, ಕೋವಿಡ್ ನಂತರ ಕೆಲಸವಿಲ್ಲದೆ ಮನೆಯಲ್ಲಿದ್ದ. ತನ್ನ ಉದಾಸೀನ ಪ್ರವೃತ್ತಿಯಿಂದ ಯಾವುದೇ ಕೆಲಸಕ್ಕೆ ಹೋಗುತ್ತಿರಲಿಲ್ಲ. ಪತ್ನಿ ಬೀಡಿ ಕಟ್ಟುತ್ತಿದ್ದು, ಮಕ್ಕಳನ್ನು ಸಾಲು ಕಷ್ಟವಾಗುತ್ತದೆ ಎಂದು ಹತ್ತಿರದ ಹೊಟೇಲ್‌ಗೆ ಕೆಲಸ ಹೋಗಲು ಆರಂಭಿಸಿ 15 ದಿನ ಆಗಿತ್ತು. ಹೆಂಡತಿ ಕೆಲಸಕ್ಕೆ ಹೋಗುತ್ತಿದ್ದಾಳೆ, ತಾನು ಮನೆಯಲ್ಲಿದ್ದೇನೆ ಎನ್ನುವ ಅವಮಾನವೂ ಆತನಿಗಿತ್ತು. ಹೆಂಡತಿ ಮಕ್ಕಳನ್ನು ಸಾಕಲು ಕಷ್ಟವಾಗುತ್ತದೆ ಅವರನ್ನು ಸಾಯಿಸಿದರೆ ತನಗೆ ಹೇಗೆ ಬೇಕಾದರೂ ಜೀವಿಸಬಹುದೆಂದು ಯೋಚಿಸಿ ತನ್ನ ಮೂವರು ಮಕ್ಕಳನ್ನು ಬಾವಿಗೆ ಹಾಕಿ ಕೊಲೆ ಮಾಡಿ ತನ್ನ ಹೆಂಡತಿಯನ್ನೂ ಕೂಡಾ ಬಾವಿಗೆ ದೂಡಿ ಹಾಕಿ ಕೊಲೆಗೆ ಪ್ರಯತ್ನಿಸಿದ್ದಾನೆ.ಆತನ ಮಾನಸಿಕ ಅಸ್ವಸ್ಥನಾಗಿರಲಿಲ್ಲ. ಕೋವಿಡ್ ಬಳಿಕ ರಸ್ತೆ ಬದಿಯಲ್ಲಿ ಸ್ವಲ್ಪ ಕಾಲ ಎಳನೀರು ವ್ಯಾಪಾರ ಮಾಡುತ್ತಿದ್ದ. ಬಳಿಕ ಅದನ್ನೂ ಬಿಟ್ಟಿದ್ದ. ಮದುವೆ ಆಗಿ ಸುಮಾರು 16-17 ವರ್ಷ ಆಗಿತ್ತು.
ಆರೋಪ ಸಾಬೀತು ಆಗಿದೆ ಎಂದು ನ್ಯಾಯಧೀಶರು ತಿಳಿಸಿದಾಗ ಆತ ವಿಚಲಿತಗೊಂಡಿರಲಿಲ್ಲ. ಶಿಕ್ಷೆ ಪ್ರಕಟವಾಗುವುದಕ್ಕೆ ಮೊದಲು ಬೇರೆ ಕೈದಿಗಳ ಜೊತೆ ಆತ ನಗುತ್ತಾ ಮಾತನಾಡುತ್ತಿದ್ದ. ಗಲ್ಲು ಶಿಕ್ಷೆ ಎಂದು ತೀರ್ಪು ಪ್ರಕಟಿಸಿದಾಗ ಮುಖದಲ್ಲಿ ಬೇಸರದ ಭಾವ ಕಂಡು ಬಂದಿದೆ.