ಕನ್ನಡಪ್ರಭ ವಾರ್ತೆ ಮೇಲುಕೋಟೆ

ಸತತ ಮೂರು ದಿನಗಳ ರಜೆ ಹಿನ್ನೆಲೆಯಲ್ಲಿ ಶ್ರೀಚೆಲುವನಾರಾಯಣಸ್ವಾಮಿ ಮತ್ತು ಬೆಟ್ಟದೊಡೆಯ ಯೋಗಾನರಸಿಂಹಸ್ವಾಮಿ ದರ್ಶನಕ್ಕೆ ಭಕ್ತಸಾಗರವೇ ಹರಿದು ಬಂದಿತ್ತು.

ಶುಕ್ರವಾರ, ಶನಿವಾರ ಮತ್ತು ಭಾನುವಾರಗಳಂದು ಎರಡು ದೇಗುಲಗಳಿಗೆ ನಾಡಿನ ವಿವಿಧ ಭಾಗಗಳಿಂದ ಬಂದ 50 ಸಾವಿರಕ್ಕೂ ಅಧಿಕ ಭಕ್ತರು ದೇವರ ದರ್ಶನ ಪಡೆದಿದ್ದಾರೆ.

ಚೆಲುವನಾರಾಯಣಸ್ವಾಮಿ ದೇವಾಲಯದಲ್ಲಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕನಗೋನಹಳ್ಳಿ ಪರಮೇಶಗೌಡ, ದೇಗುಲದ ಇಒ ಶೀಲಾ ಖುದ್ದು ಹಾಜರಿದ್ದು, ಭಕ್ತರ ಸುಗಮ ದರ್ಶನಕ್ಕೆ ವ್ಯವಸ್ಥೆ ಮಾಡಿದ್ದರು. ಆದರೆ, ದೇವಾಲಯದ ಸುತ್ತ ವಾಹನಗಳನ್ನು ಅಡ್ಡಾದಿಡ್ಡಿಯಾಗಿ ರಸ್ತೆಯ ಎರಡೂ ಬದಿಯಲ್ಲಿ ನಿಲ್ಲಿಸಿದ ಪರಿಣಾಮ ಪಾರ್ಕಿಂಗ್ ಅವ್ಯವಸ್ಥೆ ನಿರಂತರವಾಗಿ ಮುಂದುವರೆದು ವಾಹನ ದಟ್ಟಣೆ ಉಂಟಾಗಿ ಭಕ್ತರು ಕಿರಿಕಿರಿ ಅನುಭವಿಸುವಂತಾಯಿತು.

ಚೆಲುವನಾರಾಯಣಸ್ವಾಮಿ ದೇವಾಲಯದ ಸುತ್ತ ಹಾಗೂ ಕಲ್ಯಾಣಿಯ ಸುತ್ತ ಮುತ್ತ ಶನಿವಾರ, ಭಾನುವಾರ ಮತ್ತು ರಜಾದಿನಗಳಂದು ಮತ್ತು ವಿಶೇಷ ಉತ್ಸವಗಳ ವೇಳೆ ಪ್ರಾಥಮಿಕ ಆರೋಗ್ಯ ಕೇಂದ್ರದ ಮುಂಭಾಗದ ಮೈದಾನದಲ್ಲಿ ಭಕ್ತರ ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ ಮಾಡಿ ವಾಹನಗಳ ದಟ್ಟಣೆ ನಿಯಂತ್ರಿಸಬೇಕೆಂದು ಶಾಸಕ ದರ್ಶನ್‌ ಪುಟ್ಟಣ್ಣಯ್ಯ ಸೂಚಿಸಿದ್ದರೂ ಗ್ರಾಪಂ ಮತ್ತು ಮೇಲುಕೋಟೆ ಪೊಲೀಸರು ಕ್ರಮ ವಹಿಸದ ಕಾರಣ ಪಾರ್ಕಿಂಗ್ ಅವ್ಯವಸ್ಥೆ ನಿರಂತರವಾಗಿ ಮುಂದುವರೆದಿದೆ.


ಕಳೆದ ತಿಂಗಳು ವಾಹನ ದಟ್ಟಣೆಯ ಕಿರಿಕಿರಿಯನ್ನು ಸ್ವತಃ ಅನುಭವಿಸಿದ ಶಾಸಕ ದರ್ಶನ್ ಪುಟ್ಟಣ್ಣಯ್ಯ ರಸ್ತೆ ಬದಿಯಲ್ಲೇ ಕಾರು ಬಿಟ್ಟು ಬೈಕ್ ಮೂಲಕ ಭಗವದ್ ರಾಮಾನುಜ ರಾಷ್ಟ್ರೀಯ ಸಂಸ್ಕೃತ ಸಂಶೋಧನಾ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಸಮಾರಂಭಕ್ಕೆ ಆಗಮಿಸಿದ್ದರು. ಅಂದೇ ಪೊಲೀಸ್ ಹಿರಿಯ ಅಧಿಕಾರಿಗಳಿಗೂ ರಜಾದಿನಗಳಂದು ವಿಶೇಷ ಉತ್ಸವಗಳಂದು ದೇವಾಲಯಗಳ ಸುತ್ತಮುತ್ತ ಪಾರ್ಕಿಂಗ್ ನಿಷೇಧಿಸಿ ಸೂಕ್ತ ಸ್ಥಳದಲ್ಲಿ ಭಕ್ತರ ವಾಹನಗಳಿಗೆ ಪಾರ್ಕಿಂಗ್ ಸೌಲಭ್ಯ ಕಲ್ಪಿಸಲು ಸೂಚಿಸಿದ್ದರು.

ಇಷ್ಟಾದರೂ ಈವರೆಗೆ ಅವ್ಯವಸ್ಥೆ ಬಗೆಹರಿದಿಲ್ಲ. ಮುಂದಿನ ವಾರದಿಂದಾದರೂ ವಾಹನ ದಟ್ಟಣೆ ತಪ್ಪಿಸಲು ಗ್ರಾಪಂ ಮತ್ತು ಮೇಲುಕೋಟೆ ಪೊಲೀಸರು ಸಿಬ್ಬಂದಿಯನ್ನು ನಿಯೋಜಿಸಿ ಅಗತ್ಯ ಕ್ರಮ ಕೈಗೊಂಡು ಶಾಸಕರ ಸಲಹೆ ಜಾರಿಮಾಡಬೇಕು ಎಂದು ಭಕ್ತರು ಮನವಿ ಮಾಡಿದ್ದಾರೆ.