ಕಾಲೇಜು ಮಳೆ ಕೊಯ್ಲು ವ್ಯವಸ್ಥೆಗೆ ₹3.2 ಕೋಟಿ: ರುದ್ರಪ್ಪ ಲಮಾಣಿ

| Published : Nov 21 2025, 01:00 AM IST

ಕಾಲೇಜು ಮಳೆ ಕೊಯ್ಲು ವ್ಯವಸ್ಥೆಗೆ ₹3.2 ಕೋಟಿ: ರುದ್ರಪ್ಪ ಲಮಾಣಿ
Share this Article
  • FB
  • TW
  • Linkdin
  • Email

ಸಾರಾಂಶ

ನೀರಿನ ಸಮಸ್ಯೆ ತೀವ್ರವಾಗಿರುವ ನಗರದ ವೈದ್ಯಕೀಯ ಕಾಲೇಜಿಗೆ ಮಳೆ ನೀರು ಕೊಯ್ಲು ವ್ಯವಸ್ಥೆ ಕಲ್ಪಿಸಲು ಈಗಾಗಲೇ ಸಲ್ಲಿಸಿರುವ ಪ್ರಸ್ತಾವನೆಯಲ್ಲಿರುವ 3.2 ಕೋಟಿ ರು. ಹೆಚ್ಚುವರಿ ಅನುದಾನವನ್ನು ಸರ್ಕಾರದಿಂದ ಒದಗಿಸಲು ಶಿಫಾರಸು ಮಾಡುವುದಾಗಿ ವಿಧಾನಸಭೆ ಉಪ ಸಭಾಪತಿ, ವಿಧಾನಸಭೆ ಅರ್ಜಿಗಳ ಸಮಿತಿಯ ಅಧ್ಯಕ್ಷ ರುದ್ರಪ್ಪ ಮಾನಪ್ಪ ಲಮಾಣಿ ಹೇಳಿದರು.

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ನೀರಿನ ಸಮಸ್ಯೆ ತೀವ್ರವಾಗಿರುವ ನಗರದ ವೈದ್ಯಕೀಯ ಕಾಲೇಜಿಗೆ ಮಳೆ ನೀರು ಕೊಯ್ಲು ವ್ಯವಸ್ಥೆ ಕಲ್ಪಿಸಲು ಈಗಾಗಲೇ ಸಲ್ಲಿಸಿರುವ ಪ್ರಸ್ತಾವನೆಯಲ್ಲಿರುವ 3.2 ಕೋಟಿ ರು. ಹೆಚ್ಚುವರಿ ಅನುದಾನವನ್ನು ಸರ್ಕಾರದಿಂದ ಒದಗಿಸಲು ಶಿಫಾರಸು ಮಾಡುವುದಾಗಿ ವಿಧಾನಸಭೆ ಉಪ ಸಭಾಪತಿ, ವಿಧಾನಸಭೆ ಅರ್ಜಿಗಳ ಸಮಿತಿಯ ಅಧ್ಯಕ್ಷ ರುದ್ರಪ್ಪ ಮಾನಪ್ಪ ಲಮಾಣಿ ಹೇಳಿದರು.

ನಗರದ ವೈದ್ಯಕೀಯ ಕಾಲೇಜಿಗೆ ಗುರುವಾರ ಅರ್ಜಿಗಳ ಸಮಿತಿ ಸದಸ್ಯರೊಂದಿಗೆ ಭೇಟಿ ನೀಡಿ ಕಟ್ಟಡದ ಸ್ಥಿತಿಗತಿಯನ್ನು ವೀಕ್ಷಿಸಿದ ಬಳಿಕ ಕಾಲೇಜಿನ ಅಧಿಕಾರಿಗಳು, ಮುಖ್ಯ ಎಂಜಿನಿಯರ್ ಜತೆ ಮಾತನಾಡಿ, ಈ ತಕ್ಷಣದ ಪರಿಹಾರ ಕ್ರಮವಾಗಿ ನೀರಿನ ವ್ಯವಸ್ಥೆ ಹಾಗೂ ವಿದ್ಯುತ್ ಸಮಸ್ಯೆಯನ್ನು ಪ್ರಥಮ ಆದ್ಯತೆಯಾಗಿ ಪರಿಗಣಿಸಿ ಸರಿಪಡಿಸಲು ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು. ಕೇಂದ್ರ ಹಾಗೂ ರಾಜ್ಯ ಸರ್ಕಾರದ 60:40 ಅನುಪಾತದ ಅನುದಾನದಲ್ಲಿ ವೈದ್ಯಕೀಯ ಕಾಲೇಜು ಕಟ್ಟಡಕ್ಕೆ 275.03 ಕೋಟಿ ರು. ಟೆಂಡರ್ ಆಗಿತ್ತು. ಅನಂತರದಲ್ಲಿ ವೆಚ್ಚ ಪರಿಷ್ಕರಿಸಿ 2024ರಲ್ಲಿ 455 ಕೋಟಿ ರು. ಅಂದಾಜು ತಯಾರಿಸಿ ಕಳುಹಿಸಲಾಗಿತ್ತು. ಈ ಮೊತ್ತದಲ್ಲಿ 438.29 ಕೋಟಿ ರು. ವೆಚ್ಚವಾಗಿದ್ದು. ಶೇ.90 ರಷ್ಟು ಕಾಮಗಾರಿ ಪೂರ್ಣಗೊಂಡಿದೆ. ಆದರೆ, ಈ ಕಟ್ಟಡಕ್ಕೆ ಹೆಚ್ಚುವರಿಯಾಗಿ ವಿದ್ಯುತ್ ಸಮಸ್ಯೆ ಇದೆ ಎಂದು ಮುಖ್ಯ ಎಂಜಿನಿಯರ್ ಮುಕ್ಕಣ್ಣ ನಾಯಕ್ ತಿಳಿಸಿದರು.

ಇಲ್ಲಿರುವ ಸಮಸ್ಯೆ ಕುರಿತ ಅಧ್ಯಕ್ಷರ ಪ್ರಶ್ನೆಗೆ ಶಾಸಕ ಎಚ್.ಡಿ.ತಮ್ಮಯ್ಯ ಮಾತನಾಡಿ, 1500 ವಿದ್ಯಾರ್ಥಿಗಳಿರುವ ಈ ಕಾಲೇಜಿಗೆ ಮೂಲಭೂತ ಸೌಕರ್ಯಗಳಿಲ್ಲ. 2022 ರಲ್ಲಿ ತರಾತುರಿಯಲ್ಲಿ ಇಲ್ಲಿನ ವ್ಯವಸ್ಥೆ ಪರಿಗಣಿಸದೆ ಸ್ಥಳಾಂತರಿಸಲಾಗಿದೆ. ಇಲ್ಲಿ ನೀರು, ವಿದ್ಯುತ್, ಕ್ಯಾಂಟೀನ್, ಶೌಚಾಲಯಕ್ಕೂ ನೀರಿನ ಕೊರತೆಯಾಗಿದೆ. ಹಾಸ್ಟೆಲ್ ಊಟವೂ ಸಮರ್ಪಕವಾಗಿಲ್ಲ ಎಂಬ ದೂರು ಕೇಳಿ ಬಂದಿದೆ. ಈ ಕಟ್ಟಡದಲ್ಲಿ ವಿದ್ಯುತ್ ಹಾಗೂ ನೀರಿನ ಸಮಸ್ಯೆ ಪ್ರಮುಖವಾಗಿದೆ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಎಂಜಿನಿಯರ್ ಮುಕ್ಕಣ್ಣ ನಾಯಕ್, ಈ ಮೊದಲು ತೋಡಿದ ಕೊಳವೆಬಾವಿಗಳು ವಿಫಲವಾದ ಹಿನ್ನೆಲೆಯಲ್ಲಿ ಸಮಸ್ಯೆಯಾಗಿದೆ. ಇಲ್ಲಿಗೆ ಸಮೀಪದಲ್ಲೇ ಇರುವ ಕೆರೆ ಪಕ್ಕದಲ್ಲಿ ಎರಡು ಕೊಳವೆ ಬಾವಿಗಳನ್ನು ಕೊರೆಸಿ ನೀರೆತ್ತಲು ಚಿಂತನೆ ನಡೆಸಲಾಗಿದೆ. ಇದರಿಂದ 15 ಲಕ್ಷ ಲೀಟರ್ ನೀರು ಸಂಗ್ರಹಿಸಿ 5 ಲಕ್ಷ ಲೀಟರ್‌ ಅನ್ನು ಕ್ಯಾಂಪಸ್‌ಗೆ ಬಳಸಬಹುದು. 10 ಲಕ್ಷ ಲೀಟರ್‌ ನೀರು ಸಂಗ್ರಹಿಸಬಹುದು. ಈಗ ಹೆಚ್ಚುವರಿ 3.2 ಕೋಟಿ ರು. ಮಳೆ ನೀರು ಕೊಯ್ಲಿಗೆ ಅನುದಾನ ಕೇಳಲಾಗಿದೆ ಎಂದು ತಿಳಿಸಿದರು.

ಈಗಾಗಲೇ ಜಿಲ್ಲಾಧಿಕಾರಿ ಒಂದೂವರೆ ಎಕರೆ ಜಾಗ ಒದಗಿಸಿದ್ದು, ಇಲ್ಲಿನ ವಿದ್ಯುತ್ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ 4.37 ಕೋಟಿ ರೂ. ವೆಚ್ಚದಲ್ಲಿ ವಿದ್ಯುತ್ ಉಪ ಕೇಂದ್ರ ಸ್ಥಾಪಿಸಿ ಫೀಡರ್‌ನಿಂದ ವಿದ್ಯುತ್ ಸರಬರಾಜು ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದರು.

ಕಾಲೇಜಿನ ವಿದ್ಯಾರ್ಥಿಗಳಿಗೆ ಮಲಗಲು ಚಾಪೆ ನೀಡಲಾಗಿದೆ ಎಂಬ ದೂರಿರುವ ಬಗ್ಗೆ ಶಾಸಕ ಎಚ್.ಡಿ.ತಮ್ಮಯ್ಯ ಪ್ರಶ್ನೆಗೆ ಉತ್ತರಿಸಿದ ಡೀನ್ ಡಾ.ಎಂ.ಸಿ.ಹರೀಶ್, ಹಾಸ್ಟೆಲ್‌ನಲ್ಲಿ ಈಗಾಗಲೇ ಅವರಿಗೆ ಪೀಠೋಪಕರಣ ವ್ಯವಸ್ಥೆ ಮಾಡಲಾಗಿದೆ. ಹಾಸ್ಟೆಲ್‌ನಲ್ಲಿ 180 ವಿದ್ಯಾರ್ಥಿಗಳು ಹಾಗೂ 180 ವಿದ್ಯಾರ್ಥಿನಿಯರಿದ್ದು, ಈಗಾಗಲೇ ಅವರಿಗೆ ಅಗತ್ಯ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.

ಸಮಿತಿ ಸದಸ್ಯ, ಶಾಸಕ ಕೆ.ಎಸ್.ಆನಂದ್, ಎಸ್.ಮುನಿರಾಜು, ಯು.ಬಿ.ಬಣಕಾರ್, ಡಾ.ಅವಿನಾಶ್ ಉಮೇಶ್ ಜಾದವ್ ಚರ್ಚೆಯಲ್ಲಿ ಭಾಗವಹಿಸಿದ್ದರು. ಸಮಿತಿ ಸದಸ್ಯರು ಹಾಗೂ ಶಾಸಕರಾದ ಎಸ್.ಟಿ.ಸೋಮಶೇಖರ್, ಡಾ.ಎಚ್.ಡಿ.ರಂಗನಾಥ್, ಜಿಲ್ಲಾಧಿಕಾರಿ ಸಿ.ಎನ್.ಮೀನಾ ನಾಗರಾಜ್, ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಚ್.ಎಸ್.ಕೀರ್ತನಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ವಿಕ್ರಮ್ ಅಮಟೆ ಮತ್ತಿತರು ಹಾಜರಿದ್ದರು.