ಕನ್ನಡಪ್ರಭ ವಾರ್ತೆ, ತುಮಕೂರು ನಗರದ ಸಿದ್ಧಗಂಗಾ ತಾಂತ್ರಿಕ ಮಹಾವಿದ್ಯಾಲಯದ ಬಿರ್ಲಾ ಸಭಾಂಗಣದಲ್ಲಿ ಈ ತಿಂಗಳ 26 ರಿಂದ ಮೂರು ದಿನಗಳ ಕಾಲ ಅಂತಾರಾಷ್ಟ್ರೀಯ ಗ್ರಂಥಾಲಯ ಸಮ್ಮೇಳನ ಏರ್ಪಾಟಾಗಿದೆ.ರಾಜ್ಯ ಗ್ರಂಥಾಲಯ ಸಂಘದ ಅಧ್ಯಕ್ಷ ಡಾ.ಎಸ್.ಎಲ್. ಕಾಡದೇವರಮಠ ಅವರು ಬುಧವಾರ ಎಸ್‌ಐಟಿ ಕಾಲೇಜಿನ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ವಿವರ ನೀಡಿ, ರಾಜ್ಯ ಗ್ರಂಥಾಲಯ ಸಂಘ, ತುಮಕೂರು ವಿಶ್ವವಿದ್ಯಾಲಯ, ರಾಜ್ಯ ಕಾಲೇಜು ಗ್ರಂಥಪಾಲಕರ ಸಂಘ, ಬೆಂಗಳೂರಿನ ಎಲ್‌ಐಎಸ್ ಅಕಾಡೆಮಿ, ಸಿದ್ಧಗಂಗಾ ತಾಂತ್ರಿಕ ಮಹಾವಿದ್ಯಾಲಯ ಆಶ್ರಯದಲ್ಲಿ ‘ರೀಡರ್ಸ್ ಆರ್ ಲೀಡರ್ಸ್’ ಎನ್ನುವ ವಿಷಯದ ಕುರಿತ ಅಂತಾರಾಷ್ಟ್ರೀಯ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.ಮೂರು ದಿನಗಳ ಈ ಸಮ್ಮೇಳನದಲ್ಲಿ ದೇಶ-ವಿದೇಶಗಳಿಂದ ಅತಿಥಿಗಳು, ಶಿಕ್ಷಣ ತಜ್ಞರು, ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ಸಂಶೋಧಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸುವರು ಎಂದು ಹೇಳಿದರು. 26 ರಂದು ಬೆಳಿಗ್ಗೆ 10.30ಕ್ಕೆ ಹಿರೇಮಠದ ಡಾ.ಶಿವಾನಂದ ಶಿವಾಚಾರ್ಯ ಸ್ವಾಮೀಜಿಗಳ ಸಾನಿಧ್ಯದಲ್ಲಿ ಕಾಲೇಜು ಶಿಕ್ಷಣ ಇಲಾಖೆ ಆಯುಕ್ತರಾದ ಎನ್.ಮಂಜುಶ್ರೀ ಸಮ್ಮೇಳನ ಉದ್ಘಾಟಿಸುವರು. ಶಾಸಕ ಜಿ.ಬಿ.ಜ್ಯೋತಿಗಣೇಶ್ ಅವರು ಈ ವೇಳೆ ರಾಜ್ಯ ಗ್ರಂಥಪಾಲಕರ ಸಂಘದ ಅಂತರ್ಜಾಲಕ್ಕೆ ಚಾಲನೆ ನೀಡುವರು. ಸಾರ್ವಜನಿಕ ಗ್ರಂಥಾಲಯ ಇಲಾಖೆ ಆಯುಕ್ತರಾದ ಎಚ್.ಬಸವರಾಜೇಂದ್ರ ಸಮ್ಮೇಳನದ ಸ್ಮರಣ ಸಂಚಿಕೆ ಬಿಡುಗಡೆ ಮಾಡುವರು. ಪದ್ಮಶ್ರೀ ಪುರಸ್ಕೃತರಾದ ಅಂಕೇಗೌಡ ಅವರನ್ನು ಸನ್ಮಾನಿಸಲಾಗುವುದು. ತುಮಕೂರು ವಿಶ್ವವಿದ್ಯಾಲಯ ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು ಅಧ್ಯಕ್ಷತೆ ವಹಿಸುವರು. ವಾಗ್ಮೀ, ಲೇಖಕ ಗುರುರಾಜ ಕರ್ಜಗಿ ದಿಕ್ಸೂಚಿ ಭಾಷಣ ಮಾಡುವರು. ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಸಿ.ಸೋಮಶೇಖರ್, ರಾಜ್ಯ ಗ್ರಂಥಾಲಯ ಸಂಘದ ಅಧ್ಯಕ್ಷ ಡಾ.ಎಸ್.ಎಲ್.ಕಾಡದೇವರಮಠ, ಎಲ್‌ಐಎಸ್ ಅಕಾಡೆಮಿಯ ಪ್ರೊ. ಪಿ.ವಿ.ಕೊಣ್ಣೂರ್, ಎಸ್‌ಐಟಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಶಿವಕುಮಾರಯ್ಯ, ಎಸ್‌ಐಟಿ ಪ್ರಾಂಶುಪಾಲರಾದ ಡಾ.ಎಸ್.ವಿ.ದಿನೇಶ್ ಮೊದಲಾದವರು ಭಾಗವಹಿಸುವರು ಎಂದರು.

ಎಲ್‌ಐಎಸ್ ಅಕಾಡೆಮಿಯ ಪ್ರೊ.ಪಿ.ವಿ.ಕೊಣ್ಣೂರ್ ಮಾತನಾಡಿ, ಇತಿಹಾಸ ತಿಳಿದವರು ಭವಿಷ್ಯ ರೂಪಿಸಬಲ್ಲರು ಎನ್ನುವಂತೆ ಇತಿಹಾಸ ತಿಳಿಯಲು ಇತಿಹಾಸ ಓದಲೇಬೇಕು, ಓದಿತಿಳಿದವರು ಮಾತ್ರವೇ ಭವಿಷ್ಯ ರೂಪಿಸಲು ಸಾಧ್ಯ. ಹೀಗಾಗಿ ಗ್ರಂಥಾಲಯವನ್ನು ಮತ್ತಷ್ಟು ಬಲಪಡಿಸಬೇಕಾಗಿದೆ. 140ಕ್ಕೂ ಹೆಚ್ಚು ಜನ ಲೇಖನ ಮಂಡಿಸಲಿದ್ದಾರೆ. ವಿದೇಶಗಳ ಹಾಗೂ ದೇಶದ ವಿವಿಧ ಭಾಗಗಳ ಸುಮಾರು ೫೦೦ಕ್ಕೂ ಹೆಚ್ಚು ಪ್ರತಿನಿಧಿಗಳು ಮೂರೂ ದಿನದ ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ ಎಂದು ಹೇಳಿದರು.

ಎಸ್‌ಐಟಿಯ ಪ್ರಾಂಶುಪಾಲ ಡಾ.ಎಸ್.ವಿ.ದಿನೇಶ್ ಮಾತನಾಡಿ, ಓದುವ ಹವ್ಯಾಸ ಕಡಿಮೆಯಾಗುತ್ತಿರುವ ಇಂದಿನ ಸಂದರ್ಭದಲ್ಲಿ ಮುಂದೆ ಗ್ರಂಥಾಲಯಗಳು ಭೌತಿಕವಾಗಿ ಇಲ್ಲವಾಗುತ್ತವೆಯೇನೊ ಎನಿಸಿಬಿಟ್ಟಿದೆ. ಹಾಗಾಗಲು ಬಿಡದೆ ಮಕ್ಕಳಲ್ಲಿ ಓದುವ ಅಭ್ಯಾಸ ಬೆಳೆಸಿ ಗ್ರಂಥಾಲಯಕ್ಕೆ ಕರೆತರಬೇಕು ಎಂದು ಹೇಳಿದರು.ರಾಜ್ಯ ಕಾಲೇಜು ಗ್ರಂಥಪಾಲಕರ ಸಂಘದ ಕಾರ್ಯಾಧ್ಯಕ್ಷ ಡಾ.ರಾಜೇಶ್ ಎನ್.ತುರಮರಿ, ರಾಜ್ಯ ಗ್ರಂಥಾಲಯ ಸಂಘದ ಕಾರ್ಯದರ್ಶಿ ಎಚ್.ಪಿ.ಶೇಖರ್, ಮೋಹನ್‌ಕುಮಾರ್ ಮೊದಲಾದವರು ಭಾಗವಹಿಸಿದ್ದರು.