ಸಾರಾಂಶ
ಸಿಂದಗಿಯಿಂದ ಬೆಂಗಳೂರು ಕಡೆಗೆ ಹೊರಟ್ಟಿದ್ದ ಖಾಸಗಿ ಬಸ್ಸೊಂದು ಅವರ ಮೇಲೆ ಹಾಯ್ದ ಪರಿಣಾಮ ಸ್ಥಳದಲ್ಲಿಯೇ ಮೂವರು ಮೃತಪಟ್ಟು ನಾಲ್ವರು ಗಾಯಗೊಂಡಿದ್ದಾರೆ.
ಮುನಿರಾಬಾದ: ಹುಲಿಗೆಮ್ಮದೇವಿ ದೇವಸ್ಥಾನಕ್ಕೆ ಹುಣ್ಣಿಮೆ ಪ್ರಯುಕ್ತ ಪಾದಯಾತ್ರೆ ಹೊರಟ್ಟಿದ್ದ ಏಳು ಜನರ ಮೇಲೆ ಖಾಸಗಿ ಬಸ್ ಹರಿದ ಪರಿಣಾಮ ಸ್ಥಳದಲ್ಲಿಯೇ ಮೂವರು ಮೃತಪಟ್ಟು, ನಾಲ್ವರು ಗಂಭೀರ ಗಾಯಗೊಂದ ಘಟನೆ ರಾಷ್ಟ್ರೀಯ ಹೆದ್ದಾರಿ 50ರ ಕೂಕನಪಳ್ಳಿ ಗ್ರಾಮದಲ್ಲಿ ಮಂಗಳವಾರ ಬೆಳಗ್ಗಿನ ಜಾವ 1.30ಕ್ಕೆ ಸಂಭವಿಸಿದೆ.
ಗದಗ ಜಿಲ್ಲೆಯ ರೋಣ ತಾಲೂಕಿನ ತಳ್ಳಿಹಾಳ ಗ್ರಾಮದ ಅನ್ನಪೂರ್ಣ (40), ಪ್ರಕಾಶ (25) ಹಾಗೂ ಶರಣಪ್ಪ (19) ಮೃತಪಟ್ಟ ನತದೃಷ್ಟ ಪಾದಯಾತ್ರಿಗಳು. ಮಲ್ಲಿಕಾರ್ಜುನ, ಸಿದ್ದು, ಆದೇಶ ಹಾಗೂ ಕಸ್ತೂರವ್ವ ಅವರು ಗಾಯಗೊಂಡಿದ್ದು, ಕಸ್ತೂರವ್ವ ಸ್ಥಿತಿ ಚಿಂತಾಜನಕವಾಗಿದೆ ಎನ್ನಲಾಗಿದೆ.ಘಟನೆ ವಿವರ: ಗದಗ ಜಿಲ್ಲೆ ರೋಣ ತಾಲೂಕಿನ ತಳ್ಳಿಹಾಳ ಗ್ರಾಮದ 7 ಜನರು ಹುಣ್ಣಿಮೆ ನಿಮಿತ್ತ ಹುಲಿಗೆಮ್ಮ ದೇವಿ ದರ್ಶನ ಪಡೆಯಲು ಪಾದಯಾತ್ರೆ ಮೂಲಕ ಹುಲಗಿಗೆ ಬರುತ್ತಿದ್ದರು. ಬೆಳಗಿನ ಜಾವ 1.30ಕ್ಕೆ ಪಾದಯಾತ್ರಿಗಳು ಕೂಕನಪಳ್ಳಿ ಗ್ರಾಮಕ್ಕೆ ತಲುಪಿದರು. ಇನ್ನು ಮೂರು ಗಂಟೆ ಪಾದಯಾತ್ರೆ ಮಾಡಿದರೆ ಹುಲಿಗೆಮ್ಮದೇವಿ ಗುಡಿ ತಲುಪುತ್ತಿದ್ದರು. ಆದರೆ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಸಿಂದಗಿಯಿಂದ ಬೆಂಗಳೂರು ಕಡೆಗೆ ಹೊರಟ್ಟಿದ್ದ ಖಾಸಗಿ ಬಸ್ಸೊಂದು ಅವರ ಮೇಲೆ ಹಾಯ್ದ ಪರಿಣಾಮ ಸ್ಥಳದಲ್ಲಿಯೇ ಮೂವರು ಮೃತಪಟ್ಟು ನಾಲ್ವರು ಗಾಯಗೊಂಡಿದ್ದಾರೆ.
ವಿಷಯ ತಿಳಿದು ಮುನಿರಾಬಾದ ಪೊಲೀಸರು ಗಾಯಾಳುಗಳನ್ನು ಕೊಪ್ಪಳ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿದ್ದಾರೆ. ಖಾಸಗಿ ಬಸ್ ಚಾಲಕರನ್ನು ಬಂಧಿಸಿದ್ದಾರೆ. ಈ ಕುರಿತು ಮುನಿರಾಬಾದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನಾ ಸ್ಥಳಕ್ಕೆ ಎಸ್ಪಿ ರಾಮ ಎಲ್ ,ಅರಸಿದ್ದಿ ಭೇಟಿ ನೀಡಿ ಪರಿಶೀಲಿಸಿದ್ದಾರೆ.