ಸಾರಾಂಶ
ಧಾರವಾಡ: ಶಾಲಾ ದಿನಗಳೇ ಹಾಗೆ. ಯಾವುದೇ ಜಾತಿ-ಮತ, ಲಿಂಗಭೇದ ಎನ್ನದೇ ಒಟ್ಟೊಟ್ಟಿಗೆ ಆಟ-ಪಾಠ ಮಾಡುವ ದಿನಗಳು. ಅದರಲ್ಲೂ ಪ್ರಾಥಮಿಕ ಶಾಲಾ ದಿನಗಳು ಬಲು ಖುಷಿ ಕೊಡುವ ಸಂದರ್ಭಗಳನ್ನು ತರುತ್ತವೆ. ಅದೇ ರೀತಿ ನಾಲ್ಕನೇ ತರಗತಿಯಲ್ಲಿ ಓದಿ ನಂತರ ಬೇರೆ ಬೇರೆ ಶಾಲೆಗಳಿಗೆ ಹೋದ ವಿದ್ಯಾರ್ಥಿಗಳ ಗುಂಪೊಂದು ಇದೀಗ ಬರೋಬ್ಬರಿ 30 ವರ್ಷಗಳ ನಂತರ ಸ್ನೇಹ ಸಮ್ಮಿಲನದ ಮೂಲಕ ಮತ್ತೇ ಶಾಲಾ ದಿನಗಳ ನೆನಪುಗಳನ್ನು ಕೆದಕಿತು.
ಇಲ್ಲಿಯ ಪ್ರಜೆಂಟೇಶನ್ ಶಾಲೆಯಲ್ಲಿ 1994ನೇ ಇಸ್ವಿಯಲ್ಲಿ ಓದಿದ ವಿದ್ಯಾರ್ಥಿಗಳು 30 ವರ್ಷಗಳ ನಂತರ ಒಗ್ಗೂಡಿ ಸ್ನೇಹ ಸಮ್ಮಿಲನ ಕಾರ್ಯಕ್ರಮ ಮಾಡಿದ್ದು, ತಾವೆಲ್ಲರೂ ಒಗ್ಗೂಡಿದ್ದಲ್ಲದೇ ಆ ಸಮಯದಲ್ಲಿ ತಮಗೆ ಕಲಿಸಿದ ಗುರುವೃಂದಕ್ಕೂ ಗೌರವ ಸಲ್ಲಿಸಿದ ಕ್ಷಣ ಹೃದಯಸ್ಪರ್ಶಿಯಾಗಿತ್ತು. ತುಂಬಾ ವರ್ಷಗಳ ನಂತರ ಭೇಟಿಯಾದ ಸ್ನೇಹಿತ-ಸ್ನೇಹಿತೆಯರು ಆ ಸಮಯದಲ್ಲಿ ಮಾಡಿದ ತುಂಟಾಟಗಳನ್ನು ಸ್ಮರಿಸಿಕೊಂಡು ಸಂತೋಷ ಪಟ್ಟರು. ತಮಗೆ ಕಲಿಸಿದ ಗುರುಗಳೊಂದಿಗೆ ಸದ್ಯ ತಾವಿರುವ ವೃತ್ತಿ, ಕೌಟುಂಬಿಕ ಜೀವನದ ಬಗ್ಗೆ ಮಾಹಿತಿ ಹಂಚಿಕೊಂಡರು.ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಪ್ರಜೆಂಟೇಶನ್ ಹಿರಿಯ ಪ್ರಾಥಮಿಕ ಶಾಲೆಯ ಪ್ರಾಚಾರ್ಯರಾದ ಸಿಸ್ಟರ್ ಜೆಸಿಂತಾ, ಬಹುತೇಕ ವಿದ್ಯಾರ್ಥಿಗಳು ಶಾಲೆ ಬಿಟ್ಟ ನಂತರ ಸಂಪರ್ಕ ಕಳೆದುಕೊಳ್ಳುತ್ತಾರೆ. ಕೆಲವರು ಮಾತ್ರ ಶಾಲೆಯೊಂದಿಗೆ ನಿರಂತರವಾಗಿ ನಂಟು ಹೊಂದಿದ್ದು ಶಾಲೆಯ ಆಗು ಹೋಗುಗಳಲ್ಲಿ ಭಾಗಿಯಾಗುತ್ತಾರೆ. ಹಳೆಯ ವಿದ್ಯಾರ್ಥಿಗಳ ಬಲವು ಶಾಲೆಗೆ ಅಭಿವೃದ್ಧಿಗೆ ತುಂಬ ಸಹಾಯವಾಗಲಿದ್ದು, ಇದೀಗ 30 ವರ್ಷಗಳ ನಂತರ 94ನೇ ಬ್ಯಾಚ್ ವಿದ್ಯಾರ್ಥಿಗಳು ಒಗ್ಗೂಡಿ ಸ್ನೇಹ ಸಮ್ಮಿಲನ ಮಾಡಿದ್ದು ನಮಗೂ ಖುಷಿ ತಂದಿದೆ ಎಂದರು.
ಶಿಕ್ಷಕರಾದ ಸಿಸ್ಟರ್ ಮೇರಿ ಮಾತನಾಡಿ, ಪ್ರತಿಯೊಬ್ಬ ಶಿಕ್ಷಕರು ವಿದ್ಯಾರ್ಥಿಗಳ ಏಳ್ಗೆಯನ್ನು ಗುರಿಯಾಗಿಟ್ಟು ನಿಸ್ವಾರ್ಥದಿಂದ ಪಾಠ ಮಾಡುತ್ತಾರೆ. ಅದೇ ರೀತಿ ವಿದ್ಯಾರ್ಥಿಗಳು ಸಹ ಅಷ್ಟೇ ಬದ್ಧತೆಯಿಂದ ಪಾಠ ಕಲಿತು ಸಮಾಜದಲ್ಲಿ ಉತ್ತುಂಗ ಸ್ಥಾನಕ್ಕೆ ಹೋದರೆ ಶಿಕ್ಷಕರಿಗೆ ಆಗುವ ಸಂತೋಷ ಅಷ್ಟಿಷ್ಟಲ್ಲ. ಈ ಬ್ಯಾಚ್ ವಿದ್ಯಾರ್ಥಿಗಳು ಸಮಾಜದ ಎಲ್ಲ ಕ್ಷೇತ್ರಗಳಲ್ಲಿ ಉನ್ನತ ಸ್ಥಾನದಲ್ಲಿದ್ದು ಶಾಲೆಗೆ ತಂದ ಕೀರ್ತಿ ಎಂದು ಹರ್ಷ ವ್ಯಕ್ತಪಡಿಸಿದರು.ನಿವೃತ್ತ ಶಿಕ್ಷಕ ಬಿ.ಎಂ. ದೊಡ್ಡಯ್ಯ ಮಾತನಾಡಿದರು. ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಹಳೆ ವಿದ್ಯಾರ್ಥಿಗಳ ಪೈಕಿ ನಾಗನಗೌಡ ಪಾಟೀಲ ಅವರನ್ನು ಸನ್ಮಾನಿಸಲಾಯಿತು. ಎನ್.ಎಸ್. ಕುಲಕರ್ಣಿ, ನಾಗಪ್ಪ ಹಿತ್ತಲಮನಿ, ಸೆಸಿಲಿಯಾ ಕೋರಿಯಾ, ಪ್ರಭಾಕರ ರಾವ್, ವೆರೋನಿಕಾ ಅಲ್ಪಾನ್ಸೋ, ಸವಿತಾ ಶಿಗ್ಗಾವಿ, ಎಲಿಜಿಬತ್ ಜೋಸೆಫ್, ಮರ್ಥಾ ಫರ್ನಾಂಡೀಸ್, ವಿನೋದಿನಿ ಶೆಡೇದ್, ಮಂಜುಳಾ ಮುಜುಂದಾರ ಇದ್ದರು. ಕಸ್ತೂರಿ ಹಿರೇಗೌಡರ, ಸ್ಮೀತಾ ಜಾಧವ ನಿರೂಪಿಸಿದರು.