ಸಾರಾಂಶ
ಹಾನಗಲ್ಲ: ಗ್ರಾಮೀಣ ಪ್ರದೇಶದ ಯಾವ ಮಕ್ಕಳೂ ಸಹ ಶಿಕ್ಷಣದಿಂದ ವಂಚಿತರಾಗಬಾರದು, ಎಲ್‌ಕೆಜಿಯಿಂದ ದ್ವಿತೀಯ ಪಿಯುಸಿವರೆಗೆ ಒಂದೇ ಕ್ಯಾಂಪಸ್‌ನಲ್ಲಿ ಶಿಕ್ಷಣ ಸಿಗಬೇಕು ಎನ್ನುವ ಮಹತ್ವಾಕಾಂಕ್ಷೆಯಿಂದ ರಾಜ್ಯ ಸರ್ಕಾರ ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ಆರಂಭಿಸಲು ನಿರ್ಧರಿಸಿದ್ದು, ಮೊದಲ ಹಂತದಲ್ಲಿ ತಾಲೂಕಿನ 3 ಸರ್ಕಾರಿ ಪ್ರೌಢಶಾಲೆಗಳನ್ನು ಉನ್ನತೀಕರಿಸಿ ಕರ್ನಾಟಕ ಪಬ್ಲಿಕ್ ಶಾಲೆಗಳನ್ನಾಗಿ ಮೇಲ್ದರ್ಜೆಗೇರಿಸಿದೆ ಎಂದು ಶಾಸಕ ಶ್ರೀನಿವಾಸ ಮಾನೆ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಿಕ್ಕಾಂಶಿ ಹೊಸೂರು, ಬೆಳಗಾಲಪೇಟೆ ಮತ್ತು ಬಮ್ಮನಹಳ್ಳಿ ಗ್ರಾಮಗಳ ಸರ್ಕಾರಿ ಪ್ರೌಢಶಾಲೆಗಳು ಕರ್ನಾಟಕ ಪಬ್ಲಿಕ್ ಶಾಲೆಗಳಾಗಿ ಮೇಲ್ದರ್ಜೆಗೇರಿವೆ. ಪ್ರತಿ ಶಾಲೆಯ ಅಭಿವೃದ್ಧಿಗೆ 2 ಕೋಟಿ ರು.ದಿಂದ 4 ಕೋಟಿ ರು. ವರೆಗೆ ಅನುದಾನ ಸಹ ಲಭ್ಯವಾಗಲಿದ್ದು, ಕನಿಷ್ಠ 1200 ವಿದ್ಯಾರ್ಥಿಗಳಿಗೆ ಮೂಲಭೂತ ಸೌಲಭ್ಯ ಕಲ್ಪಿಸಲು ಅನುದಾನ ಬಳಸಲು ಅವಕಾಶ ಸಿಗಲಿದೆ. ಗ್ರಾಮೀಣ ಪ್ರದೇಶದಲ್ಲಿ ವರ್ಷದಿಂದ ವರ್ಷಕ್ಕೆ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಕುಸಿಯುತ್ತಿದೆ. ಆರ್ಥಿಕ ಮುಗ್ಗಟ್ಟಿನ ಕಾರಣದಿಂದ ಪಾಲಕರು ತಮ್ಮ ಮಕ್ಕಳ ಶಿಕ್ಷಣ ಮೊಟಕುಗೊಳಿಸುತ್ತಿದ್ದಾರೆ. ಪ್ರಾಥಮಿಕ ಶಿಕ್ಷಣ ಪೂರೈಸಿದ ಬಳಿಕ ಪ್ರೌಢ ಮತ್ತು ಪಿಯುಸಿ ಶಿಕ್ಷಣ ಕಲಿಕೆಗೆ ಹಿಂದೇಟು ಹಾಕುತ್ತಿರುವರ ಸಂಖ್ಯೆ ಹೆಚ್ಚುತ್ತಿರುವ ಕಾರಣ ಸರ್ಕಾರ ಪಬ್ಲಿಕ್ ಶಾಲೆಗಳನ್ನು ಆರಂಭಿಸಲು ಮುಂದಾಗಿದೆ. ಒಂದೇ ಕ್ಯಾಂಪಸ್‌ನಲ್ಲಿ ಶಿಕ್ಷಣ: ಚಿಕ್ಕಾಂಶಿ ಹೊಸೂರು, ಬೆಳಗಾಲಪೇಟೆ ಮತ್ತು ಬಮ್ಮನಹಳ್ಳಿ ಗ್ರಾಮಗಳಲ್ಲಿ ಪ್ರಸ್ತುತ ಪ್ರಾಥಮಿಕ, ಪ್ರೌಢ ಮತ್ತು ದ್ವಿತೀಯ ಪಿಯುಸಿ ಪ್ರತ್ಯೇಕವಾಗಿವೆ. ಇನ್ನು ಮುಂದೆ ಒಂದೇ ಕ್ಯಾಂಪಸ್‌ನಲ್ಲಿ ಎಲ್‌ಕೆಜಿಯಿಂದ ದ್ವಿತೀಯ ಪಿಯುಸಿವರೆಗೆ ಶಿಕ್ಷಣ ಲಭ್ಯವಾಗಲಿದ್ದು, ಕನ್ನಡ ಮಾತ್ರವಲ್ಲದೇ ಆಂಗ್ಲ ಮಾಧ್ಯಮದಲ್ಲಿಯೂ ಶಿಕ್ಷಣ ಸಿಗಲಿರುವುದು ವಿಶೇಷ. 6 ರಿಂದ 10 ನೇ ತರಗತಿವರೆಗೆ ಏಕ ತರಗತಿ ಪಠ್ಯಕ್ರಮ ಮತ್ತು ಕ್ರಿಯಾಶೀಲ ಕಲಿಕಾ ಪದ್ಧತಿ ಕರ್ನಾಟಕ ಪಬ್ಲಿಕ್ ಶಾಲೆಗಳಲ್ಲಿ ಇರಲಿದೆ. 10ರಿಂದ 12 ನೇ ತರಗತಿವರೆಗೆ ವಿದ್ಯಾರ್ಥಿಗಳಿಗೆ ನಿರ್ಗಮನ ಆಯ್ಕೆ ಸೌಲಭ್ಯ ಕಲ್ಪಿಸಲಾಗುತ್ತದೆ. ಸೇವಾ ನಿರತ ಶಿಕ್ಷಕರಿಗೆ ಅರ್ಹತಾ ಪರೀಕ್ಷೆ ನಡೆಸಿ ಆಯ್ಕೆಯಾದವರಿಗೆ ವಿಶೇಷ ತರಬೇತಿ ನೀಡಲಾಗುತ್ತದೆ. ಅಗತ್ಯ ಇದ್ದಲ್ಲಿ ಶಾಲೆಯ ನಿರ್ವಹಣೆಯನ್ನು ಹೊರಗುತ್ತಿಗೆ ನೀಡಲೂ ಸಹ ಸರ್ಕಾರ ಅವಕಾಶ ಕಲ್ಪಿಸಿದೆ.ಶಿಕ್ಷಣ ಕ್ಷೇತ್ರದಲ್ಲಿ ಸುಧಾರಣೆ: ತಾಲೂಕಿನಲ್ಲಿ ಈಗಾಗಲೇ ಹಾನಗಲ್, ಅಕ್ಕಿಆಲೂರು ಮತ್ತು ಮಂತಗಿ ಗ್ರಾಮಗಳಲ್ಲಿ ಹೊಸದಾಗಿ ಸರ್ಕಾರಿ ಪ್ರೌಢಶಾಲೆಗಳು ಮಂಜೂರಿಯಾಗಿದ್ದು, 7 ಸರ್ಕಾರಿ ಶಾಲೆಗಳಲ್ಲಿ ಎಲ್‌ಕೆಜಿ, ಯುಕೆಜಿ, 27 ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಆರಂಭಕ್ಕೆ ಕ್ರಮ ಕೈಗೊಳ್ಳಲಾಗಿದೆ. ಖಾಸಗಿ ಸಂಸ್ಥೆಗಳ ಸಹಭಾಗಿತ್ವದಡಿ 3.50 ಕೋಟಿ ರು. ವೆಚ್ಚದಲ್ಲಿ 5 ಸರ್ಕಾರಿ ಶಾಲೆಗಳಿಗೆ ಹೈಟೆಕ್ ಕಟ್ಟಡ ನಿರ್ಮಿಸಲಾಗಿದೆ. 50%-50% ಮಾದರಿಯಲ್ಲಿ ಒಟ್ಟು 3 ಕೋಟಿ ರು. ವೆಚ್ಚದಲ್ಲಿ 110 ಕ್ಕೂ ಹೆಚ್ಚು ಶಾಲೆಗಳಿಗೆ ಮೂಲಭೂತ ಸೌಲಭ್ಯ ಕಲ್ಪಿಸಲಾಗಿದೆ. ಇದರಲ್ಲಿ ಅರ್ಧ ಹಣವನ್ನು ಗ್ರಾಮಸ್ಥರು ಸಂಗ್ರಹಿಸಿ ನೀಡಿದ್ದರೆ, ಅದರ ಇನ್ನರ್ಧ ಹಣವನ್ನು ಶಾಸಕನಾಗಿ ತಾಲೂಕಿನ ಶೈಕ್ಷಣಿಕ ಹಿತಕ್ಕಾಗಿ ತಾವೇ ಭರಿಸುವುದಾಗಿ ಶಾಸಕ ಶ್ರೀನಿವಾಸ ಮಾನೆ ತಿಳಿಸಿದರು. ಮೊದಲ ಹಂತದಲ್ಲಿ ತಾಲೂಕಿನ 3 ಸರ್ಕಾರಿ ಪ್ರೌಢಶಾಲೆಗಳನ್ನು ಮೇಲ್ದರ್ಜೆಗೇರಿಸಿ ಕರ್ನಾಟಕ ಪಬ್ಲಿಕ್ ಶಾಲೆ ಆರಂಭಿಸಲಾಗುತ್ತಿದೆ. ಮಕ್ಕಳ ಹಿತದೃಷ್ಟಿಯಿಂದ ಇದೊಂದು ಮಹತ್ವದ ಹೆಜ್ಜೆಯಾಗಿದೆ. 2ನೇ ಹಂತದಲ್ಲಿ ಮತ್ತಷ್ಟು ಶಾಲೆಗಳಿಗೆ ಪಬ್ಲಿಕ್ ಶಾಲೆಗಳ ಮಾನ್ಯತೆ ಸಿಗುವ ನಿರೀಕ್ಷೆ ಇದೆ. ಭವಿಷ್ಯ ಗಮನದಲ್ಲಿಟ್ಟುಕೊಂಡು ಶಿಕ್ಷಣ ಕ್ಷೇತ್ರದಲ್ಲಿ ಕಾಳಜಿ ವಹಿಸಿ ಕೆಲಸ ಮಾಡಲಾಗುತ್ತಿದೆ ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು.
;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))