ಇಂಟರ್ ಲಾಕ್ ಮುರಿದು ಮನೆಯಲ್ಲಿದ್ದ ಚಿನ್ನಾಭರಣ, ಬೆಳ್ಳಿ ವಸ್ತು, ನಗದು ಕಳವು ಮಾಡಿದ್ದ ರಾಜಸ್ಥಾನ ಮೂಲದ ಮೂವರು ಅಂತಾರಾಜ್ಯ ಮನೆಗಳ್ಳರನ್ನು ಬಂಧಿಸಿ, 15.37 ಲಕ್ಷ ರು.ಗೂ ಅಧಿಕ ಮೌಲ್ಯದ ಸ್ವತ್ತು, ಕೃತ್ಯಕ್ಕೆ ಬಳಸಿದ್ದ ವಸ್ತುಗಳು, ಮೊಬೈಲ್‌ಗಳನ್ನು ಇಲ್ಲಿನ ವಿದ್ಯಾನಗರ ಪೊಲೀಸರು ಜಪ್ತಿ ಮಾಡಿದ್ದಾರೆ.

ಕನ್ನಡಪ್ರಭ ವಾರ್ತೆ ದಾವಣಗೆರೆ

ಇಂಟರ್ ಲಾಕ್ ಮುರಿದು ಮನೆಯಲ್ಲಿದ್ದ ಚಿನ್ನಾಭರಣ, ಬೆಳ್ಳಿ ವಸ್ತು, ನಗದು ಕಳವು ಮಾಡಿದ್ದ ರಾಜಸ್ಥಾನ ಮೂಲದ ಮೂವರು ಅಂತಾರಾಜ್ಯ ಮನೆಗಳ್ಳರನ್ನು ಬಂಧಿಸಿ, 15.37 ಲಕ್ಷ ರು.ಗೂ ಅಧಿಕ ಮೌಲ್ಯದ ಸ್ವತ್ತು, ಕೃತ್ಯಕ್ಕೆ ಬಳಸಿದ್ದ ವಸ್ತುಗಳು, ಮೊಬೈಲ್‌ಗಳನ್ನು ಇಲ್ಲಿನ ವಿದ್ಯಾನಗರ ಪೊಲೀಸರು ಜಪ್ತಿ ಮಾಡಿದ್ದಾರೆ.

ರಾಜಸ್ಥಾನದ ಬಿಯಾವರ್ ಜಿಲ್ಲೆ ರಾಯಪೂರ್ ತಾ.ಕಾಣೆಚಾ ಗ್ರಾಮದ ಚಾಲಕ ಶ್ಯಾಮ್ ಸಿಂಗ್ (28), ಬಿಯಾವರ್ ತಾಲೂಕು ಕಾಬ್ರಾ ಗ್ರಾಮದ ಬಟ್ಟೆ ಅಂಗಡಿ ವ್ಯಾಪಾರಿ ಕವರ್ ಪಾಲ್ (24) ಹಾಗೂ ಗೋಹಾನಾ ಗ್ರಾಮದ ವಾಸಿ, ಚಾಲಕ ಪ್ರತಾಪ ಸಿಂಹ (33) ಬಂಧಿತರು.

ಎಸ್ಪಿ ಉಮಾ ಪ್ರಶಾಂತ, ಎಎಸ್ಪಿ ಪರಮೇಶ್ವರ ಹೆಗಡೆ, ಡಿವೈಎಸ್ಪಿ ಬಿ.ಶರಣ ಬಸವೇಶ್ವರ ಮಾರ್ಗದರ್ಶನದಲ್ಲಿ ವಿದ್ಯಾನಗರ ಠಾಣೆ ಇನ್ಸಪೆಕ್ಟರ್ ವೈ.ಎಸ್.ಶಿಲ್ಪ ನೇತೃತ್ವದಲ್ಲಿ ಅಧಿಕಾರಿ, ತಂಡವನ್ನು ಮನೆಗಳ್ಳರ ಬಂಧನಕ್ಕೆ ರಚಿಸಲಾಗಿತ್ತು.

ಗುಜರಾತ್‌ನ ಸೂರತ್‌ ನಗರ ಸಾರೋಲಿ ಪೊಲೀಸ್ ಠಾಣೆ ಪೊಲೀಸರ ಸಹಕಾರದಿಂದ ಸೆ.4ರಂದು ಮೂವರೂ ಆರೋಪಿಗಳಾದ ರಾಜಸ್ಥಾನ ಮೂಲಕ ಶ್ಯಾಮ್‌ ಸಿಂಗ್‌, ಕವರ್ ಪಾಲ್‌ ಹಾಗೂ ಪ್ರತಾಪ್‌ ಸಿಂಗ್‌ರನ್ನು ಪತ್ತೆ ಮಾಡಿ, ಬಂಧಿಸಲಾಯಿತು. ಬಂಧಿತರಿಂದ 12,97,200 ರು. ಮೌಲ್ಯದ 162.150 ಗ್ರಾಂ ತೂಕದ ಚಿನ್ನದ ಆಭರಣ, 1.08 ಲಕ್ಷ ರು. ಮೌಲ್ಯದ 1350 ಗ್ರಾಂ ಬೆಳ್ಳಿ ಸಾಮಾನು 95,600 ರು. ಮೌಲ್ಯದ್ದು, 34 ಸಾವಿರ ರು. ಮೌಲ್ಯದ 6 ಮೊಬೈಲ್ ಫೋನ್, 3 ಸಾವಿರ ಮೌಲ್ಯ 2 ವಾಚ್‌ಗಳನ್ನು ಜಪ್ತು ಮಾಡಿದ್ದಾರೆ. ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಬಂಧಿತ ರಾಜಸ್ಥಾನ ಮೂಲಕ ಆರೋಪಿಗಳು ದಾವಣಗೆರೆ ಜಿಲ್ಲೆಯ ಹರಿಹರ ನಗರ ಠಾಣೆ, ಹಳಿಯಾಳ, ಧಾರವಾಡ, ತುಮಕೂರ ಬಡಾವಣೆ, ತಿಪಟೂರು, ಮಧ್ಯಪ್ರದೇಶದ ಭೂಪಾಜ್‌ ಸೇರಿದಂತೆ ವಿವಿಧೆಡೆ 6 ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿರುವುದು ಬೆಳಕಿಗೆ ಬಂದಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ. ಪಿಎಸ್ಐ ರೂಪಾ ತೆಂಬದರ್‌, ಸಿಬ್ಬಂದಿಯಾದ ಶಂಕರ ಆರ್.ಜಾಧವ್, ಎಂ.ಆನಂದ, ಭೋಜಪ್ಪ, ಗೋಪಿನಾಥ ನಾಯ್ಕ, ಮಲ್ಲಿಕಾರ್ಜುನ ಚಂದ್ರಪ್ಪ, ಬಸವರಾಜ, ಸೀಮಾರನ್ನು ಒಳಗೊಂಡ ತಂಡ ಆರೋಪಿಗಳನ್ನು ಬಂಧಿಸಿದೆ.

ಏನಿದು ಪ್ರಕರಣ?

ದಾವಣಗೆರೆ ವಿನಾಯಕ ಬಡಾವಣೆ ವಿಎಂಜಿ ಲೇಔಟ್‌ 9ನೇ ಕ್ರಾಸ್ ವಾಸಿ ರಂಗನಾಧ ಆ.30ರಂದು ಮಧ್ಯಾಹ್ನ 2 ಗಂಟೆ ವೇಳೆ ಮನೆಗೆ ಬೀಗ ಹಾಕಿಕೊಂಡು ಬೆಂಗಳೂರಿಗೆ ಹೋಗಿದ್ದರು. ಆ.31ರ ರಾತ್ರಿ 9ರ ವೇಳೆ ರಂಗನಾಥ ಮನೆಗೆ ವಾಪಸ್ಸಾಗಿ ನೋಡಿದಾಗ ಮನೆಯ ಬಾಗಿಲು ಇಂಟರ್ ಲಾಕ್ ಮುರಿದಿದ್ದು, ಗಾಡ್ರೆಜ್ ಬೀರಿನಲ್ಲಿದ್ದ ಆಭರಣಗಳು, ಬೆಳ್ಳಿ ಸಾಮಾನು, ನಗದನ್ನು ಕಳವು ಮಾಡಿರುವುದು ಗಮನಕ್ಕೆ ಬಂದಿದೆ. ಈ ಬಗ್ಗೆ ರಂಗನಾಥ ವಿದ್ಯಾನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.