ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ
ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಪಲ್ಟಿಯಾದ ಪರಿಣಾಮ ನಗರದ ಮೂವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ತಾಲೂಕಿನ ತಿಡಗುಂದಿ ಬಳಿಯ ವಿಜಯಪುರ-ಸೋಲಾಪೂರ ರಾಷ್ಟ್ರೀಯ ಹೆದ್ದಾರಿ-52ರಲ್ಲಿ ಶುಕ್ರವಾರ ಬೆಳಗಿನ ಜಾವ 4.30ರ ಸುಮಾರಿಗೆ ಸಂಭವಿಸಿದೆ.ನಗರದ ಸಿದ್ಧೇಶ್ವರ ಬ್ಯಾಂಕ್ ನಿರ್ದೇಶಕ ಹಾಗೂ ವಕೀಲ ವಿಜಯಕುಮಾರ ಔರಂಗಾಬಾದ, ನಗರದ ದರಬಾರ ಗಲ್ಲಿಯ ಅಭಿಷೇಕ ಸಾವಂತ (33), ಮಠಪತಿ ಗಲ್ಲಿಯ ವಿಜಯಕುಮಾರ ಔರಂಗಬಾದ (42) ಹಾಗೂ ಕಾರು ಚಾಲಕ ತೇಕಡೆ ಗಲ್ಲಿಯ ಮಲ್ಲಿಕಾರ್ಜುನ ಬಿರಾದಾರ(35) ಮೃತಪಟ್ಟವರು. ನೆರೆಯ ಮಹಾರಾಷ್ಟ್ರದ ಸೋಲಾಪುರಕ್ಕೆ ಹೋಗಿ ವಾಪಸ್ ಬರುವಾಗ ಈ ಅವಘಡ ಸಂಭವಿಸಿದೆ. ಕಾರಿನಲ್ಲಿದ್ದ ವಿಶಾಲ ಪೋಳ ಹಾಗೂ ರಾಜು ಕಾಂಬಳೆ ಎಂಬುವರಿಗೂ ಗಾಯಗಳಾಗಿದ್ದು, ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಘಟನೆ ಹೇಗಾಯಿತು?:ಕೆಲಸದ ನಿಮಿತ್ತವಾಗಿ ಸಿದ್ಧೇಶ್ವರ ಬ್ಯಾಂಕ್ ನಿರ್ದೇಶಕ ವಿಜಯಕುಮಾರ ಔರಂಗಾಬಾದ ಸೇರಿದಂತೆ ಐವರು ಸೇರಿ ಗುರುವಾರ ಸೋಲಾಪುರಕ್ಕೆ ಕಾರಿನಲ್ಲಿ ತೆರಳಿದ್ದರು. ವಾಪಸ್ ಶುಕ್ರವಾರ ನಸುಕಿನಲ್ಲಿ ಬರುವಾಗ ತಿಡಗುಂದಿ ಬಳಿ ದುರ್ಘಟನೆ ಸಂಭವಿಸಿದೆ. ವಿಷಯ ತಿಳಿದು ತಕ್ಷಣ ಸ್ಥಳಕ್ಕೆ ಧಾವಿಸಿದ ವಿಜಯಪುರ ಗ್ರಾಮೀಣ ಠಾಣೆ ಪೊಲೀಸರು ಇಬ್ಬರು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಜೊತೆಗೆ ಮೂವರು ಮೃತದೇಹಗಳನ್ನು ಜಿಲ್ಲಾಸ್ಪತ್ರೆಗೆ ರವಾನಿಸಿ, ಮರಣೋತ್ತರ ಪರೀಕ್ಷೆಗೆ ಅವಕಾಶ ಕಲ್ಪಿಸಿದರು. ಈ ವೇಳೆ ಮೃತರ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು.
ಚಾಲಕನ ನಿರ್ಲಕ್ಷ್ಯ ಕಾರಣ?:ಕಾರು ಚಾಲಕ ಮಲ್ಲಿಕಾರ್ಜುನ ಬಿರಾದಾರ ಅತಿ ವೇಗದಿಂದ ಕಾರನ್ನು ಚಲಾಯಿಸುತ್ತಿದ್ದರು ಎನ್ನಲಾಗಿದೆ. ಈ ವೇಳೆ ನಿಯಂತ್ರಣ ತಪ್ಪಿ ಪಲ್ಟಿಯಾಗಿ ಅಪಘಾತ ಸಂಭವಿಸಿದೆ ಎಂದು ಕಾರಿನಲ್ಲಿದ್ದ ಗಾಯಾಳು ವಿಶಾಲ ಪೋಳ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.