ಕನ್ನಡಪ್ರಭ ವಾರ್ತೆ ರಾಯಬಾಗ (ಜಿ.ಬೆಳಗಾವಿ)
ಬೈಕ್‌ಗೆ ಆಟೋ ಡಿಕ್ಕಿ ಹೊಡೆದ ಪರಿಣಾಮ ಒಂದೇ ಕುಟುಂಬದ ಮೂವರು ಸ್ಥಳದಲ್ಲಿಯೇ ಅಸುನೀಗಿ, ಮತ್ತೊಬ್ಬ ತೀವ್ರ ಗಾಯಗೊಂಡಿರುವ ಘಟನೆ ಬೆಳಗಾವಿ ಜಿಲ್ಲೆಯ ರಾಯಬಾಗ ರೈಲ್ವೆ ನಿಲ್ದಾಣದ ಬಳಿ ಸೋಮವಾರ ನಡೆದಿದೆ.ರಾಯಬಾಗ ತಾಲೂಕಿನ ಬೊಮ್ಮನಾಳ ಗ್ರಾಮದ ಮಹಾಂತೇಶ ಅಶೋಕ ಮಾನೆ (32) ಈತನ ಪತ್ನಿ ಸಾಕ್ಷಿ ಮಾನೆ (29) ಪುತ್ರ ಸಮರ್ಥ ಮಾನೆ (9) ಅಸುನೀಗಿದವರು. ಇನ್ನೊಬ್ಬ ಪುತ್ರ ಚೇತನ ಮಾನೆ (5) ತೀವ್ರ ಗಾಯಗೊಂಡಿದ್ದು, ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಸೋಮವಾರ ಪಟ್ಟಣದ ಸಂತೆಗೆ ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದಾಗ ರಾಯಬಾಗ ಪಟ್ಟಣದಿಂದ ಹಾರೂಗೇರಿಗೆ
ಹೊರಟಿದ್ದಾಗ ಎದುರು ಬಂದ ಆಟೋ ಡಿಕ್ಕಿ ಹೊಡೆದಿದೆ. ಪರಿಣಾಮ ದ್ವಿಚಕ್ರ ವಾಹನದಲ್ಲಿದ್ದ ಮೂವರು ಸ್ಥಳದಲ್ಲೇ ಅಸುನೀಗಿದರೆ, ಮತ್ತೊಬ್ಬ ಬಾಲಕ ತೀವ್ರ ಗಾಯಗೊಂಡಿದ್ದಾನೆ. ಈಗಾಗಲೇ ಪೊಲೀಸರು ಆಟೋ ಚಾಲಕನನ್ನು ಬಂಧಿಸಿದ್ದಾರೆ. ರಾಯಬಾಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.