ನಾಪತ್ತೆಯಾಗಿದ್ದ ಮೂರು ಮಕ್ಕಳು ಶವವಾಗಿ ಪತ್ತೆ

| Published : May 14 2024, 01:06 AM IST

ನಾಪತ್ತೆಯಾಗಿದ್ದ ಮೂರು ಮಕ್ಕಳು ಶವವಾಗಿ ಪತ್ತೆ
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ಆಟವಾಡಲೆಂದು ನಗರದ ಗಚ್ಚಿನಕಟ್ಟಿ ಕಾಲೋನಿಯಿಂದ ಭಾನುವಾರ ಕಾಣೆಯಾಗಿದ್ದ ಮೂವರು ಮಕ್ಕಳು ಸೋಮವಾರ ಇಂಡಿ ರಸ್ತೆಯಲ್ಲಿರುವ ಚರಂಡಿ ನೀರು ಶುದ್ಧೀಕರಣ ಘಟಕದಲ್ಲಿ ಶವವಾಗಿ ಪತ್ತೆಯಾಗಿವೆ.ನಗರದ ಗಚ್ಚಿನಕಟ್ಟಿ ಕಾಲೋನಿ ನಿವಾಸಿ ಮಿಹಿರ್ ಶ್ರೀಕಾಂತ ಜಾನಗೌಳಿ (7), ಗದಗ ನಿವಾಸಿಗಳಾದ ವಿಜಯ ಅನಿಲ ದಹಿಂಡೆ (8), ಅನುಷ್ಕಾ ಅನಿಲ ದಹಿಂಡೆ (10) ಮೃತಪಟ್ಟ ಮಕ್ಕಳು. ಭಾನುವಾರ ಸಂಜೆ ಕಾಲೋನಿಯಲ್ಲಿ ಒಂಟೆಗಳು ಬಂದಿದ್ದಾಗ ಅದರ ಹಿಂದೆ ಈ ಮೂವರು ಮಕ್ಕಳು ಆಟವಾಡುತ್ತ ಹೋಗಿದ್ದರು

ಕನ್ನಡಪ್ರಭ ವಾರ್ತೆ ವಿಜಯಪುರ

ಆಟವಾಡಲೆಂದು ನಗರದ ಗಚ್ಚಿನಕಟ್ಟಿ ಕಾಲೋನಿಯಿಂದ ಭಾನುವಾರ ಕಾಣೆಯಾಗಿದ್ದ ಮೂವರು ಮಕ್ಕಳು ಸೋಮವಾರ ಇಂಡಿ ರಸ್ತೆಯಲ್ಲಿರುವ ಚರಂಡಿ ನೀರು ಶುದ್ಧೀಕರಣ ಘಟಕದಲ್ಲಿ ಶವವಾಗಿ ಪತ್ತೆಯಾಗಿವೆ.ನಗರದ ಗಚ್ಚಿನಕಟ್ಟಿ ಕಾಲೋನಿ ನಿವಾಸಿ ಮಿಹಿರ್ ಶ್ರೀಕಾಂತ ಜಾನಗೌಳಿ (7), ಗದಗ ನಿವಾಸಿಗಳಾದ ವಿಜಯ ಅನಿಲ ದಹಿಂಡೆ (8), ಅನುಷ್ಕಾ ಅನಿಲ ದಹಿಂಡೆ (10) ಮೃತಪಟ್ಟ ಮಕ್ಕಳು. ಭಾನುವಾರ ಸಂಜೆ ಕಾಲೋನಿಯಲ್ಲಿ ಒಂಟೆಗಳು ಬಂದಿದ್ದಾಗ ಅದರ ಹಿಂದೆ ಈ ಮೂವರು ಮಕ್ಕಳು ಆಟವಾಡುತ್ತ ಹೋಗಿದ್ದರು.

ಪಾಲಕರು ಹಾಗೂ ಸಂಬಂಧಿಕರು ರಾತ್ರಿಯಿಡಿ ಹುಡುಕಿದರೂ ಮಕ್ಕಳು ಮಾತ್ರ ಸಿಕ್ಕಿರಲಿಲ್ಲ. ಮಾರನೇ ದಿನ ಚರಂಡಿ ನೀರು ಶುದ್ಧೀಕರಣ ಘಟಕದ ಕೊಳಚೆ ನೀರಿನಲ್ಲಿ ಮೃತದೇಹಗಳು ತೇಲುತ್ತಿದ್ದಾಗ ವಿಷಯ ಗೊತ್ತಾಗಿದೆ. ಮೃತಪಟ್ಟ ಮಕ್ಕಳ ಪಾಲಕರ ಆಕ್ರಂದನ ‌ಘಟನಾ ಸ್ಥಳದಲ್ಲಿ ಮುಗಿಲು ಮುಟ್ಟಿತ್ತು. ಸ್ಥಳಕ್ಕೆ ಎಪಿಎಂಸಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಘಟನೆ ಕುರಿತು ಎಪಿಎಂಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗಚ್ಚಿನಕಟ್ಟಿ ಕಾಲೋನಿ ನಿವಾಸಿ ಶ್ರೀಕಾಂತ್‌ ಜಾನಗೌಳಿ ಪುತ್ರ ಮಿಹೀರ್‌ ಹಾಗೂ ಗದಗ ನಿವಾಸಿಯಾಗಿದ್ದ ಅನಿಲ ದಹಿಂಡೆ ಸಂಬಂಧಿಕರ ಮನೆಗೆ ಬಂದಿದ್ದರು. ಇವರ ಮಕ್ಕಳಾದ ವಿಜಯ ಮತ್ತು ಅನುಷ್ಕಾ ಚರಂಡಿ ನೀರು ಶುದ್ಧೀಕರಣ ಘಟಕದಲ್ಲಿ ಮೃತಪಟ್ಟಿದ್ದಾರೆ.

ಒಂಟೆಗಳ ಹಿಂದೆ ಹೋಗಿ ಶವವಾಗಿ ಸಿಕ್ಕರು!:

ಅನುಷ್ಕಾ ಹಾಗೂ ವಿಜಯ ಶಾಲೆಗೆ ರಜೆ ಹಿನ್ನೆಲೆ ನಗರದ ಗಚ್ಚಿನಕಟ್ಟಿ ಕಾಲೋನಿಯ ಅಜ್ಜಿಯ ಮನೆಗೆ ಬಂದಿದ್ದರು. ಭಾನುವಾರ ಮನೆ ಬಳಿ ಒಂಟೆಗಳು ಬಂದಿದ್ದವು. ಮೂವರು ಮಕ್ಕಳು ಒಂಟೆಗಳ ಜೊತೆ ಓಡಾಡಿ ಖುಷಿ ಪಟ್ಟಿದ್ದರು. ಬಳಿಕ ಮೂವರು ನಗರ ಹೊರ ವಲಯದ ಇಂಡಿ ರಸ್ತೆಗೆ ಬಂದು ಚರಂಡಿ ನೀರು ಸಂಸ್ಕರಣಾ ಘಟಕದಲ್ಲಿ ತುಂಬಿದ್ದ ನೀರು ನೋಡಲೆಂದು ಬಂದವರು ಆಯತಪ್ಪಿ ಘಟಕದಲ್ಲಿ ಬಿದ್ದಿದ್ದಾರೆ ಎನ್ನಲಾಗಿದೆ.

ಸೋಷಿಯಲ್‌ ಮೀಡಿಯಾ ಮೊರೆ:

ಮಕ್ಕಳು ಮನೆಗೆ ವಾಪಸ್‌ ಬಾರದಿದ್ದಾಗ ಗಾಬರಿಯಾದ ಕುಟುಂಬಸ್ಥರು, ಮಕ್ಕಳ ಫೋಟೊ ಸಮೇತ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ ವೈರಲ್‌ ಮಾಡಿದ್ದರು. ಮಕ್ಕಳು ಕಣ್ಣಿಗೆ ಬಿದ್ದರೆ ಮಾಹಿತಿ ಕೊಡುವಂತೆ ಮನವಿ ಮಾಡಿದ್ದರು. ಅಲ್ಲದೆ ಮಕ್ಕಳು ಯಾವ ಕಡೆಗೆ ಹೋಗಿದ್ದಾರೆ ಎನ್ನುವ ಬಗ್ಗೆ ತಾವೇ ಓಡಾಡಿ ಸಿಸಿಟಿವಿ ದೃಶ್ಯಗಳನ್ನು ಸಂಗ್ರಹಿಸಿದ್ದರು. ಎಷ್ಟೇ ಹುಡುಕಿದರೂ ಮಕ್ಕಳ ಮಾತ್ರ ಸಿಕ್ಕಿರಲಿಲ್ಲ. ಸೋಮವಾರ ಮಧ್ಯಾಹ್ನ ಮಕ್ಕಳ ಶವಗಳು ಚರಂಡಿ ನೀರು ಸಂಸ್ಕರಣಾ ಘಟಕದಲ್ಲಿ ತೇಲುತ್ತಿವೆ ಎನ್ನುವ ಮಾಹಿತಿ ಕೇಳಿ ಪಾಲಕರು ಆಘಾತಕ್ಕೆ ಒಳಗಾಗಿದ್ದರು.

ಪಾಲಿಕೆ ಯಡವಟ್ಟು?:

ಘಟಕದಲ್ಲಿ ಮಕ್ಕಳ ಶವಗಳು ಪತ್ತೆಯಾಗುತ್ತಿದ್ದಂತೆ ಕುಟುಂಬಸ್ಥರು ಸಂಸ್ಕರಣಾ ಘಟಕದ ಕಡೆಗೆ ಬಂದು, ತಮ್ಮ ಮಕ್ಕಳ ಸಾವಿಗೆ ಮಹಾನಗರ ಪಾಲಿಕೆಯೇ ಕಾರಣ ಎಂದು ಆರೋಪಿಸಿ ಆಕ್ರೋಶ ವ್ಯಕ್ತಪಡಿಸಿದರು. ಮಕ್ಕಳ ಶವಗಳನ್ನು ಕೊಂಡೊಯ್ಯುತ್ತಿದ್ದ ಆ್ಯಂಬುಲೆನ್ಸ್‌ ವಾಹನ ತಡೆದು ಆಕ್ರೋಶ ಹೊರಹಾಕಿದರು. ಈ ಪೈಕಿ ಮಿಹೀರ್‌ ಶವವನ್ನು ವಾಹನದಿಂದ ಕೆಳಗಿಳಿಸಿ ರಸ್ತೆ ಮೇಲಿಟ್ಟು ಪ್ರತಿಭಟನೆ ನಡೆಸಿದರು. ಚರಂಡಿ ಸಂಸ್ಕರಣಾ ಘಟಕದ ಸುತ್ತ ಯಾವುದೇ ಬೇಲಿ, ಕಾಂಪೌಂಡ್‌ ಇಲ್ಲ, ಭದ್ರತೆಯೂ ಇಲ್ಲ. ಇದರಿಂದ ತಮ್ಮ ಮಕ್ಕಳು ಒಳಗೆ ಹೋಗಿ ಘಟಕದಲ್ಲಿ ಬಿದ್ದು ಸಾವನ್ನಪ್ಪಿವೆ ಎಂದು ಪಾಲಿಕೆ ವಿರುದ್ಧ ಆರೋಪಿಸಿದರು.

ಅಪರ ಡಿಸಿ ಮನವೊಲಿಕೆ:

ಸ್ಥಳಕ್ಕೆ ಜಿಲ್ಲಾಧಿಕಾರಿಗಳು ಭೇಟಿ ನೀಡಬೇಕು. ಮಕ್ಕಳ ಸಾವಿಗೆ ನ್ಯಾಯ ನೀಡಬೇಕು ಎಂದು ಪೋಷಕರು, ಸಂಬಂಧಿಕರು ಪ್ರತಿಭಟನೆ ತೀವ್ರಗೊಳಿಸಿದ್ದರು. ಪೊಲೀಸರು ಪ್ರತಿಭಟನಾಕಾರರ ಮನವೊಲಿಕೆಗೆ ಪ್ರಯತ್ನಿಸಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಬಳಿಕ ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ ಸ್ಥಳಕ್ಕೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಕಾನೂನು ಪ್ರಕಾರ ಮಕ್ಕಳ ಸಾವಿಗೆ ನ್ಯಾಯ ಕೊಡಿಸುವ ಭರವಸೆ ನೀಡಿದ್ದು, ಘಟಕದ ಸುತ್ತ ಬೇಲಿ, ಕಾಂಪೌಂಡ್‌ ಹಾಗೂ ಸೂಕ್ತ ಭದ್ರತೆ ನೇಮಿಸದೆ ಲೋಪವೆಸಗಿದ ಪಾಲಿಕೆ ಅಧಿಕಾರಿಗಳ ವಿರುದ್ಧವೂ ಕ್ರಮ ಜರುಗಿಸುವ ಭರವಸೆ ನೀಡಿದರು. ಬಳಿಕ ಪೋಷಕರು ಪ್ರತಿಭಟನೆ ಹಿಂದಕ್ಕೆ ಪಡೆದು ಶವವನ್ನು ಪೊಲೀಸರ ಸುಪರ್ದಿಗೆ ನೀಡಿದರು. ನಂತರ ಶವಗಳನ್ನು ಮರಣೋತ್ತರ ಪರೀಕ್ಷೆಗೆ ಒಯ್ಯಲಾಯಿತು.

-------------

ಕೋಟ್‌

ನಗರದಲ್ಲಿ ನಾಪತ್ತೆಯಾಗಿದ್ದ ಮೂವರು ಮಕ್ಕಳು ನೀರು ಶುದ್ಧೀಕರಣ ಘಟಕದಲ್ಲಿ ಶವವಾಗಿ ಪತ್ತೆಯಾಗಿರುವ ವಿಷಯ ಮಾಧ್ಯಮಗಳಿಂದ ತಿಳಿದು ಬಂದಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಸ್ವಯಂ ಪ್ರೇರಿತ ಪ್ರಕರಣ ದಾಖಲು ಮಾಡಿಕೊಂಡಿದೆ. ವಿಜಯಪುರ ಜಿಲ್ಲೆಯ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳಿಗೆ ದೂರವಾಣಿ ಮೂಲಕ ಮಾತನಾಡಿದ್ದು, ಘಟನೆಯ ಕುರಿತು ವರದಿ ನೀಡಲು ಸೂಚನೆ ನೀಡಲಾಗಿದೆ.

- ಶಶಿಧರ ಕೋಸಂಬೆ, ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ