ಒಂದೇ ಕುಟುಂಬದ ಮೂವರು ನಿಗೂಢ ರೀತಿಯಲ್ಲಿ ಸಾವು

| Published : May 29 2024, 12:57 AM IST

ಸಾರಾಂಶ

ಇಲ್ಲಿಗೆ ಸಮೀಪದ ಹೊಸಲಿಂಗಾಪುರ ಗ್ರಾಮದ ಚರ್ಚ್‌ ಏರಿಯಾ ಹಿಂಭಾಗದಲ್ಲಿ ಒಂದೇ ಕುಟುಂಬದ ಮೂವರು ಸದಸ್ಯರು ನಿಗೂಢ ರೀತಿಯಲ್ಲಿ ಮೃತಪಟ್ಟ ಘಟನೆ ನಡೆದಿದೆ.

ಕನ್ನಡ ಪ್ರಭ ವಾರ್ತೆ ಮುನಿರಾಬಾದ

ಇಲ್ಲಿಗೆ ಸಮೀಪದ ಹೊಸಲಿಂಗಾಪುರ ಗ್ರಾಮದ ಚರ್ಚ್‌ ಏರಿಯಾ ಹಿಂಭಾಗದಲ್ಲಿ ಒಂದೇ ಕುಟುಂಬದ ಮೂವರು ಸದಸ್ಯರು ನಿಗೂಢ ರೀತಿಯಲ್ಲಿ ಮೃತಪಟ್ಟ ಘಟನೆ ನಡೆದಿದೆ.

ರಾಜೇಶ್ವರಿ (50), ಅವರ ಪುತ್ರಿ ವಸಂತ (28), ವಸಂತಳ ಪುತ್ರ ಸಾಯಿಧರ್ಮ ತೇಜ (5) ಮೃತಪಟ್ಟವರು.

ಘಟನೆಯ ವಿವರ:ರಾಜೇಶ್ವರಿ ಜೋಗಮ್ಮಳಾಗಿದ್ದು, ಅವರ ಪುತ್ರಿ ವಸಂತ ಲಿಂಗಾಪುರ ಗ್ರಾಮದ ಗೊಂಬೆ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದರು. ಸೋಮವಾರ ಸಂಜೆ ಕುಟುಂಬದ ಮೂವರು ಸದಸ್ಯರು ಹೊರಗಡೆ ಹೋಗಿ ಸುಮಾರು ರಾತ್ರಿ 7.30 ಗಂಟೆಗೆ ಮನೆಗೆ ಮರಳಿದರು. ರಾತ್ರಿ ವೇಳೆ ಆಂಧ್ರದಲ್ಲಿರುವ ವಸಂತರ ಅಕ್ಕ ಜಯಶ್ರಿ ವಸಂತಾಗೆ ದೂರವಾಣಿ ಕರೆ ಮಾಡಿದಾಗ ಅದು ಸ್ವಿಚ್ ಅಫ್ ಅಂತಾ ಬರುತ್ತಿತ್ತು. ಇದರಿಂದ ಗಲಿಬಿಲಿಗೊಂಡ ಜಯಶ್ರೀ ತನ್ನ ದೂರದ ಸಂಬಂಧಿ ಕುಮಾರ ಎಂಬವರಿಗೆ ಕರೆ ಮಾಡಿ ತಂಗಿಯ ಮೊಬೆಲ್ ಸ್ವಿಚ್‌ ಆಫ್ ಅಂತಾ ಬರುತಾ ಇದೆ, ನೀನು ಮನೆ ಹತ್ತಿರ ಹೋಗಿ ನೋಡು ಎಂದು ತಿಳಿಸಿದರು. ಆದರೆ ಆತ ತೆರಳಲಿಲ್ಲ ಎಂದು ತಿಳಿದುಬಂದಿದೆ.

ಬೆಳಗ್ಗೆ ಗೊಂಬೆ ಕಾರ್ಖಾನೆಯ ಸಿಬ್ಬಂದಿ ವಸಂತಳನ್ನು ಕೆಲಸಕ್ಕೆ ಕರೆಯಲೆಂದು ಮನೆಗೆ ಬಂದಾಗ ಮನೆಯ ಕಾಂಪೌಂಡ್‌ ಗೇಟು ಹಾಗೂ ಮನೆಯ ಬಾಗಿಲು ಸಹ ತೆರೆದಿತ್ತು. ಒಳಗೆ ನೋಡಿದಾಗ ವಸಂತ ಅಡುಗೆ ಮನೆಯಲ್ಲಿ ಶವವಾಗಿ ಬಿದ್ದಿದ್ದಳು. ತಾಯಿ ರಾಜೇಶ್ವರಿ ಹಾಗೂ ಮಗ ಸಾಯಿಧರ್ಮ ತೇಜ ಬೆಡ್ ರೂಂನಲ್ಲಿ ನಿಗೂಢ ರೀತಿಯಲ್ಲಿ ಸಾವನ್ನಪ್ಪಿದ್ದರು.

ಸಾವಿನ ಸುತ್ತ ಅನೇಕ ಅನುಮಾನ:

ವಸಂತ ಆಂಧ್ರದ ಅನಂತಪುರ ಜಿಲ್ಲೆಯ ನಂದ್ಯಾಲ ನಗರದಲ್ಲಿ ತನ್ನ ಗಂಡನೊಂದಿಗೆ ವಾಸವಾಗಿದ್ದು, 5 ವರ್ಷಗಳ ಹಿಂದೆ ಪತಿಯಿಂದ ಬೇರ್ಪಟ್ಟು ಹೊಸಲಿಂಗಾಪುರದಲ್ಲಿರುವ ಅವಳ ತಾಯಿಯೊಂದಿಗೆ ವಾಸವಾಗಿದ್ದಳು. ತಾನು ಕೆಲಸ ಮಾಡುವ ಕಾರ್ಖಾನೆಯಲ್ಲಿ ಆರೀಫ್ ಎಂಬಾತನೊಂದಿಗೆ ವಸಂತಳಿಗೆ ಪ್ರೇಮವಾಯಿತು. 7 ತಿಂಗಳ ಹಿಂದೆ ಇಬ್ಬರೂ ವಿವಾಹವಾಗಿದ್ದರು. ಒಂದು ವಾರದ ಹಿಂದೆ ಆರೀಫ ಕೆಲಸ ಹುಡುಕಿಕೊಂಡು ಮುಂಬೈಗೆ ತೆರಳಿದ್ದ. ಆರೀಫನಿಗೂ ಮದುವೆಯಾಗಿ ಇಬ್ಬರು ಮಕ್ಕಳಿದ್ದಾರೆ. ಆರೀಫನದು ವಸಂತಳೊಂದಿಗೆ ಎರಡನೇ ಮದುವೆಯಾಗಿದೆ.

ವಸಂತ ಹಾಗೂ ಅವರ ತಾಯಿ ರಾಜೇಶ್ವರಿ ಬಳಸುತ್ತಿದ್ದ ಎರಡು ಮೊಬೈಲ್‌ಗಳು ಮಾಯವಾಗಿವೆ. ಮೂವರ ಮೈಮೇಲೆ ಯಾವುದೇ ಗಾಯದ ಗುರುತು ಸಹ ಇಲ್ಲ. ಒಬ್ಬರ ಮೂಗಿನಲ್ಲಿ ಮಾತ್ರ ಸ್ವಲ್ಪ ರಕ್ತ ಇತ್ತು ಎಂದು ಹೇಳಲಾಗಿದೆ. ಇದು ಹಲವು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.

ಘಟನಾ ಸ್ಥಳಕ್ಕೆ ಕೊಪ್ಪಳ ಎಸ್ಪಿ ಭೇಟಿ:

ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಯಶೋದಾ ವಂಟಗೋಡಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಶ್ವಾನ ದಳದ ಮೂಲಕ ಪರಿಶೀಲನೆ ನಡೆಸಲಾಯಿತು. ಸುದ್ದಿಗಾರರೊಂದಿಗೆ ಎಸ್ಪಿ, ನಾವು ಈ ಪ್ರಕರಣವನ್ನು ವೈಜ್ಞಾನಿಕ ರೀತಿಯಲ್ಲಿ ಪರಿಶೀಲನೆ ಮಾಡುತ್ತಿದ್ದೇವೆ. ಇದು ಆತ್ಮಹತ್ಯೆಯೋ ಅಥವಾ ನಿಗೂಢ ಕೊಲೆಯೋ ಎಂಬ ವಿಷಯ ತನಿಖೆಯಿಂದ ಹೊರಬರಲಿದೆ ಎಂದು ತಿಳಿಸಿದರು.

ಎಂಎಲ್ಸಿ ಹೇಮಲತಾ ನಾಯಕ, ಕೊಪ್ಪಳ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ರಾಜಶೇಖರ ಹಿಟ್ನಾಳ ಭೇಟಿ ಪರಿಶೀಲಿಸಿದರು. ಈ ಸಂದರ್ಭದಲ್ಲಿ ಸಿಪಿಐ ಸುರೇಶ, ಮುನಿರಾಬಾದ ಠಾಣೆಯ ಇನ್‌ಸ್ಪೆಕ್ಟರ್ ಸುನೀಲ್ ಇದ್ದರು.