ಸಾರಾಂಶ
ಶಿವಮೊಗ್ಗ ನಗರದ ಕ್ಲಾರ್ಕ್ ಪೇಟೆಯಲ್ಲಿ ಒಂದೇ ಕುಟುಂಬದ ಮೂವರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ ಸೋಮವಾರ ನಡೆದಿದೆ.
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಒಂದೇ ಕುಟುಂಬದ ಮೂವರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ ಶಿವಮೊಗ್ಗ ನಗರದ ಕ್ಲಾರ್ಕ್ ಪೇಟೆಯಲ್ಲಿ ಸೋಮವಾರ ನಡೆದಿದ್ದು, ಮಂಗಳವಾರ ಬೆಳಕಿಗೆ ಬಂದಿದೆ.ಭುವನೇಶ್ವರಿ, ಮಾರುತಿ, ಹಾಗೂ ದರ್ಶನ್ ಆತ್ಮಹತ್ಯೆಗೆ ಶರಣಾದ ವ್ಯಕ್ತಿಗಳು ಎಂದು ಗುರುತಿಸಲಾಗಿದೆ. ಶಿವಮೊಗ್ಗದ ಒಟಿ ರಸ್ತೆಯ ವಿಜಯ ಗ್ಯಾರೇಜ್ ಬಳಿ ಮನೆಯಲ್ಲಿ ಘಟನೆ ನಡೆದಿದೆ. ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಅವರ ಸಂಬಂಧಿಕರು ಕರೆ ಮಾಡಿದರೂ ಸ್ವೀಕರಿಸದಿದ್ದಾಗ ಬಂದು ಪರಿಶೀಲನೆ ಮಾಡಿದ್ದಾರೆ. ಆಗ ಎಲ್ಲರೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ.
ಕೂಡಲೇ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ದೊಡ್ಡಪೇಟೆ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಕೌಟುಂಬಿಕ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆಯಿದೆ. ಭುವನೇಶ್ವರಿ ಜೊತೆಗೆ ಅವರ ತಮ್ಮ ಮಾರುತಿ ಹಾಗೂ ಪುತ್ರ ದರ್ಶನ್ ವಾಸವಾಗಿದ್ದರು. ಮೃತ ಕುಟುಂಬದ ಮನೆಯೊಡತಿ ಭುವನೇಶ್ವರಿ ಶಿವಮೊಗ್ಗದ ಹೋಟೆಲ್‌ನಲ್ಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು.ಭುವನೇಶ್ವರಿಯ ಸಹೋದರ ಮಾರುತಿ ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದನು. ಈತ ಬಹುದಿನಗಳಿಂದ ಟಿ.ಬಿ. ಕಾಯಿಲೆಯಿಂದ ಬಳಲುತ್ತಿದ್ದರು ಎಂದು ತಿಳಿದು ಬಂದಿದೆ. ಇನ್ನು ಭುನೇಶ್ವರಿಯ ಮಗ ದರ್ಶನ್ ಗುಜರಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ. ಮೂವರು ಕೂಡ ಒಂದೇ ಮನೆಯಲ್ಲಿ ವಾಸವಾಗಿದ್ದರು. ಆದರೆ, ಇದ್ದಕ್ಕಿದ್ದಂತೆ ಮೂವರೂ ಸಾವಿಗೆ ಶರಣಾಗಿರುವುದಕ್ಕೆ ಕಾರಣವೇನೆಂದು ತಿಳಿದು ಬಂದಿಲ್ಲ.
ಘಟನಾ ಸ್ಥಳಕ್ಕೆ ಶಿವಮೊಗ್ಗ ಡಿವೈಎಸ್‌ಪಿ ಬಾಬು ಅಂಜನಪ್ಪ ಹಾಗೂ ದೊಡ್ಡಪೇಟೆ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.