ಸಾರಾಂಶ
ಬೇರೆಯವರ ಬ್ಯಾಂಕ್ ಖಾತೆಗಳಿಂದ ಹಣ ಲಪಟಾಯಿಸುವ ಚಿತ್ರವಿಚಿತ್ರ ವಿಧಾನಗಳು ವರದಿಯಾಗುತ್ತಿದ್ದು, ಬೈಂದೂರು ತಾಲೂಕಿನಲ್ಲಿ ಇಂತಹ ಇನ್ನೊಂದು ವಿಧಾನ ಬೆಳಕಿಗೆ ಬಂದಿದೆ.
ಕನ್ನಡಪ್ರಭ ವಾರ್ತೆ ಬೈಂದೂರು
ಬೇರೆಯವರ ಬ್ಯಾಂಕ್ ಖಾತೆಗಳಿಂದ ಹಣ ಲಪಟಾಯಿಸುವ ಚಿತ್ರವಿಚಿತ್ರ ವಿಧಾನಗಳು ವರದಿಯಾಗುತ್ತಿದ್ದು, ಬೈಂದೂರು ತಾಲೂಕಿನಲ್ಲಿ ಇಂತಹ ಇನ್ನೊಂದು ವಿಧಾನ ಬೆಳಕಿಗೆ ಬಂದಿದೆ.ಎಟಿಎಂನಿಂದ ಹಣ ತೆಗೆಯಲು ಸಹಾಯ ಮಾಡುವುದಾಗಿ ಹೇಳಿ, ಕಾರ್ಡನ್ನೇ ಬದಲಾಯಿಸಿ ಹಣ ಲಪಟಾಯಿಸಿದ 3 ಘಟನೆಗಳು ಬೈಂದೂರಿನಲ್ಲಿ ಮಂಗಳವಾರ ನಡೆದಿವೆ. ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಲ್ಕೀಸ್ ಭಾನು ಎಂಬವರು ಮಂಗಳವಾರ 10.15ಕ್ಕೆ ಇಲ್ಲಿನ ಶಿರೂರು ಗ್ರಾಮದ ಅರ್ಬನ್ ಬ್ಯಾಂಕಿನ ಎಟಿಎಂನಲ್ಲಿ ಹಣ ತೆಗೆಯಲು ಹೋಗಿದ್ದರು. ಕಾರ್ಡ್ ಹಾಕಿದಾಗ ಹಣ ಬಾರದಿದ್ದಾಗ, ಎಟಿಎಂ ಹೊರಗೆ ನಿಂತಿದ್ದ ಇಬ್ಬರು ಯುವಕರಲ್ಲಿ ಒಬ್ಬಾತ ಒಳಗೆ ಬಂದು ಐಸಾ ನಹಿ ಡಾಲ್ನೆಕಾ ಐಸಾ ಡಾಲ್ನಾ ಎಂದು ಹೇಳಿ ಎಟಿಎಂ ಪಡೆದು ತನ್ನ ಮೈಗೆ ಒರೆಸಿ ಮೆಶಿನ್ ಗೆ ಹಾಕಿದ, ಆದರೂ ಹಣ ಬರಲಿಲ್ಲ. ನಂತರ ಆ ಯುವಕ ತನ್ನ ಸಹವರ್ತಿಯೊಂದಿಗೆ ಬೈಕಿನಲ್ಲಿ ಹೊರಟು ಹೋಗಿದ್ದ.ಭಾನು ಅವರು ಬೇರೆ ಎಟಿಎಂಗೆ ಹೋದಾಗ ತನ್ನ ಬಳಿ ಇರುವ ಕಾರ್ಡ್ ಬದಲಾಗಿರುವುದು ಕಂಡಬಂತು. ತಕ್ಷಣ ಖಾತೆ ಚೆಕ್ ಮಾಡಿದಾಗ 5000 ರು. ಡ್ರಾ ಆಗಿರುವುದು ಕಂಡು ಬಂತು.
ಇಂತಹದ್ದೇ ಘಟನೆ 10 ಗಂಟೆಗೆ ಶಿರೂರು ಮಾರ್ಕೆಟ್ ಬಳಿ ಕೆನರಾ ಬ್ಯಾಂಕ್ ಎಂಟಿಎಂಗೆ ಹಣ ಪಡೆಯಲು ಹೋದ ಚೈತ್ರ (29) ಅವರಿಗೂ ನಡೆದಿದ್ದು, ಅವರ ಖಾತೆಯಿಂದ 21,000 ರು, ಡ್ರಾ ಆಗಿದೆ.ಇನ್ನೊಂದು ಘಟನೆಯಲ್ಲಿ ಬೆಳಗ್ಗೆ 10.45ಕ್ಕೆ ಬೈಂದೂರು ಸ್ಟೇಟ್ ಬ್ಯಾಂಕ್ ಶಾಖೆಯ ಎಂಟಿಎಂನಲ್ಲಿ ಚಂದ್ರಶೇಖರ (62) ಎಂಬವರ ಖಾತೆಯಿಂದ ತಲಾ 50 ಸಾವಿರದಂತೆ 3 ಬಾರಿ 1,50,000 ರು. ವಿಡ್ರಾ ಆಗಿದೆ.
ಸಹಾಯದ ನೆಪದಲ್ಲಿ ಮೋಸ ಮಾಡುವ ಚಾಣಾಕ್ಷ ಕಳ್ಳರು: ಈ ಮೂರು ಘಟನೆಗಳಲ್ಲಿಯೂ ಇಬ್ಬರು ಆರೋಪಿಗಳಿದ್ದು, ಅವರು ಯಾವುದೋ ರೀತಿಯಲ್ಲಿ, ಎಂಟಿಎಂ ಮೆಶಿನ್ ಗೆ ಕಾರ್ಡ್ ಹಾಕಿದಾಗ ಹಣ ಬರದಂತೆ ಮೊದಲೇ ಮಾಡಿ, ಎಂಟಿಎಂನ ಹೊರಗೆ ಬೈಕಿನಲ್ಲಿ ಕಾಯುತ್ತಿರುತ್ತಾರೆ. ಅದರಂತೆ ಯಾರೋ ಖಾತೆದಾರರು ಬಂದು ಮೆಶಿನ್ ಗೆ ಕಾರ್ಡ್ ಹಾಗಿದಾಗ ಹಣ ಬರದಿದ್ದಾಗ, ಆರೋಪಿಗಳಲ್ಲೊಬ್ಬಾತ ಸಹಾಯ ಮಾಡುವ ನೆಪದಲ್ಲಿ ಖಾತೆದಾರರಿಂದ ಕಾರ್ಡ್ ಪಡೆದು, ಕಾರ್ಡಿನ ಪಿನ್ ನಂಬರ್ ಗುರುತಿಸಿ, ಅವರಿಗೆ ತಿಳಿಯದಂತೆ ಕಾರ್ಡ್ ಬದಲಾಯಿಸಿ, ಬೈಕು ಹತ್ತಿ ಅಲ್ಲಿಂದ ಹೊರಟು ಹೋಗುತ್ತಾರೆ ಮತ್ತು ಬೇರೆ ಎಂಟಿಎಂಗೆ ಹೋಗಿ ತಾವು ಬದಲಾಯಿಸಿ ತಂದಿರುವ ಕಾರ್ಡ್ ನಿಂದ ಹಣ ಡ್ರಾ ಮಾಡಿಕೊಳ್ಳುತ್ತಿದ್ದಾರೆ.