ಭದ್ರಾ ಕಾಮಗಾರಿ ವಿರುದ್ಧ 3 ಹಂತದ ಹೋರಾಟ: ಎಂ.ಪಿ.ರೇಣುಕಾಚಾರ್ಯ

| Published : Jun 30 2025, 12:34 AM IST

ಸಾರಾಂಶ

ಭದ್ರಾ ಡ್ಯಾಂನ ಬಫರ್‌ ಝೋನ್‌ನಲ್ಲಿ ಬಲದಂಡೆ ನಾಳೆ ಸೀಳಿ ಕೈಗೊಂಡ ಕಾಮಗಾರಿಯನ್ನು ತಕ್ಷಣ ಸ್ಥಗಿತಗೊಳಿಸದಿದ್ದರೆ ಮೂರು ಹಂತದಲ್ಲಿ ತೀವ್ರ ಸ್ವರೂಪದ ಹೋರಾಟ ಕೈಗೊಳ್ಳುವುದಾಗಿ ಬಿಜೆಪಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ರಾಜ್ಯ ಸರ್ಕಾರಕ್ಕೆ ಎಚ್ಚರಿಸಿದ್ದಾರೆ.

ಕನ್ನಡಪ್ರಭ ವಾರ್ತೆ ದಾವಣಗೆರೆ

ಭದ್ರಾ ಡ್ಯಾಂನ ಬಫರ್‌ ಝೋನ್‌ನಲ್ಲಿ ಬಲದಂಡೆ ನಾಳೆ ಸೀಳಿ ಕೈಗೊಂಡ ಕಾಮಗಾರಿಯನ್ನು ತಕ್ಷಣ ಸ್ಥಗಿತಗೊಳಿಸದಿದ್ದರೆ ಮೂರು ಹಂತದಲ್ಲಿ ತೀವ್ರ ಸ್ವರೂಪದ ಹೋರಾಟ ಕೈಗೊಳ್ಳುವುದಾಗಿ ಬಿಜೆಪಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ರಾಜ್ಯ ಸರ್ಕಾರಕ್ಕೆ ಎಚ್ಚರಿಸಿದ್ದಾರೆ.

ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಿದ್ದರಾಮಯ್ಯ ಸರ್ಕಾರ ಭದ್ರಾ ಡ್ಯಾಂ ಬಲ ದಂಡೆ ನಾಲೆಗೆ ಧಕ್ಕೆಯನ್ನುಂಟು ಮಾಡಿ, ಚಿತ್ರದುರ್ಗ, ಚಿಕ್ಕಮಗಳೂರು ಜಿಲ್ಲೆಗಳ 518 ಗ್ರಾಮಗಳಿಗೆ ಕುಡಿಯುವ ನೀರೊದಗಿಸಲು ಮುಂದಾಗಿದೆ ಎಂದರು.

ಕಾಂಗ್ರೆಸ್ ಸರ್ಕಾರದ ಇಂತಹ ಅವೈಜ್ಞಾನಿಕ, ಅಪಾಯಕಾರಿ ಕಾಮಗಾರಿಯಿಂದ ಭದ್ರಾ ಅಚ್ಚುಕಟ್ಟು ವ್ಯಾಪ್ತಿಯ ದಾವಣಗೆರೆ, ಶಿವಮೊಗ್ಗ ಜಿಲ್ಲೆ ಹಾಗೂ ವಿಜಯ ನಗರ ಜಿಲ್ಲೆ ಹರಪನಹಳ್ಳಿ ತಾಲೂಕಿನ ರೈತರಿಗೆ ತೀವ್ರ ಅನ್ಯಾಯವಾಗಲಿದೆ. ತಕ್ಷಣವೇ ಬಲದಂಡೆ ನಾಲೆ ಸೀಳಿ ಕೈಗೊಂಡ ಕಾಮಗಾರಿಯನ್ನು ಕಾಂಗ್ರೆಸ್ ಸರ್ಕಾರ ಸ್ಥಗಿತಗೊಳಿಸಲಿ ಎಂದರು.

ಅವೈಜ್ಞಾನಿಕ ಕಾಮಗಾರಿ ನಿಲ್ಲಿಸುವಂತೆ ಒತ್ತಾಯಿಸಿ ಮುಂದಿನ ಹಂತದಲ್ಲಿ ಹೋರಾಟ ರೂಪಿಸಿದ್ದೇವೆ. ಹಳ್ಳಿ ಹಳ್ಳಿಗಳಿಗೆ ಕರಪತ್ರ ಹಂಚುವುದು, ಅಹೋರಾತ್ರಿ ಧರಣಿ, ಸತ್ಯಾಗ್ರಹ ಹಾಗೂ ಪಾದಯಾತ್ರೆ ಹೀಗೆ ಮೂರು ಹಂತದಲ್ಲಿ ಹೋರಾಟ ಮುಂದುವರಿಸುತ್ತಿದ್ದೇವೆ. ಈಗಾಗಲೇ ಭದ್ರಾ ಅಚ್ಚುಕಟ್ಟು ರೈತರಿಗೆ ನೀರೊದಗಿಸುವುದು ಸೇರಿ ಅನೇಕ ಹೋರಾಟಗಳನ್ನು ಮಾಡಿಕೊಂಡುಬಂದಿದ್ದೇವೆ ಎಂದು ತಿಳಿಸಿದರು.

ರೈತ ಪರ ನಮ್ಮ ಹೋರಾಟವನ್ನು ಹತ್ತಿಕ್ಕಲು ರಾಜ್ಯ ಸರ್ಕಾರ ಪೊಲೀಸ್ ಇಲಾಖೆಯನ್ನು ಬಳಸಿಕೊಂಡು, ನಮ್ಮನ್ನು ಭಯೋತ್ಪಾದಕರಂತೆ ನಡೆಸಿಕೊಂಡಿದೆ. ಬಲದಂಡೆ ನಾಳೆ ಸೀಳಿ ಕಾಮಗಾರಿ ಕೈಗೊಂಡಿದ್ದನ್ನು ವಿರೋಧಿಸಿ ಭಾರತೀಯ ರೈತ ಒಕ್ಕೂಟ, ಬಿಜೆಪಿ ರೈತ ಮೋರ್ಚಾ, ಜಿಲ್ಲಾ ರೈತರ ಒಕ್ಕೂಟದಿಂದ ಹಂತ ಹಂತವಾಗಿ ಹೋರಾಟ ನಡೆಸುತ್ತಿದ್ದೇವೆ. ಮೊನ್ನೆ ರಾಷ್ಟ್ರೀಯ ಹೆದ್ದಾರಿ ತಡೆ ವೇಳೆಯೂ ಪೊಲೀಸರು ನಮ್ಮನ್ನು ಗೂಂಡಾಗಳಂತೆ ಬಂಧಿಸಿದ್ದರು ಎಂದು ದೂರಿದರು.

ದಾವಣಗೆರೆ ಬಂದ್‌ಗೆ ಕರೆ ನೀಡಿದಾಗಲೂ ನಿಷೇಧಾಜ್ಞೆ ಜಾರಿಗೊಳಿಸಿ, ಭಯೋತ್ಪಾದಕರಂತೆ ನಮ್ಮನ್ನು ನಡೆಸಿಕೊಂಡಿದ್ದಾರೆ. ಶನಿವಾರದ ಬಂದ್‌ಗೆ ಬೆಳಿಗ್ಗೆ 6ರಿಂದ ಸಂಜೆ 6ರವರೆಗೆ ನಾವು ಪರವಾನಿಗೆ ಪಡೆದಿದ್ದರೂ ಜಿಲ್ಲಾ ಪೊಲೀಸ್ ಅಧೀಕ್ಷಕರು ಕಾಂಗ್ರೆಸ್ಸಿನವರಿಗೆ ಪ್ರತಿಭಟಿಸಲು ಅವಕಾಶ ನೀಡಿದ್ದು ಯಾಕೆ? ಎಸ್ಪಿ ಮಾತು, ವರ್ತನೆ ಬಗ್ಗೆ ನಮಗೆ ಅಸಮಾಧಾನವಿದೆ ಎಂದು ಹೇಳಿದರು.

ದಾವಣಗೆರೆಯ ಶನಿವಾರದ ಬಂದ್ ನೂರಕ್ಕೆ ನೂರರಷ್ಟು ಯಶಸ್ವಿಯಾಗಿದ್ದು, ಹೋರಾಟಕ್ಕೆ ಸ್ಪಂದಿಸಿದ ಸಾರ್ವಜನಿಕರು, ವ್ಯಾಪಾರಸ್ಥರು, ಹೋರಾಟದಲ್ಲಿ ಭಾಗಿಯಾದ ರೈತರಿಗೆ ಧನ್ಯವಾದ ಸಲ್ಲಿಸುತ್ತೇವೆ. ಆದರೆ, ಹೋರಾಟ ಹತ್ತಿಕ್ಕಲು ಪೊಲೀಸ್ ಇಲಾಖೆಯನ್ನು ಸರ್ಕಾರ ಬಳಸಿಕೊಂಡಿದ್ದು ಸರಿಯಲ್ಲ ಎಂದರು.

ಬಿಜೆಪಿ ರೈತ ಮೋರ್ಚಾರಾಜ್ಯ ಉಪಾಧ್ಯಕ್ಷ ಲೋಕಿಕೆರೆ ನಾಗರಾಜ ಮಾತನಾಡಿ, ನಮ್ಮನ್ನು ಕಾಂಗ್ರೆಸ್ಸಿಗರು ನಿರುದ್ಯೋಗಿಗಳೆಂದು ಕರೆದಿದ್ದಾರೆ. ಬಲದಂಡೆ ನಾಲೆ ಸೀಳಿ ಕಾಮಗಾರಿ ಕೈಗೊಂಡಿದ್ದರೂ ದಾವಣಗೆರೆ ಜಿಲ್ಲೆ ಹಾಗೂ ಹರಪನಹಳ್ಳಿ ಅಚ್ಚುಕಟ್ಟು ರೈತರ ಕೂಗು ಕೇಳಲಿಲ್ಲವೇ? ಎಂದು ಪ್ರಶ್ನಿಸಿದರು.

ಮಾಜಿ ಶಾಸಕ ಎಂ.ಬಸವರಾಜ ನಾಯ್ಕ, ಬಿಜೆಪಿ ಜಿಲ್ಲಾಧ್ಯಕ್ಷ ರಾಜಶೇಖರ ನಾಗಪ್ಪ, ಮುಖಂಡರಾದ ಚಂದ್ರಶೇಖರ ಪೂಜಾರ, ಮಾಜಿ ಮೇಯರ್ ಬಿ.ಜಿ.ಅಜಯಕುಮಾರ, ರಾಜು ತೋಟಪ್ಪ ಇತರರು ಇದ್ದರು.

ದಾವಣಗೆರೆ ಬಂದ್‌ನ್ನು ಶನಿವಾರ ಬೆಳಿಗ್ಗೆ 6ರಿಂದ ಸಂಜೆ 6ರವರೆಗೆ ನಡೆಸಲು ಅನುಮತಿ ಪಡೆದಿದ್ದು, ಬೈಕ್ ರ್‍ಯಾಲಿ ಮಾಡುವ ಹಕ್ಕು ನಮಗಿದೆ. ಇದು ಪೊಲೀಸ್ ಸಾಮ್ರಾಜ್ಯ ಅಲ್ಲ. ಎಸ್ಪಿ ನನ್ನ ಸಹೋದರಿ ಸಮಾನ. ಅವರ ಬಗ್ಗೆ ಗೌರವವಿದೆ. ಆದರೆ, ಶನಿವಾರ ನಮ್ಮ ನಡವಳಿಕೆ ಸರಿ ಇರಲಿಲ್ಲ. ಒಂದು ಸಂಘಟನೆ, ಒಂದು ಪಕ್ಷ ಪ್ರತಿಭಟನೆಗೆ ಕರೆ ನೀಡಿದಾಗ ಬೇರೆಯವರಿಗೆಅವಕಾಶ ಕೊಡಬಾರದು. ಹೆದ್ದಾರಿ ಬಂದ್ ವೇಳೆ ಕೆಲ ಪೊಲೀಸರು ಹಲ್ಲೆಗೆ ಯತ್ನಿಸಿದರು. ಶನಿವಾರ ಸಂಪೂರ್ಣ ಬಂದ್ ಅಂದಿದ್ದೆವು. ನಮಗೆ ಸಂಘರ್ಷ ಬೇಕಿಲ್ಲ, ಅಚ್ಚುಕಟ್ಟು ರೈತರಿಗೆ ನ್ಯಾಯ ಬೇಕಷ್ಟೆ.

ಎಂ.ಪಿ.ರೇಣುಕಾಚಾರ್ಯ, ಬಿಜೆಪಿ ಮಾಜಿ ಸಚಿವ.