ಚಿಕ್ಕಮಗಳೂರುಸಂತ ಕವಿ ಸರ್ವಜ್ಞರ ತ್ರಿಪದಿಗಳನ್ನು ಪಾಲಿಸಿದರೆ ಸಮಾಜದಲ್ಲಿ ಜಾತಿ ವ್ಯವಸ್ಥೆಯೇ ಇರುವುದಿಲ್ಲ ಎಂದು ರಾಜ್ಯ ಪರಿಸರ ಮೌಲ್ಯಮಾಪನ ಪ್ರಾಧಿಕಾರದ ಅಧ್ಯಕ್ಷ ಎ.ಎನ್.ಮಹೇಶ್ ಅಭಿಪ್ರಾಯಪಟ್ಟರು.
ನಗರದ ಕುವೆಂಪು ಕಲಾಮಂದಿರದಲ್ಲಿ ಸಂತ ಕವಿ ಸರ್ವಜ್ಞ ಜಯಂತಿ ಉದ್ಘಾಟನೆ
ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರುಸಂತ ಕವಿ ಸರ್ವಜ್ಞರ ತ್ರಿಪದಿಗಳನ್ನು ಪಾಲಿಸಿದರೆ ಸಮಾಜದಲ್ಲಿ ಜಾತಿ ವ್ಯವಸ್ಥೆಯೇ ಇರುವುದಿಲ್ಲ ಎಂದು ರಾಜ್ಯ ಪರಿಸರ ಮೌಲ್ಯಮಾಪನ ಪ್ರಾಧಿಕಾರದ ಅಧ್ಯಕ್ಷ ಎ.ಎನ್.ಮಹೇಶ್ ಅಭಿಪ್ರಾಯಪಟ್ಟರು.
ಜಿಲ್ಲಾಡಳಿತದಿಂದ ನಗರದ ಕುವೆಂಪು ಕಲಾಮಂದಿರದಲ್ಲಿ ಶುಕ್ರವಾರ ಆಯೋಜಿಸಿದ್ದ ಸಂತ ಕವಿ ಸರ್ವಜ್ಞ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಕನ್ನಡದ ಮಹಾನ್ ಸಂತ, ಕವಿ ಮತ್ತು ದಾರ್ಶನಿಕ ಸರ್ವಜ್ಞರ ತ್ರಿಪದಿಗಳು ಕೇವಲ ಸಾಹಿತ್ಯವಲ್ಲ, ಅವು ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಚಿಕಿತ್ಸಕ ಶಕ್ತಿ ಎಂದರು.16ನೇ ಶತಮಾನದಲ್ಲಿ ಸಮಾಜದಲ್ಲಿದ್ದ ವರ್ಗ ಸಂಘರ್ಷ, ಮೇಲು-ಕೀಳು ಹಾಗೂ ಜಾತಿ ಪದ್ಧತಿ ವಿರುದ್ಧ ಸರ್ವಜ್ಞ ಸಾಹಿತ್ಯದ ಮೂಲಕ ದೊಡ್ಡ ಹೋರಾಟವನ್ನೇ ಮಾಡಿದ್ದರು. ವೇಗದ ಯುಗದಲ್ಲಿ ಜನರು ಸುದೀರ್ಘ ಕಾವ್ಯಗಳನ್ನು ಓದಲು ಸಮಯವಿಲ್ಲ ದಿದ್ದರೂ, ಸರ್ವಜ್ಞರ ಮೂರೇ ಸಾಲಿನ ತ್ರಿಪದಿಗಳು ವಾಟ್ಸಾಪ್ ಮತ್ತು ಸಾಮಾಜಿಕ ಜಾಲತಾಣಕ್ಕೂ ಅತ್ಯಂತ ಪ್ರಸ್ತುತವಾಗಿವೆ.
ಸರ್ವಜ್ಞ ಎಂದರೆ ಎಲ್ಲ ತಿಳಿದವನು ಎಂದರ್ಥ. ಆದರೆ, ಅವರು ತಾವು ಎಲ್ಲರ ಬಳಿ ಒಂದೊಂದು ನುಡಿ ಕಲಿತು ಈ ಹಂತಕ್ಕೆ ತಲುಪಿದ್ದಾಗಿ ಹೇಳಿ ವಿನಯದ ಪರಮಾವಧಿ ತೋರಿದ್ದಾರೆ. ನಮ್ಮ ಸರ್ವಜ್ಞ ಮತ್ತು ತಮಿಳುನಾಡಿನ ತಿರುವಳ್ಳುವರ್ ಸಾಹಿತ್ಯ ಮತ್ತು ಜೀವನ ಶೈಲಿಯಲ್ಲಿ ಸಾಮ್ಯತೆಗಳಿವೆ. ಈ ದಾರ್ಶನಿಕರು ಭಾಷೆ ಮತ್ತು ಪ್ರಾದೇಶಿಕ ಗಡಿ ಮೀರಿ ನಿಲ್ಲುತ್ತಾರೆ. ಅದಕ್ಕಾಗಿಯೇ ಬೆಂಗಳೂರಲ್ಲಿ ತಿರುವಳ್ಳುವರ್ ಮತ್ತು ತಮಿಳುನಾಡಲ್ಲಿ ಸರ್ವಜ್ಞ ಪ್ರತಿಮೆ ಸ್ಥಾಪಿಸಿ ಉಭಯ ರಾಜ್ಯಗಳ ಬಾಂಧವ್ಯ ವೃದ್ಧಿಸಲಾಗಿದೆ ಎಂದರು.ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸುವ ಮೂಲಕ ಅವರನ್ನು ಎಂಜಿನಿಯರ್, ವಕೀಲರು, ಐಎಎಸ್ ಮತ್ತು ಕೆಎಎಸ್ ಅಧಿಕಾರಿಗಳನ್ನಾಗಿ ಮಾಡುವಂತೆ ಪೋಷಕರಿಗೆ ಕರೆ ನೀಡಿದರು.
ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಕೆ.ಸಿ.ನಾಗಪ್ಪ ಶೆಟ್ಟಿ ಉಪನ್ಯಾಸ ನೀಡಿದರು. ಉಪ ತಹಸೀಲ್ದಾರ್ ರಾಮ ರಾವ್ ದೇಸಾಯಿ, ನಗರಸಭೆ ಅಧ್ಯಕ್ಷೆ ಶೀಲಾ ದಿನೇಶ್, ಜಿಲ್ಲಾ ಕುಂಬಾರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಕೆ.ಎಂ. ಗಂಗಾಧರ್, ತಾಲೂಕು ಕುಂಬಾರರ ಸಂಘದ ಅಧ್ಯಕ್ಷ ಬಿ.ಆರ್.ಜಯಪ್ರಕಾಶ್, ಎಂ.ಬಿ.ಅಶೋಕ್ ಕುಮಾರ್, ಕೆ.ಪರಮೇಶ್, ಹುಣಸೇಮಕ್ಕಿ ಲಕ್ಷ್ಮಣ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಸಿ.ರಮೇಶ್ ಸೇರಿದಂತೆ ಮೊದಲಾದವರಿದ್ದರು.ಫೋಟೋನಗರದ ಕುವೆಂಪು ಕಲಾಮಂದಿರದಲ್ಲಿ ಶುಕ್ರವಾರ ಆಯೋಜಿಸಿದ್ದ ಸಂತ ಕವಿ ಸರ್ವಜ್ಞ ಜಯಂತಿಯಲ್ಲಿ ಸರ್ವಜ್ಞರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು. ರಾಜ್ಯ ಪರಿಸರ ಮೌಲ್ಯಮಾಪನ ಪ್ರಾಧಿಕಾರದ ಅಧ್ಯಕ್ಷ ಎ.ಎನ್.ಮಹೇಶ್, ಉಪನ್ಯಾಸಕ ಕೆ.ಸಿ.ನಾಗಪ್ಪ ಶೆಟ್ಟಿ ಉಪನ್ಯಾಸ ನೀಡಿದರು. ಉಪ ತಹಸೀಲ್ದಾರ್ ರಾಮರಾವ್ ದೇಸಾಯಿ, ಜಿಲ್ಲಾ ಕುಂಬಾರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಕೆ.ಎಂ.ಗಂಗಾಧರ್, ತಾಲೂಕು ಕುಂಬಾರರ ಸಂಘದ ಅಧ್ಯಕ್ಷ ಬಿ.ಆರ್.ಜಯಪ್ರಕಾಶ್ಇ ದ್ದರು.
