ಸಾರಾಂಶ
-18 ಲಕ್ಷ ಮೌಲ್ಯದ ಬೆಳ್ಳಿ, ನಗದು ಕಳವು ಕೇಸ್, ಗಸ್ತು-ನಾಕಾ ಬಂಧಿ ಸಿಬ್ಬಂದಿ ಕರ್ತವ್ಯಲೋಪ
-----ಕನ್ನಡಪ್ರಭವಾರ್ತೆ ದಾವಣಗೆರೆ
ಬೆಳ್ಳಿ ಆಭರಣದಂಗಡಿಯಲ್ಲಿ 18ಲಕ್ಷ ರು. ಮೌಲ್ಯದ ಬೆಳ್ಳಿ ವಸ್ತುಗಳು ಕಳುವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾತ್ರಿ ಗಸ್ತು, ನಾಕಾಬಂಧಿ ನಿರ್ಲಕ್ಷ್ಯ ತೋರಿದ್ದಕ್ಕೆ ಸಂಬಂಧಿಸಿದಂತೆ ಹಿರಿಯ ಹೆಡ್ ಕಾನ್ಸಟೇಬಲ್, ಹೆಡ್ ಕಾನ್ಸಟೇಬಲ್, ಕಾನ್ಸಟೇಬಲ್ ಸೇರಿದಂತೆ ಮೂವರನ್ನು ಸೇವೆಯಿಂದ ಅಮಾನತುಗೊಳಿಸಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಉಮಾ ಪ್ರಶಾಂತ ಆದೇಶ ಹೊರಡಿಸಿದ್ದಾರೆ.ಬಸವನಗರ ಪೊಲೀಸ್ ಠಾಣೆಯ ಹೆಡ್ ಕಾನ್ಸಟೇಬಲ್ ಮಂಜಪ್ಪ, ಕಾನ್ಸಟೇಬಲ್ ಪಿ.ಆಕಾಶ್ ಹಾಗೂ ಆರ್‌ಎಂಸಿ ಯಾರ್ಡ್ ಪೊಲೀಸ್ ಠಾಣೆಯ ಹಿರಿಯ ಕಾನ್ಸಟೇಬಲ್ ಎಚ್. ಚಂದ್ರಶೇಖರರನ್ನು ಕರ್ತವ್ಯದಲ್ಲಿ ನಿರ್ಲಕ್ಷ್ಯ, ಅನುಮಾನಾಸ್ಪದ ವ್ಯಕ್ತಿಗಳನ್ನು ಪರಿಶೀಲಿಸದೇ, ವಾಹನಗಳನ್ನು ತಪಾಸಣೆ ಮಾಡದೇ ಕರ್ತವ್ಯಲೋಪ ಎಸಗಿದ ಹಿನ್ನೆಲೆಯಲ್ಲಿ ಅಮಾನತುಗೊಳಿಸಲಾಗಿದೆ ಎಂದು ಇಲಾಖೆ ತಿಳಿಸಿದೆ.
ರಾತ್ರಿ ಗಸ್ತು ವೇಳೆ ಅನುಮಾನಾಸ್ಪದ ವ್ಯಕ್ತಿಗಳನ್ನು ಪರಿಶೀಲಿಸಿ, ತಪಾಸಣೆ ಮಾಡಲು, ಬಸವನಗರ ಠಾಣೆ ಸರಹದ್ದಿನ ಮಂಡಿಪೇಟೆ, ಬಿನ್ನಿ ಕಂಪನಿ ರಸ್ತೆ, ಎನ್ಆರ್ ರಸ್ತೆಗಳಲ್ಲಿ ಚಿನ್ನಾಭರಣ ಅಂಗಡಿಗಳು ಹೆಚ್ಚಾಗಿದ್ದು, ಅಲ್ಲಿ ಗಸ್ತುಮಾಡಲು ಸುಭಾಹು ತಂತ್ರಾಂಶದಲ್ಲಿ ಪ್ರತಿ 10 ನಿಮಿಷಕ್ಕೊಮ್ಮೆ ಅಲ್ಲಿನ ಪಾಯಿಂಟ್‌ಗಳನ್ನು ರೀಡ್ ಮಾಟಿ, ಪಾಯಿಂಟ್ ಬುಕ್‌ಗೆ ಕಡ್ಡಾಯವಾಗಿ ಸಹಿ ಮಾಡಲು ಸೂಚಿಸಲಾಗಿತ್ತು.ಜ.29ರ ರಾತ್ರಿ ಗಸ್ತು ಕರ್ತವ್ಯದ ಸಿಬ್ಬಂದಿ ಎಚ್‌ಸಿ ಮಂಜಪ್ಪ, ಸಿಪಿಸಿ ಸಿ.ಆಕಾಶ್‌ರಿಗೆ ಸೂಚಿಸಿ, ಠಾಣಾ ಬೀಟ್‌ನಲ್ಲಿ ರಾತ್ರಿ ಗಸ್ತು ಕರ್ತವ್ಯಕ್ಕೆ ಕಳಿಸಲಾಗಿತ್ತು. ಸಿಬ್ಬಂದಿ ರಾತ್ರಿ ಕರ್ತವ್ಯದಲ್ಲಿ ಅನುಮಾನಾಸ್ಪದ ವ್ಯಕ್ತಿಗಳನ್ನು ಪರಿಶೀಲಿಸದೇ, ಕರ್ತವ್ಯ ನಿರ್ವಹಿಸದೇ ರಾತ್ರಿ ವೇಳೆ ಬಿಸಿ ರಸ್ತೆಯ ಉಪಹಾರ ದರ್ಶಿನಿ ಹೊಟೆಲ್ ಪಕ್ಕದ ಜ್ಯುವೆಲರ್ಸ್ ಅಂಗಡಿಯಲ್ಲಿ ಕಳ್ಳರು 18 ಲಕ್ಷ ಮೌಲ್ಯದ ಬೆಳ್ಳಿ ಸಾಮಾನು, ನಗದು ಕಳವು ಮಾಡಿಕೊಂಡು ಹೋಗಿದ್ದರು. ಈ ಇಬ್ಬರು ಪೊಲೀಸ್ ಸಿಬ್ಬಂದಿ ಕರ್ತವ್ಯದಲ್ಲಿ ನಿರ್ಲಕ್ಷ್ಯ ಪ್ರದರ್ಶಿಸಿದ್ದು ಕಂಡು ಬಂದಿದೆ.
ಈ ಇಬ್ಬರೂ ಸಿಬ್ಬಂದಿ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ಬಸವ ನಗರ ಇನ್ಸಪೆಕ್ಟರ್ ಕೋರಿದ್ದು, ನಗರ ಉಪ ವಿಭಾಗದ ಡಿವೈಎಸ್ಪಿ ಮುಂದಿನ ಕ್ರಮಕ್ಕಾಗಿ ಎಸ್ಪಿ ಕಚೇರಿಗೆ ಕಳಿಸಿದ್ದರು. ಅದರಂತೆ ಬಸವ ನಗರ ಠಾಣೆ ಸಿಎಚ್‌ಸಿ ಟಿ.ಮಂಜಪ್ಪ, ಸಿಪಿಐ ಪಿ.ಆಕಾಶ್‌ರನ್ನು ಸೇವೆಯಿಂದ ಅಮಾನತು ಮಾಡಿ, ಶಿಸ್ತು ಕ್ರಮಕ್ಕೆ ತಕ್ಷಣದಿಂದಲೇ ಜಾರಿಗೆ ಬರುವಂತೆ ಎಸ್ಪಿ ಉಮಾ ಪ್ರಶಾಂತ ಆದೇಶ ಹೊರಡಿಸಿದ್ದಾರೆ.ಬಾಡಾ ಕ್ರಾಸ್‌ನಲ್ಲಿ ನಾಕಾಬಂಧಿ ಕರ್ತವ್ಯಕ್ಕೆ ನೇಮಕವಾಗಿದ್ದ ಆರ್‌ಎಂಸಿ ಯಾರ್ಡ್ ಪೊಲೀಸ್ ಠಾಣೆಯ ಸಿಎಚ್‌ಸಿ ಚಂದ್ರಶೇಖರ ಹಾಗೂ ಗೃಹರಕ್ಷಕ ಸಿಬ್ಬಂದಿಯನ್ನು ನೇಮಿಸಿ, ವಾಹನ ತಪಾಸಣೆ ಮಾಡುವಂತೆ, ಸೂಚಿಸಲಾಗಿತ್ತು. ಆದರೆ, ನಾಕಾಬಂಧಿ ಕರ್ತವ್ಯದ ವೇಳೆ 21 ವಾಹನಗಳನ್ನು ತಪಾಸಣೆ ಮಾಡಿದ ಬಗ್ಗೆ ನಾಕಾಬಂಧಿ ಪುಸ್ತಕದಲ್ಲಿ ನಮೂದು ಮಾಡಿದ್ದು, ಅನುಮಾನಾಸ್ಪದ ವಾಹನಗಳು, ವ್ಯಕ್ತಿಗಳು ಹಾಗೂ ಎಲ್ಲಾ ವಾಹನಗಳ ತಪಾಸಣೆ ಮಾಡಿದ್ದಾಗಿ ದಾಖಲಿಸಿದ್ದರು.
ಆದರೆ, 18 ಲಕ್ಷ ಮೌಲ್ಯದ ಬೆಳ್ಳಿ ಆಭರಣಗಳನ್ನು ಕಳವು ಮಾಡಿದ್ದ ದುಷ್ಕರ್ಮಿಗಳು ಪಲ್ಸರ್ ಬೈಕ್‌ನಲ್ಲಿ ಬಾಡಾ ಕ್ರಾಸ್ ಚೆಕ್ ಪೋಸ್ಟ್‌ನಿಂದ ಹೋಗಿರುವುದು ಸ್ಮಾರ್ಟ್ ಸಿಟಿ ಸಿಸಿ ಟಿವಿ ಕಮಾಂಡೋ ಸೆಂಟರ್ ಕೊಠಡಿಯಿಂದ ಕಂಡು ಬಂದಿತ್ತು. ಬಾಡಾ ಕ್ರಾಸ್‌ನ ನಾಕಾ ಬಂಧಿ ಸಿಬ್ಬಂದಿ ಸರಿಯಾಗಿ ತಪಾಸಣೆ ಮಾಡಿದ್ದರೆ ಬೆಳ್ಳಿ ಆಭರಣದ ಕಳವು ಆರೋಪಿಗಳನ್ನು ನಗದು ಸಮೇತ ಪತ್ತೆ ಮಾಡಬಹುದಿತ್ತು.ಆದರೆ, ಸಿಎಚ್‌ಸಿ ಕರ್ತವ್ಯ ನಿರ್ವಹಿಸದೇ, ನಿರ್ಲಕ್ಷ್ಯ ತೋರಿದ ಹಿನ್ನೆಲೆ ಆಜಾದ್ ನಗರ ಸಿಪಿಐ, ನಗರ ಡಿವೈಎಸ್ಪಿ ಶಿಫಾರಸ್ಸಿನಂತೆ ಸಿಎಚ್‌ಸಿ ಚಂದ್ರಶೇಖರರನ್ನು ಮುಂದಿನ ಇಲಾಖೆ ಶಿಸ್ತು ಕ್ರಮ ಬಾಕಿ ಇರಿಸಿಕೊಂಡು, ತಕ್ಷಣದಿಂದಲೇ ಜಾರಿಗೊಳ್ಳುವಂತೆ ಸೇವೆಯಿಂದ ಅಮಾನತ್ತಿನಲ್ಲಿಟ್ಟು, ಎಸ್ಪಿ ಉಮಾ ಪ್ರಶಾಂತ ಆದೇಶಿಸಿದ್ದಾರೆ.