ಮಂಡ್ಯ ನಿರ್ಮಿತಿ ಕೇಂದ್ರದ ಮೂವರು ಸೈಟ್ ಎಂಜಿನಿಯರ್‌ಗಳ ವಜಾ

| Published : May 08 2025, 12:37 AM IST

ಸಾರಾಂಶ

ನಿಗದಿತ ವಿದ್ಯಾರ್ಹತೆ ಇಲ್ಲದಿದ್ದರೂ ನಿಯಮಬಾಹಿರವಾಗಿ ಮಂಡ್ಯ ನಿರ್ಮಿತಿ ಕೇಂದ್ರದ ಸೈಟ್ ಎಂಜಿನಿಯರ್‌ಗಳಾಗಿ ನೇಮಕ ಮಾಡಿಕೊಂಡಿದ್ದ ಮೂವರನ್ನು ತನಿಖಾ ತಂಡದ ಶಿಫಾರಸಿನನ್ವಯ ಕೆಲಸದಿಂದ ವಜಾಗೊಳಿಸಿ ಜಿಲ್ಲಾಧಿಕಾರಿ ಡಾ.ಕುಮಾರ ಅವರು ಆದೇಶ ಹೊರಡಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಡ್ಯ

ನಿಗದಿತ ವಿದ್ಯಾರ್ಹತೆ ಇಲ್ಲದಿದ್ದರೂ ನಿಯಮಬಾಹಿರವಾಗಿ ನಿರ್ಮಿತಿ ಕೇಂದ್ರದ ಸೈಟ್ ಎಂಜಿನಿಯರ್‌ಗಳಾಗಿ ನೇಮಕ ಮಾಡಿಕೊಂಡಿದ್ದ ಮೂವರನ್ನು ತನಿಖಾ ತಂಡದ ಶಿಫಾರಸಿನನ್ವಯ ಕೆಲಸದಿಂದ ವಜಾಗೊಳಿಸಿ ಜಿಲ್ಲಾಧಿಕಾರಿ ಡಾ.ಕುಮಾರ ಅವರು ಆದೇಶ ಹೊರಡಿಸಿದ್ದಾರೆ.

ನಿರ್ಮಿತಿ ಕೇಂದ್ರದ ಬಿ.ಎಲ್.ವೇಣುಗೋಪಾಲ್, ಕೆ.ಪ್ರಶಾಂತ್, ಮಂಡ್ಯ ತಾಲೂಕು ಚಿಕ್ಕಬಳ್ಳಿಯ ಕೆ.ಪಿ.ಶ್ರೀಧರ್ ಎಂಬುವರೇ ನಿಯಮಬಾಹಿರವಾಗಿ ನೇಮಕಗೊಂಡು ವಜಾಗೊಂಡ ನೌಕರರಾಗಿದ್ದಾರೆ.

ಸಾಮಾಜಿಕ ಹೋರಾಟಗಾರ ಕೆ.ಆರ್.ರವೀಂದ್ರ ಅವರು ನಿರ್ಮಿತಿ ಕೇಂದ್ರದಲ್ಲಿ ಕೆಲಸ ನಿರ್ವಹಿಸುತ್ತಿರುವ ಈ ಮೂವರು ನಕಲಿ ಅಂಕಪಟ್ಟಿ ದಾಖಲೆಗಳನ್ನು ನೀಡಿ ಕೆಲಸಕ್ಕೆ ಸೇರಿರುವ ಬಗ್ಗೆ ಜಿಲ್ಲಾಧಿಕಾರಿಗೆ ದೂರು ನೀಡಿದ್ದರು. ಈ ದೂರಿನನ್ವಯ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ, ಜಿಲ್ಲಾ ನಗರಾಭಿವೃದ್ಧಿ ಕೋಶದ ಕಾರ್ಯಪಾಲಕ ಎಂಜಿನಿಯರ್ ಪ್ರತಾಪ್, ಸಹಾಯಕ ಅಭಿಯಂತರ ರಾಘವೇಂದ್ರ ಅವರನ್ನೊಳಗೊಂಡ ತನಿಖಾ ತಂಡ ರಚಿಸಿತ್ತು. ತನಿಖಾ ಒಂದೂವರೆ ತಿಂಗಳ ಕಾಲ ತನಿಖೆ ನಡೆಸಿ ಸಲ್ಲಿಸಿದ ವರದಿಯಲ್ಲಿ ಈ ಮೂವರು ನಿಗದಿತ ವಿದ್ಯಾರ್ಹತೆ ಇಲ್ಲದಿದ್ದರೂ ನೇಮಕಗೊಂಡಿರುವುದು ದೃಢಪಟ್ಟಿತ್ತು. ಹಾಗಾಗಿ ಈ ಮೂವರನ್ನು ಹುದ್ದೆಯಿಂದ ಕೈಬಿಡುವಂತೆ ಜಿಲ್ಲಾಧಿಕಾರಿಗೆ ಶಿಫಾರಸು ಮಾಡಿದ್ದರು.

ಕೆ.ಪ್ರಶಾಂತ್ ನಿರ್ಮಿತಿ ಕೇಂದ್ರದ ಸೈಟ್ ಎಂಜಿನಿಯರ್ ಆಗಿ ೬.೩.೨೦೧೭ರಿಂದ ನೇಮಕಗೊಂಡು. ಮೇಲುಕೋಟೆಯ ಎಸ್‌ಇಟಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ೨೯.೧೦.೨೦೨೦ರಲ್ಲಿ ಡಿಪ್ಲೊಮಾ ಪೂರ್ಣಗೊಳಿಸಿದ್ದರು. ತಾಂತ್ರಿಕ ಪರೀಕ್ಷಾ ಮಂಡಳಿಯಿದ ೯.೨.೨೦೨೩ರಲ್ಲಿ ಪಡೆದಿರುವುದು ದೃಢಪಟ್ಟಿತ್ತು.

ಕೆ.ಪಿ.ಶ್ರೀಧರ್ ೧.೮.೨೦೧೩ರಿಂದ ನಿರ್ಮಿತಿ ಕೇಂದ್ರದಲ್ಲಿ ಸೈಟ್ ಎಂಜಿನಿಯರ್ ಆಗಿ ಕರ್ತವ್ಯನಿರ್ವಹಿಸಿದ್ದು, ಶ್ರೀಧರ್ ಅರಕೆರೆಯ ಸರ್ಕಾರಿ ಪಾಲಿಟೆಕ್ನಿಕಕ್ ಕಾಲೇಜಿನಲ್ಲಿ ೨೦೨೩ರ ನವೆಂಬರ್-ಡಿಸೆಂಬರ್‌ನಲ್ಲಿ ಡಿಪ್ಲೊಮಾ ತೇರ್ಗಡೆಯಾಗಿದ್ದರು. ಈ ಸಂಬಂಧ ಕಾಲೇಜಿನ ಪ್ರಾಂಶುಪಾಲರಿಂದ ತಾತ್ಕಾಲಿಕ ಡಿಪ್ಲೊಮಾ ಪ್ರಮಾಣಪತ್ರವನ್ನು ೬.೨.೨೦೨೪ರಲ್ಲಿ ಪಡೆದಿರುವುದು ಕಂಡುಬಂದಿತ್ತು.

ಬಿ.ಎಲ್.ವೇಣುಗೋಪಾಲ್ ಅವರು ೧.೧.೨೦೨೩ರಿಂದ ನಿರ್ಮಿತಿ ಕೇಂದ್ರದ ಸೈಟ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. ನೇಮಕಾತಿ ಸಮಯದಲ್ಲಿ ಬಿ-ಟೆಎಕ್-ಸಿವಿಲ್ ಎಂಜಿನಿಯರಿಂಗ್ ಪ್ರೋಗ್ರಾಂ ಪ್ರಮಾಣಪತ್ರ ಸಲ್ಲಿಸಿದ್ದಾರೆ. ಆದರೆ, ಈ ಪ್ರಮಾಣಪತ್ರ ನೀಡಿರುವ ಜಾರ್ಖಂಡ್‌ನ ದಕ್ಷ ವಿಶ್ವವಿದ್ಯಾನಿಲಯವು ಯುಜಿಸಿಯಿಂದ ಮಾನ್ಯತೆ ಪಡೆದಿರುವ ವಿಶ್ವವಿದ್ಯಾನಿಲಯಗಳ ಪಟ್ಟಿಯಲ್ಲಿ ಇಲ್ಲದಿರುವುದು ದೆಹಲಿ ಯುಜಿಸಿ ಕಾರ್ಯದರ್ಶಿಯವರು ನೀಡಿರುವ ಸತ್ಯಪಾಲನಾ ವರದಿಯಿಂದ ಸ್ಪಷ್ಟವಾಗಿತ್ತು. ಆದ್ದರಿಂದ ಬಿ.ಎಲ್.ವೇಣುಗೋಪಾಲ್ ಅವರು ಡಿಪ್ಲೊಮಾ ವಿದ್ಯಾರ್ಹತೆ ಹೊಂದಿದ್ದರೂ ಹೆಚ್ಚಿನ ವಿದ್ಯಾರ್ಹತೆ ಮೇಲೆ ನೇಮಕಗೊಂಡಿರುವುದು ದೃಢಪಟ್ಟಿತ್ತು.

ತನಿಖಾ ತಂಡದ ಶಿಫಾರಸ್ಸಿನನ್ವಯ ೨೧ ಏಪ್ರಿಲ್ ೨೦೨೫ರಂದು ನಡೆದ ಮಂಡ್ಯ ನಿರ್ಮಿತಿ ಕೇಂದ್ರದ ಸರ್ವ ಸದಸ್ಯರ ಸಾಮಾನ್ಯ ಸಭೆಯಲ್ಲಿ ಕೈಗೊಂಡ ನಿರ್ಣಯದಂತೆ ಮಂಡ್ಯ ನಿರ್ಮಿತಿ ಕೇಂದ್ರದ ಬೈಲಾ ಸಂಖ್ಯೆ ೧೩.೧ರನ್ವಯ ತಾತ್ಕಾಲಿಕ ಹುದ್ದೆಯ ಸೇವೆಯಿಂದ ವಜಾಗೊಳಿಸಿದೆ. ಹಾಗೂ ಮಂಡ್ಯ ನಿರ್ಮಿತಿ ಕೇಂದ್ರದ ಕಚೇರಿಯ ಕರ್ತವ್ಯದಿಂದ ಬಿಡುಗಡೆಗೊಳಿಸಿರುವುದಾಗಿ ಮೇ ೬ರಂದು ಆದೇಶಿಸಿದ್ದಾರೆ.