ಕೊಪ್ಪಳ ನಗರದ ಸಿರಸಪ್ಪಯ್ಯನಮಠ ಸರ್ಕಾರಿ ಶಾಲೆಯಲ್ಲಿ ದಾಖಲಾಗಿರುವುದು ಕೇವಲ 25 ಮಕ್ಕಳು. ಇದರಲ್ಲಿ 10ರಿಂದ 15 ಮಕ್ಕಳು ಮಾತ್ರ ಶಾಲೆಗೆ ಬರುತ್ತಿದ್ದು, ಅವರಿಗೆ ಮೂವರು ಶಿಕ್ಷಕರು ಪಾಠ ಬೋಧಿಸುತ್ತಾರೆ. ಸಮೀಪದಲ್ಲೇ ಆಂಗ್ಲ ಮಾಧ್ಯಮ ಶಾಲೆ ಆರಂಭವಾಗಿರುವುದರಿಂದ ಈ ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕುಸಿದಿದೆ.

ಸೋಮರಡ್ಡಿ ಅಳವಂಡಿ

ಕೊಪ್ಪಳ: 1ರಿಂದ 7ನೇ ತರಗತಿ ವರೆಗೂ ಶಾಲೆ ಇದ್ದರೂ ಇಲ್ಲಿ ದಾಖಲಾಗಿರುವುದು ಕೇವಲ 25 ಮಕ್ಕಳು. ಇದರಲ್ಲಿ 10ರಿಂದ 15 ಮಕ್ಕಳು ಮಾತ್ರ ಶಾಲೆಗೆ ಬರುತ್ತಿದ್ದು, ಅವರಿಗೆ ಮೂವರು ಶಿಕ್ಷಕರು ಪಾಠ ಬೋಧಿಸುತ್ತಾರೆ.

ಇದು ನಗರದ ಸಿರಸಪ್ಪಯ್ಯನ ಮಠದ ಬಳಿ ಇರುವ ಸರ್ಕಾರಿ ಶಾಲೆಯ ವಾಸ್ತವ ಸ್ಥಿತಿ.

ಕಳೆದ ಮೂರು ವರ್ಷಗಳ ಹಿಂದೆ ನೂರಾರು ವಿದ್ಯಾರ್ಥಿಗಳಿಂದ ತುಂಬಿರುತ್ತಿದ್ದ ಈ ಶಾಲೆ ಈಗ ಮಕ್ಕಳ ಸಂಖ್ಯೆ ಕೊರತೆಯಿಂದ ಬಿಕೋ ಎನ್ನುತ್ತಿದೆ. ಶಾಲೆ ಅತ್ಯುತ್ತಮ ಮೈದಾನ ಮತ್ತು ಬೇಕಿರುವಷ್ಟು ಕೊಠಡಿಗಳನ್ನು ಹೊಂದಿದೆ. ಆದರೆ, ಮಕ್ಕಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕುಸಿಯುತ್ತಿದ್ದು ಈಗ ಕೇವಲ 25 ವಿದ್ಯಾರ್ಥಿಗಳು ಮಾತ್ರ ಇದ್ದಾರೆ. 1ರಿಂದ 7ನೇ ತರಗತಿ ಇರುವ ಈ ಶಾಲೆಯಲ್ಲಿ ಕೆಲವೊಂದು ತರಗತಿಗೆ ಓರ್ವನೇ ವಿದ್ಯಾರ್ಥಿ ಇದ್ದಾರೆ.

ಮೂವರು ಶಿಕ್ಷಕರು: ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಶಿಕ್ಷಕರನ್ನು ನೀಡಿದರೆ ಕೇವಲ ಒಬ್ಬರು ಶಿಕ್ಷಕರು ಮಾತ್ರ ಈ ಶಾಲೆಯಲ್ಲಿ ಇರಬೇಕಾಗುತ್ತದೆ. ಆದರೂ ಓರ್ವ ಕಾಯಂ ಶಿಕ್ಷಕರಿದ್ದು , ಇಬ್ಬರು ಅತಿಥಿ ಶಿಕ್ಷಕರಿದ್ದಾರೆ. ಶಾಲೆಯ ಮಕ್ಕಳ ಸಂಖ್ಯೆ ಹೆಚ್ಚಿಸಲು ಪ್ರಭಾರಿ ಮುಖ್ಯೋಪಾಧ್ಯಾಯ ಪ್ರಹ್ಲಾದ್‌ ಹೂಗಾರ ಅವರು ಶಾಲೆಗೆ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗೆ ₹ 1000 ಪ್ರೋತ್ಸಾಹಧನ ನೀಡುತ್ತಿದ್ದಾರೆ. ಆದರೂ ಸಹ ಶಾಲೆಗೆ ವಿದ್ಯಾರ್ಥಿಗಳು ಬರುತ್ತಿಲ್ಲ.

ಆಂಗ್ಲ ಮಾಧ್ಯಮದಿಂದ ಹೊಡೆತ: ಸಿರಪ್ಪಯ್ಯನಮಠ ಶಾಲೆಯಿಂದ ಕೂಗಳತೆ ದೂರದಲ್ಲಿ ಮೌಲಾನ್‌ ಆಜಾದ್ ಆಂಗ್ಲ ಮಾಧ್ಯಮ ಶಾಲೆ ಹಾಗೂ ಪಬ್ಲಿಕ್ ಶಾಲೆ ಆರಂಭವಾಗಿರುವುದರಿಂದ ಈ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಕುಸಿಯಲು ಕಾರಣವಾಗಿದೆ. ಈ ಶಾಲೆಗಳು ಪ್ರಾರಂಭವಾಗುವ ಮುನ್ನ ಸಿರಪ್ಪಯ್ಯನ ಮಠದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳು ನೂರಾರು ಸಂಖ್ಯೆಯಲ್ಲಿದ್ದರು. ಇದು ಇದೊಂದೆ ಶಾಲೆಯ ಚಿತ್ರಣವಲ್ಲ. ಎಲ್ಲೆಲ್ಲಿ ಸರ್ಕಾರಿ ಆಂಗ್ಲ ಮಾಧ್ಯಮ ಶಾಲೆಗಳು ನಿರ್ಮಿಸಿದೆಯೋ ಅಲ್ಲಿ ಕನ್ನಡ ಮಾಧ್ಯಮ ಶಾಲೆಗಳ ದಾಖಲಾತಿಯಲ್ಲಿ ಭಾರೀ ಕುಸಿತ ಕಂಡಿದೆ. ಶಾಲೆಗೆ ಮಕ್ಕಳನ್ನು ಕರೆ ತರಲು ಪ್ರಯತ್ನಿಸಿದರೂ ಬರುತ್ತಿಲ್ಲ. ನೂತನವಾಗಿ ಪ್ರವೇಶ ಪಡೆಯುವ ಮಕ್ಕಳಿಗೆ ₹ 1000 ಪ್ರೋತ್ಸಾಧನವನ್ನು ನಾನೇ ಕೊಡುತ್ತಿದ್ದೇನೆ. ಆದರೂ ಈ ವರ್ಷ ಶಾಲೆಗೆ ಮಕ್ಕಳು ದಾಖಲಿಸಿಲ್ಲ ಎಂದು ಪ್ರಭಾರಿ ಮುಖ್ಯೋಪಾಧ್ಯಾಯ ಪ್ರಹ್ಲಾದ ಹೂಗಾರ ಹೇಳಿದರು.