ಬೆಂಗಳೂರು ದಕ್ಷಿಣ ಜಿಲ್ಲೆ ಚನ್ನಪಟ್ಟಣ ತಾಲೂಕಿನ ಶ್ರೀ ನರಸಿಂಹಸ್ವಾಮಿ ಬೆಟ್ಟದ ಹೂರಣಗೆರೆ ಅರಣ್ಯ ಪ್ರದೇಶದಿಂದ ಆಹಾರ ಅರಸಿ ವಲಸೆ ಬಂದಿರುವ ಎರಡು ಸಲಗ ಮತ್ತು ಒಂದು ಹೆಣ್ಣಾನೆ ತೈಲೂರು ಕೆರೆಯಲ್ಲಿ ಗುರುವಾರ ಬೀಡು ಬಿಟ್ಟು ಜಲ ಕ್ರೀಡೆಯಲ್ಲಿ ತೊಡಗಿದ್ದವು.
ಕನ್ನಡಪ್ರಭ ವಾರ್ತೆ ಮದ್ದೂರು
ತಾಲೂಕಿನ ತೈಲೂರು ಗ್ರಾಮದ ಕೆರೆಯಲ್ಲಿ 3 ಕಾಡಾನೆಗಳು ಗುರುವಾರ ಮಧ್ಯಾಹ್ನ ಪ್ರತ್ಯಕ್ಷಗೊಂಡು ರೈತರ ಜಮೀನುಗಳಲ್ಲಿನ ಫಸಲು ನಾಶ ಪಡಿಸಿರುವ ಘಟನೆ ನಡೆದಿದೆ.ಬೆಂಗಳೂರು ದಕ್ಷಿಣ ಜಿಲ್ಲೆ ಚನ್ನಪಟ್ಟಣ ತಾಲೂಕಿನ ಶ್ರೀ ನರಸಿಂಹಸ್ವಾಮಿ ಬೆಟ್ಟದ ಹೂರಣಗೆರೆ ಅರಣ್ಯ ಪ್ರದೇಶದಿಂದ ಆಹಾರ ಅರಸಿ ವಲಸೆ ಬಂದಿರುವ ಎರಡು ಸಲಗ ಮತ್ತು ಒಂದು ಹೆಣ್ಣಾನೆ ತೈಲೂರು ಕೆರೆಯಲ್ಲಿ ಗುರುವಾರ ಬೀಡು ಬಿಟ್ಟು ಜಲ ಕ್ರೀಡೆಯಲ್ಲಿ ತೊಡಗಿದ್ದವು.
ತೈಲೂರು ಗ್ರಾಮಕ್ಕೆ ಬರುವ ಮಾರ್ಗ ಮಧ್ಯೆ ತಿಪ್ಪೂರು, ಬ್ಯಾಡರಹಳ್ಳಿ, ಮಾದನಾಯಕನಹಳ್ಳಿ, ಕೊಂಗ ಬೋರನದೊಡ್ಡಿ ಹಾಗೂ ಮಾದಾಪುರ ಗ್ರಾಮದ ಹೊರವಲಯದ ರೈತರ ಜಮೀನುಗಳಿಗೆ ನುಗ್ಗಿ ಬಾಳೆ ಮತ್ತು ತೆಂಗಿನ ಸಸಿಗಳನ್ನು ತಿಂದು ಲಕ್ಷಾಂತರ ರು. ಮೌಲ್ಯದ ಬೆಳೆ ನಾಶಪಡಿಸಿವೆ ಎಂದು ಅರಣ್ಯ ಅಧಿಕಾರಿಗಳು ಪ್ರಾಥಮಿಕವಾಗಿ ಅಂದಾಜು ಮಾಡಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ವಲಯ ಅರಣ್ಯಾಧಿಕಾರಿ ಗವಿಯಪ್ಪ ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಪಟಾಕಿ ಮತ್ತು ಏರ್ ಗನ್ ಗಳನ್ನು ಸಿಡಿಸುವ ಮೂಲಕ ಆನೆಗಳ ಹಿಂಡನ್ನು ಶುಕ್ರವಾರ ಬೆಳಗಿನ ಜಾವ ಮೂರು ಗಂಟೆ ಸುಮಾರಿಗೆ ಮಂಡ್ಯ ಜಿಲ್ಲೆ ಗಡಿಯಿಂದ ಚನ್ನಪಟ್ಟಣ ಗಡಿ ದಾಟಿಸುವಲ್ಲಿ ಯಶಸ್ವಿಯಾಗಿದ್ದಾರೆ.ಬೆಳೆ ಹಾನಿ ಕುರಿತು ರೈತರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದರೆ ಸರ್ಕಾರದಿಂದ ಸೂಕ್ತ ಪರಿಹಾರ ದೊರಕಿಸಲು ಶಿಫಾರಸ್ಸು ಮಾಡುವುದಾಗಿ ಅರಣ್ಯಾಧಿಕಾರಿ ಗವಿಯಪ್ಪ ಕನ್ನಡಪ್ರಭಕ್ಕೆ ತಿಳಿಸಿದರು.