ಪಟ್ಟಣದ ಹಳೆ ಆರ್ಟಿಒ ಕಚೇರಿ ಸಮೀಪ ಬಾಹುಬಲಿ ಬಟ್ಟೆ ಅಂಗಡಿ ಎದುರು ಬುಧವಾರ ರಾತ್ರಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಯುವಕರು ಸ್ಥಳದಲ್ಲೇ ಮೃತಪಟ್ಟಿದ್ದು, ಗಂಭೀರವಾಗಿ ಗಾಯಗೊಂಡ ಮತ್ತೋರ್ವ ಯುವಕ ಆಸ್ಪತ್ರೆಗೆ ಸಾಗಿಸುವಾಗ ದಾರಿಮಧ್ಯೆ ಮೃತಪಟ್ಟಿದ್ದಾನೆ.
ಕನ್ನಡಪ್ರಭ ವಾರ್ತೆ ಆಳಂದ
ಪಟ್ಟಣದ ಹಳೆ ಆರ್ಟಿಒ ಕಚೇರಿ ಸಮೀಪ ಬಾಹುಬಲಿ ಬಟ್ಟೆ ಅಂಗಡಿ ಎದುರು ಬುಧವಾರ ರಾತ್ರಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಯುವಕರು ಸ್ಥಳದಲ್ಲೇ ಮೃತಪಟ್ಟಿದ್ದು, ಗಂಭೀರವಾಗಿ ಗಾಯಗೊಂಡ ಮತ್ತೋರ್ವ ಯುವಕ ಆಸ್ಪತ್ರೆಗೆ ಸಾಗಿಸುವಾಗ ದಾರಿಮಧ್ಯೆ ಮೃತಪಟ್ಟಿದ್ದಾನೆ.ಮೂವರು ಯುವಕರು ಪ್ರಯಾಣಿಸುತ್ತಿದ್ದ ಮೋಟಾರ್ಸೈಕಲ್ಗೆ ವೇಗವಾಗಿ ಬಂದ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ಸಂಭವಿಸಿದ್ದು, ಅಪಘಾತದಲ್ಲಿ ಪಟ್ಟಣದ ಶರಣನಗರದ ಶ್ರೀಕಾಂತ ದಯಾನಂದ ಜಗದೆ (19) ಹಾಗೂ ಗುರುನಾಥ ಮಲ್ಲಿನಾಥ ಮಾಶಾಳ (25) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಶಶಿಕಾಂತ ಬಸವರಾಜ ಇಟಾಮಳೆ ಆಸ್ಪತ್ರೆಗೆ ಸಾಗಿಸುವಾಗ ದಾರಿಮಧ್ಯೆ ಮೃಪಟ್ಟ ಯುವಕ.
ಶ್ರೀಕಾಂತ ಬುಧವಾರ ರಾತ್ರಿ 8ಕ್ಕೆ ಕೆಲಸ ಮುಗಿಸಿ ಮನೆಗೆ ಬಂದಿದ್ದ. ಸ್ನೇಹಿತ ದರ್ಶನನ ಹುಟ್ಟುಹಬ್ಬದ ಕಾರ್ಯಕ್ರಮಕ್ಕೆ ಹೋಗುವುದಾಗಿ ಹಾಗೂ ವಿಂಡ್ ಕಂಪನಿಯ ಕಚೇರಿಯಲ್ಲಿ ಕೆಲವು ದಾಖಲೆಗಳನ್ನು ನೀಡಬೇಕೆಂದು ಹೇಳಿ ಮನೆಯಿಂದ ಹೊರಟಿದ್ದ. ರಾತ್ರಿ 10ಕ್ಕೆ ತಾಯಿ ಬಸಮ್ಮ ಕರೆ ಮಾಡಿದಾಗ ಹೊರಗಡೆ ಊಟ ಮಾಡುವುದಾಗಿ ತಿಳಿಸಿದ್ದನು. 11.15ರ ವೇಳೆಗೆ ಪಕ್ಕದ ಮನೆಯ ಮಹೇಶ ಪಾಟೀಲ ಮನೆಗೆ ಬಂದು ಶ್ರೀಕಾಂತನಿಗೆ ಹಳೇ ಆರ್ಟಿಒ ಕಚೇರಿ ಬಳಿ ಅಪಘಾತವಾಗಿದೆ ಎಂದು ತಿಳಿಸಿದ ಹಿನ್ನೆಲೆಯಲ್ಲಿ ತಂದೆ ದಯಾನಂದ ಹಾಗೂ ಸಹೋದರ ರಾಮಚಂದ್ರ ಸ್ಥಳಕ್ಕೆ ಧಾವಿಸಿದ್ದಾರೆ.ಶ್ರೀಕಾಂತ ತಲೆಗೆ ತೀವ್ರಪೆಟ್ಟಾಗಿದ್ದು, ಬಲಗೈ ಹಾಗೂ ಬಲಗಾಲು ಮುರಿದು ಮಾತನಾಡುವ ಸ್ಥಿತಿಯಲ್ಲಿರಲಿಲ್ಲ. ಗುರುನಾಥ ಮಾಶಾಳ ಅವರ ತೊಡೆ ಭಾಗಕ್ಕೆ ತೀವ್ರ ಗಾಯವಾಗಿದ್ದು, ಬಲಗಾಲು ಮುರಿದಿತ್ತು. ಶಶಿಕಾಂತ ಇಟಂಬ್ಲೆ ಕೂಡ ಬಲಗಾಲು ಮುರಿದು ಅರೆಪ್ರಜ್ಞಾವಸ್ಥೆಯಲ್ಲಿ ಬಿದ್ದಿದ್ದನು. ರಾತ್ರಿ ಸುಮಾರು 10.40ರ ವೇಳೆಗೆ ಯಾವುದೋ ಲಾರಿಯ ಚಾಲಕ ಅತಿವೇಗ ಹಾಗೂ ನಿರ್ಲಕ್ಷ್ಯದಿಂದ ಚಾಲನೆ ಮಾಡಿಕೊಂಡು ಬಂದು ಮೂವರಿದ್ದ ಮೋಟರ್ಸೈಕಲ್ಗೆ ಡಿಕ್ಕಿ ಹೊಡೆದಿದ್ದಾನೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಆಳಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಲಾರಿ ಚಾಲಕರ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.