ಕೊಪ್ಪಳ ಜಿಲ್ಲೆಯ ಬನ್ನಿಕೊಪ್ಪದ ಗ್ರಾಮದ ರಸ್ತೆಬದಿಯಲ್ಲಿ ಕೆಟ್ಟು ನಿಂತಿದ್ದ ಟಾಟಾ ಏಸ್ ವಾಹನಕ್ಕೆ ಬೈಕ್ ಡಿಕ್ಕಿಯಾಗಿ ಮೂವರು ಸ್ಥಳದಲ್ಲಿ ಸಾವಿಗೀಡಾಗಿದ್ದಾರೆ.
ನರಗುಂದ: ಈದ್ ಮಿಲಾದ್ ಮೆರವಣಿಗೆ ವೀಕ್ಷಿಸಲು ಪಟ್ಟಣದಿಂದ ಕೊಪ್ಪಳಕ್ಕೆ ಬೈಕ್ ನಲ್ಲಿ ತೆರಳುತ್ತಿದ್ದಾಗ ನಿಂತಿದ್ದ ಟಾಟಾ ಏಸ್ ವಾಹನಕ್ಕೆ ಡಿಕ್ಕಿಯಾಗಿ ಮೂವರು ಯುವಕರು ಸ್ಥಳದಲ್ಲೇ ಮೃತಪಟ್ಟ ಘಟನೆ ಬುಧವಾರ ಕೊಪ್ಪಳ ಜಿಲ್ಲೆಯ ಬನ್ನಿಕೊಪ್ಪ ಗ್ರಾಮದ ಬಳಿ ನಡೆದಿದೆ.
ಪಟ್ಟಣದ ಹೊರಕೇರಿ ಓಣಿಯ ಶಾನುಸಾಬ ಬಸಾಪೂರ(15), ಮಾಬುಸಾಬ ಮಟಗೇರಿ(17) ಹೊಸೂರ ಓಣಿಯ ಫಕ್ರುಸಾಬ್ ಮಟಗೇರಿ(18) ಎಂಬವರೇ ಮೃತಪಟ್ಟ ಯುವಕರು.ಈ ಮೂವರು ಯುವಕರು ಈದ್ ಮಿಲಾದ್ ಹಬ್ಬದ ಮೆರವಣಿಗೆ ವೀಕ್ಷಿಸಲು ಬುಧವಾರ ಬೆಳಗ್ಗೆ ನರಗುಂದದಿಂದ ಕೊಪ್ಪಳಕ್ಕೆ ಬೈಕ್ ನಲ್ಲಿ ತೆರಳುತ್ತಿದ್ದರು. ಕೊಪ್ಪಳ ಜಿಲ್ಲೆಯ ಬನ್ನಿಕೊಪ್ಪದ ಗ್ರಾಮದ ರಸ್ತೆಬದಿಯಲ್ಲಿ ಕೆಟ್ಟು ನಿಂತಿದ್ದ ಟಾಟಾ ಏಸ್ ವಾಹನಕ್ಕೆ ಬೈಕ್ ಡಿಕ್ಕಿಯಾಗಿ ಮೂವರು ಸ್ಥಳದಲ್ಲಿ ಸಾವಿಗೀಡಾಗಿದ್ದಾರೆ.
ಈದ ಮಿಲಾದ್ ಹಬ್ಬವನ್ನು ಕುಟುಂಬಸ್ಥರೊಂದಿಗೆ ಸಂಭ್ರಮದಿಂದ ಆಚರಣೆ ಮಾಡಬೇಕಾದ ಯುವಕರು ಮತ್ತೊಂದು ಉರಿಗೆ ಹಬ್ಬದ ಆಚರಣೆ ನೋಡಲು ತೆರಳಿದ ಯುವಕರು ಪ್ರಾಣವನ್ನು ಕಳೆದುಕೊಂಡಿದ್ದು ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿತ್ತು.ಮಾಬುಸಾಬ ಮಟಗೇರಿ 2ನೇ ವರ್ಷದ ಪಿಯುಸಿ ಶಿಕ್ಷಣ ಕಲಿಯುತ್ತಿದ್ದ. ಫಕ್ರುಸಾಬ ಮಾರನಬಸರಿ ಪೆಟ್ರೋಲ್ ಬಂಕ್ ನಲ್ಲಿ ಕೆಲಸ ಮಾಡುತ್ತಿದ್ದ. ಶಾನುಸಾಬ ಬಸಾಪೂರ ಎಂಬಾತ ಟೈಲ್ಸ್ ಕಲ್ಲು ಹೊಂದಿಸುವ ಕೆಲಸಕ್ಕೆ ಹೋಗುತ್ತಿದ್ದ. ಈ ಬಡ ಕುಟುಂಬದ ಮಕ್ಕಳು ಅಪಘಾತದಲ್ಲಿ ಪ್ರಾಣ ಕಳೆದುಕೊಂಡಿದ್ದು ಕುಟುಂಬದವರನ್ನು ಅಷ್ಟೇ ಅಲ್ಲದೇ ಇಡೀ ಪಟ್ಟಣದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿತ್ತು. ಕಳಪೆ ಜೋಳ ವಿತರಣೆ: ಪಡಿತರದಾರರ ಆರೋಪ
ನರಗುಂದ: ಸರ್ಕಾರ ಪ್ರತಿ ತಿಂಗಳ ಉಚಿತವಾಗಿ ಬಡವರಿಗೆ ನೀಡುವ ಆಹಾರ ಧಾನ್ಯ ಕಳಪೆವಾಗಿವೆ ಎಂದು ಪಡಿತರದಾರರು ಆರೋಪಿಸಿ ಆಹಾರ ಇಲಾಖೆಯ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.ಮಂಗಳವಾರ ಸಂಜೆ ಪಟ್ಟಣದ ಪಡಿತರ ವಿತರಣಾ ಸಂಖ್ಯೆ- 33ರಲ್ಲಿ ಪಡಿತರ ಧಾನ್ಯಗಳನ್ನು ಪಡೆಯಲು ಬಂದಾಗ ಜೋಳದಲ್ಲಿ ಕಲ್ಲು, ಮಣ್ಣು, ಇತರೆ ಹೊಲಸು ಇರುವುದನ್ನು ನೋಡಿ ಫಲಾನುಭವಿಗಳು ವಿತರಕರನ್ನು ತರಾಟೆಗೆ ತೆಗೆದುಕೊಂಡರು.ನಂತರ ವಿತರಕ, ಸರ್ಕಾರ ನಮಗೆ ಯಾವುದನ್ನು ಪೂರೈಕೆ ಮಾಡುತ್ತದೆಯೊ ಅದನ್ನು ವಿತರಣೆ ಮಾಡುತ್ತೇವೆ. ಜೋಳ ಕಳಪೆಯಾಗಿದೆ ಎಂದರೆ ಬೇರೆ ಜೋಳವನ್ನು ತರಿಸಿ ವಿತರಣೆ ಮಾಡಲಾಗುವುದೆಂದು ಹೇಳಿದಾಗಲೂ ಪಡಿತರದಾರರು ಸಮಾಧಾನಗೊಳ್ಳಲಿಲ್ಲ. ಆಗ ವಿತರಕರು ಆಹಾರ ಇಲಾಖೆಯ ಅಧಿಕಾರಿಗಳನ್ನು ದೂರವಾಣಿ ಮೂಲಕ ಸಂಪರ್ಕಿಸಿ ವಿಷಯ ತಿಳಿಸಿದರು. ಆಹಾರ ನಿರೀಕ್ಷಕ ಅನಿಲ ಪವಾರ ವಿತರಣಾ ಕೇಂದ್ರಕ್ಕೆ ಆಗಮಿಸಿ ಪಡಿತರ ಚೀಟಿ ಕಾರ್ಡದಾರರು ಆಹಾರ ನಿರೀಕ್ಷಕರನ್ನು ತರಾಟೆಗೆ ತೆಗೆದುಕೊಂಡು ಪ್ರತಿ ತಿಂಗಳ ಬರುವ ಆಹಾರ ಧಾನ್ಯಗಳನ್ನು ಗೋದಾಮಿನಲ್ಲಿ ಪರಿಶೀಲನೆ ಮಾಡಿ ಕಳಿಸಬೇಕು. ಏಕೆ ನೀವು ಇಂಥಾ ಕಳಪೆ ಜೋಳವನ್ನು ವಿತರಣಾ ಕೇಂದ್ರಕ್ಕೆ ಪೂರೈಕೆ ಮಾಡಿದ್ದೇರೆಂದು ತರಾಟೆಗೆ ತೆಗೆದುಕೊಂಡರು.ಆಹಾರ ನಿರೀಕ್ಷಕರು ಆಹಾರ ಧಾನ್ಯಗಳನ್ನು ವಿತರಣೆ ಮಾಡುವುದನ್ನು ನಿಲ್ಲಿಸಿ ಎಲ್ಲ ಕಾರ್ಡದಾರರಿಗೆ ಬೇರೆ ಆಹಾರ ಧಾನ್ಯಗಳನ್ನು ವ್ಯವಸ್ಥೆ ಮಾಡಲಾಗುವುದೆಂದು ಹೇಳಿದಾಗ ಫಲಾನುಭವಿಗಳು ಪ್ರತಿಭಟನೆ ಕೈಬಿಟ್ಟರು.ಈ ಸಂದರ್ಭದಲ್ಲಿ ಹನುಮಂತ ಕಾಡಪ್ಪನವರ, ಮರಿಗೌಡ್ರ, ಮಂಜು ಹಾರಗೇರಿ, ಹನುಮಂತ ತಿರ್ಲಾಪೂರ, ಅಲ್ಲಾಭಕ್ಷಿ ಖಲೀಫ, ಹನುಮಂತಪ್ಪ ಹನುಮಸಾಗರ ಇತರರು ಇದ್ದರು.