ಮಲೆನಾಡಿನ ಹಾಗೂ ಬಯಲುಸೀಮೆ ಭಕ್ತರ ಶಕ್ತಿ ದೇವತೆ ಪುರಾಣ ಪ್ರಸಿದ್ಧ ತಾಲೂಕಿನ ಚಂದ್ರಗುತ್ತಿ ಶ್ರೀ ರೇಣುಕಾಂಬ ದೇವಸ್ಥಾನಕ್ಕೆ ಹೊಸ್ತಿಲು ಹುಣ್ಣಿಮೆ ನಿಮಿತ್ತ ಭಕ್ತಾದಿಗಳು ಆಗಮಿಸಿ ಶ್ರೀ ದೇವಿಯ ದರ್ಶನ ಪಡೆದು ಉಧೋ...ಉಧೋ.... ಎಂದು ಭಕ್ತಿ ಸಮರ್ಪಿಸಿದರು.
ಕನ್ನಡಪ್ರಭ ವಾರ್ತೆ ಸೊರಬ
ಮಲೆನಾಡಿನ ಹಾಗೂ ಬಯಲುಸೀಮೆ ಭಕ್ತರ ಶಕ್ತಿ ದೇವತೆ ಪುರಾಣ ಪ್ರಸಿದ್ಧ ತಾಲೂಕಿನ ಚಂದ್ರಗುತ್ತಿ ಶ್ರೀ ರೇಣುಕಾಂಬ ದೇವಸ್ಥಾನಕ್ಕೆ ಹೊಸ್ತಿಲು ಹುಣ್ಣಿಮೆ ನಿಮಿತ್ತ ಭಕ್ತಾದಿಗಳು ಆಗಮಿಸಿ ಶ್ರೀ ದೇವಿಯ ದರ್ಶನ ಪಡೆದು ಉಧೋ...ಉಧೋ.... ಎಂದು ಭಕ್ತಿ ಸಮರ್ಪಿಸಿದರು.ತಾಲೂಕು ಸೇರಿದಂತೆ ಬ್ಯಾಡಗಿ, ರಾಣೆಬೆನ್ನೂರು, ಹರಿಹರ, ಶಿಕಾರಿಪುರ, ಹಾನಗಲ್, ವಿಜಯಪುರ , ಚಿತ್ರದುರ್ಗ, ಶಿವಮೊಗ್ಗ, ಬೆಳಗಾವಿ, ಹಾವೇರಿ ಸೇರಿದಂತೆ ಉತ್ತರ ಕರ್ನಾಟಕ ಭಾಗಗಳಿಂದ ಸಾವಿರಾರು ಭಕ್ತರು ಆಗಮಿಸಿದ್ದರು.
ಭಕ್ತರು ಶ್ರೀ ರೇಣುಕಾದೇವಿಯ ದರ್ಶನ ಪಡೆದು, ದೇವಿಯ ಹೆಸರಿನಲ್ಲಿ ವಿವಿಧ ಧಾರ್ಮಿಕ ಆಚರಣೆಗಳನ್ನು ನಡೆಸಿದರು. ಹುಣ್ಣಿಮೆ ಅಂಗವಾಗಿ ದೇವಸ್ಥಾನದ ಆವರಣದಲ್ಲಿರುವ ಪರಿವಾರ ದೇವರುಗಳಾದ ಕಾಲಭೈರವ, ನಾಗದೇವತೆ, ಮಾತಂಗಿ, ಪರಶುರಾಮ, ತ್ರಿಶೂಲದ ಬೈರಪ್ಪ ದೇವರುಗಳಿಗೆ ಮತ್ತು ತೊಟ್ಟಿಲು ಬಾವಿಗೆ ಭಕ್ತರು ವಿಶೇಷ ಪೂಜೆ ಸಲ್ಲಿಸಿದರು.ಇನ್ನು ಕೆಲ ಭಕ್ತರು ಖಾದ್ಯಗಳನ್ನು ತಯಾರಿಸಿಕೊಂಡು ಬಂದು ದೇವಿಯ ಹೆಸರಿನಲ್ಲಿ ನೈವೇದ್ಯ ಅರ್ಪಿಸಿ ನಂತರ ಬಂಧು ಬಳಗದವರ ಜೊತೆ ಸಹ ಭೋಜನ ಮಾಡಿದರು. ಗ್ರಾಮದಲ್ಲಿ ಶ್ರೀ ರೇಣುಕಾಂಬ ದೇವಿ ಪಲ್ಲಕ್ಕಿ ಉತ್ಸವವು ವಿವಿಧ ವಾದ್ಯ ಮೇಳಗಳೊಂದಿಗೆ ಸಂಭ್ರಮದಿಂದ ಜರುಗಿತು. ದೇವಸ್ಥಾನದ ಕಾರ್ಯನಿರ್ವಾಹಣಾಧಿಕಾರಿ ಪ್ರಮೀಳಾ ಕುಮಾರಿ ಅವರು ಪೂಜಾ ಕೈಂಕರ್ಯಗಳ ಸಮ್ಮುಖ ವಹಿಸಿದ್ದರು.