ವರ್ಷಕ್ಕೊಮ್ಮೆ ಮಾತ್ರ ಬಾಗಿಲು ತೆರೆಯುವ ಹಾಸನದ ಅಧಿದೇವತೆ ಹಾಸನಾಂಬೆಯ ದರ್ಶನ ಪಡೆಯಲು ರಾಜ್ಯದಾದ್ಯಂತ ಅಪಾರ ಸಂಖ್ಯೆಯ ಭಕ್ತಾದಿಗಳು ಆಗಮಿಸುತ್ತಿದ್ದು ಹಾಸನಾಂಬೆಯ ದರ್ಶನ ಮುಗಿಸಿದ ನಂತರ, ಐತಿಹಾಸಿಕ ಪ್ರಸಿದ್ಧ ಬೇಲೂರು ಶ್ರೀ ಚೆನ್ನಕೇಶವ ಸ್ವಾಮಿ ಹಾಗೂ ಹಳೆಬೀಡು ದೇಗುಲ ದರ್ಶನಕ್ಕೆ ತೆರಳುವ ಮಹಿಳಾ ಭಕ್ತರ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿರುವುದರಿಂದ ಹಾಸನದಿಂದ ಬೇಲೂರಿನತ್ತ ಮಹಿಳೆಯರು ಸಾಲು ಸಾಲಾಗಿ, ತಂಡ ತಂಡವಾಗಿ ಪ್ರಯಾಣ ಬೆಳೆಸುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಬೇಲೂರು

ಹಾಸನಾಂಬೆಯ ದರ್ಶನ ಪಡೆದ ನಂತರ ವಿಶ್ವವಿಖ್ಯಾತ ಬೇಲೂರು ಶ್ರೀ ಚೆನ್ನಕೇಶವ ದೇಗುಲ ಹಾಗೂ ಹಳೇಬೀಡು ಹೊಯ್ಸಳೇಶ್ವರ ದೇಗುಲ ವೀಕ್ಷಣೆಗೆ ಹೆಚ್ಚಾಗಿ ಬರುತ್ತಿದ್ದು ಹೋಟೆಲ್ ಸೇರಿದಂತೆ ಇತರೆ ವ್ಯಾಪಾರ ವಹಿವಾಟು ಜೋರಾಗಿದೆ. ವರ್ಷಕ್ಕೊಮ್ಮೆ ಮಾತ್ರ ಬಾಗಿಲು ತೆರೆಯುವ ಹಾಸನದ ಅಧಿದೇವತೆ ಹಾಸನಾಂಬೆಯ ದರ್ಶನ ಪಡೆಯಲು ರಾಜ್ಯದಾದ್ಯಂತ ಅಪಾರ ಸಂಖ್ಯೆಯ ಭಕ್ತಾದಿಗಳು ಆಗಮಿಸುತ್ತಿದ್ದು ಹಾಸನಾಂಬೆಯ ದರ್ಶನ ಮುಗಿಸಿದ ನಂತರ, ಐತಿಹಾಸಿಕ ಪ್ರಸಿದ್ಧ ಬೇಲೂರು ಶ್ರೀ ಚೆನ್ನಕೇಶವ ಸ್ವಾಮಿ ಹಾಗೂ ಹಳೆಬೀಡು ದೇಗುಲ ದರ್ಶನಕ್ಕೆ ತೆರಳುವ ಮಹಿಳಾ ಭಕ್ತರ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿರುವುದರಿಂದ ಹಾಸನದಿಂದ ಬೇಲೂರಿನತ್ತ ಮಹಿಳೆಯರು ಸಾಲು ಸಾಲಾಗಿ, ತಂಡ ತಂಡವಾಗಿ ಪ್ರಯಾಣ ಬೆಳೆಸುತ್ತಿರುವ ದೃಶ್ಯಗಳು, ಧರ್ಮಸ್ಥಳಕ್ಕೆ ತೆರಳುವ ‘ಧರ್ಮಸ್ಥಳ ಪಾದಯಾತ್ರೆಯನ್ನು ನೆನಪಿಸುವಂತಿದೆ. ರಾಜ್ಯ ಸರ್ಕಾರದ ಉಚಿತ ಬಸ್ ಪ್ರಯಾಣ (ಶಕ್ತಿ ಯೋಜನೆ) ಸೌಲಭ್ಯದಿಂದಾಗಿ ಗ್ರಾಮೀಣ ಹಾಗೂ ನಗರ ಪ್ರದೇಶಗಳ ಅಪಾರ ಸಂಖ್ಯೆಯ ಮಹಿಳೆಯರು ಈ ಪ್ರವಾಸದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಬೇಲೂರು , ಹಾಸನ ರಾಜ್ಯ ಸಾರಿಗೆ ಸಂಸ್ಥೆಯ ನಿಲ್ದಾಣದಲ್ಲಿ ಮಹಿಳೆಯರ ಸಂಖ್ಯೆ ಹೆಚ್ಚಾಗುತ್ತಿದ್ದು ಬಸ್ಸು ಬಂದಾಗ ಒಬ್ಬರ ಮೇಲೆ ಒಬ್ಬರು ಬಿದ್ದು ಹತ್ತುವಂತಾಗಿದೆ. ಸೀಟಿಗಾಗಿ ಜಗಳ ಕಲಹಗಳು ಮಾಮೂಲಾಗಿದೆ. ಬಸ್ ನಿಲ್ದಾಣದಿಂದ ದೇಗಲ ರಸ್ತೆಯಲ್ಲಿ ತಂಡೋಪತಂಡವಾಗಿ ತೆರಳುತ್ತಿದ್ದಾರೆ. ಚೆನ್ನಕೇಶವ ಸ್ವಾಮಿ ಹಾಗೂ ಹಳೆಬೀಡು ದೇಗುಲ ದರ್ಶನಕ್ಕೆ ತೆರಳುವ ಮಹಿಳಾ ಭಕ್ತರ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿರುವುದರಿಂದ ಆಟೋ ಚಾಲಕರು ಹಾಗೂ ಹೋಟೆಲ್ ಗಳಿಗೆ ಶುಕ್ರದೆಸೆ ಬಂದಂತಾಗಿದೆ. ಪಟ್ಟಣದ ಹೋಟೆಲ್‌ಗಳು ತುಂಬಿತುಳುಕುತ್ತಿವೆ. ಆಟೋ ಚಾಲಕರು ಬಸ್ ನಿಲ್ದಾಣದಿಂದ ದೇಗುಲಕ್ಕೆ ಪ್ರಯಾಣಿಕರನ್ನು ಕರೆದುಕೊಂಡು ಹೋಗಲು ತುದಿಗಾಲಲ್ಲಿ ನಿಲ್ಲುತ್ತಿದ್ದಾರೆ.