ಮನೆಯ ಕಸದಂತೆ ಮನದಲ್ಲಿನ ಆಲಸ್ಯ ಹೊರಹಾಕಿ

| Published : Nov 25 2024, 01:02 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ಸ್ವಂತ ಮನೆಯ ಕಸ ಹೊರಗೆ ಹಾಕಿದಂತೆ ಸ್ವಂತ ಜೀವನ ಹಾಗೂ ಸ್ವಂತ ಮನದೊಳಗಿನ ಆಲಸ್ಯ ಎಂಬ ಕಸ ತೆಗೆದುಹಾಕಬೇಕು ಎಂದು ಶಿಕ್ಷಣ ತಜ್ಞ, ಲೋಕ ಶಿಕ್ಷಣ ಟ್ರಸ್ಟ್ ಧರ್ಮದರ್ಶಿ ಡಾ.ಗುರುರಾಜ್ ಕರಜಗಿ ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಸ್ವಂತ ಮನೆಯ ಕಸ ಹೊರಗೆ ಹಾಕಿದಂತೆ ಸ್ವಂತ ಜೀವನ ಹಾಗೂ ಸ್ವಂತ ಮನದೊಳಗಿನ ಆಲಸ್ಯ ಎಂಬ ಕಸ ತೆಗೆದುಹಾಕಬೇಕು ಎಂದು ಶಿಕ್ಷಣ ತಜ್ಞ, ಲೋಕ ಶಿಕ್ಷಣ ಟ್ರಸ್ಟ್ ಧರ್ಮದರ್ಶಿ ಡಾ.ಗುರುರಾಜ್ ಕರಜಗಿ ಹೇಳಿದರು.

ನಗರದ ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರದಲ್ಲಿ ಬಿದರಿ ಚೈಲ್ಡ್ ಅಕಾಡೆಮಿ ಪಾಲಕರಿಗಾಗಿ ಮಾರ್ಗದರ್ಶನ ಗೋಷ್ಠಿಯಲ್ಲಿ ಮಾತನಾಡಿದರು. ಇದು ಜೀವನ, ಇದು ನಮ್ಮ ಸ್ವಂತ ಜೀವನ, ಸ್ವಂತ ಮನೆಗೆ ಮೊಳೆ ಸಹ ಹೊಡೆಯುವುದಿಲ್ಲ, ಸ್ವಂತ ಮನೆಯಲ್ಲಿ ಕಸ ಇರಿಸುವುದಿಲ್ಲ, ಅಂದವಾದ ಬಣ್ಣ ಬಳಿಯುತ್ತೇವೆ. ಆದರೆ, ಈ ಜೀವನ ನಮ್ಮದು, ಇದು ನಮ್ಮದೇ ಸ್ವಂತ ಜೀವನ, ಹೀಗಾಗಿ ಇದನ್ನು ಸ್ವಚ್ಛ, ಪರಿಶುದ್ಧವಾಗಿರಿಸಿಕೊಳ್ಳಬೇಕು ಎಂದರು.

ಸಮಯ ಅಮೂಲ್ಯ, ಕಳೆದು ಹೋದ ಹಣ ಮರಳಬಹುದು, ಆದರೆ ಸಮಯ ಯಾವತ್ತೂ ಮರಳಿ ಬರುವುದಿಲ್ಲ. ಅವಕಾಶ ಬಂದಾಗ ಅದನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಮೌಲ್ಯಗಳನ್ನು ಹೇಳಿ ಕಲಿಸಲು ಸಾಧ್ಯವಿಲ್ಲ, ನಿಮ್ಮ ನಡೆಯೇ ಮೌಲ್ಯಗಳನ್ನು ನಿರೂಪಿಸುತ್ತದೆ. ಪಾಲಕರು ಮಗನನ್ನು ಈ ರೀತಿ ಸಾಧನೆ ಮಾಡು ಎಂದು ಹೇಳುವ ಬದಲು ಸ್ವತಃ ಸಾಧನೆ ಮಾಡಿ, ಆಗ ಮಕ್ಕಳು ನಿಮ್ಮನ್ನು ಅನುಸರಿಸುತ್ತಾರೆ, ಚಂದ್ರನ ಮೇಲೆ ಹೋಗು ಎಂದು ಹೇಳುವ ಬದಲು ನೀವೇ ಮೊದಲು ಚಂದ್ರನ ಬಳಿಗೆ ಹೋಗಿ ನಿಮ್ಮ ಮಗುವನ್ನು ಚಂದ್ರನಲ್ಲಿಗೆ ಆಹ್ವಾನಿಸಿ ಎಂಬ ಮಾತಿದೆ ಎಂದರು.ಖ್ಯಾತ ವೈದ್ಯ ಡಾ.ರವಿಕುಮಾರ್ ಮಾತನಾಡಿ, ನಿದ್ದೆ ಅತ್ಯಂತ ಮುಖ್ಯ, ಮೊಬೈಲ್ ಕಾರಣದಿಂದ ಮಕ್ಕಳಿಗೆ ನಿದ್ರಾಹೀನತೆ ಕಾರಣವಾಗುತ್ತಿದೆ. ಈ ಹಿಂದೆ ಮಕ್ಕಳಲ್ಲಿ ಸಮಸ್ಯೆಯೇ ಇರಲಿಲ್ಲ, ಆದರೆ ಇಂದು ಇದೇ ಪ್ರಧಾನವಾಗಿದೆ. ರಾತ್ರಿ ಸಮಯದಲ್ಲಿ ಮೊಬೈಲ್ ಬಳಕೆ ನಮ್ಮ ನಿದ್ದೆ ದೂರ ಮಾಡುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು. ನಾನು ಒಂದು ಪೋಸ್ಟ್ ಹಾಕಿದರೆ ಅದಕ್ಕೆ ಲೈಕ್ ಬರಬೇಕು, ಅವರು ಲೈಕ್ ಮಾಡಿದ್ದಾರೆ, ಅವರು ಲೈಕ್ ಮಾಡಿಲ್ಲ ಎನ್ನುವ ಕೊರಗು ಸಹ ಈಗಿನ ಪೀಳಿಗೆಯಲ್ಲಿ ಗೀಳಾಗಿ ಕಾಡುತ್ತಿದೆ ಎಂದರು.

ನಗರದ ಶಾಸಕ ಬಸನಗೌಡ ಪಾಟೀಲ ಯತ್ನಾಳ ಮಾತನಾಡಿ, ಇಂದಿನ ಮಕ್ಕಳಿಗೆ ಮಾನಸಿಕ ಶಿಕ್ಷಣದ ಜೊತೆಗೆ ಶಾರೀರಿಕ ಶಿಕ್ಷಣ ಅತೀ ಅವಶ್ಯವಿದೆ ಎಂದರು.ನವ್ಹೆಂಬರ್ ತಿಂಗಳಲ್ಲಿ ಜರುಗಿದ ಚಿತ್ರಕಲೆ, ಪ್ರಬಂಧ, ಚೆಸ್, ರನ್ನಿಂಗ್, ಲಾಂಗ್ ಜಂಪ್, ಶಾಟ್ ಪುಟ್, ಭರತನಾಟ್ಯ ಹಾಗೂ ಜಾನಪದ ನೃತ್ಯಗಳ ಸ್ಪರ್ಧೆಗಳು ಹಾಗೂ ಸಾಹಸಕ್ರೀಡೆಗಳ ತರಬೇತಿ ಶಿಬಿರಗಳಲ್ಲಿ ಭಾಗವಹಿಸಿ ತಮ್ಮ ಪ್ರತಿಭೆ, ಕೌಶಲ್ಯಗಳನ್ನು ಪ್ರದರ್ಶಿಸಿ ವಿಜೇತರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಡಾ.ಬಿದರಿ ಚೈಲ್ಡ್ ಅಕಾಡೆಮಿ ಸಂಸ್ಥಾಪಕ ಅಧ್ಯಕ್ಷ ಡಾ.ಎಲ್.ಎಚ್. ಬಿದರಿ, ನಾಗಠಾಣ ಮತಕ್ಷೇತ್ರದ ಶಾಸಕರಾದ ವಿಠ್ಠಲ ಕಟಕಧೋಂಡ, ಪಾಲಿಕೆ ಆಯುಕ್ತ ವಿಜಯಕುಮಾರ ಮೆಕ್ಕಳಕಿ, ಚೈಲ್ಡ್ ಅಕಾಡೆಮಿಯ ಸದಸ್ಯೆ ಶೋಭಾ ಬಿದರಿ, ಪ್ರೊ.ರಾಜು ಬಿದರಿ, ಪ್ರಕಾಶ ಮಠ, ದೀಪಾ ತಟ್ಟಿಮನಿ, ಮೋಹನ ಕಟ್ಟಿಮನಿ ಮೊದಲಾದವರು ಉಪಸ್ಥಿತರಿದ್ದರು. ಡಾ.ಗೌರಿ ಹಾಗೂ ಡಾ.ಅಪೂರ್ವ ಮಕ್ಕಳ ಕುರಿತು ಮಹತ್ವದ ವಿಷಯಗಳ ಮೇಲೆ ಬೆಳಕು ಚೆಲ್ಲಿದರು.