ಗುಡುಗು ಸಹಿತ ಮಳೆ: ಸಿಡಿಲಿಗೆ ಎತ್ತು ಬಲಿ

| Published : Oct 20 2024, 02:08 AM IST / Updated: Oct 20 2024, 02:09 AM IST

ಸಾರಾಂಶ

ಚಿಕ್ಕಮಗಳೂರು: ಜಿಲ್ಲೆಯ ಮಲೆನಾಡಿನ ಕೆಲವೆಡೆ ಶನಿವಾರ ಮಧ್ಯಾಹ್ನದ ನಂತರ ಗುಡುಗು ಸಹಿತ ಮಳೆಯಾಗಿದ್ದು, ಸಿಡಿಲಿಗೆ ಒಂದು ಎತ್ತು ಮೃತಪಟ್ಟಿದೆ.

ಚಿಕ್ಕಮಗಳೂರು: ಜಿಲ್ಲೆಯ ಮಲೆನಾಡಿನ ಕೆಲವೆಡೆ ಶನಿವಾರ ಮಧ್ಯಾಹ್ನದ ನಂತರ ಗುಡುಗು ಸಹಿತ ಮಳೆಯಾಗಿದ್ದು, ಸಿಡಿಲಿಗೆ ಒಂದು ಎತ್ತು ಮೃತಪಟ್ಟಿದೆ.

ಚಿಕ್ಕಮಗಳೂರು ತಾಲೂಕಿನ ಕರ್ತಿಕೆರೆ ಗ್ರಾಮದ ಬಳಿ ಮಹೇಶ್ ಎಂಬುವವರಿಗೆ ಸೇರಿದ ಎತ್ತು ಹೊಲದಲ್ಲಿ ಸಿಡಿಲು ಬಡಿದು ಮೃತಪಟ್ಟಿದೆ. ಮೂಡಿಗೆರೆ, ಶೃಂಗೇರಿಯ ಕೆಲವೆಡೆ ಮಳೆ ಜತೆಗೆ ಗುಡುಗಿನ ಅಬ್ಬರ ಜೋರಾಗಿತ್ತು.

ಚಿಕ್ಕಮಗಳೂರು ನಗರ ಸೇರಿದಂತೆ ಕೆಲವು ಗ್ರಾಮೀಣ ಭಾಗದಲ್ಲಿ ಶನಿವಾರ ಮಧ್ಯಾಹ್ನ ಒಂದು ಗಂಟೆಯ ವೇಳೆಗೆ ದಿಢೀರ್‌ ಮಳೆ ಆರಂಭ ಗೊಂಡಿತು. ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಧಾರಾಕಾರವಾಗಿ ಸುರಿಯಿತು. ಕರ್ತೀಕೆರೆ ಗ್ರಾಮದ ಮಹೇಶ್‌ ಅವರು ತಮ್ಮ ಹೊಲದಲ್ಲಿ ಬೇಸಾಯ ಮಾಡಿ ಎತ್ತುಗಳು ಮೇಯಲು ಬಿಟ್ಟಿದ್ದರು. ಈ ವೇಳೆಯಲ್ಲಿ ಒಂದು ಎತ್ತಿಗೆ ಸಿಡಿಲು ಬಡಿದಿದೆ. ಹಾಗಾಗಿ ಅದು ಸ್ಥಳದಲ್ಲೇ ಮೃತಪಟ್ಟಿದೆ.

ಮುಳ್ಳಯ್ಯನಗಿರಿ ಸುತ್ತಮುತ್ತಲೂ ಸಾಧಾರಣ ಮಳೆಯಾಗಿದೆ. ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ, ಬಣಕಲ್‌ ಸೇರಿದಂತೆ ಸುತ್ತಮುತ್ತ ಮಧ್ಯಾಹ್ನ ಒಂದು ಗಂಟೆಗೆ ಆರಂಭವಾದ ಮಳೆ ಸುಮಾರು ಎರಡೂವರೆ ಗಂಟೆವರೆಗೆ ಧಾರಾಕಾರವಾಗಿ ಸುರಿಯಿತು. ಗುಡುಗು, ಸಿಡಿಲಿನ ಅಬ್ಬರ ಜೋರಾಗಿತ್ತು.

ಕೊಪ್ಪ ಪಟ್ಟಣ ಸೇರಿದಂತೆ ಸುತ್ತಮುತ್ತ ಮಧ್ಯಾಹ್ನ 3.30 ರಿಂದ 20 ನಿಮಿಷಗಳ ಕಾಲ ಬಂದು ನಂತರ ಬಿಡುವು ನೀಡಿತು. ಶೃಂಗೇರಿ ಹಾಗೂ ಕಳಸ ತಾಲೂಕುಗಳಲ್ಲೂ ಮಳೆ ಬಂದಿದೆ. ಆದರೆ, ತರೀಕೆರೆ ಹಾಗೂ ಕಡೂರು ತಾಲೂಕುಗಳಲ್ಲಿ ಬೆಳಿಗ್ಗೆಯಿಂದಲೇ ಬಿಸಿಲಿನ ವಾತಾವರಣ ಇದ್ದು ಸಂಜೆ ವೇಳೆಗೆ ಮೋಡ ಕವಿದ ವಾತಾವರಣ ಇತ್ತು.

19 ಕೆಸಿಕೆಎಂ 3ಚಿಕ್ಕಮಗಳೂರು ತಾಲೂಕಿನ ಕರ್ತಿಕೆರೆ ಗ್ರಾಮದ ಬಳಿ ಶನಿವಾರ ಸಿಡಿಲು ಬಡಿದು ಎತ್ತು ಮೃತಪಟ್ಟಿರುವುದು.--- ಬಾಕ್ಸ್--

ಶೃಂಗೇರಿ ವಿವಿಧೆಡೆ ಸಾದಾರಣ ಮಳೆ ಶೃಂಗೇರಿ: ತಾಲೂಕಿನಲ್ಲಿ ಮಳೆ ಮತ್ತೆ ಮುಂದುವರಿದಿದ್ದು ಶನಿವಾರ ಶೃಂಗೇರಿ ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶದ ವಿವಿಧೆಡೆ ಸಾದಾರಣ ಮಳೆ ಸುರಿಯಿತು. ಕೆರೆಕಟ್ಟೆ, ನೆಮ್ಮಾರು ಸುತ್ತಮುತ್ತಲ ಪ್ರದೇಶಗಳಲ್ಲಿ ಬೆಳಿಗ್ಗೆಯಿದಲೇ ಆರಂಭಗೊಂಡ ಮಳೆ ಮಧ್ಯಾಹ್ನದವರೆಗೂ ಆಗಾಗ ಸುರಿಯುತ್ತಿತ್ತು.

ಮಧ್ಯಾಹ್ನ ದಟ್ಟ ಮೋಡ ಕವಿದು ಮತ್ತೆ ಮಳೆ ಸುರಿಯಿತು. ಬೆಳಿಗ್ಗೆಯಿಂದ ಮೋಡ ಬಿಸಿಲು, ಮಳೆಯ ವಾತಾವರಣವಿತ್ತು. ಗೌರಿ ಗಣೇಶ ಹಬ್ಬ, ನವರಾತ್ರಿ ಉತ್ಸವಗಳಲ್ಲಿ ಬಿಡುವಿಲ್ಲದೇ ಸುರಿದ ಮಳೆ ಇದೀಗ ದೀಪಾವಳಿ ಸಮೀಪಿಸುತ್ತಿದ್ದಂತೆ ಹಬ್ಬದ ಸಿದ್ಧತೆಗಳ ನಡುವೆ ಮಳೆ ಮತ್ತೆ ಸಿದ್ಧವಾಗುತ್ತಿದೆ.ಅಡಕೆ ಕೊಯಿಲು, ಬತ್ತದ ಗದ್ದೆಗಳಲ್ಲಿ ಪೈರುಗಳು ಕಟಾವಿಗೆ ಸಿದ್ದವಾಗುತ್ತಿರುವುದರಿಂದ ಮತ್ತೆ ನಿರಂತರ ಮಳೆ ಆಗಾಗ ಆರ್ಭಟಿಸುತ್ತಿರುವುದರಿಂದ ರೈತರಲ್ಲಿ ಆತಂಕ ಹುಟ್ಟಿಸುತ್ತಿದೆ. ಈಗಾಗಲೇ ಮಳೆಯಿಂದ ಬಹುತೇಕ ಅಡಕೆ, ಕಾಫಿ, ಕಾಳುಮೆಣಸು ಬೆಳೆಗಳು ನಾಶವಾಗಿವೆ. ಅಳಿದುಳಿದ ಫಸಲು ಹಾಳಾಗುತ್ತಿದೆ.

ಅಡಕೆ ಹಳದಿ ಎಲೆ ರೋಗ, ಎಲೆ ಚುಕ್ಕಿ ರೋಗ ದಿಂದ ತತ್ತರಿಸಿರುವ ರೈತರು, ಇದೀಗ ಕೊಳೆ ರೋಗದಿಂದ ಕಂಗೆಟ್ಟಿದ್ದಾರೆ. ವಿಪರೀತ ಮಳೆಯಿಂದ ಕಾಫಿ, ಕಾಳು ಮೆಣಸಿಗೂ ರೋಗ ತಗುಲಿದೆ. ಶನಿವಾರ ಸಂಜೆಯವರೆಗೂ ಮೋಡ, ಮಳೆ ವಾತಾವರಣ ಮುಂದುವರಿದಿತ್ತು.