ಶಿರಸಿಯಲ್ಲಿ ಗುಡುಗು ಸಹಿತ ಮಳೆ: ಕೆಲವೆಡೆ ಹಾನಿ

| Published : Oct 22 2024, 12:22 AM IST

ಸಾರಾಂಶ

ಸಿಡಿಲಿನ ಆರ್ಭಟಕ್ಕೆ ವಿದ್ಯುತ್ ಪರಿವರ್ತಕ ಸುಟ್ಟು ವಿದ್ಯುತ್ ವ್ಯತ್ಯಯದಿಂದ ಸಾರ್ವಜನಿಕರು ಪರದಾಡುವಂತಾಯಿತು. ಕೆಲವು ಭಾಗಗಳ ರಸ್ತೆಗಳಲ್ಲಿ ಮರ ಅಡ್ಡಲಾಗಿ ಬಿದ್ದು ಸುಗಮ ಸಂಚಾರಕ್ಕೆ ಸಮಸ್ಯೆ ಉಂಟಾಗಿತ್ತು.

ಶಿರಸಿ: ತಾಲೂಕಿನಾದ್ಯಂತ ಅ. ೨೦ ಹಾಗೂ ೨೧ರಂದು ಗುಡುಗು, ಸಿಡಿಲುಸಹಿತ ಧಾರಾಕಾರವಾಗಿ ಸುರಿದ ಮಳೆಗೆ ನಗರ ಹಾಗೂ ಗ್ರಾಮೀಣ ಭಾಗಗಳಲ್ಲಿ ಅಪಾರ ಪ್ರಮಾಣದಲ್ಲಿ ಹಾನಿಯಾಗಿದೆ.ಅ. ೨೦ರಂದು ರಾತ್ರಿ ೧೦ ಗಂಟೆ ಸುಮಾರಿಗೆ ಗುಡುಗು- ಸಿಡಿಲಿನ ಆರ್ಭಟಕ್ಕೆ ಗ್ರಾಮೀಣ ಭಾಗದ ಕೆಲ ಮನೆಗಳ ಯಂತ್ರೋಪಕರಣಗಳಿಗೆ ಹಾನಿಯಾದರೆ, ನಗರ ಪ್ರದೇಶದಲ್ಲಿ ಮಳೆಯ ಆರ್ಭಟಕ್ಕೆ ಮನೆಯೊಳಗೆ ನೀರು ನುಗ್ಗಿ ಸಾಕಷ್ಟು ಪ್ರಮಾಣದಲ್ಲಿ ಹಾನಿಯಾಗಿದೆ.

ಸಿಡಿಲಿನ ಆರ್ಭಟಕ್ಕೆ ವಿದ್ಯುತ್ ಪರಿವರ್ತಕ ಸುಟ್ಟು ವಿದ್ಯುತ್ ವ್ಯತ್ಯಯದಿಂದ ಸಾರ್ವಜನಿಕರು ಪರದಾಡುವಂತಾಯಿತು. ಕೆಲವು ಭಾಗಗಳ ರಸ್ತೆಗಳಲ್ಲಿ ಮರ ಅಡ್ಡಲಾಗಿ ಬಿದ್ದು ಸುಗಮ ಸಂಚಾರಕ್ಕೆ ಸಮಸ್ಯೆ ಉಂಟಾಗಿತ್ತು. ಸ್ಥಳೀಯ ಗ್ರಾಪಂ ಮತ್ತು ಸ್ಥಳೀಯರು ಮರ ತೆರವುಗೊಳಿಸಿ, ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಿದರು.ಅ. ೨೦ರಂದು ಸುರಿದ ಮಳೆಗೆ ಹಂಚರಟಾ ಗ್ರಾಮದ ಹೊಸಗದ್ದೆಯ ಮಂಜುನಾಥ ಶಿವು ನಾಯ್ಕ ಅವರ ಮನೆಯ ಪಕ್ಕದಲ್ಲಿರುವ ಕೊಟ್ಟಿಗೆಯ ಮೇಲೆ ಕಾಡು ಜಾತಿಯ ಮರ ಬಿದ್ದು ಕೊಟ್ಟಿಗೆಗೆ ಹಾನಿಯಾಗಿರುವುದಲ್ಲದೇ, ಆಕಳಿಗೆ ಸ್ವಲ್ಪ ಪ್ರಮಾಣದಲ್ಲಿ ಗಾಯಗೊಂಡಿದೆ. ಸ್ಥಳಕ್ಕೆ ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ, ಘಟನೆಯಿಂದ ಸುಮಾರು ₹೨೫ ಸಾವಿರ ಹಾನಿಯಾಗಿದೆ ಎಂದು ಅಂದಾಜಿಸಿದ್ದಾರೆ.

ನಾಳೆ ರಾಜ್ಯಮಟ್ಟದ ಜೇನು ಕೃಷಿಕರ ಕಾರ್ಯಾಗಾರ

ಶಿರಸಿ: ಕೃಷಿ, ತೋಟಗಾರಿಕೆ ಹಾಗೂ ಅರಣ್ಯ ಉತ್ಪನ್ನಗಳ ಅಭಿವೃದ್ಧಿ ಹಾಗೂ ಮೌಲ್ಯವರ್ಧನೆಗಾಗಿ ಜೇನು ಕೃಷಿಗೆ ಉತ್ತೇಜನ ನೀಡುವ ಉದ್ದೇಶಕ್ಕಾಗಿ ಅ. ೨೩ರಂದು ಬೆಳಗ್ಗೆ ೧೦ ಗಂಟೆಗೆ ನಗರದ ಟಿಎಂಎಸ್ ಸಭಾಭವನದಲ್ಲಿ ರಾಜ್ಯಮಟ್ಟದ ಒಂದು ದಿನದ ಜೇನು ಕೃಷಿಕರ ಕಾರ್ಯಾಗಾರ ಆಯೋಜಿಸಲಾಗಿದೆ ಎಂದು ಸ್ಕೋಡ್‌ವೆಸ್ ಕಾರ್ಯನಿರ್ವಾಹಕ ನಿರ್ದೇಶಕ ಡಾ. ವೆಂಕಟೇಶ ನಾಯ್ಕ ತಿಳಿಸಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜೇನು ಕೃಷಿಕರು, ಉದ್ಯಮವಾಗಿ ಜೇನು ಕೃಷಿಯನ್ನು ಅಭಿವೃದ್ಧಿಪಡಿಸಲು ಆಸಕ್ತಿ ಇರುವವರು, ಜೇನು ಮೌಲ್ಯವರ್ಧನೆ ಮಾಡಲು ಆಸಕ್ತಿ ಇರುವವರು, ಪರಿಸರ ಸಂರಕ್ಷಣೆ, ಅರಣ್ಯ ಅಭಿವೃದ್ಧಿ, ಜೀವ ವೈವಿಧ್ಯತೆಯ ಸಂರಕ್ಷಣೆಯಲ್ಲಿ ಆಸಕ್ತಿ ಇರುವವರು ಕಾರ್ಯಾಗಾರದಲ್ಲಿ ಭಾಗವಹಿಸಬಹುದು. ಕಾರ್ಯಾಗಾರದಲ್ಲಿ ನುರಿತ ಸಂಪನ್ಮೂಲ ವ್ಯಕ್ತಿಗಳು, ಜೇನು ಕೃಷಿ, ಮೌಲ್ಯವರ್ಧನೆ ಹಾಗೂ ಉದ್ಯಮವಾಗಿ ಜೇನುಕೃಷಿಯನ್ನು ಅಭಿವೃದ್ಧಿ ಪಡಿಸುವ ಬಗ್ಗೆ ಮಾಹಿತಿ ನೀಡುವರು. ಅಲ್ಲದೇ ಜೇನು ಕೃಷಿಗೆ ಪೂರಕವಾಗಿರುವ ವಿವಿಧ ಯೋಜನೆಗಳು ಹಾಗೂ ಸೌಲಭ್ಯಗಳ ಬಗ್ಗೆಯೂ ಮಾಹಿತಿ ನೀಡಲಾಗುವುದು ಎಂದರು.ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಹಣಕಾಸು ಅಧಿಕಾರಿ ಸರಸ್ವತಿ ಎನ್. ರವಿ, ಕಾರ್ಯಕ್ರಮ ಅಧಿಕಾರಿ ನಾರಾಯಣ ಹೆಗಡೆ ಮತ್ತಿತರರು ಇದ್ದರು.