ವಿಶೇಷ ವರದಿ

ಕನ್ನಡಪ್ರಭ ವಾರ್ತೆ ಹಾವೇರಿ

ನಗರದ ಕೆರಿಮತ್ತಿಹಳ್ಳಿ ರಸ್ತೆಯ ಇಕ್ಕೆಲಗಳಲ್ಲಿ ಕಸದ ರಾಶಿಯೇ ತುಂಬಿದ್ದು, ಸಮೀಪದಲ್ಲೇ ಇರುವ ಸರ್ಕಾರಿ ಐಟಿಐ ಕಾಲೇಜಿನ ವಿದ್ಯಾರ್ಥಿಗಳು ಮೂಗು ಮುಚ್ಚಿಕೊಂಡೇ ಹೋಗುವಂತಾಗಿದೆ. ಕೊಳೆತ ಹಣ್ಣು, ತರಕಾರಿ, ಪ್ಲಾಸ್ಟಿಕ್‌ ಸೇರಿದಂತೆ ನಿತ್ಯವೂ ಲಾರಿಗಟ್ಟಲೆ ಕಸ ದಿನ ಬೆಳಗಾಗುವಷ್ಟರಲ್ಲಿ ಇಲ್ಲಿ ಪ್ರತ್ಯಕ್ಷವಾಗುತ್ತದೆ. ಇದನ್ನು ನೋಡಿ ನಗರಸಭೆ ಆಡಳಿತ ಕೈಚೆಲ್ಲಿ ಕೂತಿದೆ.ನಗರದ ಕೆರಿಮತ್ತಿಹಳ್ಳಿ ರಸ್ತೆಯ ಇಕ್ಕೆಲಗಳಲ್ಲಿ ಕಸದ ರಾಶಿಯೇ ತುಂಬಿದ್ದು, ಸಮೀಪದಲ್ಲೇ ಇರುವ ಸರ್ಕಾರಿ ಐಟಿಐ ಕಾಲೇಜಿನ ವಿದ್ಯಾರ್ಥಿಗಳು ಮೂಗು ಮುಚ್ಚಿಕೊಂಡೇ ಹೋಗುವಂತಾಗಿದೆ. ಕೊಳೆತ ಹಣ್ಣು, ತರಕಾರಿ, ಪ್ಲಾಸ್ಟಿಕ್‌ ಸೇರಿದಂತೆ ನಿತ್ಯವೂ ಲಾರಿಗಟ್ಟಲೆ ಕಸ ದಿನ ಬೆಳಗಾಗುವಷ್ಟರಲ್ಲಿ ಇಲ್ಲಿ ಪ್ರತ್ಯಕ್ಷವಾಗುತ್ತದೆ. ಇದನ್ನು ನೋಡಿ ನಗರಸಭೆ ಆಡಳಿತ ಕೈಚೆಲ್ಲಿ ಕೂತಿದೆ.


ನಗರದ ಮೈಲಾರ ಮಹದೇವಪ್ಪ ಸರ್ಕಲ್‌ನಿಂದ ಅನತಿ ದೂರದಲ್ಲಿ ಕೆರಿಮತ್ತಿಹಳ್ಳಿ ರಸ್ತೆಯ ತುಂಬೆಲ್ಲ ಕಸದ ರಾಶಿಯೇ ಗೋಚರಿಸುತ್ತದೆ. ಇದು ಒಂದು ದಿನದ ಸಮಸ್ಯೆಯಲ್ಲ, ಯಾವಾಗ ನೋಡಿದರೂ ಇಲ್ಲಿ ತ್ಯಾಜ್ಯದ ರಾಶಿಯೇ ಕಾಣುತ್ತದೆ. ಕೊಳೆತ ಮಾವು, ಕಲ್ಲಂಗಡಿ, ತರಕಾರಿ ಸೇರಿದಂತೆ ತ್ಯಾಜ್ಯವನ್ನೆಲ್ಲ ರಾತ್ರಿ ಬೆಳಗಾಗುವದರೊಳಗೆ ಇಲ್ಲಿಗೆ ತಂದು ಚೆಲ್ಲುತ್ತಾರೆ. ಅನೇಕ ಅಂಗಡಿಗಳ ಮಾಲೀಕರು ಅಂದು ಸಂಗ್ರಹವಾದ ಕಸವನ್ನು ರಾತ್ರಿ ವೇಳೆ ಇಲ್ಲಿಗೆ ತಂದು ಸುರಿದು ಹೋಗುತ್ತಾರೆ. ಬೆಳಗ್ಗೆ ಪೌರಕಾರ್ಮಿಕರು ಬರುವಷ್ಟರಲ್ಲಿ ಲಾರಿಗಟ್ಟಲೆ ಕಸ ರಾಶಿಯಾಗಿರುತ್ತದೆ. ಅದನ್ನು ತೆರವುಗೊಳಿಸಿ ಹೋಗುವಷ್ಟರಲ್ಲಿ ಮತ್ತೆ ಅದೇ ಸ್ಥಿತಿ ನಿರ್ಮಾಣವಾಗಿರುತ್ತದೆ. ಕೆಲವು ಸಲ ನಗರಸಭೆಯವರು ನಾಲ್ಕಾರು ದಿನಗಳ ಕಾಲ ಇಲ್ಲಿರುವ ತ್ಯಾಜ್ಯ ತೆಗೆಯದಿದ್ದರೆ ರಸ್ತೆಯಲ್ಲಿ ಓಡಾಡುವುದೇ ಕಷ್ಟಕರವಾಗುತ್ತದೆ.

ವಿದ್ಯಾರ್ಥಿಗಳಿಗೆ ಸಮಸ್ಯೆ: ಈ ಕಸದ ರಾಶಿ, ವಾಸನೆ ದಾಟಿಕೊಂಡೇ ಸರ್ಕಾರಿ ಐಟಿಐ ಇದೆ. ನೂರಾರು ವಿದ್ಯಾರ್ಥಿಗಳು ಇದೇ ರಸ್ತೆಯಲ್ಲಿ ಓಡಾಡುತ್ತಾರೆ. ತ್ಯಾಜ್ಯದ ವಾಸನೆ ಐಟಿಐ ತರಗತಿ ಕೋಣೆವರೆಗೂ ಸೂಸುತ್ತದೆ. ಮೂಗು ಮುಚ್ಚಿಕೊಂಡೇ ವಿದ್ಯಾರ್ಥಿಗಳು ಈ ರಸ್ತೆಯಲ್ಲಿ ಸಂಚರಿಸುತ್ತಾರೆ. ಅಲ್ಲದೇ ಇದೇ ರಸ್ತೆಯಲ್ಲಿ ಮುಂದೆ ಪೊಲೀಸ್‌ ವಸತಿಗೃಹವೂ ಇದೆ. ಹಲವು ವಸತಿ ಬಡಾವಣೆಗಳೂ ಇವೆ. ಈ ರಸ್ತೆಯಲ್ಲಿ ಸಂಚರಿಸುವುದೇ ದುಸ್ತರವಾಗಿದೆ.

ಸಾರ್ವಜನಿಕ ಸ್ಥಳಗಳಲ್ಲಿ ಇದ್ದ ಕಸದ ತೊಟ್ಟಿಗಳನ್ನು ನಗರಸಭೆ ತೆರವು ಮಾಡಿದೆ. ಇದು ಹಲವು ಸಮಸ್ಯೆಗಳಿಗೆ, ಸಾರ್ವಜನಿಕ ತ್ಯಾಜ್ಯದ ವಿಲೇವಾರಿಗೆ ತೊಡಕುಂಟು ಮಾಡಿದ್ದು, ತರಕಾರಿ ಮಾರುಕಟ್ಟೆ, ವಿವಿಧ ಅಂಗಡಿ ಮುಂಗಟ್ಟೆ ಹಾಗೂ ಮಾಂಸದ ಅಂಗಡಿಗಳಲ್ಲಿ ಉತ್ಪಾದನೆಯಾಗುವ ತ್ಯಾಜ್ಯವನ್ನು ಎಲ್ಲಿ ವಿಲೇವಾರಿ ಮಾಡಬೇಕೆಂಬ ಗೊಂದಲಕ್ಕೆ ಕಾರಣವಾಗಿದ್ದು, ಇದರಿಂದ ನಗರದ ಅಂದಗೆಡುತ್ತಿದೆ.

ಅಂದಗೆಡಿಸುತ್ತಿರುವ ತ್ಯಾಜ್ಯ: ನಗರದ ಅನೇಕ ರಸ್ತೆಗಳೂ ಇದಕ್ಕೆ ಹೊರತಾಗಿಲ್ಲ. ಕಾಗಿನೆಲೆ ರಸ್ತೆ, ತೋಟದಯಲ್ಲಾಪುರ ರಸ್ತೆ, ಹಾನಗಲ್ಲ ರೋಡ್‌ ಬೈಪಾಸ್‌ ಸೇರಿದಂತೆ ಕಂಡಕಂಡಲ್ಲೆಲ್ಲ ಕಸದ ರಾಶಿ ಬೀಳುತ್ತಿದೆ. ನಗರಸಭೆ ಇದೆಯೋ ಇಲ್ಲವೋ ಎಂದು ಜನತೆ ಆಡಿಕೊಳ್ಳುತ್ತಿದ್ದಾರೆ. ನಗರದ ಸೌಂದರ್ಯಕ್ಕೆ ತೀವ್ರ ಧಕ್ಕೆ ಉಂಟಾಗುವ ಜತೆಗೆ ಎಲ್ಲೆಂದರಲ್ಲಿ ಕಸದ ರಾಶಿ ಎದ್ದು ಕಾಣುವ ಜತೆಗೆ ಸಾರ್ವಜನಿಕ ಆರೋಗ್ಯಕ್ಕೂ ಕುತ್ತು ತರುತ್ತಿವೆ ಎಂಬುದು ಸಾರ್ವಜನಿಕರ ಆರೋಪ. ಕೂಡಲೇ ನಗರಸಭೆ ಈ ಬಗ್ಗೆ ತುರ್ತು ಕ್ರಮಕ್ಕೆ ಮುಂದಾಗುವ ಜತೆಗೆ ಎಲ್ಲೆಂದರಲ್ಲಿ ಕಸ ಎಸೆಯುವವರಿಗೆ ದುಬಾರಿ ದಂಡದ ಬಿಸಿ ಮುಟ್ಟಿಸುವ ಜತೆಗೆ ಜಾಗೃತಿ ಮೂಡಿಸುವ ತುರ್ತು ಅಗತ್ಯವಿದೆ ಎಂಬುದು ಸಾರ್ವಜನಿಕರ ಆಗ್ರಹವಾಗಿದೆ. ನಗರದ ಹೆಗ್ಗೇರಿ ರಸ್ತೆಯ ಬದಿಗಳಲ್ಲಿ ತ್ಯಾಜ್ಯ ಸುರಿಯುತ್ತಿರುವುದರಿಂದ ಈ ಭಾಗದಲ್ಲಿ ಜನರು ಓಡಾಡುವುದೇ ಕಷ್ಟವಾಗುತ್ತಿದೆ. ಇದರಿಂದ ಇಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಈ ಭಾಗದಲ್ಲಿ ಪ್ರಮುಖ ಎರಡು ಆಸ್ಪತ್ರೆಗಳಿದ್ದು ಇಲ್ಲಿ ಓಡಾಡಲು ಸಾರ್ವಜನಿಕರು ಆತಂಕ ಎದುರಿಸುವಂತಾಗಿದೆ. ಬೀದಿ ದೀಪದ ವ್ಯವಸ್ಥೆ ಕೂಡ ಇಲ್ಲದ್ದರಿಂದ ರಾತ್ರಿ ವೇಳೆ ಸಂಚರಿಸಲು ಭಯವಾಗುತ್ತದೆ. ಕೂಡಲೇ ನಗರಸಭೆಯವರು ಗಮನಹರಿಸಬೇಕು ಎಂದು ಸ್ಥಳೀಯ ನಿವಾಸಿ ಅಭಿಷೇಕ ಹೇಳಿದರು.